ಕಂದಾಯ ಕರ್ಮಕಾಂಡ -3 | ಲಂಚವಿಲ್ಲದೆ ಈ ಇಲಾಖೆಯಲ್ಲಿ ಒಂದು ಕಡತವೂ ಚಲಿಸುವುದಿಲ್ಲ!

Date:

Advertisements

‘ಇತ್ತೀಚಿನ ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ಉನ್ನತ ಶ್ರೇಣಿಯಿಂದ ಕೆಳಹಂತದವರೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಲಾಖೆಯಲ್ಲಿ ಲಂಚವಿಲ್ಲದೆ ಯಾವುದೇ ಕಡತ ಚಲಿಸುವುದಿಲ್ಲ. ಸರ್ಕಾರಿ ಕಚೇರಿಗಳಲ್ಲಿ ತಮ್ಮ ನಿಗದಿತ ಕೆಲಸ ಮಾಡಲು ಲಂಚ ಪಡೆಯುವುದು ಒಂದು ನಿಯಮವೇ ಆಗಿಬಿಟ್ಟಿದೆ ಮತ್ತು ಇದು ಕ್ಯಾನ್ಸರ್‌ ರೋಗದಂತೆ ಹಬ್ಬುತ್ತಿದೆ..’

ಇದು ಒಬ್ಬ ಸಾಮಾನ್ಯ ವ್ಯಕ್ತಿಯ ಆರೋಪವಲ್ಲ; ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಕೆ ನಟರಾಜನ್ ಹೇಳಿರುವ ಮಾತುಗಳಿವು. ಭೂ ವಿವಾದವೊಂದನ್ನು ಇತ್ಯರ್ಥಪಡಿಸಲು ಆಗಿನ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಜೆ ಮಂಜುನಾಥ್ ಅವರು ತಮ್ಮ ಕೆಳಹಂತದ ಅಧಿಕಾರಿಗಳ ಮೂಲಕ ಐದು ಲಕ್ಷ ರೂಪಾಯಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು ವಿಚಾರಣೆ ನಡೆಸುವಾಗ ನ್ಯಾಯಮೂರ್ತಿಗಳು ಕಂದಾಯ ಇಲಾಖೆಯಲ್ಲಿನ ಲಂಚಾವತಾರದ ಬಗ್ಗೆ ಪ್ರಸ್ತಾಪಿಸಿದ್ದರು. ಈ ನಿರ್ದಿಷ್ಟ ಪ್ರಕರಣದಲ್ಲಿ ಆರೋಪಿ ಮಂಜುನಾಥ್ ಮೇಲ್ನೋಟಕ್ಕೆ ತಪ್ಪು ಮಾಡಿರುವುದು ಕಂಡುಬಂದರೂ ಅವರ ವಿರುದ್ಧ ಸರ್ಕಾರವು ಯಾವ ಕ್ರಮವನ್ನೂ ಕೈಗೊಳ್ಳದೇ, ಕನಿಷ್ಠ ಎಫ್‌ಐಆರ್‌ನಲ್ಲಿ ಅವರ ಹೆಸರನ್ನೂ ನಮೂದಿಸದೇ, ಸುಮ್ಮನೆ ಬೇರೊಂದು ಸ್ಥಳಕ್ಕೆ ವರ್ಗಾವಣೆ ಮಾಡಿದ್ದನ್ನೂ ನ್ಯಾಯಾಲಯವು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.

ಕಂದಾಯ ಇಲಾಖೆಯ ಲಂಚಾವತಾರ ಅಷ್ಟು ಜನಜನಿತವಾಗಿದೆ ಮತ್ತು ಅಷ್ಟು ವ್ಯಾಪಕವಾಗಿದೆ. ಹಣ ನೀಡದ ಹೊರತು ನಾಡಕಚೇರಿ, ತಹಶೀಲ್ದಾರ್ ಕಚೇರಿ, ಎಸಿ ಕಚೇರಿಗಳಲ್ಲಿ ಸಣ್ಣ ಕೆಲಸವೂ ಆಗುವುದಿಲ್ಲ. ಕಂದಾಯ ಇಲಾಖೆಯು ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ನಗರಾಭಿವೃದ್ಧಿ ಇಲಾಖೆಗಳ ಸಾಲಿನಲ್ಲಿ ಸ್ಥಾನ ಪಡೆದಿದ್ದು, ರಾಜ್ಯದ ಅತ್ಯಂತ ಭ್ರಷ್ಟ ಇಲಾಖೆಗಳಲ್ಲಿ ಅಗ್ರಪಂಕ್ತಿಯಲ್ಲಿದೆ. ಈ ಹಿಂದಿನ ಲೋಕಾಯುಕ್ತದ ಅವಧಿಯಲ್ಲಿ, ನಂತರದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅವಧಿಯಲ್ಲಿ ಮತ್ತು ಈಗ ಮತ್ತೆ ಚಾಲನೆ ಪಡೆದಿರುವ ಲೋಕಾಯುಕ್ತದ ದಾಳಿಗಳಲ್ಲಿ ಅತಿ ಹೆಚ್ಚು ಭ್ರಷ್ಟರು ಸಿಕ್ಕಿ ಬೀಳುತ್ತಿರುವುದು ಕಂದಾಯ ಇಲಾಖೆಯಲ್ಲಿ ಎನ್ನುವುದು ಗಮನಾರ್ಹ.         

Advertisements

ಕಂದಾಯ ಇಲಾಖೆಯ ಭ್ರಷ್ಟಾಚಾರಕ್ಕೆ ಎರಡು ಆಯಾಮವಿದೆ. ಒಂದನೆಯದಾಗಿ, ರೈತರು ಮತ್ತು ಸಾರ್ವಜನಿಕರ ಕೆಲಸ ಮಾಡಿಕೊಡಲು ಅಧಿಕಾರಿಗಳು ಲಂಚ ಸ್ವೀಕರಿಸುವುದು. ಎರಡನೆಯದಾಗಿ, ಭೂಗಳ್ಳರ ಜೊತೆ ಶಾಮೀಲಾಗಿ ಸರ್ಕಾರದ ಜಮೀನು, ಗೋಮಾಳ ಇತ್ಯಾದಿಗಳ ಒತ್ತುವರಿಗೆ ಸಹಕರಿಸುವುದು, ಇಲ್ಲವೇ ಅವುಗಳ ಪರಭಾರೆ ಮಾಡುವುದು.

ಕಂದಾಯ ಕಚೇರಿಇತ್ತೀಚಿನ ದಿನಗಳಲ್ಲಿ ಭೂಮಿ ಬೆಲೆ ಹೆಚ್ಚುತ್ತಿರುವುದರಿಂದ ಲಂಚದ ಪ್ರಮಾಣವೂ ಭಾರಿ ಎನ್ನುವಷ್ಟು ಹೆಚ್ಚಳವಾಗಿದೆ. ‘ನಿಮ್ಮ ಜಮೀನಿಗೆ ಒಳ್ಳೆ ರೇಟಿದೆಯಲ್ಲ, ನಾವು ಕೇಳಿದಷ್ಟು ಕೊಡಿ’ ಎನ್ನುವುದು ಅಧಿಕಾರಿಗಳ ಸಮರ್ಥನೆ. ಅವರು ಕೇಳಿದಷ್ಟು ಲಂಚ ನೀಡಿದರೆ, ಎಂಥ ಕಷ್ಟದ ಕೆಲಸವೂ ಸಲೀಸಾಗಿ ಆಗುತ್ತದೆ. ಲಂಚ ನೀಡದಿದ್ದರೆ ಸಲೀಸೂ ಕೆಲಸವೂ ಕಗ್ಗಂಟಾಗಿ ಪರಿವರ್ತನೆಗೊಳ್ಳುತ್ತದೆ. ರೈತರು ಸಾವಿರ ರೂಪಾಯಿ ಲಂಚ ನೀಡಲು ಹಿಂದೇಟು ಹಾಕಿದರೆ, ರಿಯಲ್ ಎಸ್ಟೇಟ್ ಕುಳಗಳು, ಶ್ರೀಮಂತರು ಅಧಿಕಾರಿಗಳು ಕೇಳಿದಷ್ಟು ಹಣ ಕೊಟ್ಟು ಕ್ಷಣಾರ್ಧದಲ್ಲಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಲಂಚ ಕೊಡದ ರೈತರಿಗೆ ಸಿಬ್ಬಂದಿ ಕೊರತೆ ನೆಪವೂ ಸೇರಿದಂತೆ ಹಲವು ನೆಪಗಳು ಸಿದ್ಧವಿರುತ್ತವೆ.

ಕಂದಾಯ ಇಲಾಖೆಯ ಕಚೇರಿಗಳಲ್ಲಿ ಇಂಥ ಕೆಲಸಕ್ಕೆ ಇಂತಿಷ್ಟು ಲಂಚ ಎಂದು ನಿಗದಿಪಡಿಸಲಾಗಿದೆ. ಪವತಿ ಖಾತೆ ಮಾಡಿಕೊಡಲು ಇಷ್ಟು, ಮ್ಯುಟೇಷನ್ ಮಾಡಿಕೊಡಲು ಇಷ್ಟು, ತಿದ್ದುಪಡಿಗೆ ಇಷ್ಟು ಎಂದು ನಿಗದಿ ಮಾಡಿರುವ ಹಣ ಕೊಟ್ಟರೇನೇ ಕೆಲಸ. ಭೂಮಿಯ ಬೆಲೆಯನ್ನು ಆಧರಿಸಿ ಪ್ರದೇಶದಿಂದ ಪ್ರದೇಶಕ್ಕೆ ಲಂಚದ ಹಣದಲ್ಲೂ ವ್ಯತ್ಯಾಸವಾಗುತ್ತದೆ. ಬೆಂಗಳೂರಿನ ಸುತ್ತಮುತ್ತಲ ಚಿನ್ನದ ಬೆಲೆ ಇರುವುದರಿಂದ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹೆಚ್ಚು ಲಂಚ ನೀಡಬೇಕು. ಹೆಚ್ಚು ಲಂಚ ಸಿಗುವ ಕಡೆ ಪೋಸ್ಟಿಂಗ್ ಪಡೆಯಲು ಸರ್ವೆಯರ್‌ಗಳು, ಗ್ರಾಮ ಲೆಕ್ಕಾಧಿಕಾರಿಗಳು, ತಹಶೀಲ್ದಾರ್‌ಗಳು, ಜಿಲ್ಲಾಧಿಕಾರಿಗಳು ಪೈಪೋಟಿ ನಡೆಸುತ್ತಾರೆ. ಅದಕ್ಕಾಗಿ ಶಾಸಕರು, ಮಂತ್ರಿಗಳಿಗೆ ದೊಡ್ಡ ಮೊತ್ತದ ಲಂಚ ಸಂದಾಯವನ್ನೂ ಮಾಡುತ್ತಾರೆ. ಅಧಿಕಾರಿಗಳ ನಡುವೆ ಪ್ರಮುಖ ಸ್ಥಳಗಳಿಗೆ ಪೋಸ್ಟಿಂಗ್‌ಗಾಗಿ ಬಿಡ್ಡಿಂಗ್ ನಡೆಯುತ್ತದೆ ಎಂದು ಕೂಡ ಹೇಳಲಾಗುತ್ತದೆ.

ಉಪನೋಂದಣಾಧಿಕಾರಿಗಳ ಕಚೇರಿಗಳಂತೂ ಭ್ರಷ್ಟಾಚಾರದ ಕೂಪಗಳಾಗಿವೆ. ಸಬ್‌ ರಿಜಿಸ್ಟ್ರಾರ್‌ಗೆ ಮಾತ್ರವಲ್ಲ; ಅವರ ಕಚೇರಿಯ ಪ್ರತಿ ಟೇಬಲ್‌ಗೆ ಇಷ್ಟು ಎಂದು ಕೊಟ್ಟರೆ ಮಾತ್ರವೇ ನೋಂದಣಿ ಪ್ರಕ್ರಿಯೆ ನಡೆಯುತ್ತದೆ. ಬಹುತೇಕ ಸಂದರ್ಭಗಳಲ್ಲಿ ಪತ್ರ ಬರಹಗಾರರು ತಮ್ಮ ಶುಲ್ಕ, ಅಧಿಕಾರಿಗಳಿಗೆ ಕೊಡಬೇಕಾದ ಲಂಚ ಎಲ್ಲವನ್ನೂ ಸೇರಿಸಿ ಪ್ಯಾಕೇಜ್ ಮೊತ್ತ ನಿಗದಿ ಮಾಡಿರುತ್ತಾರೆ. ಇಲ್ಲೂ ಕೂಡ ಭೂಮಿಯ ಬೆಲೆ, ವಹಿವಾಟಿನ ಮೌಲ್ಯವನ್ನು ಆಧರಿಸಿ ಲಂಚದ ಪ್ರಮಾಣ ಫಿಕ್ಸ್ ಆಗುತ್ತದೆ. ಲಂಚ ನೀಡದೇ ನೇರವಾಗಿ ನೋಂದಣಿ ಮಾಡಿಸಲು ಹೋದರೆ, ವಾರವಾದರೂ ಅವರ ಕೆಲಸ ಆಗದೇ ಹೋಗುವ ಸಂಭವವೇ ಹೆಚ್ಚು.    

ಕಂದಾಯ ಇಲಾಖೆಈಗ ಕಂದಾಯ ಇಲಾಖೆಯ ಎರಡನೇ ರೀತಿಯ ಲಂಚಾವತಾರ ನೋಡೋಣ. ಸರ್ಕಾರದ ಮಾಲೀಕತ್ವದಲ್ಲಿರುವ ಕೆರೆ, ಕುಂಟೆ, ಗುಂಡುತೋಪು, ರಾಜಕಾಲುವೆ, ಗೋಮಾಳ ಇತ್ಯಾದಿಗಳು ಕಣ್ಮರೆಯಾಗುತ್ತಿರುವುದರ ಹಿಂದೆ ಕಂದಾಯ ಇಲಾಖೆಯ ಅಧಿಕಾರಿಗಳ ಕೈವಾಡವಿದೆ. ಭೂಗಳ್ಳರ ಜೊತೆ ಶಾಮೀಲಾಗಿ ಹಣ ಪಡೆದು ಕೋಟ್ಯಂತರ ಬೆಲೆ ಬಾಳುವ ಸರ್ಕಾರದ ಅಮೂಲ್ಯ ಜಾಗಗಳನ್ನು ಅಧಿಕಾರಿಗಳು ಖಾಸಗಿಯವರಿಗೆ ಪರಭಾರೆ ಮಾಡಿದ ನೂರಾರು ಉದಾಹರಣೆಗಳು ನಮ್ಮಲ್ಲಿವೆ. ರಿಯಲ್ ಎಸ್ಟೇಟ್ ಉದ್ಯಮಿಗಳು ಅಧಿಕಾರಿಗಳಿಗೆ ಒಂದಿಷ್ಟು ಹಣ ನೀಡಿ ಸರ್ಕಾರದ ಲಕ್ಷಾಂತರ ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ.

ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಮಂಡಿಸಲಾದ ಅಂಕಿಅಂಶಗಳ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 16,478 ಎಕರೆಗಳಷ್ಟು ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ರಾಜ್ಯದಲ್ಲಿ ಅತಿಕ್ರಮಣಗೊಂಡಿರುವ ಕಂದಾಯ ಇಲಾಖೆಯ ಭೂಮಿಯ ಒಟ್ಟು ವಿಸ್ತೀರ್ಣ 2.82 ಲಕ್ಷ (2,82,130) ಎಕರೆಗಳು ಎಂದು ಅಂಕಿಅಂಶಗಳು ಹೇಳುತ್ತವೆ. ನಗರದಲ್ಲಿ ಪ್ರತಿ ಅಡಿಗೂ ಚಿನ್ನದ ಬೆಲೆ ಇದೆ. ಹೀಗಾಗಿ ಒಂದೊಂದು ಎಕರೆಯ ಹಿಂದೆಯೂ ದೊಡ್ಡ ಮೊತ್ತದ ಲಂಚದ ವಹಿವಾಟು ನಡೆದಿರುವ ಸಾಧ್ಯತೆಯಿದೆ. ಪ್ರತಿ ಎಕರೆಗೆ ಸರಾಸರಿ 3 ರಿಂದ 4 ಕೋಟಿ ರೂಪಾಯಿ ಎಂದುಕೊಂಡರೂ ರಾಜ್ಯದಲ್ಲಿ ಒತ್ತುವರಿಯಾದ ಜಮೀನಿನ ಒಟ್ಟು ಮೌಲ್ಯವು 48,000 – 64,000 ಕೋಟಿ ರೂಪಾಯಿಗಳನ್ನು ಮೀರಬಹುದು. ಇದರ ಹಿಂದೆ ಇರುವುದು ರಾಜಕಾರಣಿ-ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಅಧಿಕಾರಿಗಳ ನಂಟು.

ಲೋಕಾಯುಕ್ತ ಪೊಲೀಸರು 2023ರ ಜೂನ್‌ 28ರಂದು ಬೆಂಗಳೂರಿನ ಕೆ ಆರ್ ಪುರದ ತಹಶೀಲ್ದಾರ್ ಆಗಿದ್ದ ಅಜಿತ್ ರೈ ಮೇಲೆ ದಾಳಿ ನಡೆಸಿದ್ದರು. ಆತನ ಮನೆ ಹಾಗೂ ಕಚೇರಿಗಳಲ್ಲಿ ಸಿಕ್ಕ ಸಂಪತ್ತು ನೋಡಿದವರು ದಿಗ್ಮೂಢರಾಗಿಹೋಗಿದ್ದರು. ದೇವನಹಳ್ಳಿ ಬಳಿ ಸುಮಾರು 200 ಎಕರೆಗಿಂತ ಹೆಚ್ಚು ಜಮೀನಿನ ಕ್ರಯ ಪತ್ರಗಳು ಸಿಕ್ಕಿದ್ದವು. ಅಪಾರ ಮೊತ್ತದ ನಗದು, ಚಿನ್ನಾಭರಣ, ಐಷಾರಾಮಿ ವಾಹನಗಳು, ವಿದೇಶಿ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆತನ ಬಳಿ ಸಿಕ್ಕ ವಾಚುಗಳ ಬೆಲೆಯೇ 60 ಲಕ್ಷ ರೂಪಾಯಿಗಿಂತಲೂ ಹೆಚ್ಚಿತ್ತು. ಆತನ ಅಕ್ರಮ ಸಂಪತ್ತಿನ ಮೌಲ್ಯ 500 ಕೋಟಿ ರೂಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿತ್ತು.

ಅಜಿತ್ ರೈಅಜಿತ್ ರೈ ಈ ಹಿಂದೆ ಕೆ ಆರ್ ಪುರ ತಹಶೀಲ್ದಾರ್ ಆಗಿದ್ದಾಗ ಸರ್ಕಾರದ ಭೂಮಿ ಒತ್ತುವರಿ ಮಾಡಲು ಖಾಸಗಿಯವರಿಗೆ ನೆರವಾಗಿದ್ದ. ಹಾಗಾಗಿಯೇ ತಹಶೀಲ್ದಾರ್ ಆಗಿದ್ದರೂ ಆತ ಬಿಬಿಎಂಪಿಯ ಒತ್ತುವರಿ ತೆರವು ಕಾರ್ಯಾಚರಣೆಗೆ ಸಹಕಾರ ನೀಡಿರಲಿಲ್ಲ. ಈ ಕಾರಣಕ್ಕಾಗಿ ಆತನನ್ನು 2022ರಲ್ಲಿ ಹುದ್ದೆಯಿಂದ ಅಮಾನತು ಮಾಡಲಾಗಿತ್ತು. ಅಮಾನತು ಆದೇಶದ ವಿರುದ್ಧ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಮೊರೆ ಹೋಗಿದ್ದ ಅಜಿತ್ ರೈ, ಮತ್ತೆ ಅದೇ ಜಾಗಕ್ಕೆ ತಹಶೀಲ್ದಾರ್ ಆಗಿ ಬಂದಿದ್ದ.      

ಈ ಸುದ್ದಿ ಓದಿದ್ದೀರಾ: ಕಂದಾಯ ಕರ್ಮಕಾಂಡ-1 | ರೈತರನ್ನು ಹೆಜ್ಜೆ ಹೆಜ್ಜೆಗೂ ಹಿಂಸಿಸುವ ಇಲಾಖೆ

ಜನರ ಹಾಗೂ ಸರ್ಕಾರದ ಹಣವನ್ನು ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಹೇಗೆ ಸೂರೆ ಹೊಡೆಯುತ್ತಿದ್ದಾರೆ ಎನ್ನುವುದಕ್ಕೆ ಅಜಿತ್ ರೈ ಇತ್ತೀಚಿನ ಉತ್ತಮ ನಿದರ್ಶನ. ತನ್ನ ಹುದ್ದೆಯನ್ನು ಸುಲಿಗೆಗೆ ಸಿಕ್ಕ ಅನುಮತಿ ಎಂಬಂತೆ ಬಳಸಿಕೊಂಡ ಅಜಿತ್ ರೈ, ಕಷ್ಟಪಟ್ಟು ಓದಿ ತಹಶೀಲ್ದಾರ್ ಆದವರೇನಲ್ಲ. ಕಂದಾಯ ಇಲಾಖೆಯಲ್ಲಿ ಭೂಮಾಪಕರಾಗಿದ್ದ ಆತನ ತಂದೆಯ ನಿಧನದಿಂದ ಅನುಕಂಪದ ಆಧಾರದ ಮೇಲೆ ಕಂದಾಯ ಇಲಾಖೆಗೆ ಸೇರಿ, ಬಡ್ತಿ ಪಡೆದು ತಹಶೀಲ್ದಾರ್ ಹುದ್ದೆಗೇರಿದವರು. ಸರಿಯಾದ ರೀತಿಯಲ್ಲಿ ತನಿಖೆ ನಡೆದರೆ, ಕಂದಾಯ ಇಲಾಖೆಯಲ್ಲಿ ಇಂಥ ಕಡುಭ್ರಷ್ಟರು ನೂರಾರು ಮಂದಿ ಸಿಗುತ್ತಾರೆ.

ಅಜಿತ್ ರೈ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಈ ಪರಿ ಲಂಚಕೋರರಾಗಲು ರಾಜಕಾರಣಿಗಳು ಕೂಡ ಒಂದು ಕಾರಣ. ಅಂಥವರಿಗೆ ಆಯಕಟ್ಟಿನ ಜಾಗ ಕರುಣಿಸುವುದರಿಂದ ಹಿಡಿದು, ಕಷ್ಟದ ಸಂದರ್ಭಗಳಲ್ಲಿ ಅವರ ನೆರವಿಗೆ ನಿಲ್ಲುವವರೆಗೆ ಶಾಸಕರು, ಮಂತ್ರಿಗಳು ಅವರ ಹಿಂದಿರುತ್ತಾರೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಂತೂ ಕಂದಾಯ ಇಲಾಖೆಯ ಲಂಚದ ಪ್ರಮಾಣ ಇನ್ನಷ್ಟು ಹೆಚ್ಚಾಗಿತ್ತು. 40% ಮತ್ತು ಅದಕ್ಕಿಂತ ಹೆಚ್ಚಿನ ಕಮಿಷನ್ ಆರೋಪ ಕಂದಾಯ ಇಲಾಖೆಯ ಮಟ್ಟಿಗೂ ನಿಜವಾಗಿತ್ತು. ಅದು ಎಷ್ಟರ ಮಟ್ಟಿಗೆ ಸರ್ವವ್ಯಾಪಿಯಾಗಿತ್ತೆಂದರೆ, ಒಮ್ಮೆ ಯಲಹಂಕದ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಸದನದಲ್ಲಿ ‘ಉಪನೋಂದಣಾಧಿಕಾರಿಗಳ ಕಚೇರಿಗಳು ಸೇರಿದಂತೆ ಕಂದಾಯ ಇಲಾಖೆಯ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದರು. ಅದೇ ಸಂದರ್ಭದಲ್ಲಿ ಆಗಿನ ಕಂದಾಯ ಸಚಿವರು ಆಡಿದ್ದ ಮಾತು ಕಂದಾಯ ಇಲಾಖೆಯ ಭ್ರಷ್ಟಾಚಾರಕ್ಕೆ ಮತ್ತು ಬಿಜೆಪಿ ಸರ್ಕಾರದ ಅಸಮರ್ಥತೆಗೆ ಬರೆದ ಭಾಷ್ಯದಂತಿತ್ತು.

ಈ ಸುದ್ದಿ ಓದಿದ್ದೀರಾ: ಕಂದಾಯ ಕರ್ಮಕಾಂಡ-2 | ಶಾನುಭೋಗರ ಕೈಬರಹ, ರೈತರ ಹಣೆಬರಹ!

‘ಕಂದಾಯ ಇಲಾಖೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ನಾನು ಹೆಚ್ಚೇನೂ ಮಾಡಲಾಗುವುದಿಲ್ಲ’ ಇದು ಆಗಿನ ಕಂದಾಯ ಸಚಿವ ಆರ್ ಅಶೋಕ್ 2020ರ ಮಾರ್ಚ್‌ನಲ್ಲಿ ಸದನದಲ್ಲಿ ಹೇಳಿದ್ದ ಮಾತು. ಸಚಿವರೇ ತಮ್ಮ ಇಲಾಖೆಯ ಅವ್ಯವಸ್ಥೆ ತಡೆಯಲು ಸಾಧ್ಯವಿಲ್ಲ ಎಂದು ವಿಧಾನಸಭೆಯಲ್ಲಿ ಒಪ್ಪಿಕೊಂಡಿದ್ದರು; ತಮ್ಮ ಮಾತಿಗೆ ನಿದರ್ಶನವಾಗಿ ಅವರು ನ್ಯಾಯಾಲಯಕ್ಕೆ ಹೋಗಿ ವರ್ಗಾವಣೆ ಶಿಕ್ಷೆಯಿಂದ ಪಾರಾಗಿದ್ದ ಇಬ್ಬರು ಸಬ್‌ ರಿಜಿಸ್ಟ್ರಾರ್‌ಗಳನ್ನು ಉಲ್ಲೇಖಿಸಿದ್ದರು.

ಆದರೆ, ಈಗಿನ ಕಂದಾಯ ಸಚಿವ ಕೃಷ್ಣಬೈರೇಗೌಡರು ಈ ಹಿಂದಿನ ಸಚಿವರಂತೆ ಕೈಚೆಲ್ಲಿ ಕೂತಿಲ್ಲ. ಸಚಿವರಾಗಿ ಬಂದ ಅಲ್ಪಾವಧಿಯಲ್ಲಿಯೇ ಅವರು ಗಮನಾರ್ಹ ಕೆಲಸ ಮಾಡಿ ತೋರಿಸಿದ್ದಾರೆ. ಇಲಾಖೆಯಲ್ಲಿ ಗುಣಾತ್ಮಕ ಬದಲಾವಣೆಯತ್ತ ಹೆಜ್ಜೆ ಇಟ್ಟಿದ್ದಾರೆ. ಅದನ್ನು ಕಂದಾಯ ಇಲಾಖೆಯ ಅಂಕಿಅಂಶಗಳೇ ಹೇಳುತ್ತಿವೆ.

ಮುಂದುವರೆಯುತ್ತದೆ…

222 e1692343004458
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X