‘ಈ ದಿನ’ ಸಂಪಾದಕೀಯ | ಹಣ-ಹೆಸರು ಗಳಿಕೆಗೆ ಧರ್ಮವೇ ಸುಲಭದ ಸಾಧನ

Date:

ಕಾವಿಧಾರಿಗಳು, ಬಾಬಾಗಳ, ಧರ್ಮದ ಬಗ್ಗೆ ದೊಡ್ಡ ಗಂಟಲಲ್ಲಿ ಚೀರುವವರನ್ನು ನಾವು ಸದಾ ಅನುಮಾನದಿಂದ ನೋಡಬೇಕು. ಅವರಿಗೆ ಧರ್ಮವೆಂದರೆ, ಸ್ವಾರ್ಥ ಸಾಧನೆಯ ಒಂದು ಮಾರ್ಗ; ಸುಲಭದಲ್ಲಿ ಹಣ ಗಳಿಸುವ ಒಂದು ದಾರಿ.

ಸಂಘ ಪರಿವಾರದ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಂಚನೆ ಪ್ರಕರಣವು ದಿನದಿಂದ ದಿನಕ್ಕೆ ಹೊಸ ಹೊಸ ಆಯಾಮಗಳನ್ನು ಪಡೆಯುತ್ತಿದೆ. ಬೈಂದೂರು ಮೂಲದ ಉದ್ಯಮಿ ಗೋವಿಂದಬಾಬು ಪೂಜಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂಪಾಯಿ ವಂಚಿಸಲಾಗಿದೆ ಎನ್ನುವುದು ಪ್ರಕರಣದ ಮುಖ್ಯ ಆರೋಪ ಪ್ರತಿದಿನ ಪ್ರಕರಣದ ಹೊಸ ವಿವರಗಳು ಹೊರಬೀಳುತ್ತಿದ್ದು, ವಂಚಕರ ಕಾರ್ಯವಿಧಾನ (ಮೋಡಸ್ ಆಪರೆಂಡಿ) ಕಂಡು ರಾಜ್ಯದ ಜನ ದಂಗಾಗಿದ್ದಾರೆ.      

ಉಡುಪಿ ಜಿಲ್ಲೆಯ ಕುಂದಾಪುರದ ಚೈತ್ರಾ, ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ. ಗಗನ್ ಕಡೂರು ಸೇರಿದಂತೆ ಬಂಧಿತರಾಗಿರುವ ಪ್ರಸಾದ್, ಪ್ರಜ್ವಲ್ ಶೆಟ್ಟಿ, ಆರ್ ಎಸ್ ಧನರಾಜ್, ಶ್ರೀಕಾಂತ್ ಎಲ್ಲರ ನಡುವಿನ ಸಮಾನ ಅಂಶವೇನೆಂದರೆ, ಎಲ್ಲರೂ ಸಂಘ ಪರಿವಾರದ ಕಾರ್ಯಕರ್ತರು. ಹಿಂದೂಗಳ ರಕ್ಷಣೆ ಮಾಡುತ್ತೇವೆ, ಸಮಾಜದ ಒಗ್ಗಟ್ಟು ಕಾಪಾಡುತ್ತೇವೆ ಎಂದು ಹೇಳಿ ಜನರನ್ನು ಮರಳು ಮಾಡುತ್ತಿದ್ದ ಇವರೆಲ್ಲರ ಅಸಲೀ ಬಣ್ಣ ಈಗ ಬಯಲಾಗಿದೆ.

ಸಿ ಟಿ ರವಿ, ಆರಗ ಜ್ಞಾನೇಂದ್ರ ಸೇರಿದಂತೆ ಹಲವು ಬಿಜೆಪಿ ಮುಖಂಡರು ಈ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ. ವಾಸ್ತವ ಏನೆಂದರೆ, ಬಿಜೆಪಿಗೆ ತಳಮಟ್ಟದಲ್ಲಿ ಶಕ್ತಿಯಾಗಿರುವುದೇ ಸಂಘ ಪರಿವಾರದ ವಿವಿಧ ಸಂಘಟನೆಗಳ ಇಂಥ ಕಾರ್ಯಕರ್ತರು. ಪ್ರತಿನಿತ್ಯ ಒಂದಿಲ್ಲೊಂದು ಕ್ಯಾತೆ ತೆಗೆದು, ಸಮಾಜದಲ್ಲಿ ಕೋಮು ಸೌಹಾರ್ದ ಕದಡುತ್ತಾ, ವರ್ಷವಿಡೀ ಬಿಜೆಪಿ ಅಜೆಂಡಾವನ್ನು ಚಾಲ್ತಿಯಲ್ಲಿಡುವವರೇ ಚೈತ್ರಾ, ಗಗನ್‌ರಂಥ ಕಾರ್ಯಕರ್ತರು. ಬಿಜೆಪಿ ಚುನಾವಣೆಗಳನ್ನು ಗೆಲ್ಲುತ್ತಿರುವುದೇ ಇಂಥವರಿಂದ. ಇಂಥವರಿಗೆ ಪ್ರಚಾರ ನೀಡುತ್ತಿರುವ ಸುದ್ದಿಮಾಧ್ಯಮಗಳಿಂದ. ಇದನ್ನು ಮರೆತವರಂತೆ ಬಿಜೆಪಿ ನಾಯಕರು ವಂಚಕರಿಗೂ ತಮಗೂ ಸಂಬಂಧ ಇಲ್ಲ ಎಂದು ಅದೇ ಸುದ್ದಿಮಾಧ್ಯಮಗಳ ಮೂಲಕ ಮನದಟ್ಟು ಮಾಡಿಸುತ್ತಿದ್ದಾರೆ. ಆರಂಭದಲ್ಲಿ ಹಿಂದೂ ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ಸುಮ್ಮನಿರುವುದಿಲ್ಲ ಎಂದು ಇಡೀ ಪ್ರಕರಣಕ್ಕೆ ಧರ್ಮದ ಆಯಾಮ ನೀಡಲು ಹೋದ ಆರಗ ಜ್ಞಾನೇಂದ್ರ, ನಂತರ ಪ್ರಕರಣ ಗಂಭೀರವಾಗುತ್ತಿದ್ದಂತೆ ಆರೋಪಿಗಳಿಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ನುಣುಚಿಕೊಂಡರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆರೋಪಿಗಳ ವಿಚಾರಕ್ಕೆ ಬರುವುದಾದರೆ, ಅವರೆಲ್ಲ ಧರ್ಮದ ಹೆಸರೇಳಿ ಹೊಟ್ಟೆ ತುಂಬಿಸಿಕೊಳ್ಳಲು ಹೊರಟವರು. ಚೈತ್ರಾ ಕುಂದಾಪುರ ಅಂತೂ ದ್ವೇಷ ಭಾಷಣಗಳಿಗೆ ಕುಖ್ಯಾತಿ ಪಡೆದಿದ್ದವರು. ಯಾವುದೇ ರೀತಿಯ ತರ್ಕ, ಪಾಂಡಿತ್ಯ, ಅನುಭವಗಳ ಹಿನ್ನೆಲೆಯಿಲ್ಲದೇ ಕೇವಲ ಅನ್ಯಧರ್ಮದವರ ಬಗ್ಗೆ ಅನುಮಾನ, ಅಸಹನೆ ಹುಟ್ಟುಹಾಕಲೆಂದೇ ಬಾಯಿಗೆ ಬಂದಂತೆ ಮಾತನಾಡುವ ಮೂಲಕ ಕುಖ್ಯಾತಿ ಗಳಿಸಿದವರು ಚೈತ್ರಾ. ತಮ್ಮ ಮಾತುಗಳು ಧರ್ಮದ ಹೆಸರಿನಲ್ಲಿ ಜನರಲ್ಲಿ ನಂಜನ್ನು ತುಂಬಿದ ಇಂಥವರ ಅಂತಿಮ ಗುರಿ ಏನು ಎಂಬುದು ಈಗ ಎಲ್ಲರಿಗೂ ಗೊತ್ತಾಗಿದೆ.

ಪತ್ರಿಕೋದ್ಯಮ ಓದಿದ್ದರೂ ಎಲ್ಲೂ ಪಟ್ಟಾಗಿ ನೆಲೆ ನಿಂತು ಕೆಲಸ ಮಾಡದ, ಇನ್ನೂ ಚಿಕ್ಕ ವಯಸ್ಸಿನ ಚೈತ್ರಾ, ತನ್ನ ಅನ್ಯಧರ್ಮ ವಿರೋಧದಿಂದಲೇ ಗಳಿಸಿದ ಆಸ್ತಿ ಹಲವು ಕೋಟಿ ರೂಪಾಯಿಗಳು! ಪೊಲೀಸರು ಈಕೆಯಿಂದ ಮನೆ, ಕಾರು, ಎರಡು ನಿವೇಶನ, ಅಪಾರ ಮೊತ್ತದ ಎಫ್‌ಡಿ ಹಣ, ದೊಡ್ಡ ಕಾರನ್ನು ವಶಪಡಿಸಿಕೊಂಡಿದ್ದಾರೆ. ಒಬ್ಬ ಪತ್ರಕರ್ತೆಯಾಗಿ ಜೀವನಪೂರ್ತಿ ಪ್ರಾಮಾಣಿಕವಾಗಿ ದುಡಿದಿದ್ದರೂ ಆಕೆಗೆ ಅಷ್ಟು ಅಸ್ತಿ ಸಂಪಾದಿಸುವುದು ಸಾಧ್ಯವಿರಲಿಲ್ಲವೇನೋ.

ಇನ್ನು ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಹಿರೇಹಡಗಲಿಯ ಅಭಿನವ ಹಾಲಶ್ರೀ, ತನ್ನನ್ನು ತಾನು ಸ್ವಾಮೀಜಿ ಎಂದು ಕರೆದುಕೊಳ್ಳುವಾತ. ಕಾವಿಧಾರಿಯಾದ ಈತ ಚಕ್ರವರ್ತಿ ಸೂಲಿಬೆಲೆಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದವರು ಎನ್ನಲಾಗುತ್ತಿದೆ. ಗೋವಿಂದಬಾಬು ಪೂಜಾರಿಯನ್ನು ವಂಚಿಸಿದ ಹಣದಿಂದ ಈತ ಹಿರೇಹಡಗಲಿ ಬಳಿ ಎಂಟು ಎಕರೆ ಜಮೀನು ಖರೀದಿಸಿದ್ದಾನೆ. ಜೊತೆಗೆ ಪೆಟ್ರೋಲ್ ಪಂಪ್ ಸೇರಿ ಹಲವು ಕಡೆ ವಂಚನೆ ಹಣ ವಿನಿಯೋಗಿಸಿದ್ದಾನೆ ಎನ್ನಲಾಗುತ್ತಿದೆ.

ಚಕ್ರವರ್ತಿ ಸೂಲಿಬೆಲೆಯು ತನಗೆ ಈ ಪ್ರಕರಣದ ಬಗ್ಗೆ ಮೂರು ತಿಂಗಳು ಮೊದಲೇ ಎಲ್ಲ ತಿಳಿದಿತ್ತು ಎಂದು ಹೇಳಿದ್ದಾರೆ. ಹಾಗಿದ್ದರೆ, ಅವರು ಯಾಕೆ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸಲಿಲ್ಲ, ಯಾಕೆ ಇದನ್ನು ಪೊಲೀಸರ ಗಮನಕ್ಕೆ ತರಲಿಲ್ಲ ಎನ್ನುವುದು ನಿಗೂಢವಾಗಿದೆ. ಅದರ ಬಗ್ಗೆಯೂ ಪೊಲೀಸರು ತನಿಖೆ ನಡೆಸಬೇಕಿದೆ.

ಇವರೆಲ್ಲರ ನಿದರ್ಶನಗಳಿಂದ ತಿಳಿಯುವ ಸತ್ಯವೇನೆಂದರೆ, ಕಾವಿಧಾರಿಗಳು, ಬಾಬಾಗಳ, ಧರ್ಮದ ಬಗ್ಗೆ ದೊಡ್ಡ ಗಂಟಲಲ್ಲಿ ಚೀರುವವರನ್ನು ನಾವು ಸದಾ ಅನುಮಾನದಿಂದ ನೋಡಬೇಕು. ಅವರಿಗೆ ಧರ್ಮವೆಂದರೆ, ಸ್ವಾರ್ಥ ಸಾಧನೆಯ ಒಂದು ಮಾರ್ಗ; ಸುಲಭದಲ್ಲಿ ಹಣ ಗಳಿಸುವ ಒಂದು ದಾರಿ.

ಚಿಕ್ಕಮಗಳೂರಿನ ಕೊಪ್ಪದ ಬಳಿಯ ಮಾವಿನಕಟ್ಟೆಯ ಜನರು ಈ ಹಿಂದೆ ಚೈತ್ರಾ ತಮ್ಮ ಹಳ್ಳಿಗೆ ಬಂದು ದ್ವೇಷ ಭಾಷಣ ಮಾಡಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಅಂದು ಕಾರ್ಯಕ್ರಮ ನಡೆದಿದ್ದ ಸ್ಥಳದಲ್ಲಿ ತೀರ್ಥ ಪ್ರೋಕ್ಷಣೆ ಮಾಡಿದ್ದಾರೆ. ಮೊದಲು ಇಂಥವರಿಗೆ ಮಣೆ ಹಾಕಿ, ನಂತರ ಪಶ್ಚಾತ್ತಾಪ ಪಟ್ಟಿದ್ದಾರೆ.

ಯಾವ ಧರ್ಮವೂ ಇನ್ನೊಂದು ಧರ್ಮದವರನ್ನು ಅನುಮಾನದಿಂದ ನೋಡು, ಅಸಹನೆಯಿಂದ ನೋಡು ಎಂದು ಹೇಳುವುದಿಲ್ಲ. ಧರ್ಮದ ಹೆಸರಿನಲ್ಲಿ ತಮ್ಮ ಸ್ವಾರ್ಥ ಸಾಧನೆಗೋಸ್ಕರ ಜನರ ನಡುವೆ ನಂಜನ್ನು ಹರಡುವ, ಸಾಮರಸ್ಯ ಕೆಡಿಸುವ, ಕೊನೆಗೆ ತಮ್ಮದೇ ಧರ್ಮದ ಜನರನ್ನು ವಂಚಿಸುವ ಇಂಥವರ ಬಗ್ಗೆ ಜನ ಗುಮಾನಿ ಹೊಂದಿರಬೇಕಾಗುತ್ತದೆ. ಕಾವಿಧಾರಿಗಳು, ವಾಗ್ಮಿಗಳು, ಬಾಬಾಗಳ ಬಗ್ಗೆ ಅನುಮಾನ ಹೊಂದಿದವರು ಮುಂದೆ ಪಶ್ಚಾತ್ತಾಪದಿಂದ ಮುಕ್ತರಾಗುವರು.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಜನರೊಂದಿಗೆ ನೊಂದು ಬೆಂದು ಬಂಗಾರವಾದ ರಾಹುಲ್ ಗಾಂಧಿ

ಪಾದಯಾತ್ರೆಯ ಮೂಲಕ ಭಾರತದ ಆತ್ಮವನ್ನು ಅರ್ಥ ಮಾಡಿಕೊಂಡಿದ್ದ, ಜನರೊಂದಿಗೆ ಬೆರೆತು ಬೆಂದು...

ಈ ದಿನ ಸಂಪಾದಕೀಯ | ಮಿತ್ರಪಕ್ಷಗಳಿಗೆ ಮಣಿಯುವರೇ ಅಥವಾ ‘ಆಪರೇಷನ್ ಕಮಲ’ಕ್ಕೆ ಶರಣಾಗುವರೇ?

ದೇಶದ ದೊಡ್ಡ ಪಕ್ಷಗಳಲ್ಲಿ ಒಂದಾದ ಕಾಂಗ್ರೆಸ್ ಪಾರ್ಟಿ ಅವನತಿಯ ಹಾದಿಯಿಂದ ಮೈಕೊಡವಿ...

ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ಮೇಲೆ ಸವಾರಿ ಮಾಡುವವರಿಗೆ ಪಾಠ ಕಲಿಸಿದ ಫಲಿತಾಂಶ

ಫಲಿತಾಂಶ ಹೊರಬಿದ್ದಿದೆ. ರಾಜಕೀಯ ಪಕ್ಷಗಳ, ಸುದ್ದಿ ಮಾಧ್ಯಮಗಳ, ರಾಜಕೀಯ ವಿಶ್ಲೇಷಕರ, ಪಂಡಿತರ...

ಈ ದಿನ ಸಂಪಾದಕೀಯ | ಹಣದ ಹರಿವು, ಆತ್ಮಹತ್ಯೆಗಳು, ಅಧಿಕಾರಸ್ಥರು ಮತ್ತು ಬಡವರು

ಯಾವುದೇ ಪ್ರಕರಣವಾಗಲಿ, ಅದು ಹೊರಬಂದ ಹೊಸದರಲ್ಲಿ ಭಾರೀ ಸುದ್ದಿಯಾಗುತ್ತದೆ. ಆಡಳಿತ ಪಕ್ಷ...