ಕೆಲವು ಖಾಸಗಿ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಮಾಜಿ ಪ್ರೇಮಿ ಮತ್ತು ಆತನ ಸಹಚರನ ವಿರುದ್ಧ ಶಿಕ್ಷಕಿಯೊಬ್ಬರು ಪೊಲೀಸರಿಗೆ ದೂರು ನೀಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
“10 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದ ಆರೋಪಿಯು, ತನ್ನ ಪತಿಯನ್ನು ತೊರೆದು ಬರುವಂತೆ ಬ್ಲಾಕ್‌ಮೇಲ್ ಮಾಡುತ್ತಿದ್ದ” ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಈ ಸಂಬಂಧ ಸಂತ್ರಸ್ತ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಾದ ಬೆನ್ನಲ್ಲೇ ನಾಪತ್ತೆಯಾಗಿದ್ದ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಅಬ್ದುಲ್ ಅಸೀಮ್ ಮತ್ತು ಆತನ ಸಹಚರ ಮಯೂರ್ ಎಂಬಾತನ ವಿರುದ್ಧ ದೂರು ದಾಖಲಾಗಿದೆ.
ಘಟನೆ ಹಿನ್ನೆಲೆ
ಅದ್ಬುಲ್ ಅಸೀಮ್ ಮತ್ತು ಸಂತ್ರಸ್ತೆ ಏಳು ವರ್ಷಗಳಿಂದ ಪರಿಚಿತರಾಗಿದ್ದರು. ಎರಡು ವರ್ಷಗಳ ಹಿಂದೆ ಮಹಿಳೆ ಬೇರೊಬ್ಬರನ್ನು ಮದುವೆಯಾಗಿದ್ದರು. ಹೀಗಾಗಿ, ಪತಿಯನ್ನು ಬಿಟ್ಟು ತನ್ನೊಂದಿಗೆ ಬರುವಂತೆ ಆರೋಪಿ ಸಂತ್ರಸ್ತೆ ಮೇಲೆ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ.
ಪತಿಯನ್ನು ಬಿಟ್ಟು ಬಾರದಿದ್ದರೆ ಆಕೆಯ ಖಾಸಗಿ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಆರೋಪಿ ಅಬ್ದುಲ್ ಅಸೀಮ್ ತನ್ನ ಸಹಚರ ಮಯೂರ್ ಜೊತೆಗೆ ಆಕೆಯ ಖಾಸಗಿ ವಿಡಿಯೋಗಳನ್ನು ಮಹಿಳೆಯ ಪತಿ ಮತ್ತು ಕುಟುಂಬ ಸದಸ್ಯರಿಗೆ ಕಳುಹಿಸಿದ್ದ.
ಈ ಸುದ್ದಿ ಓದಿದ್ದೀರಾ? ತನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾನೆಂಬ ಕಾರಣಕ್ಕೆ ವ್ಯಕ್ತಿಯೊಬ್ಬನ ಕತ್ತು ಕೊಯ್ದು ಕೊಲೆ
ಗಂಡನನ್ನು ಬಿಟ್ಟು ಬಾರದಿದ್ದರೆ ಹಿಂದೂ-ಮುಸ್ಲಿಂ ಸಂಘರ್ಷಕ್ಕೂ ನಾಂದಿ ಹಾಡುವುದಾಗಿ ಬೆದರಿಕೆ ಹಾಕಿದ್ದ. ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಬಾರದು ಎಂದಾದರೆ 10 ಲಕ್ಷ ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದನು. ಹಣ ನೀಡದಿದ್ದಲ್ಲಿ ಆಕೆಯ ಖಾಸಗಿ ವಿಡಿಯೋದ ದೃಶ್ಯಗಳ ಬ್ಯಾನರ್‌ಗಳನ್ನು ಆ ಪ್ರದೇಶದಲ್ಲಿ ಹಾಕುವುದಾಗಿ ಆರೋಪಿ ಬೆದರಿಕೆಯೊಡ್ಡಿದ್ದ.
ಈ ಸಂಬಂಧ ಸಂತ್ರಸ್ತೆ ಸೈಬರ್ ಎಕನಾಮಿಕ್ ಅಂಡ್ ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣೆಗೆ (ಸಿಇಎನ್) ದೂರು ನೀಡಿದ್ದಾರೆ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.