- ‘ಸಂಕಷ್ಟ ಸೂತ್ರ ಇಲ್ಲದಿರುವುದು ಸಮಸ್ಯೆ, ಸಂಕಷ್ಟ ಹೆಚ್ಚಲು ಕಾರಣ‘
- ಪ್ರಧಾನಿ ಮೋದಿ ಅವರ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದೇವೆ: ಸಿಎಂ
- ಸುಪ್ರೀಂಕೋರ್ಟ್ ಮುಂದೆ CWMA ಆದೇಶಕ್ಕೆ ತಡೆಯಾಜ್ಞೆ ಕೇಳುತ್ತೇವೆ
ತಮಿಳುನಾಡಿಗೆ ನೀರು ಬಿಡಬೇಕು ಎನ್ನುವ ಸಿಡಬ್ಲ್ಯೂಎಂಎ ಆದೇಶಕ್ಕೆ ನಾವು ಸುಪ್ರೀಂಕೋರ್ಟ್ ಮುಂದೆ ತಡೆಯಾಜ್ಞೆಗೆ ಮನವಿ ಮಾಡುತ್ತೇವೆ. ಸಂಕಷ್ಟ ಸೂತ್ರ ಇಲ್ಲದಿರುವುದು ಸಮಸ್ಯೆ, ಸಂಕಷ್ಟ ಹೆಚ್ಚಲು ಕಾರಣವಾಗಿದೆ. ಕೇಂದ್ರ ಜಲ ಸಂಪನ್ಮೂಲ ಸಚಿವರ ಜತೆ ಬುಧವಾರ ಸಂಜೆ ಸಭೆ ನಡೆಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಎದುರಾಗಿರುವ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಕುರಿತು ದೆಹಲಿಯಲ್ಲಿ ಬುಧವಾರ ನಡೆದ ಸರ್ವ ಪಕ್ಷಗಳ ನಾಯಕರು, ಕೇಂದ್ರ ಸಚಿವರು ಮತ್ತು ಲೋಕಸಭೆ, ರಾಜ್ಯಸಭೆ ಸದಸ್ಯರ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
“ಎರಡೂ ರಾಜ್ಯದವರನ್ನು ಕರೆದು ಅಹವಾಲು ಕೇಳುವ ಅಧಿಕಾರ ವ್ಯಾಪ್ತಿ ಪ್ರಧಾನಿಯವರಿಗೆ ಇದೆ. ಹೀಗಾಗಿ ನಾವು ಪ್ರಧಾನಿ ಅವರ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದೇವೆ. ಸಂಜೆ ಕೇಂದ್ರ ಜಲ ಸಂಪನ್ಮೂಲ ಸಚಿವರ ಸಭೆ ಬಳಿಕ ಮುಂದಿನ ತೀರ್ಮಾನ” ಎಂದರು.
“ನಿರ್ಮಲಾ ಸೀತಾರಾಮನ್ ಒಬ್ಬರನ್ನು ಹೊರತುಪಡಿಸಿ ರಾಜ್ಯದಿಂದ ಆಯ್ಕೆಯಾದ ಎಲ್ಲ ಸಂಸದರು, ಕೇಂದ್ರ ಸಚಿವರು ಸಭೆಯಲ್ಲಿ ಹಾಜರಿದ್ದರು. ನಿರ್ಮಲಾ ಸೀತಾರಾಮನ್ ಅವರು ಅನ್ಯಕಾರ್ಯ ನಿಮಿತ್ತ ಭಾಗವಹಿಸಲು ಸಾಧ್ಯವಾಗಿಲ್ಲ. ಈಗಾಗಲೇ ರಾಜ್ಯದಲ್ಲಿ 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಗುರುತಿಸಿದ್ದೇವೆ. 123 ವರ್ಷಗಳಲ್ಲೇ ಆಗಸ್ಟ್ ತಿಂಗಳಿನಲ್ಲಿ ಅತಿ ಕಡಿಮೆ ಮಳೆ ದಾಖಲಾಗಿದೆ. ವಾಡಿಕೆಗಿಂತ ಅತಿ ಕಡಿಮೆ ಮಳೆ ಸಂಕಷ್ಟ ಹೆಚ್ಚಲು ಕಾರಣ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ’ಈ ದಿನ’ ಸಂಪಾದಕೀಯ| 2029ರ ಕನಸಿಗೆ ಈಗಲೇ ‘ಟೋಪಿ’ ಹೊಲಿದ ಮೋದಿ ಮಂತ್ರವಾದಿ
“177.2 ಟಿಎಂಸಿ ನೀರು ಸಾಮಾನ್ಯ ವರ್ಷದಲ್ಲಿ, ಮಳೆ ಚೆನ್ನಾಗಿದ್ದಾಗ ನೀರು ಬಿಡಬೇಕು ಎಂದು ಹೇಳಿದೆ. ಆದರೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ಎಷ್ಟು ನೀರು ಬಿಡಬೇಕು ಎನ್ನುವ ಸೂತ್ರ ಇಲ್ಲದಿರುವುದು ಸಮಸ್ಯೆಯಾಗಿದೆ. ನಮಗೆ ಕುಡಿಯುವ ನೀರು, ಬೆಳೆ ರಕ್ಷಣೆ, ಕೈಗಾರಿಕೆಗೂ ನೀರಿಲ್ಲ. ಹೀಗಾಗಿ ನಾವು ಬಹಳ ಕಷ್ಟದಲ್ಲಿದ್ದೇವೆ” ಎಂದರು.
“CWMA, CWRA ಮುಂದೆ ಸಮರ್ಥವಾಗಿ ನಮ್ಮ ವಾಸ್ತವ ಪರಿಸ್ಥಿತಿಯನ್ನು ಮಂಡಿಸಿದ್ದೇವೆ. ತಮಿಳುನಾಡು ವಾದ ವಿರೋಧಿಸಿ ಸುಪ್ರೀಂಕೋರ್ಟ್ ನಲ್ಲಿ ನಮ್ಮ ತಕರಾರು ಮಂಡಿಸಿದ್ದೇವೆ. ಒಟ್ಟು ಮೂರು ಬಾರಿ ಸರ್ವ ಪಕ್ಷ ಸಭೆ ನಡೆಸಿದ್ದೇವೆ. 5 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿಲ್ಲ ಎಂದು CWMA ಮುಂದೆಯೂ ಮನವಿ ಸಲ್ಲಿಸಲಿದ್ದೇವೆ. 10 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎನ್ನುವ ಆದೇಶ ಬಂದಾಗ, 5 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಅಂದಾಗೆಲ್ಲಾ ಒಟ್ಟು ಮೂರು ಬಾರಿ ನಾವು ಸರ್ವ ಪಕ್ಷ ಸಭೆ ಕರೆದಿದ್ದೇವೆ” ಎಂದು ಮಾಹಿತಿ ನೀಡಿದರು.