- ಬೆಂಗಳೂರಿನಲ್ಲಿ ಸಭೆ ನಡೆಸಿದ ಜೆಡಿಎಸ್ ಪಕ್ಷದ ಮುಸ್ಲಿಂ ಮುಖಂಡರು
- ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿದ ಜೆಡಿಎಸ್
ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎನ್‌ಡಿಎ ಜತೆ ಮೈತ್ರಿ ಅಧಿಕೃತವಾಗುತ್ತಿದ್ದಂತೆ ಜೆಡಿಎಸ್‌ನ ಕೆಲವು ಮುಸ್ಲಿಂ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷವನ್ನು ತೊರೆಯುವ ತೀರ್ಮಾನ ಕೈಗೊಂಡಿದ್ದಾರೆ.
ಪಕ್ಷದ ಹಿರಿಯ ರಾಜ್ಯ ಉಪಾಧ್ಯಕ್ಷ ಸಯ್ಯದ್ ಶಫೀವುಲ್ಲಾ ಅವರು ಪಕ್ಷದಲ್ಲಿನ ಎಲ್ಲ ಹುದ್ದೆಗಳಿಗೆ ಮತ್ತು ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಇನ್ನುಳಿದಂತೆ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಎನ್.ಎಂ.ನಬಿ, ರಾಜ್ಯ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ನಾಸೀರ್ ಹುಸೇನ್, ಯುವ ಘಟಕದ ಕಾರ್ಯಾಧ್ಯಕ್ಷ ಎನ್.ಎಂ.ನೂರ್, ಮುಖಂಡರಾದ ಮೊಹಿದ್ ಅಲ್ತಾಫ್ ಸಹ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಲು ತೀರ್ಮಾನಿಸಿದ್ದಾರೆ.
ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಅಧಿಕೃತವಾಗಿ ಘೋಷಣೆಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಕುಮಾರಕೃಪಾದಲ್ಲಿ ಸಭೆ ನಡೆಸಿದ ಜೆಡಿಎಸ್ ಪಕ್ಷದ ಮುಸ್ಲಿಂ ಮುಖಂಡರು, ಪಕ್ಷದಿಂದ ದೂರವುಳಿದು, ರಾಜೀನಾಮೆ ನೀಡುವ ಬಗ್ಗೆ ತೀರ್ಮಾನಿಸಿದ್ದಾರೆ.
ದೆಹಲಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಮೈತ್ರಿ ಪ್ರಕ್ರಿಯೆ ಅಧಿಕೃತಗೊಳಿಸಿರುವುದನ್ನು ಖಂಡಿಸಿರುವ ಮುಖಂಡರುಗಳು, ಪಕ್ಷದ ವರಿಷ್ಠರ ನಡೆ ಪಕ್ಷಕ್ಕೆ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅಭಿಪ್ರಾಯಿಸಿದ್ದು, ಮೈತ್ರಿಯ ನಡೆಯನ್ನು ವಿರೋಧಿಸಿದರು.
ಸಯ್ಯದ್ ಶಫೀವುಲ್ಲಾ ಅವರು ಪಕ್ಷದ ಹಿರಿಯ ರಾಜ್ಯ ಉಪಾಧ್ಯಕ್ಷ ಸೇರಿದಂತೆ ಪಕ್ಷದ ಎಲ್ಲ ಹುದ್ದೆಗಳಿಗೆ ಮತ್ತು ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಪತ್ರ ಬರೆದು ರಾಜೀನಾಮೆ ಪತ್ರ ರವಾನಿಸಿದ್ದಾರೆ.
“ಬಿಜೆಪಿ ಜತೆಗಿನ ಮೈತ್ರಿಗೆ ಈ ಮೊದಲೇ ವಿರೋಧ ವ್ಯಕ್ತಪಡಿಸಿದ್ದೆವು. ಆದರೂ ಬಿಜೆಪಿ ಜತೆ ಕೈ ಜೋಡಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ನಮ್ಮ ವಿರೋಧ ಇರುವ ಕಾರಣ ಪಕ್ಷವನ್ನು ತೊರೆಯಲು ಹಲವು ಮುಖಂಡರು ತೀರ್ಮಾನಿಸಿದ್ದಾರೆ” ಎಂದು ಸಯ್ಯದ್ ಶಫೀವುಲ್ಲಾ ತಿಳಿಸಿದ್ದಾರೆ.