ಗೋಕರ್ಣ ಬೀಚ್ನಲ್ಲಿ ಪ್ರವಾಸಿಗರು ನೀರಿನ ಸೆಳೆತಕ್ಕೆ ಸಿಲುಕಿಕೊಂಡು ಅದೃಷ್ಟವಶಾತ್ ಪಾರಾಗಿರುವ ಬೆನ್ನಲ್ಲೇ ಉಡುಪಿಯ ಮಲ್ಪೆ ಬೀಚ್ಗೆ ಸೆಪ್ಟೆಂಬರ್ 25ರವರೆಗೆ ಪ್ರವಾಸಿಗರು ಬಾರದಂತೆ ಉಡುಪಿ ಜಿಲ್ಲಾಡಳಿತ ಸೂಚಿಸಿದೆ.
ಸಮುದ್ರ ಇನ್ನೂ ಪ್ರಕ್ಷುಬ್ಧವಾಗಿದ್ದು, ಅಲೆಗಳ ಹೊಡೆತವನ್ನು ಅರಿಯದ ಪ್ರವಾಸಿಗರು ಅಪಾಯಕ್ಕೆ ಸಿಲುಕಿಕೊಳ್ಳಬಹುದು ಎಂಬ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಮುಂಜಾಗೃತೆ ವಹಿಸಿದೆ.
“ಈ ಹಿಂದಿನ ಕ್ರಮದಂತೆ ಸೆಪ್ಟಂಬರ್ 15ರಿಂದ ಪ್ರವಾಸಿಗರಿಗೆ ತೆರೆದುಕೊಳ್ಳಬೇಕಾಗಿದ್ದ ಮಲ್ಪೆ ಬೀಚ್ ಈ ವರ್ಷ ತೆರವಾಗದೆ ಇರುವುದರಿಂದ ಪ್ರವಾಸಿಗರು ನಿರಾಸೆಗೊಂಡಿದ್ದಾರೆ. ಮಳೆ-ಗಾಳಿಯ ಹಿನ್ನೆಲೆಯಲ್ಲಿ ಸಮುದ್ರ ಈಗಲೂ ಪ್ರಕ್ಷುಬ್ಧ ಇರುವುದರಿಂದ ಪ್ರವಾಸಿಗರಿಗೆ ನೀರಿಗಿಳಿಯಲು ಇರುವ ನಿರ್ಬಂಧವನ್ನು ಸೆ. 25ರವರೆಗೆ ವಿಸ್ತರಿಸಲಾಗಿದೆ” ಎಂದು ಜಿಲ್ಲಾಡಳಿತ ತಿಳಿಸಿದೆ.
ಚೌತಿ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ತೀರ್ಥಕ್ಷೇತ್ರಗಳಷ್ಟೇ ಅಲ್ಲದೆ, ಕಡಲ ಕಿನಾರೆಗಳಿಗೂ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ಆದರೆ ಸುರಕ್ಷತೆ ದೃಷ್ಟಿಯಿಂದ ಹಲವು ಬೀಚ್ಗಳಲ್ಲಿ ನಿರ್ಬಂಧಗಳನ್ನು ಹೇರಲಾಗಿದೆ.
ಇತ್ತೀಚಿನ ಕೆಲ ದಿನಗಳಲ್ಲಿ ಧಾರಾಕಾರವಾಗಿ ಮಳೆ ಸುರಿದಿದ್ದು, ಇದರೊಂದಿಗೆ ಸಮುದ್ರದ ಅಲೆಗಳಲ್ಲೂ ಏರಿಳಿತವಾಗುತ್ತಿದೆ. ಪ್ರತಿನಿತ್ಯ ಬೀಚ್ನಲ್ಲಿ ಜನ ಕಂಡುಬರುತ್ತಿದ್ದಾರೆ. ವಾರಾಂತ್ಯದಲ್ಲಿ ಪ್ರವಾಸಿಗರ ದಂಡೇ ಆಗಮಿಸುತ್ತಿದೆ.
ಈ ಸುದ್ದಿ ಓದಿದ್ದೀರಾ? ಕಾವೇರಿ ವಿವಾದ | ದೆಹಲಿಯಲ್ಲಿ ಬುಧವಾರ ಮಹತ್ವದ ಸಭೆ; ಸಿಎಂ, ಡಿಸಿಎಂ ಭಾಗಿ
ಈ ತಿಂಗಳಲ್ಲಿ ಸರಣಿ ರಜೆಗಳು ಬಂದಿದ್ದರಿಂದ ಕಡಲ ತೀರದಲ್ಲಿ ಹೆಚ್ಚು ಜನಕಂಡುಬಂದಿದ್ದಾರೆ. ಆದರೆ ನಿರ್ಬಂಧದ ಹಿನ್ನೆಲೆಯಲ್ಲಿ ಯಾವುದೇ ವಾಟರ್ಸ್ಪೋರ್ಟ್ಸ್ ಆಗಲಿ, ಸೈಂಟ್ಮೇರಿಸ್ ದ್ವೀಪ ಯಾನವಾಗಲಿ ಆರಂಭವಾಗಿಲ್ಲ. ಕೆಲವರು ಸೀವಾಕ್ ನೋಡಿ ಮರಳುತ್ತಿದ್ದಾರೆ. ಹಾರ್ಬರ್ ಕ್ರಾಫ್ಟ್ ನಿಯಮಗಳ ಅನ್ವಯ ಮಳೆಗಾಲದ ಹಿನ್ನೆಲೆಯಲ್ಲಿ ಮೇ 16ರಿಂದ ಸೆ. 15ರ ವರೆಗೆ ಬೀಚ್ನಲ್ಲಿ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಆದರೆ ಈ ಬಾರಿ ನಿಷೇಧದ ಅವಧಿಯನ್ನು ವಿಸ್ತರಿಸಲಾಗಿದೆ. ಹಾಗಾಗಿ ಪ್ರವಾಸಿಗರು ನಿರಾಶೆಯಿಂದ ಹಿಂದಿರುಗುತ್ತಿದ್ದಾರೆ.
“ಮಳೆಗಾಲದ ಆರಂಭದಲ್ಲಿ ವಿಧಿಸುವ 4 ತಿಂಗಳ ನಿಷೇಧವನ್ನು ಜಿಲ್ಲಾಧಿಕಾರಿಗಳ ಸೂಚನೆಯಂತೆ ಸೆ. 25ರವರೆಗೆ ಮುಂದುವರಿಸಲಾಗಿದೆ. ಸಮುದ್ರದ ಪ್ರಕ್ಷುಬ್ಧ ಸ್ಥಿತಿ ಮುಂದುವರಿದಿರುವ ಕಾರಣ ಯಾರೂ ಕೂಡ ನೀರಿಗಿಳಿಯಂದಂತೆ ಎಚ್ಚರ ವಹಿಸಲಾಗಿದೆ. ಮುಂದೆ ಪರಿಸ್ಥಿತಿ ನೋಡಿಕೊಂಡು ಪ್ರವೇಶಕ್ಕೆ ಅನುಮತಿ ನೀಡಲಾಗುವುದು” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.