- ಅಕ್ರಮ ಆಸ್ತಿ ಮಾಡಿಕೊಂಡಿರುವ ಬಗ್ಗೆ ತನಿಖೆ ಮಾಡಬೇಕು
- ಇಂತಹ ಸೂಟ್ ಕೇಸ್ ವ್ಯವಹಾರ ನಿರಂತರವಾಗಿ ನಡೆಯುತ್ತವೆ
ಬಿಜೆಪಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಲಾಗುವುದೆಂದು 5 ಕೋಟಿ ರೂ. ಹಣ ಪಡೆದುಕೊಂಡು ವಂಚಿಸಿರುವ ಆರೋಪ ಹೊತ್ತ ಚೈತ್ರ ಕುಂದಾಪುರ ಮತ್ತು ಆಕೆಯ ಸಂಗಡಿಗರು ಹಾಗೂ ಹಣ ನೀಡಿರುವ ಗೋವಿಂದ್ ಬಾಬು ಪೂಜಾರಿ ಅವರುಗಳ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ಕೆಆರ್‌ಎಸ್ ಪಕ್ಷ ದೂರು ನೀಡಿದೆ.
ಬುಧವಾರ ದೂರು ನೀಡಿರುವ ಕೆಆರ್‌ಎಸ್ ಪಕ್ಷ, ಅಕ್ರಮ ಹಣ ವರ್ಗಾವಣೆ ಬಗ್ಗೆ ಮತ್ತು ಅಕ್ರಮ ಆಸ್ತಿ ಮಾಡಿಕೊಂಡಿರುವ ಬಗ್ಗೆ ತನಿಖೆ ಮಾಡಬೇಕು ಎಂದು ಜಾರಿ ನಿರ್ದೇಶನಾಲಯಕ್ಕೆ ಆಗ್ರಹಿಸಿದೆ.
“ಬಿಜೆಪಿ ಸೇರಿದಂತೆ, ಬಹುತೇಕ ಪ್ರಮುಖ ಪಕ್ಷಗಳು ಆಂತರಿಕ ಪ್ರಜಾಪ್ರಭುತ್ವ ಪಾಲಿಸದೆ ಹಾಗೂ ಸ್ಪರ್ಧಾಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕ ರೀತಿಯಲ್ಲಿ ನಡೆಸದೆ ಇರುವುದೇ ಇಂದು ಈ ಪಕ್ಷಗಳಲ್ಲಿ ಇಂತಹ ಸೂಟ್ ಕೇಸ್ ವ್ಯವಹಾರಗಳು ನಿರಂತರವಾಗಿ ನಡೆಯಲು ಸಾಧ್ಯವಾಗಿದೆ. ಇದು ಕೇವಲ ಚೈತ್ರ ಕುಂದಾಪುರ ಮಾತ್ರವಲ್ಲದೆ, ಬಿಜೆಪಿ ಸೇರಿದಂತೆ ಇತರ ಪಕ್ಷಗಳಲ್ಲೂ ಇದೇ ರೀತಿಯ ಅವ್ಯವಹಾರಗಳು ನಡೆಯುತ್ತಿವೆ. ಈ ಬಗ್ಗೆ ಪ್ರಮುಖ ಪಕ್ಷಗಳು ಗಂಭೀರವಾಗಿ ಚಿಂತಿಸಬೇಕು” ಎಂದು ದೂರಿನಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ಹಣ-ಹೆಸರು ಗಳಿಕೆಗೆ ಧರ್ಮವೇ ಸುಲಭದ ಸಾಧನ
“ಜೆಸಿಬಿ ಪಕ್ಷಗಳ ಭ್ರಷ್ಟಾಚಾರದ ಕಪ್ಪು ಹಣದ ರಾಜಕೀಯದ ಒಂದು ಸಣ್ಣ ಭಾಗ ಚೈತ್ರಾ ಕುಂದಾಪುರ ಅನ್ನುವ ಭ್ರಷ್ಟಾಚಾರಿಯ ಮೂಲಕ ತಂತಾನೇ ಬಯಲಾದರೂ, ಅದನ್ನು ಸೂಕ್ತ ತನಿಖಾ ಸಂಸ್ಥೆ ತನಿಖೆ ಮಾಡದಿದ್ದಲ್ಲಿ ಅದರಲ್ಲಿ ಭಾಗಿಯಾಗಿರುವ ಇತರ ದೊಡ್ಡ ಕುಳಗಳು ತಪ್ಪಿಸಿಕೊಳ್ಳುತ್ತವೆ” ಎಂದು ಕೆಆರ್‌ಎಸ್ ಪಕ್ಷ ದೂರಿನಲ್ಲಿ ವಿವರಿಸಿದೆ.