ಬೆಕ್ಕುಗಳಲ್ಲಿ ಕಂಡುಬರುವ ಮಾರಕ ಫೆಲಿನ್ ಪ್ಯಾನ್ಲೂಕೋಪೇನಿಯಾ ವೈರಸ್ ತಗುಲಿ 3 ರಿಂದ 10 ತಿಂಗಳ ವಯೋಮಾನದ ಏಳು ಚಿರತೆ ಮರಿಗಳು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮೃತಪಟ್ಟಿವೆ.
ಬನ್ನೇರುಘಟ್ಟ ಉದ್ಯಾನವನದ ಚಿರತೆಗಳಲ್ಲಿ ಮೊದಲ ಬಾರಿಗೆ ಮಾರಕ ಫೆಲಿನ್ ಪ್ಯಾನ್ಲೂಕೋಪೇನಿಯಾ ವೈರಸ್ ಕಂಡುಬಂದಿದೆ. ಆಗಸ್ಟ್ 22ರಂದು ಚಿರತೆ ಮರಿಗಳಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. ಸೆ.5 ರ ವೇಳೆಗೆ ಏಳೂ ಮರಿಗಳು ಸಾವನ್ನಪ್ಪಿವೆ.
ಬನ್ನೇರುಘಟ್ಟ ಉದ್ಯಾನದಲ್ಲಿ ಇತ್ತೀಚಿಗಷ್ಟೇ ಚಿರತೆ ಸಫಾರಿ ಆರಂಭಿಸಲಾಗಿತ್ತು. ಒಂಬತ್ತು ಚಿರತೆ ಮರಿಗಳನ್ನು ಸಫಾರಿಯಲ್ಲಿ ಬಿಡಲಾಗಿತ್ತು. ಆ ಪೈಕಿ ಮಾರಕ ಫೆಲಿನ್ ಪ್ಯಾನ್ಲೂಕೋಪೇನಿಯಾ ಸೋಂಕಿನಿಂದ ಮೂರು ಚಿರತೆ ಮರಿಗಳು ಮೃತಪಟ್ಟಿದ್ದು, ಬಿಳಿಗಿರಿರಂಗನ ಬೆಟ್ಟ, ಮೈಸೂರು ಮೃಗಾಲಯ ಹಾಗೂ ಮದ್ದೂರು ಬಳಿ ಗಾಯಗೊಂಡಿದ್ದ ಚಿರತೆ ಮರಿಗಳನ್ನು ರಕ್ಷಣೆ ಮಾಡಿ ಕೇಂದ್ರಕ್ಕೆ ಕರೆ ತರಲಾಗಿತ್ತು. ಅಲ್ಲಿ ಆರೈಕೆ ಮಾಡಿದ ಚಿರತೆ ಮರಿಗಳನ್ನೂ ಸಫಾರಿಗೆ ಬಿಡಲಾಗಿತ್ತು. ಪುನರ್ವಸತಿ ಕೇಂದ್ರದ ಆರೈಕೆಯಲ್ಲಿದ್ದ ನಾಲ್ಕು ಚಿರತೆ ಮರಿಗಳು ಮೃತಪಟ್ಟಿವೆ. ಬನ್ನೇರುಘಟ್ಟ ಜೈವಿಕ ಉದ್ಯಾನದ ಪುನರ್ವಸತಿ ಕೇಂದ್ರದಲ್ಲಿ ಒಟ್ಟು 80 ಚಿರತೆಗಳಿವೆ.
ಈ ಬಗ್ಗೆ ಮಾಹಿತಿ ನೀಡಿದ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್, “ಸೋಂಕಿನಿಂದ ಚಿರತೆ ಮರಿಗಳು ಸಾವನ್ನಪ್ಪಿದ್ದು, ಈ ರೋಗ ಬೇರೆ ಪ್ರಾಣಿಗಳಿಗೆ ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಜೈವಿಕ ಉದ್ಯಾನವನದ ಪ್ರಯೋಗಾಲಯದಲ್ಲಿ ಮೃತ ಚಿರತೆ ಮರಿಗಳ ರಕ್ತವನ್ನು ಪರೀಕ್ಷೆ ಮಾಡಿದಾಗ ಚಿರತೆಗಳಿಗೆ ಫೆಲಿನ್ ಪ್ಯಾನ್ಲೂಕೋಪೇನಿಯಾ ವೈರಸ್ ಸೋಂಕು ತಗುಲಿರುವುದು ದೃಢವಾಗಿದೆ” ಎಂದರು.
“ಚಿರತೆಗಳಿಗೆ ಈ ವೈರಸ್ ತಗುಲಿದರೆ, ವಾಂತಿ, ಭೇದಿಯಾಗುತ್ತದೆ. ಜತೆಗೆ ಬಿಳಿರಕ್ತ ಕಣಗಳು ಕಡಿಮೆಯಾಗುತ್ತವೆ. ಈ ರೀತಿಯ ಸೋಂಕಿನ ಲಕ್ಷಣ ಕಾಣಿಸಿಕೊಂಡ ಚಿರತೆಗಳನ್ನು ಈಗಾಗಲೇ ಪ್ರತ್ಯೇಕ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಎಲ್ಲ ಚಿರತೆಗಳಿಗೆ ಬೂಸ್ಟರ್ ಡೋಸ್ ನೀಡಲಾಗಿದೆ. ನಿತ್ಯ ಎರಡು ಸಲ ಗ್ಲೂಕೋಸ್ ನೀಡುವ ಮೂಲಕ ಆಂಟಿ ವೈರಲ್ ಔಷಧಿ ನೀಡಲಾಗುತ್ತಿದೆ” ಎಂದು ತಿಳಿಸಿದರು.
“ಉದ್ಯಾನವನದಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಉದ್ಯಾನವನದಲ್ಲಿ ಬ್ಲಿಚೀಂಗ್ ಪೌಡರ್ ಸಿಂಪಡಿಸಲಾಗಿದ್ದು, ಕೇಜ್‌ಗಳಲ್ಲಿ ವೈರಸ್ ನಾಶಪಡಿಸಲು ಬರ್ನಿಂಗ್ ಮಾಡಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಬ್ಬಿಣದ ಸರಳುಗಳ ಮೇಲೆ ಬಿದ್ದ ಯುವಕ; ಗಂಭೀರ ಗಾಯ
“ಉದ್ಯಾನವನದ ವೈದ್ಯರಾದ ಡಾ.ಉಮಾಶಂಕರ್, ಡಾ.ವಿಜಯಕುಮಾರ್, ಡಾ.ಮಂಜುನಾಥ್ ಅವರ ನೇತೃತ್ವದಲ್ಲಿ ತಜ್ಞರಾದ ಡಾ.ಅನ್ಸರ್ ಕಮರನ್, ಡಾ.ಉಪೇಂದ್ರ, ಡಾ.ವೀರೇಗೌಡ ಅವರ ಸಲಹೆಯಂತೆ ಚಿರತೆಗಳಿಗೆ ಚಿಕಿತ್ಸೆ ನೀಡಲಾಗಿದೆ. ಹುಲಿ ಮತ್ತು ಸಿಂಹಗಳಿಗೂ ಬೂಸ್ಟರ್ ಡೋಸ್ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಸದ್ಯ ಮಾರಕ ಫೆಲಿನ್ ಪ್ಯಾನ್ಲೂಕೋಪೇನಿಯಾ ವೈರಸ್ ಸೋಂಕು ನಿಯಂತ್ರಣಕ್ಕೆ ಬಂದಿದೆ” ಎಂದರು.
“ನಿಫಾ ವೈರಸ್ ಕೇರಳದಲ್ಲಿ ಉಲ್ಬಣಗೊಂಡ ಹಿನ್ನೆಲೆ, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪಾರ್ಕ್ ಒಳಬರುವ ಬಾವಲಿಗಳ ಮೇಲೆ ನಿಗಾ ಇಡಲಾಗಿದೆ. ಮುಂಬರುವ ದಿನಗಳಲ್ಲಿ ಪ್ರವಾಸಿಗರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲು ಸಿದ್ಧತೆ ನಡೆಸಲಾಗಿದೆ. ಉದ್ಯಾನಕ್ಕೆ ಬರುವ ಪ್ರವೇಶದ್ವಾರ ಮತ್ತು ನಿರ್ಗಮನ ದ್ವಾರದಲ್ಲಿ ಸೋಂಕು ನಿವಾರಕ ದ್ರಾವಣ ವ್ಯವಸ್ಥೆ ಮಾಡಲಾಗಿದೆ” ಎಂದು ತಿಳಿದುಬಂದಿದೆ.