- ‘ಬರದ ಬೇಗೆಯಲ್ಲಿ ರಾಜ್ಯದ ಜನತೆ ಬಸವಳಿಯುತ್ತಿದೆ’
- ‘ಸಚಿವರು ಮಾತ್ರ ಜಾತಿಗೊಂದು ಡಿಸಿಎಂ ಕೇಳುತ್ತಿದ್ದಾರೆ’
“ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತ್ತು” ಎಂಬ ಗಾದೆ ಮಾತು ಕಾಂಗ್ರೆಸ್ ಸರ್ಕಾರಕ್ಕೆ ಅತ್ಯಂತ ಸೂಕ್ತ. ರಾಜ್ಯದ ಜನತೆ ಮಳೆ ಇಲ್ಲದೇ, ಬರದ ಬೇಗೆಯಲ್ಲಿ ಬಸವಳಿಯುತ್ತಿದ್ದರೆ, “ಕೈ” ಸರ್ಕಾರದ ಸಚಿವರುಗಳು ಮಾತ್ರ ಜಾತಿಗೊಂದು ಡಿಸಿಎಂ ಪಟ್ಟ ನೀಡಿ ಎಂದು ಲಾಬಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಕಾಂಗ್ರೆಸ್‌ನಲ್ಲಿ ಎದ್ದಿರುವ ಮೂವರ ಡಿಸಿಎಂ ನೇಮಕ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ, “103 ವರ್ಷಗಳ ನಂತರ ರಾಜ್ಯದಲ್ಲಿ ಕಂಡು ಕೇಳರಿಯದಂತಹ ಬರ ಕಾಣಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ಆಸರೆಯಾಗುವ ಬದಲು, ಕುರ್ಚಿಗಾಗಿ ಕಚ್ಚಾಟ ನಡೆಸುತ್ತಿದೆ ಕಾಂಗ್ರೆಸ್” ಎಂದು ವಾಗ್ದಾಳಿ ನಡೆಸಿದೆ.
“ಲೋಕಸಭಾ ಚುನಾವಣೆ ಬಳಿಕ ಸರ್ಕಾರವೇ ಇರುವುದಿಲ್ಲ ಎಂಬುದನ್ನು ಸಚಿವರು ಹೇಳುತ್ತಾರೆಂದರೆ, ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಖಾತ್ರಿಯಾದಂತೆ” ಎಂದಿದೆ.
ಮಾತೆತ್ತಿದರೆ ಮೋದಿ
“ತಮ್ಮ ಜವಾಬ್ದಾರಿ, ಅಧಿಕಾರವನ್ನು ಮರೆತ ಸಿದ್ದರಾಮಯ್ಯರವರು ಮಾತೆತ್ತಿದರೆ ಪ್ರಧಾನಿ ನರೇಂದ್ರ ಮೋದಿ ಅವರು
ಅವರು ಮಧ್ಯಪ್ರವೇಶಿಸಬೇಕು ಎನ್ನುತ್ತಾರೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳ ಪರಿಹಾರಕ್ಕೂ ಅವರು ಮೋದಿಯವರ ಮೊರೆ ಹೋದರೂ ಅಚ್ಚರಿಯಲ್ಲ” ಎಂದು ಲೇವಡಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಕಾವೇರಿ ವಿವಾದ | ಸುಪ್ರೀಂಗೆ ಅರ್ಜಿ ಸಲ್ಲಿಸಿದ ಇಬ್ಬರು ರೈತರು
“ಬಿಕೆ ಹರಿಪ್ರಸಾದ್ ಅವರು ಸಿಎಂ ಬದಲಿಸುವ ಮಾತನಾಡುತ್ತಿದ್ದಾರೆ; ಪ್ರಧಾನಿ ಮೋದಿಯವರು ಮಧ್ಯಪ್ರವೇಶಿಸಬೇಕು, ಮೂರು ಡಿಸಿಎಂ ಸ್ಥಾನಕ್ಕಾಗಿ ಕಿತ್ತಾಟ ಜೋರಾಗಿದೆ; ಪ್ರಧಾನಿ ಮೋದಿಯವರು ಮಧ್ಯಪ್ರವೇಶಿಸಬೇಕು, ರಾಜ್ಯ ಸರ್ಕಾರದ ವೈಫಲ್ಯದಿಂದ ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ತೀವ್ರಗೊಂಡಿದೆ; ಪ್ರಧಾನಿ ಮೋದಿಯವರು ಮಧ್ಯಪ್ರವೇಶಿಸಬೇಕು, ಶ್ಯಾಡೋ ಸಿಎಂ ಹಾವಳಿ ಹೆಚ್ಚಾಗಿ, ರಾಜ್ಯದ ಸಚಿವರು ಹಾಗೂ ಅಧಿಕಾರಿಗಳು ಬೇಸತ್ತಿದ್ದಾರೆ; ಪ್ರಧಾನಿ ಮೋದಿಯವರು ಮಧ್ಯಪ್ರವೇಶಿಸಬೇಕು, ಹಾಗೂ ರಾಜ್ಯದಲ್ಲಿ ಕಮಿಷನ್, ಕಲೆಕ್ಷನ್, ವರ್ಗಾವಣೆ ದಂಧೆ ಹೆಚ್ಚಾಗಿದೆ; ಪ್ರಧಾನಿ ಮೋದಿಯವರು ಮಧ್ಯಪ್ರವೇಶಿಸಬೇಕು!” ಎಂದು ಬಿಜೆಪಿ ವ್ಯಂಗ್ಯವಾಡಿದೆ.
“ಪ್ರಧಾನಿ ಮೋದಿಯವರಿಗೆ ದೇಶ ಮುನ್ನಡೆಸುವ ಜವಾಬ್ದಾರಿ ಇದೆ. ನಿಮಗೂ ರಾಜ್ಯದ ಜವಾಬ್ದಾರಿ ಇದೆ. ಮೊದಲು ನಿಮ್ಮ ಒಳ ಜಗಳದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ, ರಾಜ್ಯದ ಜನರ ಹಿತ ಕಾಪಾಡಲು ಮಾಡಬೇಕಾದ ಕೆಲಸಗಳನ್ನು ಮಾಡಿ, ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿ ನಿರ್ವಹಿಸಿ” ಎಂದು ಕುಟುಕಿದೆ.