ನೂರರ ನೆನಪು | ದೇವಾನಂದ್ ಎಂಬ ಸಾಹಸಿಗ, ಚಿರಯೌವನಿಗ

Date:

Advertisements
ಪ್ರೇಮ, ಪತ್ತೇದಾರಿ, ಪ್ರಯೋಗಾತ್ಮಕ ಚಿತ್ರಗಳನ್ನು ಮಾಡಿದ, ತನ್ನ ಆಂಗಿಕ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದ, ಅನಿಸಿದ್ದನ್ನು ಆಡುವ ದಾಢಸೀ ವ್ಯಕ್ತಿತ್ವ ಹೊಂದಿದ್ದ, ಕೊನೆಯವರೆಗೂ ಚಿರಯೌವನಿಗನಾಗಿಯೇ ಉಳಿದ ನಟ, ನಿರ್ದೇಶಕ, ನಿರ್ಮಾಪಕ ದೇವಾನಂದ್‌ರಿಗೆ ಇದೇ ಸೆಪ್ಟಂಬರ್ 26ಕ್ಕೆ ನೂರು ವರ್ಷ ತುಂಬುತ್ತದೆ. ಈ ಜನ್ಮಶತಮಾನೋತ್ಸವದ ನೆನಪಿನಲ್ಲಿ ಅವರ ಚಿತ್ರಬದುಕಿನತ್ತ ಒಂದು ನೋಟ

ಭಾರತೀಯ ಚಿತ್ರರಂಗದ ಚಿರಯೌವನಿಗ ಎಂದಾಕ್ಷಣ ದೇವಾನಂದ್ ಎನ್ನುತ್ತಾರೆ ಅರವತ್ತರ ದಶಕದ ಅಭಿಮಾನಿಗಳು. ಅದಕ್ಕೆ ಪೂರಕವಾಗಿ ‘ಹಮ್ ದೋನೋ’ ಚಿತ್ರದ, ಸಾಹಿರ್ ಲೂಧಿಯಾನ್ವಿ ರಚಿಸಿದ ‘ಮೈ ಜಿಂದಗೀ ಕಾ ಸಾಥ್ ನಿಭಾತಾ ಚಲಾ ಗಯಾ’ ಹಾಡನ್ನು ಗುನುಗುತ್ತಾರೆ. ಸುರಯ್ಯಾ ಜೊತೆಗಿನ ಮನ ಕಲಕುವ ಕತೆಯನ್ನೂ ಕನವರಿಸುತ್ತಾರೆ. ಕುತೂಹಲಕರ ಸಂಗತಿ ಎಂದರೆ, ರೋಮ್ಯಾಂಟಿಕ್ ಹೀರೋ ಎಂದು ಹೆಸರಾಗಿದ್ದ ದೇವಾನಂದ್, 1962ರಲ್ಲಿ, ಪ್ರಧಾನಿ ನೆಹರೂ ಅವರಿಗೆ, ‘ನಿಮ್ಮ ಮಂದಹಾಸಕ್ಕೆ ಲೇಡಿ ಮೌಂಟ್ ಬ್ಯಾಟನ್ ಮರುಳಾಗಿದ್ದರಂತೆ, ನಿಜವೇ?’ ಎಂದು ಕೇಳಿದ್ದರು. ಅಂತಹ ಮುಗುಳ್ನಗೆಯ ಮೂಲಕವೇ ಕೋಟ್ಯಂತರ ಹುಡುಗಿಯರ ಹೃದಯ ಕದ್ದಿದ್ದ ಚೋರನಿಂದ ಬಂದ ಪ್ರಶ್ನೆ, ನೆಹರೂ ನಗುವಿನ ಉತ್ತರ- ಆವತ್ತಿನ ಆರೋಗ್ಯಕರ ವಾತಾವರಣಕ್ಕೊಂದು ಉತ್ತಮ ಉದಾಹರಣೆ. ಇವತ್ತಿನ ಪ್ರಧಾನಿಗಳಿಗೆ ಕೇಳಿದ್ದರೆ… ಬೇಡ ಬಿಡಿ!

ದೇವಾನಂದ್‌ ಚಿತ್ರರಂಗಕ್ಕೆ ಬರುವ ಮುಂಚೆಯೇ ಸುರಯ್ಯಾ ಹೆಸರು ಮಾಡಿದ್ದರು. ಬೇಡಿಕೆಯ ನಟಿಯಾಗಿದ್ದರು. ‘ವಿದ್ಯಾ’ ಚಿತ್ರದ ಚಿತ್ರೀಕರಣದಲ್ಲಿ ಸುರಯ್ಯಾರನ್ನು ನೋಡಿ ನಿಬ್ಬೆರಗಾದ ದೇವ್, ತಾವೇ ಮುಂದಾಗಿ ಪರಿಚಯ ಮಾಡಿಕೊಂಡಿದ್ದರು. ಆ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಅದರ ಫಲವಾಗಿ ವಜ್ರದುಂಗುರ ಸುರಯ್ಯಾ ಬೆರಳನ್ನು ಅಲಂಕರಿಸಿತ್ತು. ಆನಂತರ, ಮೂರು ವರ್ಷಗಳ ಅಂತರದಲ್ಲಿ ಇಬ್ಬರೂ ಆರು ಚಿತ್ರಗಳಲ್ಲಿ ಒಟ್ಟಿಗೇ ನಟಿಸಿದ್ದರು. ‘ಲಾಯಿ ಖುಷೀಕಿ ದುನಿಯಾ’ ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ದೋಣಿ ಮಗುಚಿ ಮುಳುಗುತ್ತಿದ್ದ ಸುರಯ್ಯಾರನ್ನು ದೇವಾನಂದ್ ರಕ್ಷಿಸಿ ನಿಜವಾದ ಹೀರೋ ಆಗಿದ್ದರು. ಅದು ಅವರಿಬ್ಬರ ನಡುವಿನ ಪ್ರೇಮವನ್ನು ಗಟ್ಟಿಗೊಳಿಸಿತ್ತು.

ಆದರೆ ದೇವಾನಂದ್ ಹಿಂದು, ಸುರಯ್ಯಾ ಮುಸ್ಲಿಂ ಆದಕಾರಣ, ಆಕೆಯ ಅಜ್ಜಿ ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆಕೆಗೆ ಧರ್ಮವಲ್ಲ, ಆದಾಯಕ್ಕೆ- ಅನ್ನಕ್ಕೆ ಕಲ್ಲು ಬೀಳುತ್ತದೆಂಬುದು ಕಾರಣವಾಗಿತ್ತು. ಅಷ್ಟೇ ಅಲ್ಲ, ದೇವ್ ಮೇಲೆ ದೂರು ಕೊಟ್ಟು, ಇಬ್ಬರೂ ಒಟ್ಟಿಗೆ ನಟಿಸುವುದೇ ಅಸಾಧ್ಯವಾಯಿತು. ಅದು ಸುರಯ್ಯಾರನ್ನು ಚಿತ್ರರಂಗದಿಂದಲೇ ದೂರ ದೂಡಿತು. ಆಕೆ ಜೀವನವಿಡೀ ಅವಿವಾಹಿತೆಯಾಗಿಯೇ ಉಳಿಯುವಂತಾಯಿತು. ದೇವಾನಂದ್‌ರನ್ನು ಸುರಯ್ಯಾ ಇಷ್ಟಪಟ್ಟಿದ್ದರಲ್ಲಿ, ಆತ ಹಾಲಿವುಡ್ ನಟ ಗ್ರೆಗರಿ ಪೆಕ್ ನಂತೆ ಕಾಣುತ್ತಾನೆ ಎನ್ನುವ ಕಾರಣವೂ ಇತ್ತು. ಹಾಗೂ ಆ ಗ್ರೆಗರಿ ಪೆಕ್ ಜೊತೆಗೂ ಸುರಯ್ಯಾಗೆ ಸ್ನೇಹವಿತ್ತು, ಸಂಪರ್ಕವಿತ್ತು.

Advertisements

ಭಾರತೀಯ ಚಿತ್ರರಂಗದ ಗ್ರೆಗರಿ ಪೆಕ್ ಎಂದೇ ಖ್ಯಾತಿ ಗಳಿಸಿದ್ದ ಸುಪ್ರಸಿದ್ಧ ನಟ, ನಿರ್ದೇಶಕ, ನಿರ್ಮಾಪಕ ದೇವಾನಂದ್ ಜನಿಸಿದ್ದು ಸೆಪ್ಟೆಂಬರ್ 26, 1923ರಂದು. ಆರು ದಶಕಗಳ ಕಾಲ ಭಾರತೀಯ ಚಿತ್ರರಂಗದಲ್ಲಿ ಕ್ರಿಯಾಶೀಲರಾಗಿದ್ದ ದೇವಾನಂದ್, ಮರೆಯಲಾರದ ಮಹತ್ವದ ಕೃತಿಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಆ ಕಾರಣಕ್ಕಾಗಿ, ನಟನ ನೂರರ ವರ್ಷಾಚರಣೆಗಾಗಿ ‘ಫಿಲ್ಮ್ ಹೆರಿಟೇಜ್ ಫೌಂಡೇಷನ್’ ಸಂಸ್ಥೆ ‘ದೇವಾನಂದ್ @100- ಫಾರೆವರ್ ಯಂಗ್’ ಹೆಸರಿನಲ್ಲಿ ಅವರ 55 ಚಿತ್ರಗಳನ್ನು ಆಯ್ದ 30 ನಗರಗಳಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುವ ಮೂಲಕ ಗೌರವ ಅರ್ಪಿಸಿದೆ. ದೇವಾನಂದ್ ಮಾಡಿದ್ದೆಲ್ಲ ಮಾಸ್ಟರ್ ಪೀಸ್ ಎನ್ನುವಂತಿಲ್ಲದಿದ್ದರೂ, 50ರಿಂದ 70ರ ತನಕದ, ಎರಡು ದಶಕಗಳಲ್ಲಿ ಬಂದ ‘ಬಾಝಿ, ಸಿಐಡಿ, ಕಾಲಾ ಪಾನಿ, ಬಂಬೈ ಕಾ ಬಾಬು, ಹಂ ದೋನೋ, ಗೈಡ್, ಜ್ಯುಯಲ್ ತೀಫ್, ಹರೇ ರಾಮ ಹರೇ ಕೃಷ್ಣ, ಜಾನಿ ಮೇರಾ ನಾಮ್’ನಂತಹ ಚಿತ್ರಗಳು ಎಲ್ಲಾ ಕಾಲಕ್ಕೂ ನಿಲ್ಲುವ, ನೋಡಿಸಿಕೊಳ್ಳುವ ಚಿತ್ರಗಳು. ಸಿನಿವಿಮರ್ಶಕರಿಂದ ಗಂಭೀರ ಚರ್ಚೆಗೊಳಪಟ್ಟ ಚಿತ್ರಗಳು. ನಟನನ್ನು ನಕ್ಷತ್ರವಾಗಿಸಿದ ಚಿತ್ರಗಳು.

ಇಂತಹ ಚಿತ್ರಗಳನ್ನು ಕೊಟ್ಟ ದೇವಾನಂದ್ ಜನಿಸಿದ್ದು ಪಂಜಾಬಿನ ವಕೀಲರ ಮಗನಾಗಿ. ಲಾಹೋರಿನಲ್ಲಿ ಇಂಗ್ಲಿಷ್ ಸಾಹಿತ್ಯದ ಪದವಿ ಪಡೆದು, ಅಣ್ಣ ಚೇತನ್ ಆನಂದ್ ಚಿತ್ರರಂಗದಲ್ಲಿದ್ದ ಕಾರಣಕ್ಕೆ ನಟನಾಗಬೇಕೆಂಬ ಆಸೆಯಿಂದ ಮುಂಬೈಗೆ ಬಂದರು. ಆದರೆ ಆಸೆ ಕೈಗೂಡದೆ ಕೈಗೆ ಸಿಕ್ಕ ಕೆಲಸ ಮಾಡುತ್ತಾ ಕಾಲ ನೂಕಿದರು. ಏತನ್ಮಧ್ಯೆ, 1946ರಲ್ಲಿ ‘ಹಮ್ ಏಕ್ ಹೈ’ ಚಿತ್ರದಲ್ಲಿ ಪುಟ್ಟ ಅವಕಾಶ ದೊರಕುತ್ತದೆ. ಆದರದು ಜನರ ಗಮನಕ್ಕೆ ಬಾರದೆ ನಿರಾಶೆ ಮೂಡಿಸುತ್ತದೆ. ಆದರೆ ಆ ಸೆಟ್‌ನಲ್ಲಿ ಸಿಕ್ಕ ಗುರುದತ್ ಗೆಳೆತನ, ಅವರಿಬ್ಬರ ಸಮಾನಮನಸ್ಕ ಚಿಂತನೆಗೆ ಸಾಣೆ ಹಿಡಿಯುತ್ತದೆ, ಹಲವು ಉತ್ತಮ ಚಿತ್ರಗಳ ನಿರ್ಮಾಣಕ್ಕೆ ಕಾರಣವಾಗುತ್ತದೆ, ಇಬ್ಬರೂ ಬೆಳೆದು ಉದ್ಯಮವನ್ನು ಬೆಳೆಸುವ ಮತ್ತೊಂದು ಮಜಲಿಗೆ ಕೊಂಡೊಯ್ಯುತ್ತದೆ.

1948ರಲ್ಲಿ, ನಟ ಅಶೋಕ್ ಕುಮಾರ್ ಕೃಪೆಯಿಂದ ‘ಜಿದ್ದಿ’ ಚಿತ್ರದ ನಾಯಕನ ಪಾತ್ರ ಸಿಕ್ಕು, ಬಹಳ ದೊಡ್ಡಮಟ್ಟದ ಯಶಸ್ಸು ಸಿಗುತ್ತದೆ. 1949ರಲ್ಲಿ ಅಣ್ಣ ಮತ್ತು ತಮ್ಮನೊಂದಿಗೆ ಸೇರಿ ‘ನವಕೇತನ್’ ಎಂಬ ಚಿತ್ರನಿರ್ಮಾಣ ಸಂಸ್ಥೆ ಹುಟ್ಟುಹಾಕುತ್ತಾರೆ. ಅದೇ ಸಂಸ್ಥೆಯ ನಿರ್ಮಾಣದಲ್ಲಿ, ಗುರುದತ್ ನಿರ್ದೇಶನದಲ್ಲಿ 1951ರಲ್ಲಿ ಬಂದ ‘ಬಾಝಿ’ ಚಿತ್ರ ಸೂಪರ್ ಹಿಟ್ ಆಗುತ್ತದೆ. ಆ ನಂತರ ಬಂದ ‘ಜಾಲ್’, ‘ಸಿಐಡಿ’ ಚಿತ್ರಗಳು ಗೆಲ್ಲುವ ಮೂಲಕ ದೇವಾನಂದ್‌ ನಾಯಕನಾಗಿ ನೆಲೆಯೂರಿದರೆ, ಗುರುದತ್ ಸ್ಟಾರ್ ಡೈರೆಕ್ಟರ್ ಆಗಿ ಹೊರಹೊಮ್ಮುತ್ತಾರೆ. ಆನಂತರ ಸಹೋದರ ವಿಜಯ್ ಆನಂದ್ ನಿರ್ದೇಶನಕ್ಕಿಳಿದಾಗ `ನೌ ದೋ ಗ್ಯಾರಾ’ ಚಿತ್ರಕ್ಕೆ ದೇವಾನಂದ್-ಕಲ್ಪನಾ ಕಾರ್ತಿಕ್ ನಾಯಕ-ನಾಯಕಿಯಾಗುತ್ತಾರೆ. ಈ ಚಿತ್ರ ಹಾಲಿವುಡ್ ನ ‘ಇಟ್ ಹ್ಯಾಪಂಡ್ ಒನ್ ನೈಟ್’ ಚಿತ್ರದಿಂದ ಪ್ರೇರಣೆ ಪಡೆದ ಕತೆಯಾಗಿದ್ದರೂ, ಅದನ್ನು ಭಾರತೀಯ ಚಿತ್ರವಾಗಿಸಿದ ಕೀರ್ತಿ ಈ ಸಹೋದರರಿಗೆ ಸಲ್ಲುತ್ತದೆ. ಜೊತೆಗೆ ದೇವಾನಂದರ ಜೀವದ ಗೆಳೆಯ ಕಿಶೋರ್ ಕುಮಾರ್ ಮತ್ತು ಆಶಾ ಬೋಂಸ್ಲೆ ಹಾಡಿದ ‘ಆಂಕೋನ್ ಮೇ ಕ್ಯಾ ಜಿ’ ಹಾಡು ಜನಪ್ರಿಯ ಹಾಡಾಗಿ ಚಿತ್ರವನ್ನು ಗೆಲ್ಲಿಸುತ್ತದೆ. ಆನಂತರ ‘ಟ್ಯಾಕ್ಸಿ ಡ್ರೈವರ್’, ‘ಕಾಲಾಪಾನಿ’, ‘ಹಮ್ ದೋನೋ’, ‘ಗೈಡ್’, ‘ಜ್ಯುಯಲ್ ತೀಫ್’, ‘ಹರೇ ರಾಮ ಹರೇ ಕೃಷ್ಣ’- ಒಂದಕ್ಕಿಂತ ಒಂದು ಭಿನ್ನವಾದ ಕಥಾಹಂದರಗಳುಳ್ಳ ಚಿತ್ರಗಳನ್ನು ನಿರ್ಮಿಸಿದ ನವಕೇತನ್ ಸಂಸ್ಥೆ, ಹಲವು ನಟ-ನಟಿಯರನ್ನು, ಗಾಯಕ-ಗಾಯಕಿಯರನ್ನು, ತಂತ್ರಜ್ಞರನ್ನು ಉದ್ಯಮಕ್ಕೆ ಕೊಡುಗೆಯಾಗಿ ನೀಡಿ ಪ್ರತಿಷ್ಠಿತ ಚಿತ್ರಸಂಸ್ಥೆಯಾಗಿ ಹೊರಹೊಮ್ಮುತ್ತದೆ.

ಈ ನಡುವೆ ‘ಟ್ಯಾಕ್ಸಿ ಡ್ರೈವರ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಸಿಮ್ಲಾದ ಸುಂದರಿ ಮೋನಾ ಸಿಂಗ್- ಕಲ್ಪನಾ ಕಾರ್ತಿಕ್‌ರನ್ನು ದೇವಾನಂದ್ 1954ರಲ್ಲಿ ವಿವಾಹವಾಗುತ್ತಾರೆ. ಅವರಿಗೆ ಇಬ್ಬರು ಮಕ್ಕಳು ಜನಿಸುತ್ತಾರೆ. ಮಡದಿ-ಮಕ್ಕಳಾದ ಮೇಲೆ, ದೇಹ ಕೃಶಗೊಂಡ ನಂತರ, ತನ್ನ ಕಾಲ ಮುಗಿಯಿತು ಎಂದು ಮೂಲೆಗುಂಪಾಗದ ದೇವಾನಂದ್, ಚಿರಯುವಕನಂತೆ ಚಿಕ್ಕ ಹುಡುಗಿಯರೊಂದಿಗೆ ನಟಿಸುವುದನ್ನು ಮುಂದುವರೆಸುತ್ತಾರೆ. 

ದೇವಾನಂದ್‌ಗೆ ಅವರದೇ ಆದ, ಅವರೇ ರೂಢಿಸಿಕೊಂಡ ಶೈಲಿ ಇದೆ. ನಟನೆಯಲ್ಲಿ, ಡೈಲಾಗ್ ಡೆಲಿವರಿಯಲ್ಲಿ, ಉಡುಗೆ-ತೊಡುಗೆಯಲ್ಲಿ, ಹಾವಭಾವದಲ್ಲಿ, ಕತೆ ಆಯ್ಕೆಯಲ್ಲಿ, ನಿರೂಪಣಾಶೈಲಿಯಲ್ಲಿ, ಚಿತ್ರ ನಿರ್ಮಾಣದಲ್ಲಿ- ಎಲ್ಲವೂ ಭಿನ್ನ. ಈ ವೈವಿಧ್ಯತೆ ಇಲ್ಲದೇ ಹೋಗಿದ್ದರೆ, ಅವರು ಕಾಲಕಾಲಕ್ಕೆ ಎದುರಾದ ಪೈಪೋಟಿಯನ್ನು ಎದುರಿಸಿ ನಿಲ್ಲಲಾಗುತ್ತಿರಲಿಲ್ಲ. ಆರು ದಶಕಗಳ ಕಾಲ 19 ಚಿತ್ರಗಳನ್ನು ನಿರ್ದೇಶಿಸಿ, ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಚಿರಸ್ಥಾಯಿಯಾಗಿ ಉಳಿಯಲಾಗುತ್ತಿರಲಿಲ್ಲ. 50ರ ದಶಕದಲ್ಲಿ ದಿಲೀಪ್ ಕುಮಾರ್, ರಾಜ್‌ಕಪೂರ್ ಒಡ್ಡಿದ ಸ್ಪರ್ಧೆ ಎದುರಿಸಿದ ದೇವಾನಂದ್, 60ರ ದಶಕದಲ್ಲಿ ಶಮ್ಮಿ ಕಪೂರ್, ರಾಜೇಂದ್ರ ಕುಮಾರ್ ತರಹದ ನಟರ ಪೈಪೋಟಿಗೂ ಎದೆಗೊಟ್ಟು ‘ಜ್ಯುಯಲ್ ತೀಫ್’ ಚಿತ್ರ ಮಾಡಿ ಗೆದ್ದರು. 70ರ ದಶಕದಲ್ಲಿ ವಯಸ್ಸು 50 ದಾಟಿದಾಗಲೂ ರಾಜೇಶ್ ಖನ್ನಾ, ಧರ್ಮೇಂದ್ರ, ಸಂಜೀವ್ ಕುಮಾರ್, ಅಮಿತಾಭ್‌ರಂತಹ ನಟರಿಗೆ ಸರಿಸಾಟಿಯಾಗಿ ಬಣ್ಣಹಚ್ಚಿದರು. 1970ರಲ್ಲಿ ಬಂದ ‘ಜಾನಿ ಮೇರಾ ನಾಮ್’ ಹಾಗೂ 1971ರಲ್ಲಿ ಬಿಡುಗಡೆಯಾದ ‘ಹರೇ ರಾಮ ಹರೇ ಕೃಷ್ಣ’ ಪ್ರಯೋಗಾತ್ಮಕ ಚಿತ್ರಗಳ ಮೂಲಕ ಚಿತ್ರೋದ್ಯಮದಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದರು. 1978ರಲ್ಲಿ ಇಪ್ಪತ್ತು ವರ್ಷ ವಯಸ್ಸಿನ ಟೀನಾ ಮುನಿಮ್‌ರನ್ನು ಪರಿಚಯಿಸಿ, ತಾವೇ ನಿರ್ದೇಶಿಸಿ, ನಟಿಸಿ ‘ದೇಸ್ ಪರದೇಸ್’ ಚಿತ್ರ ಗೆಲ್ಲಿಸಿದರು. 1983ರಲ್ಲಿ ‘ಸ್ವಾಮಿ ದಾದಾ’ ಚಿತ್ರದಲ್ಲಿ ಪುಟ್ಟ ಹುಡುಗಿ ಪದ್ಮಿನಿ ಕೊಲ್ಹಾಪುರೆಯೊಂದಿಗೆ ಅಭಿನಯಿಸಿದಾಗ ದೇವಾನಂದ್‌ಗೆ ಅರವತ್ತು ದಾಟಿತ್ತು. ಅವರ ಓರಗೆಯ ನಾಯಕರಿಗೆ ವಯಸ್ಸಾಗಿ, ನಾಯಕಿಯರ ಗಲ್ಲಗಳಲ್ಲಿ ಸುಕ್ಕುಗಳು ಮೂಡಿದರೂ, ದೇವಾನಂದ್ ಯೌವನದ ಹದ ಆರಲೇ ಇಲ್ಲ. ಟೀಕೆಗಳಿಗೆ ಕಿವಿಗೊಡದೆ; ಸೋಲಿನಿಂದ ಖಿನ್ನರಾಗದೆ; ನಟನೆ, ನಿರ್ಮಾಣ, ನಿರ್ದೇಶನವನ್ನು ನಿಲ್ಲಿಸದೆ ‘ಆಲ್ ಟೈಮ್ ಹೀರೋ’ ಎಂಬ ಹಣೆಪಟ್ಟಿಯನ್ನು ಅವರಲ್ಲಿಯೇ ಉಳಿಸಿಕೊಂಡರು.

ಹಾಗೆ ಉಳಿದುಕೊಳ್ಳುವ ಮೂಲಕ ಸ್ಟೈಲ್ ಐಕನ್ ಆಗಿ, ಫ್ಯಾಶನ್ ಟ್ರೆಂಡ್‌ಸೆಟರ್ ಆಗಿ ಹೆಸರು ಗಳಿಸಿದರು. ಎಂದೂ ಬಟ್ಟೆ ಬಿಚ್ಚಿ ಬಾಡಿ ತೋರದ ದೇವಾನಂದ್ ಧರಿಸುತ್ತಿದ್ದ ಚಕ್ಸ್ ಶರ್ಟ್, ಬೆಲ್ ಬಾಟಮ್ ಪ್ಯಾಂಟ್, ಅಗಲವಾದ ಬೆಲ್ಟ್‌ಗಳು, ಥರಾವರಿ ಟೋಪಿಗಳು, ಕಲರ್ ಫುಲ್ ಮಫ್ಲರ್ ಗಳು, ಸ್ಕಾರ್ಫ್ ಗಳು, ಸ್ವೆಟರ್‍ಗಳು, ಕೋಟ್ ಗಳು, ಟೈಗಳು, ಲೆದರ್ ಜಾಕೆಟ್ ಗಳು, ಕೂಲಿಂಗ್ ಗ್ಲಾಸ್ ಗಳು, ಸಿಗಾರ್ ಸೇದುವ ಸ್ಟೈಲು- ಅಭಿಮಾನಿಗಳ ಅಂಗಳದಲ್ಲಿ, ಪತ್ರಿಕೆಗಳ ಪುಟಗಳಲ್ಲಿ ಜಾಗ ಗಿಟ್ಟಿಸಿದ್ದವು. ದಂತಕತೆಗಳನ್ನೇ ಸೃಷ್ಟಿಸಿದ್ದವು.   

ದೇವಾನಂದ್ ಮೊದಲಿಗೆ ಸುರಯ್ಯಾ, ನೂತನ್, ಮಧುಬಾಲಾ, ಗೀತಾಬಾಲಿ ಜೊತೆ ನಟಿಸಿದರೆ, ಆ ನಂತರ ಕಲ್ಪನಾ ಕಾರ್ತಿಕ್, ವೈಜಯಂತಿಮಾಲಾ, ವಹೀದಾ ರೆಹಮಾನ್, ಹೇಮಾಮಾಲಿನಿ, ಮುಮ್ತಾಜ್, ಜೀನತ್ ಅಮಾನ್‌ರೊಂದಿಗೆ ನಟಿಸಿದರು. ಅಷ್ಟೇ ಅಲ್ಲ, ತಮಗಿಂತ ತೀರಾ ಚಿಕ್ಕ ವಯಸ್ಸಿನ ಹುಡುಗಿಯರಾದ ಟೀನಾ ಮುನಿಮ್, ಪದ್ಮಿನಿ ಕೊಲ್ಹಾಪುರೆಯವರೊಂದಿಗೂ ನಟಿಸಿ ಸೈ ಎನಿಸಿಕೊಂಡರು. ತಮ್ಮ ಚಿತ್ರಗಳು ಮತ್ತು ನಟಿಯರೊಂದಿಗೆ ಕಳೆದ ಮಧುರ ಕ್ಷಣಗಳನ್ನು ಯಾವುದೇ ಅಳುಕಿಲ್ಲದೆ ತಮ್ಮ ‘ರೊಮ್ಯಾನ್ಸಿಂಗ್ ವಿತ್ ಲೈಫ್’ ಆತ್ಮಕಥೆಯಲ್ಲಿ ಚಿತ್ರವತ್ತಾಗಿ ಬಣ್ಣಿಸಿ ಬರೆದರು. ಜೀನತ್ ಅಮಾನ್‌ಗೆ ಪ್ರೇಮ ನಿವೇದನೆ ಮಾಡಲು ಹೋದ ಸಂದರ್ಭದಲ್ಲಿ ಆಕೆ ರಾಜ್‌ಕಪೂರ್ ಆಲಿಂಗನದಲ್ಲಿದ್ದ ಸಂದರ್ಭವನ್ನು ಕೂಡ ಬಿಡಿಸಿಟ್ಟರು. ದೇವಾನಂದ್ ಸ್ವಭಾವವೇ ಅಂಥಾದ್ದು. ಸ್ಟಾರ್ ಆಗಿದ್ದರೂ ಸಾಮಾನ್ಯನಂತಿದ್ದರು. ಎಲ್ಲರನ್ನು ಗೌರವಿಸುತ್ತಲೇ, ಅನಿಸಿದ್ದನ್ನು ಆಡುವ ಧೈರ್ಯವನ್ನೂ ಮೈಗೂಡಿಸಿಕೊಂಡಿದ್ದರು.

ಅದಕ್ಕೊಂದು ಉದಾಹರಣೆಯಾಗಿ ಈ ಪ್ರಸಂಗವನ್ನು ನೋಡಬಹುದು. ಇಂದಿರಾಗಾಂಧಿಯವರು ದೇಶದ ಮೇಲೆ ಹೇರಿದ ತುರ್ತುಪರಿಸ್ಥಿತಿಯನ್ನು ದೇವಾನಂದ್ ಕಟುವಾಗಿ ವಿರೋಧಿಸಿದ್ದರು. ಇದನ್ನು ಗಮನಿಸಿದ ರಾಂ ಜೇಠ್ಮಲಾನಿ ದೇವಾನಂದ್ ರಿಗೆ ಜನತಾ ಪಕ್ಷ ಸೇರಲು ಆಹ್ವಾನಿಸಿದ್ದರು. ಮೊರಾರ್ಜಿ ದೇಸಾಯಿ, ಜಯಪ್ರಕಾಶ್ ನಾರಾಯಣ್ ಇದ್ದ ಸಭೆಗೆ ಬಂದ ದೇವಾನಂದ್, ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯನ್ನು ಖಂಡಿಸಿ ಮಾತನಾಡಿದ್ದರು. ಆದರೆ 1979ರಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಿ ಸ್ಥಾನದಿಂದ ಕೆಳಗಿಳಿದಾಗ, ಚರಣ್ ಸಿಂಗ್ ಸರ್ಕಾರಕ್ಕೆ ಹೊರಗಿನಿಂದ ಕೊಟ್ಟ ಬೆಂಬಲವನ್ನು ಇಂದಿರಾ ಗಾಂಧಿ ಹಿಂತೆಗೆದುಕೊಂಡಾಗ, ಅಪಾರ ನಿರೀಕ್ಷೆಯ ಜನತಾ ಪಕ್ಷ ಒಡೆದು ಚೂರಾದಾಗ, 1980ರಲ್ಲಿ ಚುನಾವಣೆ ಎದುರಾದಾಗ ದೇವಾನಂದ್, ‘ಈ ರಾಜಕಾರಣಿಗಳಿಗೆ ಬುದ್ಧಿ ಕಲಿಸಬೇಕು’ ಎಂದು ಚಿತ್ರರಂಗದ ಕೆಲವು ಗೆಳೆಯರನ್ನು- ಶತ್ರುಘ್ನ ಸಿನ್ಹ, ಕಿಶೋರ್ ಕುಮಾರ್, ಜೋಹರ್‍‌ರನ್ನು ಒಟ್ಟುಗೂಡಿಸಿ ‘ನ್ಯಾಷನಲ್ ಪಾರ್ಟಿ ಆಫ್ ಇಂಡಿಯಾ’ ಎಂಬ ರಾಜಕೀಯ ಪಕ್ಷ ಕೂಡ ಕಟ್ಟಿದ್ದೂ ಇದೆ.

ಇಂತಹ ದೇವಾನಂದ್ ‘ಗೈಡ್’ ಕತೆ ಓದಿ ಇಷ್ಟವಾದಾಗ, ಅದನ್ನು ಚಿತ್ರ ಮಾಡಬೇಕಾದಾಗ ಮೈಸೂರಿಗೆ ಬಂದು ಕೃತಿಕಾರ ಆರ್.ಕೆ. ನಾರಾಯಣ್ ಭೇಟಿ ಮಾಡಿ, ಒಪ್ಪಿಗೆ ಪಡೆದಿದ್ದರು. ‘ಗೈಡ್’ ಚಿತ್ರಕ್ಕೆ ಸಹೋದರ ವಿಜಯ್ ಆನಂದ್ ನಿರ್ದೇಶಕರಾಗಿದ್ದರು. ಎಸ್.ಡಿ. ಬರ್ಮನ್ ಸಂಗೀತ ನಿರ್ದೇಶಕರಾಗಿದ್ದ ಈ ಚಿತ್ರದ ಹಾಡುಗಳು- ‘ಆಜ್ ಫಿರ್ ಜೀನೆ ಕಿ ತಮನ್ನಾ ಹೈ’, ‘ಗಾತಾ ರಹೇ ಮೇರಾ ದಿಲ್’, ‘ದಿನ್ ಢಲ್ ಜಾಯೆ ಹಾಯೇ ರಾತ್ ನ ಜಾಯೆ’, ‘ವಹಾಂ ಕೌನ್ ತೇರಾ ಮುಸಾಫಿರ್’, ‘ಮಾನಾ ಜನಾಬ್ ನೆ ಪುಕಾರಾ ನಹೀಂ’ ಸೇರಿ ಹತ್ತು ಹಾಡುಗಳು- ಆ ಕಾಲಕ್ಕಲ್ಲ, ಈ ಕಾಲಕ್ಕೂ ಕೇಳುವಂತಹ ಹಾಡುಗಳೇ. ಅಭಿನೇತ್ರಿ ವಹೀದಾ ರೆಹಮಾನ್‌ರ ಮಾಗಿದ ಅಭಿನಯದ ಮುಂದೆ ಮಂಕಾಗಬಹುದಾಗಿದ್ದ ದೇವಾನಂದ್, ತನ್ನೊಳಗಿನ ಕಲಾವಿದನನ್ನು ಹೊರಗೆಳೆದು ದುಡಿಸಿಕೊಂಡಿದ್ದರು. ಜನ ಮೆಚ್ಚುಗೆಯಲ್ಲಿ, ಹಣಗಳಿಕೆಯಲ್ಲಿ ಮುಂದಿದ್ದರೂ, ಕಥೆಗಾರ ಆರ್.ಕೆ ನಾರಾಯಣ್, ‘ದಿ ಮಿಸ್‌ಗೈಡೆಡ್ ಗೈಡ್’ ಎಂದು ಒನ್ ಲೈನ್ ವಿಮರ್ಶೆ ಮಾಡಿ ಬೇಸರ ವ್ಯಕ್ತಪಡಿಸಿದ್ದರು. ಆದರೂ ಆ ಚಿತ್ರ ರಾಷ್ಟ್ರೀಯ ಮಟ್ಟದ ಮೂರ್‍ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ‘ದಿ ಗುಡ್ ಅರ್ಥ್’ ಕೃತಿ ರಚಿಸಿ ನೊಬೆಲ್ ಪ್ರಶಸ್ತಿ ಪಡೆದ ಪರ್ಲ್ ಎಸ್. ಬಕ್ ಅವರು ‘ದಿ ಗೈಡ್’ ಇಂಗ್ಲಿಷ್ ಚಿತ್ರದ ಸಹ ನಿರ್ಮಾಪಕರಾಗಿದ್ದು ವಿಶೇಷವಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮತ್ತು ಪ್ರಶಸ್ತಿಯನ್ನೂ ಪಡೆದಿತ್ತು.     

ಬರೀ ಚಿತ್ರಗಳಷ್ಟೇ ಅಲ್ಲ, ದೇವಾನಂದ್ ಸಾಧನೆಗೆ ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ, ಜೀವಮಾನ ಸಾಧನೆ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದು ಬೆಲೆ ಹೆಚ್ಚಿಸಿಕೊಂಡಿವೆ. 2007ರಲ್ಲಿ ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಬಂದು ದೇವಾನಂದರ ‘ರೊಮ್ಯಾನ್ಸಿಂಗ್ ವಿತ್ ಲೈಫ್’ ಆತ್ಮಕಥೆಯನ್ನು ಲೋಕಾರ್ಪಣೆ ಮಾಡಿದ್ದಿದೆ. 2011ರ ಸೆಪ್ಟೆಂಬರ್‌ನಲ್ಲಿ 88ನೇ ಹುಟ್ಟುಹಬ್ಬ ಆಚರಿಸಿಕೊಂಡ ದೇವ್, ‘ನನ್ನ ಚಾರ್ಜ್ ಶೀಟ್ ಸಿನೆಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದೇನೆ. ಕೊನೆಯವರೆಗೂ ಸಿನೆಮಾ ಮಾಡುತ್ತಲೇ ಇರುವುದು ನನ್ನ ಕನಸು. ನಾನಿನ್ನೂ 88ರ ಹುಡುಗ’ ಎಂದಿದ್ದರು. ಹಾಗೆಯೇ ಈ ಹುಡುಗನ ಸೊರಗಿದ ಸುಕ್ಕುಗಟ್ಟಿದ ಕಳೇಬರವನ್ನು ಜನ ನೋಡದಂತೆ ಮಕ್ಕಳಲ್ಲಿ ಮನವಿ ಮಾಡಿಕೊಂಡಿದ್ದರು. ಆ ಕಾರಣಕ್ಕಾಗಿಯೇ ಲಂಡನ್ ವಾಸಿಯಾಗಿ, ಅಲ್ಲಿಯೇ ಅಸುನೀಗಿದ್ದರು.

ಆದರೆ ದೇವಾನಂದರನ್ನು ಇವತ್ತಿಗೂ ಭಾರತೀಯ ಚಿತ್ರರಂಗ ಮತ್ತು ಪ್ರೇಕ್ಷಕವರ್ಗ ಚಿರಯುವಕನನ್ನಾಗಿಯೇ ನೋಡುತ್ತಿದೆ- ಅವರ ಚಿತ್ರಗಳು ಮತ್ತು ಹಾಡುಗಳ ಮೂಲಕ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

3 ಈಡಿಯಟ್ಸ್ ಖ್ಯಾತಿಯ ಹಿರಿಯ ನಟ ಅಚ್ಯುತ್ ಪೋತರ್ ನಿಧನ

3 ಈಡಿಯಟ್ಸ್ ಖ್ಯಾತಿಯ ಹಿರಿಯ ನಟ ಅಚ್ಯುತ್ ಪೋತರ್ ಅವರು ಆಗಸ್ಟ್...

ಚುನಾವಣೆ ಆಯೋಗದ ಪತ್ರಿಕಾಗೋಷ್ಠಿ ಆರೋಪಗಳಿಗೆ ಉತ್ತರ ಕೊಟ್ಟಿತೆ? ಉಳಿದಿರುವ ಪ್ರಶ್ನೆಗಳೇನು?

ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಆಯೋಗದ ಈ ನಡೆಯನ್ನು "ಸಂವಿಧಾನಕ್ಕೆ ಅಪಮಾನ"...

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

ಕೇರಳ | ಟ್ರಕ್‌ಗೆ ಕಾರು ಡಿಕ್ಕಿ; ಮಲಯಾಳಂ ನಟನಿಗೆ ಗಾಯ

ಮಲಯಾಳಂ ನಟ ಬಿಜು ಕುಟ್ಟನ್‌ ಅವರು ಇಂದು ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ...

Download Eedina App Android / iOS

X