ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುವ ‘ಮಹಿಳಾ ಮೀಸಲಾತಿ ಮಸೂದೆ’ಯನ್ನು ಲೋಕಸಭೆಯಲ್ಲಿ ಬಿಜೆಪಿ ಸರ್ಕಾರ ಮಂಡಿಸಿದೆ. ಈ ಬೆನ್ನಲ್ಲೇ, ಮಸೂದೆಯಲ್ಲಿನ ಹಲವು ಅಂಶಗಳ ಬಗ್ಗೆ ಬಿಜೆಪಿ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಸೂದೆಯಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮಹಿಳೆಯರಿಗೆ ಮೀಸಲಾತಿ ಕೋಟಾ ಇಲ್ಲದೇ ಇರುವ ಬಗ್ಗೆ ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಸೂದೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಉಮಾಭಾರತಿ ಪತ್ರ ಬರೆದಿದ್ದಾರೆ. “ಮಹಿಳೆಯರಿಗೆ 33% ಸ್ಥಾನಗಳನ್ನು ಮೀಸಲಿಡುವ ಮಸೂದೆಯಲ್ಲಿ ಒಬಿಸಿ ಮಹಿಳಾ ಕೋಟಾವನ್ನು ಕಡೆಗಣಿಸಲಾಗಿದೆ. ಇದು ಸರಿಯಾದ ನಡೆಯಲ್ಲ” ಎಂದಿದ್ದಾರೆ.
“ಮಹಿಳೆಯರಿಗೆ ಮೀಸಲಾಗುವ ಒಟ್ಟು ಸ್ಥಾನಗಳಲ್ಲಿ ಅರ್ಧದಷ್ಟು ಸ್ಥಾನಗಳನ್ನು ಎಸ್‌ಸಿ/ಎಸ್‌ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ಮೀಸಲಿಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
“ಮಹಿಳಾ ಮೀಸಲಾತಿ ಮಸೂದೆ ಮಂಡಿಸಿರುವುದು ಸ್ವಾಗತಾರ್ಹ. ಆದರೆ, ಒಬಿಸಿ ಸಮುದಾಯದ ಮಹಿಳೆಯರಿಗೆ ಸ್ಥಾನ ಮೀಸಲಿಡದಿರುವುದು ಬೇಸರ ತಂದಿದೆ. ಒಬಿಸಿ ಮಹಿಳೆಯರಿಗೆ ಮೀಸಲಾತಿ ಖಾತರಿಪಡಿಸದಿದ್ದರೆ, ಬಿಜೆಪಿ ಬಗ್ಗೆ ಅವರಿಗೆ ಇರುವ ವಿಶ್ವಾಸ ಕುಂದುತ್ತದೆ” ಎಂದು ಅವರು ಹೇಳಿದ್ದಾರೆ.