ಸತತ ಹದಿನೇಳು ದಿನದಿಂದ ಹುಲಿ ಸೆರೆಗೆ ಕರ್ನಾಟಕ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಬಾಲಕನನ್ನು ಕೊಂದು ಹಾಕಿದೆ ಎನ್ನಲಾದ ಎಂಟು ವರ್ಷದ ಗಂಡು ಹುಲಿಯನ್ನು ಸೆರೆ ಹಿಡಿಯಲಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಕ್ಕಪಕ್ಕದ ಪ್ರದೇಶದಲ್ಲಿಯೇ ಆರು ತಿಂಗಳ ಒಳಗೆ ಸೆರೆ ಹಿಡಿದಿರುವ ಮೂರನೇ ಹುಲಿ ಇದಾಗಿದೆ. ಬೋನಿನಲ್ಲಿ ಇರಿಸಿ ಹುಲಿಗೆ ನಾಗರಹೊಳೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಸೆರೆ ಸಿಕ್ಕಿರುವ ಎರಡು ಹುಲಿಗಳು ಮೃಗಾಲಯದ ಪುನರ್ವಸತಿ ಕೇಂದ್ರಗಳಲ್ಲಿವೆ.
ಮೈಸೂರು ಜಿಲ್ಲೆ ಎಚ್ಡಿಕೋಟೆ ತಾಲೂಕಿನ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತೆ ಇರುವ ಕಲ್ಲಹಟ್ಟಿ ಗ್ರಾಮದ ಜಮೀನಿನಲ್ಲಿಯೇ ಮಂಗಳವಾರ ರಾತ್ರಿ ಹುಲಿಯನ್ನು ಸೆರೆ ಹಿಡಿಯಲಾಗಿದೆ.
ಎಚ್ ಡಿ ಕೋಟೆ ತಾಲೂಕು ಕಲ್ಲಹಟ್ಟಿ ಗ್ರಾಮದ ರೈತ ಕೃಷ್ಣನಾಯಕ ಮತ್ತು ಮಾದೇವಿ ಬಾಯಿ ಎಂಬವರ ಪುತ್ರ ಚರಣ್ ನಾಯಕ್ (9) ಸೆಪ್ಟಂಬರ್ 4ರಂದು ಶಾಲೆ ಮುಗಿಸಿಕೊಂಡು ತಂದೆ ತಾಯಿ ಇದ್ದ ಜಮೀನಿಗೆ ಹೋಗುತ್ತಿದ್ದ. ಈ ವೇಳೆ ಹುಲಿ ದಾಳಿ ನಡೆಸಿದ್ದರಿಂದ ಆತ ಮೃತಪಟ್ಟಿದ್ದ. ಆತನ ದೇಹದ ಭಾಗವನ್ನು ಹುಲಿ ತಿಂದು ಹೋಗಿತ್ತು. ದಾಳಿಯಾಗಿದ್ದನ್ನು ಗಮನಿಸಿದ್ದ ಸ್ಥಳೀಯರು ಹುಲಿ ಹೊಡೆತದಿಂದಲೇ ಬಾಲಕ ಮೃತಪಟ್ಟಿರುವುದಾಗಿ ಹೇಳಿದ್ದು, ಹುಲಿಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು.
ಹದಿನೇಳು ದಿನದಿಂದಲೂ ಎಚ್ಡಿಕೋಟೆ ತಾಲೂಕಿನ ಕಲ್ಲಹಟ್ಟಿ ಹಾಗೂ ಸುತ್ತಮುತ್ತಲ ಭಾಗದಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ಮುಂದುವರಿದಿತ್ತು. ಕಾರ್ಯಾಚರಣೆಯಲ್ಲಿ ಎಸಿಎಫ್ ರಂಗಸ್ವಾಮಿ, ದಯಾನಂದ್, ಅಂತರಸಂತೆ ವಲಯ ಅರಣ್ಯ ಅಧಿಕಾರಿ ಭರತ್ ನೇತೃತ್ವದಲ್ಲಿ ನೂರಕ್ಕೂ ಅಧಿಕ ಮಂದಿ ಸಿಬ್ಬಂದಿ, ಅರಣ್ಯ ಇಲಾಖೆ ವಿಶೇಷ ಕಾರ್ಯಪಡೆ( STPF) ಸೇರಿದಂತೆ ಅಧಿಕಾರಿಗಳು, ತಜ್ಞರು ಸ್ಥಳದಲ್ಲೇ ಬೀಡುಬಿಟ್ಟಿದ್ದರು.
ದಸರಾದಲ್ಲಿ ಪಾಲ್ಗೊಂಡಿದ್ದ ಅರ್ಜುನ ಸೇರಿದಂತೆ ಆರಕ್ಕೂ ಹೆಚ್ಚು ಆನೆಗಳನ್ನು ಬಳಸಿಕೊಂಡು ಕೂಂಬಿಂಗ್ ಮಾಡಿದ್ದರೂ ಹುಲಿ ಪತ್ತೆಯಾಗಿರಲಿಲ್ಲ. ನಿರಂತರವಾಗಿ ಕಾರ್ಯಾಚರಣೆ ನಡೆದಿತ್ತು. ಅರ್ಜುನ ಆನೆ ನಾಲ್ಕು ದಿನದ ಹಿಂದೆಯೇ ವಾಪಾಸಾಗಿತ್ತು. ಮೂರ್ನಾಲ್ಕು ಕಡೆ ಬೋನು ಇರಿಸಿ ಕ್ಯಾಮರಾಗಳನ್ನೂ ಅಳವಡಿಸಲಾಗಿತ್ತು. ಥರ್ಮಲ್ ಡ್ರೋನ್ ಬಳಸಿ ಹುಲಿ ಇರುವಿಕೆ ಮಾಹಿತಿ ಪಡೆಯಲಾಗಿತ್ತು. ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದರೂ ಹುಲಿ ಕಂಡಿರಲಿಲ್ಲ.
ಈ ಸುದ್ದಿ ಓದಿದ್ದೀರಾ? ಹಾಸನ | ಮದ್ಯ ಸೇವಿಸುವ ಪಂದ್ಯ; ಓರ್ವನ ಸಾವಿನಲ್ಲಿ ಅಂತ್ಯ
ಸಾಮಾನ್ಯವಾಗಿ ಹುಲಿಗಳು ಏನನ್ನಾದರೂ ಸಾಯಿಸಿದರೆ ಮತ್ತೆ ಅದೇ ಜಾಗಕ್ಕೆ ಆಹಾರ ಹುಡುಕಿ ಬಂದೇ ಬರುತ್ತವೆ. ಅಲ್ಲಿಗೆ ಈ ಹುಲಿ ಬರಬಹುದು ಎನ್ನುವ ಲೆಕ್ಕಾಚಾರದೊಂದಿಗೆ ಸಿಬ್ಬಂದಿ ಸುತ್ತಮುತ್ತ ಕಾಯುತ್ತಲೇ ಇದ್ದರು. ಮಂಗಳವಾರ ಸಂಜೆ ಹೊತ್ತಿಗೆ ಕಲ್ಲಹಟ್ಟಿ ಸಮೀಪದಲ್ಲೇ ಹುಲಿ ಇರುವುದನ್ನು ಸಿಬ್ಬಂದಿ ಕಂಡಿದ್ದಾರೆ. ಕೂಡಲೇ ನಾಗರಹೊಳೆ ವನ್ಯಜೀವಿ ವೈದ್ಯಾಧಿಕಾರಿ ಡಾ.ರಮೇಶ್, ಅರವಳಿಕೆ ತಜ್ಞ ರಂಜನ್ ಸಹಿತ ಹಲವರು ಅಲ್ಲಿಗೆ ಧಾವಿಸಿದ್ದು ಹುಲಿ ಇರುವುದನ್ನು ಗಮನಿಸಿ ಅರವಳಿಕೆ ನೀಡಿದ್ದಾರೆ. ಬಳಿಕ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಸೆರೆ ಸಿಕ್ಕ ಹುಲಿ ಆರೋಗ್ಯಕರವಾಗಿದೆ.