ಮಹಿಳೆಯರಿಗೆ ಅರ್ಧ ಅವಕಾಶ ನೀಡುವ, ಸಮಾನತೆಯಿಂದ ನಡೆಸಿಕೊಳ್ಳುವ ನಿಜ ಇರಾದೆ ಮೋದಿ ಆಡಳಿತಕ್ಕೆ ಇದ್ದಿದ್ದರೆ ಈ ವಿಧೇಯಕ ಕಾಯಿದೆಯಾಗಿ 2019ರಲ್ಲೇ ಜಾರಿಗೆ ಬರಬೇಕಿತ್ತು
2024ರ ಚುನಾವಣೆ ಕದ ಬಡಿಯುತ್ತಿರುವ ಹೊತ್ತಿನಲ್ಲಿ ಮತದಾರರ ಕಣ್ಣ ಮುಂದೆ ಮಾಯಾಜಾಲ- ಇಂದ್ರಜಾಲ ಹೆಣೆದು ಅವರನ್ನು ದಿಕ್ಕು ತಪ್ಪಿಸುವ ತಂತ್ರವನ್ನು ಮುಂದುವರೆಸಿದ್ದಾರೆ ಮುಗುಳುನಗೆಯ ಮಂತ್ರವಾದಿ ಮೋದಿ. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೂರನೆಯ ಒಂದರಷ್ಟು ಸ್ಥಾನಗಳನ್ನು ಮೀಸಲಿರಿಸುವ ವಿಧೇಯಕವನ್ನು ಸಂಸತ್ತಿನ ಮುಂದೆ ಮಂಡಿಸಿದ್ದಾರೆ. ಆದರೆ ಈ ವಿಧೇಯಕ ಕಾಯಿದೆಯಾಗಿ ಜಾರಿಗೆ ಬರುವುದು 2024ರ ಲೋಕಸಭಾ ಚುನಾವಣೆಗಳಲ್ಲಿ ಅಲ್ಲ. ಬದಲಾಗಿ 2029ರ ಚುನಾವಣೆಗಳಲ್ಲಿ, ಕ್ಷೇತ್ರಗಳ ಮರುವಿಂಗಡಣೆಯ ಕಾರ್ಯ ಮುಗಿದ ನಂತರ ಎಂದು ಸಾರಲಾಗಿದೆ. ಕ್ಷೇತ್ರಗಳ ಮರುವಿಂಗಡಣೆ ನಡೆಯಲು ಜನಗಣತಿ ನಡೆಯಬೇಕು. ಕೋವಿಡ್ ಕಾರಣ ನೀಡಿ 2021ರಲ್ಲಿ ಮುಂದೆ ಹಾಕಲಾಗಿರುವ ಜನಗಣತಿ 2026ರಲ್ಲಾದರೂ ನಡೆದೀತೆಂದು ಎದೆ ತಟ್ಟಿ ಹೇಳಬಲ್ಲವರು ಯಾರಾದರೂ ಇದ್ದಾರೆಯೇ?
2014 ಮತ್ತು 2019ರ ಚುನಾವಣಾ ಪ್ರಣಾಳಿಕೆಗಳಲ್ಲಿ ಈ ಮೀಸಲಾತಿ ಜಾರಿಯ ಮಾತು ಕೊಟ್ಟಿದ್ದ ಬಿಜೆಪಿಯು ಲೋಕಸಭೆಯಲ್ಲಿ ಸಂಪೂರ್ಣ ಬಹುಮತ ಹೊಂದಿದ್ದರೂ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ದಿಸೆಯಲ್ಲಿ ಹೆಜ್ಜೆ ಇರಿಸಲು ಒಂಬತ್ತು ವರ್ಷಗಳೇಕೆ ಹಿಡಿದವು. ಈಗ ಕೂಡ 2024ರ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರ ಮುಂದೆ ಕೈಗೆಟುಕದ ಆಮಿಷವನ್ನು ತೂಗುಹಾಕಿ 2029ರ ಕನಸನ್ನು ತೋರುತ್ತಿರುವುದು ಡಂಭಾಚಾರವೇ ಸರಿ.
”ಹೊಳೆಹೊಳೆಯುವ ಪಂಜರದಲಿ
ಗರುಡಪಕ್ಷಿ ಇಟ್ಟುಕೊಂಡು, ಗಿಫ್ಟು ಫಫ್ಟು ಕೊಟ್ಟುಕೊಂಡು
ಮಂತ್ರವಾದಿಯೊಬ್ಬ ನಿಮ್ಮ ಊರಕಡೆಗೆ ಬಂದರೆ
ಎಚ್ಚರ ಕಟ್ಟೆಚ್ಚರ ಬದಲಾವಣೆ ಬಂದಿದೆ.
ಅವನು ತನ್ನ ಮುಷ್ಟಿಯಲ್ಲಿ ಬೂದಿಬ್ರೆಡ್ಡು ತೆಗೆದುಕೊಂಡು
ಅದನೆ ಜೇನುಕೇಕು ಎಂದು ಮಂಕುಬೂದಿ ಹಾಕುತಾನೆ
ಮುಗುಳುನಗೆಯೇ ಮಂತ್ರದಂಡ, ಮಾತಿನಿಂದ ಇಂದ್ರಜಾಲ,
ಒಂದನೊಂಬತ್ತು ಎನಿಸಿ, ಸೊನ್ನೆಯಿಂದ ಸ್ವರ್ಗ ಕಟ್ಟಿ
ನಿಮ್ಮದೆಲ್ಲ ಕಿತ್ತುಕೊಂಡು, ನಾಮ ಹಾಕಿ ಸುಖಿಸುತಾನೆ,
ಹಣದುಬ್ಬರ ಎನ್ನುತಾನೆ, ನಾನೆ ಬಡವ ಎನ್ನುತಾನೆ’ ಎಂಬ ಆಫ್ರಿಕನ್ ಕವಿತೆಯೊಂದರ ಸಾಲುಗಳು ಬಹಳ ಹಿಂದೆ ರಚನೆಯಾದಂತಹವು. ಆ ಆಫ್ರಿಕನ್ ಕವಿ ಭಾರತದ ಮೋದಿಯುಗದ ಮಟ್ಟಿಗೆ ಕಾಲಜ್ಞಾನಿಯೇ ಸರಿ. ಮಹಿಳಾ ಮೀಸಲು ಎಂಬುದು ವಿದೇಶೀ ಬ್ಯಾಂಕುಗಳಲ್ಲಿ ಭಾರತೀಯ ಶ್ರೀಮಂತರು ಬಚ್ಚಿಟ್ಟ ಕಪ್ಪು ಹಣವನ್ನು ವಾಪಸು ತಂದ ಎಲ್ಲ ಭಾರತೀಯ ಪ್ರಜೆಗಳಿಗೂ ತಲಾ 15 ಲಕ್ಷ ರುಪಾಯಿ ಹಂಚಿ ಕೊಡುವ ಚುನಾವಣಾ ‘ಜುಮ್ಲಾ’ ಆದರೆ ಆಶ್ಚರ್ಯಪಡಬೇಕಿಲ್ಲ.
ತೊಗಲಿನ ಕೆಳಪದರದಲ್ಲಿ ಹೃದಯದಾಳದಲ್ಲಿ ಮನುವಾದದ ಸ್ತ್ರೀದ್ವೇಷಿ ನಂಜನ್ನು ಅವಿತಿರಿಸಿಕೊಂಡಿರುವ ಮನುಸಂತಾನದ ಸರ್ಕಾರವಿದು. ಯಾವುದೇ ಸ್ತ್ರೀಪರ ಹೆಜ್ಜೆ ಇರಿಸಿದರೂ ಅದರ ಹಿಂದೊಂದು ನಿಚ್ಚಳ ತಾರತಮ್ಯದ ಕುಯುಕ್ತಿ ಇದ್ದೇ ಇರುತ್ತದೆ, ಇಲ್ಲವೇ ದುಷ್ಟತನಗಳು ಮತ್ತು ಕಡು ವೈಫಲ್ಯಗಳು, ಬಹುಜನರನ್ನು ವಂಚಿಸುವ ಗುಪ್ತ ಮಸಲತ್ತುಗಳು ಹಿನ್ನೆಲೆಯಲ್ಲಿ ಕಾದು ಹೊಂಚು ಹಾಕುತ್ತಿರುತ್ತವೆ.
ಉದಾಹರಣೆಗೆ ತೇಜಸ್ವಿ ಸೂರ್ಯ ಎಂಬ ಬೆಂಗಳೂರು ನಗರದ ಬ್ರಾಹ್ಮಣ್ಯದ ಅಪರಾವತಾರಿ ಯುವ ಸಂಸದನನ್ನೇ ನೋಡಿ. 2014ರಲ್ಲಿ ಈತ ಮಾಡಿದ್ದ ಟ್ವೀಟ್ ಈತನ ಪ್ರತಿಗಾಮಿ ಮನುವಾದಿ ಮನಸ್ಥಿತಿಗೆ ಹಿಡಿದ ಸ್ವಚ್ಛ ಕನ್ನಡಿ- …’ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲು ನೀಡಿಕೆಯ ಅಂಶವೊಂದನ್ನು ಬಿಟ್ಟು ಮೋದಿಯವರ ಉಳಿದ ಕಾರ್ಯಸೂಚಿ ಸ್ಫೂರ್ತಿದಾಯಕ. ಮಹಿಳಾ ಮೀಸಲು ವ್ಯವಸ್ಥೆ ಜಾರಿಗೆ ಬರುವ ದಿನವನ್ನು ನೆನೆದು ಬೆಚ್ಚಿ ಬೀಳುತ್ತೇನೆ’. ತೇಜಸ್ವಿ ಅಳಿಸಿ ಹಾಕಿರುವ ಈ ಟ್ವೀಟನ್ನು ಫೇಕ್ ನ್ಯೂಸ್ ಬೇಟೆಗಾರ ಮಹಮ್ಮದ್ ಝುಬೇರ್ ಅಗೆದು ಬಗೆದು ಹೊರಹಾಕಿದ್ದಾರೆ.
ಎಲ್ಲ ಬಗೆಯ ಮೀಸಲಾತಿಯನ್ನು ಅಳಿಸಿ ಹಾಕುವ ಕಾಲ ಬಂದಿರುವಾಗ ಮಹಿಳೆಯರಿಗೆ ಮೀಸಲಾತಿ ನೀಡಬೇಕೆಂಬ ಹೊಸ ಬೇಡಿಕೆಯ ಅಲೆ ಎದ್ದಿದೆ. ಮಹಿಳಾ ಮೀಸಲು ಜಾರಿಗೆ ತರಬೇಕೆಂದು ಸೋನಿಯಾಗಾಂಧೀ ಇಡೀ ದೇಶವನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲು ಹೊರಟಿದ್ದಾರೆ ಎಂದು 2013ರಲ್ಲಿ ಮಹಿಳಾ ಮೀಸಲು ಕುರಿತು ವ್ಯಂಗ್ಯವಾಡಿದ್ದವರು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ.
ಭಾರತೀಯ ಸಮಾಜದಲ್ಲಿ ಆಳಕ್ಕೆ ಬೇರಿಳಿಸಿದ್ದ ಜಾತಿ, ಜನಾಂಗ, ಧರ್ಮ ಹಾಗೂ ಲಿಂಗಾಧಾರಿತ ತಾರತಮ್ಯಗಳನ್ನು ತೊಡೆದು ಹಾಕುವುದನ್ನು ತಮ್ಮ ಪರಮ ಧ್ಯೇಯವೆಂದು ಪಣ ತೊಟ್ಟಿದ್ದರು ಡಾ.ಬಾಬಾಸಾಹೇಬ ಅಂಬೇಡ್ಕರ್. ಅವರು ಸಿದ್ಧಪಡಿಸಿದ ‘ಹಿಂದು ಕೋಡ್ ಬಿಲ್’ನ ಮೂಲ ಉದ್ದೇಶ ದೇಶದ ಸ್ತ್ರೀ ಸಮುದಾಯವನ್ನು ಗಂಡಾಳಿಕೆಯ ಬೇಡಿಗಳಿಂದ ಬಿಡಿಸಿ ಸಮಾನತೆ ಕಲ್ಪಿಸುವುದೇ ಆಗಿತ್ತು. ಬಿಜೆಪಿಯ ಈ ಹಿಂದಿನ ಅವತಾರವಾಗಿದ್ದ ಜನಸಂಘವು ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿತ್ತು. ಸಂಸತ್ತಿನ ಹೊರಗೆ ಆರೆಸ್ಸೆಸ್ ಬೀದಿಗಿಳಿದು ರಂಪ ಮಾಡಿತ್ತು. ಅಂಬೇಡ್ಕರ್ ಮತ್ತು ನೆಹರೂ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಕೂಡ ಹಿಂದು ಕೋಡ್ ಬಿಲ್ ನ ಪರವಾಗಿರಲಿಲ್ಲ. ಬ್ರಾಹ್ಮಣರ ವ್ಯವಹಾರಗಳಲ್ಲಿ ಮೂಗು ತೂರಿಸುವ ಅಧಿಕಾರ ಅಸ್ಪೃಶ್ಯನೊಬ್ಬನಿಗೆ (ಅಂಬೇಡ್ಕರ್) ಇಲ್ಲ ಎಂಬ ನೀಚ ನುಡಿಗಳೂ ಕೇಳಿ ಬಂದವು. ನೊಂದ ಅಂಬೇಡ್ಕರ್ ಅವರು ರಾಜೀನಾಮೆ ನೀಡಿದರು. ಮೊದಲ ಪ್ರಧಾನಿ ಜವಾಹರಲಾಲ್ ಅವರು ಈ ವಿಷಯದಲ್ಲಿ ಬಾಬಾಸಾಹೇಬರ ಬೆನ್ನೆಲುಬಾಗಿ ನಿಂತು ಬೆಂಬಲಿಸಿದರು. ಹಿಂದು ಕೋಡ್ ಬಿಲ್ ನ್ನು ನಾಲ್ಕು ವಿಧೇಯಕಗಳಾಗಿ ಒಡೆದು ಜಾರಿಗೆ ತಂದರು. ಕಟ್ಟರ್ ಗಂಡಾಳಿಕೆಯ ವಿರೋಧಧ ನಡುವೆಯೇ ಹಿಂದೂ ವಿವಾಹ ಕಾಯಿದೆ, ಹಿಂದೂ ಉತ್ತರಾಧಿಕಾರ ಕಾಯಿದೆ, ಹಿಂದೂ ಮೈನಾರಿಟಿ ಮತ್ತು ಗಾರ್ಡಿಯನ್ಶಿಪ್ ಕಾಯಿದೆ, ಹಿಂದು ದತ್ತಕ ಮತ್ತು ನಿರ್ವಹಣಾ ಕಾಯಿದೆ ಜಾರಿಗೆ ಬಂದವು. ಹೀಗಾಗಿ ಭಾರತೀಯ ಮಹಿಳೆಯ ಸಬಲೀಕರಣದ ಮೂಲ ಶ್ರೇಯಸ್ಸು ಅಂಬೇಡ್ಕರ್ ಮತ್ತು ನೆಹರೂ ಅವರಿಗೆ ಸಲ್ಲಬೇಕು. ಒಂದು ಸಮಾಜದ ಪ್ರಗತಿಯನ್ನು ಅಳೆಯುವ ಸರಿಯಾದ ಅಳತೆಗೋಲೆಂದರೆ, ಆ ಸಮಾಜದ ಮಹಿಳೆಯ ಪ್ರಗತಿಯೇ ಆಗಿದೆ ಎಂದಿದ್ದರು ಅಂಬೇಡ್ಕರ್. ಲಿಂಗಸಮಾನತೆಯೇ ದೇಶದ ಪ್ರಗತಿಯ ಅಡಿಗಲ್ಲು ಎಂಬುದು ಅವರ ಅಚಲ ನಂಬಿಕೆಯಾಗಿತ್ತು. ಸಮಾಜದ ಎಲ್ಲ ವಲಯಗಳಲ್ಲಿಯೂ ಮಹಿಳೆಯರಿಗೆ ಸಮಾನತೆಯನ್ನು ಎತ್ತಿ ಹಿಡಿದ ಸ್ತ್ರೀಹಕ್ಕುಗಳ ಮಹಾನ್ ಪ್ರತಿಪಾದಕ ಅವರು. ಮಹಿಳೆಯರಿಗೆ ಶಾಸನಸಭೆಗಳಲ್ಲಿ ಮೂರನೆಯ ಒಂದರಷ್ಟು ಮೀಸಲು ನೀಡಿಕೆಯ ಪರಿಕಲ್ಪನೆಯನ್ನು ಕೆಳಹಂತಗಳಲ್ಲಿ ಜಾರಿಗೆ ತಂದವರು ರಾಜೀವಗಾಂಧೀ. ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಜಾರಿಗೆ ತರುವ ಯುನೈಟೆಡ್ ಫ್ರಂಟ್ ಮತ್ತು ಯುಪಿಎ ಸರ್ಕಾರಗಳ ಉದ್ದೇಶ ಸಫಲವಾಗಲಿಲ್ಲ. ಈ ಮೀಸಲಾತಿಯಲ್ಲಿ ಒಳಮೀಸಲಾತಿ ಬೇಕೆಂಬ ವಾದ ಅತ್ಯಂತ ಪ್ರಸ್ತುತವಾದದ್ದು.
ಮಹಿಳೆಯರಿಗೆ ಅರ್ಧ ಅವಕಾಶ ನೀಡುವ, ಸಮಾನತೆಯಿಂದ ನಡೆಸಿಕೊಳ್ಳುವ ನಿಜ ಇರಾದೆ ಮೋದಿ ಆಡಳಿತಕ್ಕೆ ಇದ್ದಿದ್ದರೆ ಈ ವಿಧೇಯಕ ಕಾಯಿದೆಯಾಗಿ 2019ರಲ್ಲೇ ಜಾರಿಗೆ ಬರಬೇಕಿತ್ತು. ಈಗ ವಿಧೇಯಕವಾಗಿ ಮಂಡಿಸಿರುವ ಹಿಂದಿನ ಮೋಸದ ಪರದೆಯನ್ನು ಜನರೇ ಹರಿದು ಅದರ ಹಿಂದಿನ ನಿಷ್ಠುರ ಸತ್ಯವನ್ನು ಆಷಾಢಭೂತಿತನವನ್ನು ಮತದಾರರು ಅರಿಯಬೇಕಿದೆ.
ಚಿತ್ರ: ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಷನ್ ಕಾರ್ಯಕರ್ತರು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವಂತೆ ಒತ್ತಾಯಿಸಿ 2011ರಲ್ಲಿ ನವದೆಹಲಿಯ ಸಂಸತ್ ಭವನದ ಬಳಿ ಪ್ರತಿಭಟನೆ ನಡೆಸಿದ್ದರು, PC: AFP
ದೇಶದ ಮಹಿಳೆಯರ ಮುಡಿಗೆ ಅಲ್ಲ,, ಕಿವಿಗೆ ಹೂ ಇಡುವ ಪ್ರಯತ್ನ ಮಾಡಿದ್ದಾರೆ,,,