ರಾಯಚೂರು ಜಿಲ್ಲೆಯ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಆಸ್ತಿಗಳ ಬಗ್ಗೆ ಸಮೀಕ್ಷೆ ನಡೆಸಿ, ತಂತ್ರಾಂಶದಲ್ಲಿ ದಾಖಲಿಸಲಾಗಿಲ್ಲ ಎಂದು ಜಿಲ್ಲೆಯ ಎಲ್ಲ ಪಿಡಿಒಗಳನ್ನು ಜಿಲ್ಲಾ ಪಂಚಾಯತಿ ಸಿಇಒ ಪಾಂಡ್ವೆ ರಾಹುಲ್ ತುಕಾರಾಂ ತರಾಟೆಗೆ ತೆಗೆದುಕೊಂಡಿದ್ದಾರೆ. 2 ದಿನಗಳಲ್ಲಿ ಸಮೀಕ್ಷಾ ಮಾಹಿತಿ ನೀಡದಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ನೋಟೀಸ್ ಜಾರಿ ಮಾಡಿದ್ದಾರೆ,
ರಾಯಚೂರಿನಲ್ಲಿ ತಾಲೂಕು ಪಂಚಾಯತಿ ಇಒ ಮತ್ತು ಗ್ರಾಮ ಪಂಚಾಯತಿ ಪಿಡಿಒಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. “ಜಿಲ್ಲೆಯ 179 ಗ್ರಾಮ ಪಂಚಾಯತಿಗಳಲ್ಲಿ ಕೇವಲ ಬೆರಳೆಣಿಕೆಷ್ಟು ಮಾತ್ರ ಸಮೀಕ್ಷೆ ನಡೆಸಿ, ಬೇಕಾಬಿಟ್ಟಿಯಾಗಿ ತಂತ್ರಾಂಶದಲ್ಲಿ ಅಳವಡಿಸಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸಕಾಲದಲ್ಲಿ ಅರ್ಜಿಗಳ ವೀಲೇವಾರಿ ಮಾಡಲಾಗಿಲ್ಲ. ಬಾಕಿ ಉಳಿದಿರುವ ಎಲ್ಲ ಅರ್ಜಿಗಳನ್ನು ಮುಂದಿನ ಸಭೆಯೊಳಗೆ ಪೂರ್ಣಗೊಳಿಸಬೇಕು. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಘನತ್ಯಾಜ್ಯ ವೀಲೆವಾರಿ ಮಾಡಿ ಒಂದಡೆ ಸಂಗ್ರಹಿಸಬೇಕು. ಘನತ್ಯಾಜ್ಯ ಸಂಗ್ರಹ ಶೆಡ್ ಇಲ್ಲದಿದ್ದರೆ, ತಾತ್ಕಾಲಿಕವಾಗಿ ಶೆಡ್ ನಿರ್ಮಾಣ ಮಾಡಿ ಸಂಗ್ರಹಿಸಬೇಕು” ಎಂದು ಸೂಚನೆ ನೀಡಿದರು.
“ಕಸ ಸಂಗ್ರಹಿಸುವ ವಾಹನಗಳ ಮಹಿಳಾ ಚಾಲಕರಿಗೆ ಕಳೆದ 1 ವರ್ಷದಿಂದ ವೇತನ ನೀಡಿಲ್ಲ. ಉದ್ಬಾಳ ಗ್ರಾಮ ಪಂಚಾಯತಿಯಲ್ಲಿ 4 ತಿಂಗಳ ವೇತನ ನೀಡಿಲ್ಲ. ಜಾನೇಕಲ್‌ನಲ್ಲಿ 4 ತಿಂಗಳ ವೇತನ ನೀಡಿಲ್ಲ. ನಕ್ಕುಂದಿ, ತಲೇಖಾನ್ ಗ್ರಾಮ ಪಂಚಾಯತಿಯಲ್ಲಿ 1 ವರ್ಷದಿಂದ ವೇತನ ನೀಡಿಲ್ಲ” ಎಂದು ಕಿಡಿಕಾರಿದರು.
“ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಇಂಡಸ್ಟ್ರಿಗಳು ತೆರಿಗೆ ನೀಡಿಲ್ಲ. ಅಂತಹ ಇಂಡಸ್ಟ್ರಿಗಳು ಮತ್ತು ಕಡಿಮೆ ತೆರಿಗೆ ನೀಡಿದ ಇಂಡಸ್ಟ್ರಿಗಳಿಗೆ ನೋಟಿಸ್ ನೀಡಬೇಕು” ಎಂದು ತಿಳಿಸಿದರು.
- ಸಿಟಿಜನ್ ಜರ್ನಲಿಸ್ಟ್, ಹಫೀಜುಲ್ಲ ರಾಯಚೂರು