- 23 ಜನಕ್ಕೆ ಎಂಎಲ್‌ಎ ಟಿಕೆಟ್ ಕೊಡಿಸ್ತೀವಿ ಎಂದು ಹಣ ಪಡೆಯಲಾಗಿದೆ ಎಂದ ಕಾಂಗ್ರೆಸ್ ಮುಖಂಡ
- ಯಾರಿಗೆಲ್ಲಾ ಹಣ ಸಂದಾಯವಾಗಿದೆ ಎಂಬುದು ಪೊಲೀಸ್ ತನಿಖೆಯಿಂದ ಹೊರಬರಲಿದೆ : ಲಕ್ಷ್ಮಣ್
ಉದ್ಯಮಿ ಗೋವಿಂದ ಬಾಬು ಪೂಜಾರಿಗೆ 5 ಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತಳಾಗಿರುವ ಚೈತ್ರಾ ಕುಂದಾಪುರ ಮತ್ತು ಆಕೆಯ ಬಳಗದಿಂದ ಒಟ್ಟು 17 ಜನರು ಮೋಸ ಹೋಗಿದ್ದಾರೆ. 23 ಜನಕ್ಕೆ ಟಿಕೆಟ್ ಕೊಡಿಸುವುದಾಗಿ ಅವರಿಂದ ಹಣ ಪಡೆದಿದ್ದು, ಅಂದಾಜು 185 ಕೋಟಿ ರೂ. ವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಚೈತ್ರಾ ಕುಂದಾಪುರ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಬೇನಾಮಿ. ಸದ್ಯ ತನಿಖೆ ಪ್ರಗತಿಯಲ್ಲಿದೆ. ಹಾಗಾಗಿ ಹೆಚ್ಚು ಮಾತನಾಡುವ ಹಾಗೆ ಇಲ್ಲ. ಆದರೆ ಇನ್ನು ಎರಡು ದಿನದಲ್ಲಿ ಇವರ ಹಿಂದೆ ಇರುವ ಗುಂಪು ಎಷ್ಟು ಹಣ ಪಡೆದಿದ್ದಾರೆ, ಯಾರಿಗೆ ಹೋಗಿದೆ ಅನ್ನುವುದನ್ನು ಪೋಲೀಸರು ಕೊಡುತ್ತಾರೆ ಎಂದು ಹೇಳಿದರು.

“ಒಟ್ಟು 17ಕ್ಕೂ ಹೆಚ್ಚು ಜನರು ಮೋಸ ಹೋಗಿದ್ದಾರೆ. 23 ಜನಕ್ಕೆ ಟಿಕೆಟ್ ಕೊಡಿಸ್ತೀವಿ ಅಂತ ಅವರಿಂದ ಹಣ ಪಡೆದಿದ್ದಾರೆ. 40 ಜನರು ಈ ಟಿಕೆಟ್ ಪಡೆಯುವ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. 185 ಕೋಟಿ ರೂಪಾಯಿಯ ವ್ಯವಹಾರ ಇಲ್ಲಿ ಆಗಿದೆ. ಟಿಕೆಟ್ ನೀಡಿ ಕೋಟ್ಯಂತರ ರೂ ಹಣ ಪಡೆಯಲಾಗಿದೆ. ಚೈತ್ರಾ ಕುಂದಾಪುರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ ಜೊತೆ ನೇರ ಸಂಪರ್ಕ ಹೊಂದಿದ್ದಾರೆ” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ವಂಚನೆ ಪ್ರಕರಣ | ಅಭಿನವ ಹಾಲಶ್ರೀ ಸ್ವಾಮೀಜಿ ಸೆ.29ರವರೆಗೆ ಸಿಸಿಬಿ ಕಸ್ಟಡಿಗೆ
“ಮೈಸೂರು ಭಾಗದಲ್ಲೂ ಇಬ್ಬರು ಹಣ ಕೊಟ್ಟು, ವಂಚನೆಗೊಳಗಾಗಿದ್ದಾರೆ. 9 ಜನರ ತಂಡದಿಂದ ಮೋಸದ ಕೃತ್ಯವಾಗಿದೆ. ಇವರೆಲ್ಲಾ ಬಿಜೆಪಿ ಹಾಗೂ ಅರ್ ಎಸ್ ಎಸ್ ಕಾರ್ಯಕರ್ತರು. ಬಿಜೆಪಿ ಹರಿಶ್ಚಂದ್ರನ ಮೊಮ್ಮಕ್ಕಳು ಅನ್ನುತ್ತಾರೆ. ಇವರ ಯೋಗ್ಯತೆ ಏನು ಅನ್ನೋದು ಬಹಿರಂಗಪಡಿಸಬೇಕು” ಎಂದು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಕಿಡಿಕಾರಿದರು.

ಪಿಎಸ್‌ಐ ಹಗರಣಕ್ಕೂ ಚೈತ್ರಾಗೂ ಸಂಬಂಧವಿದೆಯಾ ಅನ್ನುವ ಬಗ್ಗೆಯೂ ಸಿಸಿಬಿ ಪೊಲೀಸರು ತನಿಖೆ ಮಾಡಬೇಕು. ಸಿ ಟಿ ರವಿ, ಯಡಿಯೂರಪ್ಪ, ಸೂಲಿಬೆಲೆ ಜೊತೆ ಈಕೆಯ ಸಂಬಂಧ ಏನು ಅನ್ನುವುದನ್ನು ಕೂಡ ಸ್ಪಷ್ಟಪಡಿಸಬೇಕು. ಪಿಎಸ್‌ಐ ಹಾಗೂ ನಾಲ್ಕಕ್ಕೂ ಹೆಚ್ಚು ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ನಮಗೆ ಮಾಹಿತಿ ಇದೆ. ಇವರ ಹೆಸರಿನಲ್ಲಿರುವ ಬೇನಾಮಿ ಆಸ್ತಿಪಾಸ್ತಿಗಳನ್ನು ಪತ್ತೆ ಹಚ್ಚಬೇಕು. ಚೈತ್ರಾಗೆ ಜೈಲಿನಲ್ಲಿರುವ ಕೆಲವರ ಸಂಪರ್ಕ ಇದೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸ್ವತಃ ಕಾಂಗ್ರೆಸ್ ಪಕ್ಷ ಪತ್ರ ಬರೆಯಲಿದೆ” ಎಂದು ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ತಿಳಿಸಿದ್ದಾರೆ.