‘ಈ ದಿನ’ ಸಂಪಾದಕೀಯ | ಪೌರಕಾರ್ಮಿಕರು ಪರಮಶೋಷಿತರು; ಸರ್ಕಾರ, ನಾವು-ನೀವು, ಎಲ್ಲರೂ ಕಾರಣ

Date:

Advertisements
ಬಡತನ, ಜಾತಿ ವ್ಯವಸ್ಥೆಯ ನಿರಂತರ ಕಿರುಕುಳಗಳಿಂದ ಪಾರಾಗಿ ಬದುಕು ಕಟ್ಟಲು ಹವಣಿಸುವ ಪೌರಕಾರ್ಮಿಕರನ್ನು, ಸರ್ಕಾರಗಳು, ಸ್ಥಳೀಯಾಡಳಿತ ಸಂಸ್ಥೆಗಳು, ಗುತ್ತಿಗೆದಾರರು, ಜನಸಾಮಾನ್ಯರು ಯಾವ ಪರಿ ಹಿಂಸಿಸುತ್ತಿದ್ದಾರೆಂದರೆ, ದೇಶದ ಜನರ ಸರಾಸರಿ ಜೀವಿತಾವಧಿ 70 ವರ್ಷವಾದರೆ, ಇದೇ ದೇಶದ ಪೌರಕಾರ್ಮಿಕರ ಸರಾಸರಿ ಜೀವಿತಾವಧಿ 40 ವರ್ಷ

‘ಮ್ಯಾನ್‌ಹೋಲ್‌ಗಿಳಿದು ಇಬ್ಬರ ಪೌರಕಾರ್ಮಿಕರ ಸಾವು,’ ‘ಮೂರು ತಿಂಗಳಿಂದ ಸಿಗದ ವೇತನ; ಪೌರಕಾರ್ಮಿಕರ ಪ್ರತಿಭಟನೆ,’ ‘ಪೌರಕಾರ್ಮಿಕರ ಸೇವೆ ಕಾಯಂಗೊಳಿಸಲು ಆಗ್ರಹಿಸಿ ಧರಣಿ,’ ‘ಬಾಕಿ ವೇತನಕ್ಕೆ ಆಗ್ರಹಿಸಿ ಮೈ ಮೇಲೆ ಮಲ ಸುರಿದುಕೊಂಡ ಪೌರಕಾರ್ಮಿಕರು,’ ‘ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರಕಾರ್ಮಿರಿಂದ ಅನಿರ್ದಿಷ್ಟಾವಧಿ ಮುಷ್ಕರ…’ ಇಂತಹ ಸುದ್ದಿಗಳು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳದ ದಿನವೇ ಇಲ್ಲ. ಆದರೂ, ಬೇಜವಾಬ್ದಾರಿಯ, ನಾಚಿಕೆಗೆಟ್ಟ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು, ಪ್ರತಿ ವರ್ಷದ ಸೆಪ್ಟೆಂಬರ್ 23ರಂದು ‘ಪೌರಕಾರ್ಮಿಕರ ದಿನಾಚರಣೆ’ಯ ನೀಚ ನಾಟಕ ಆಡುತ್ತ ಬಂದಿವೆ. ಈ ದಿನ ಮಾತ್ರ, ಪೌರಕಾರ್ಮಿಕರನ್ನು ಎಲ್ಲರೂ ಗೌರವಿಸಬೇಕೆಂದೂ, ಅವರನ್ನೂ ಮನುಷ್ಯರಂತೆ ನೋಡಬೇಕೆಂದೂ, ಅದೇ ಪೌರಕಾರ್ಮಿಕರನ್ನಷ್ಟೇ ಎದುರು ಕೂರಿಸಿಕೊಂಡು ದೊಡ್ಡ-ದೊಡ್ಡವರು ಭಾಷಣ ಮಾಡುತ್ತಾರೆ. ಆದರೆ ಪೌರಕಾರ್ಮಿಕರ ದುಸ್ಥಿತಿ ಮಗ್ಗುಲು ಬದಲಿಸುವುದೇ ಇಲ್ಲ.

ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೊ ವರದಿಯ (2020) ಪ್ರಕಾರ, ದೇಶದಲ್ಲಿ ನಿತ್ಯ ಸರಾಸರಿ ಇಬ್ಬರು ಪೌರಕಾರ್ಮಿಕರನ್ನು ಮ್ಯಾನ್‌ಹೋಲ್ ಅಥವಾ ಮಲದ ಗುಂಡಿಗೆ ಇಳಿಸಿ ಅವರ ಪ್ರಾಣಬಲಿ ಪಡೆಯಲಾಗುತ್ತಿದೆ. 2015ರಿಂದ 2020ರವರೆಗಿನ ಇಂತಹ ಸಾವುಗಳ ಸಂಖ್ಯೆ 5,393. ಹೀಗೆ ಮ್ಯಾನ್‌ಹೋಲ್ ಅಥವಾ ಮಲದ ಗುಂಡಿಗಿಳಿದು, ಸಾವಿನಿಂದ ಬಚಾವಾಗಿ ಬಂದವರು ಕೇವಲ 175 ಮಂದಿ; ಆದರೆ, ಗಾಯಗೊಂಡು ಮೊದಲಿನಂತೆ ಕೆಲಸ ಮಾಡಲಾಗದ ಕಾರಣಕ್ಕೆ ಬಹುತೇಕರನ್ನು ಕೆಲಸದಿಂದಲೇ ತೆಗೆದುಹಾಕಿ ಅಮಾನವೀಯತೆ ಮೆರೆಯಲಾಗಿದೆ. ಇತ್ತೀಚಿನ ಮ್ಯಾನ್‌ಹೋಲ್ ದುರಂತಗಳನ್ನು ಗಮನಿಸಿದರೆ, ಮೃತಪಟ್ಟ ಮತ್ತು ಗಾಯಗೊಂಡ ಪೌರಕಾರ್ಮಿಕರ ಸಂಖ್ಯೆ ಏರುತ್ತಲೇ ಸಾಗಿದೆ. ಆದರೂ, ಆಗಾಗ ಕೆಲವು ನ್ಯಾಯಾಲಯಗಳು ಸ್ವಯಂಪ್ರೇರಿತವಾಗಿ ಕನಿಕರ ವ್ಯಕ್ತಪಡಿಸಿರುವುದನ್ನು ಬಿಟ್ಟರೆ ಪೌರಕಾರ್ಮಿಕರ ಬದುಕುಗಳು ಮಲದ ಗುಂಡಿಗಳಿಂದ ಮೇಲಕ್ಕೆ ಎದ್ದಿಲ್ಲ. ಈ ಸಾವುಗಳನ್ನು ಪೊಲೀಸರು ‘ಆಕಸ್ಮಿಕ ಸಾವು’ (ಆಕ್ಸಿಡೆಂಟಲ್ ಡೆತ್) ಎಂದೇ ಪರಿಗಣಿಸುವುದರಿಂದ, ಗುತ್ತಿಗೆದಾರರು ಅಥವಾ ಸಂಬಂಧಿಸಿದ ಅಧಿಕಾರಿಗಳನ್ನು ಬಂಧಿಸುವುದೆಲ್ಲ ಜನರ ಕಣ್ಣಿಗೆ ಮಣ್ಣೆರಚುವ ನಾಟಕವಷ್ಟೇ.

ಇನ್ನು, ಪರೋಕ್ಷವಾಗಿ ಪೌರಕಾರ್ಮಿಕರ ಪ್ರಾಣ ಹಿಂಡುತ್ತಿರುವ ಸಂಗತಿಗಳು ಸಾಕಷ್ಟಿವೆ. ಇವುಗಳಲ್ಲಿ ವೇತನ ಸಮಸ್ಯೆಯು ನಿತ್ಯ ನಿರಂತರ. ಗುತ್ತಿಗೆ ನೌಕರರು, ಹೊರ ಗುತ್ತಿಗೆ ನೌಕರರು, ಕಾಯಂ ನೌಕರರು… ಹೀಗೆ ಹಂಚಿಹೋಗಿರುವ ಕಾರಣ ಪೌರಕಾರ್ಮಿಕರು ಈ ವಿಷಯದಲ್ಲಿ ಮೊದಲಿನಂತೆ ಒಗ್ಗಟ್ಟು ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ, ಮೂರು ತಿಂಗಳುಗಟ್ಟಲೆ ವೇತನ ಬಾಕಿ ಉಳಿದ ಪ್ರಕರಣಗಳಿವೆ. ಇತ್ತೀಚೆಗೆ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಎದುರೇ, ಬಾಕಿ ವೇತನ ಪಾವತಿಗೆ ಆಗ್ರಹಿಸಿ ಇಬ್ಬರು ಕಾರ್ಮಿಕರು ಮೈ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಿದ ಘಟನೆ ಕನಕಪುರದಲ್ಲಿ ನಡೆದಿತ್ತು. ಜೀವನೋಪಾಯಕ್ಕಾಗಿ ಇದೊಂದೇ ಕೆಲಸ ಮಾಡುವ ಪೌರಕಾರ್ಮಿಕರು, ತಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಏನೆಲ್ಲ ಅಸಹಾಯಕ ಮತ್ತು ಅವಮಾನಕರ ದಾರಿಗಳನ್ನು ಹಿಡಿಯಬೇಕಾಗುತ್ತದೆ ಎಂಬುದಕ್ಕೆ ಇದೊಂದು ಪುಟ್ಟ ನಿದರ್ಶನವಷ್ಟೆ.

Advertisements

ಪೌರಕಾರ್ಮಿಕ ಮಹಿಳೆಯರ ಸ್ಥಿತಿಯಂತೂ ಬಾಂಡಲೆಯಿಂದ ಬೆಂಕಿಗೆ ಹಾಕಿದಂತಿದೆ. ಮೂತ್ರ ವಿಸರ್ಜನೆಗೆ ಶೌಚಾಲಯ ವ್ಯವಸ್ಥೆಯಿಲ್ಲ ಎಂಬ ಕಾರಣಕ್ಕೆ ಬಹುತೇಕ ಮಹಿಳಾ ಪೌರಕಾರ್ಮಿಕರು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನೀರನ್ನೇ ಕುಡಿಯದೆ ಕೆಲಸ ಮಾಡುವುದುಂಟು. ಇನ್ನು, ಅನಿವಾರ್ಯ ಕಾರಣಗಳಿಗೆ ರಜೆ ಹಾಕಿದರೆ, ಸಂಬಳಕ್ಕೆ ಕತ್ತರಿ ಹಾಕುವ ದುಷ್ಟ ವ್ಯವಸ್ಥೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಇತ್ತೀಚೆಗೆ, ಪೌರಕಾರ್ಮಿಕರು ಪುಟ್ಟ ವಿಶ್ರಾಂತಿ ಪಡೆಯಲು, ಬಟ್ಟೆ ಬದಲಿಸಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ಯೋಜನೆ ವಿಶೇಷವಾಗಿ ಮಹಿಳಾ ಕಾರ್ಮಿಕರಿಗೆ ತುಸುವಾದರೂ ನೆಮ್ಮದಿ ನೀಡಲಿದೆ. ಹಾಗಾಗಿ, ಇಂತಹ ಯೋಜನೆಗಳು ಬಿಬಿಎಂಪಿ ಸೇರಿದಂತೆ ರಾಜ್ಯದ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲೂ ತಪ್ಪದೆ ಜಾರಿಯಾಗಬೇಕಿದೆ. ನಮ್ಮ ನಿಮ್ಮ ಹೊಲಸನ್ನು ಗುಡಿಸಿ ಸಾಗಿಸಿ ಸ್ವಚ್ಛಗೊಳಿಸುವ ಕಾಯಕಜೀವಿಗಳ ಬದುಕುಗಳಿಗೆ ಘನತೆ ನೀಡದೆ ಹೋದರೆ ಚಂದ್ರಯಾನ, ಸೂರ್ಯಯಾನ, ಮಂಗಳಯಾನಗಳನ್ನು ‘ಸಾಧನೆ’ಯೆಂದು ಯಾವ ಬಾಯಿಯಲ್ಲಿ ಕರೆಯುತ್ತೀರಿ? ಆತ್ಮಶೋಧನೆ ಮಾಡಿಕೊಳ್ಳಿ.

ಬಡತನ, ಜಾತಿ ವ್ಯವಸ್ಥೆಯ ನಿರಂತರ ಕಿರುಕುಳಗಳಿಂದ ಪಾರಾಗಿ ಬದುಕು ಕಟ್ಟಲು ಹವಣಿಸುವ ಪೌರಕಾರ್ಮಿಕರನ್ನು, ಸರ್ಕಾರಗಳು, ಸ್ಥಳೀಯಾಡಳಿತ ಸಂಸ್ಥೆಗಳು, ಗುತ್ತಿಗೆದಾರರು, ಜನಸಾಮಾನ್ಯರು ಯಾವ ಪರಿ ಹಿಂಸಿಸುತ್ತಿದ್ದಾರೆಂದರೆ, ದೇಶದ ಸಾಮಾನ್ಯ ಜನರ ಜೀವಿತಾವಧಿ 70 ವರ್ಷವಾದರೆ, ಇದೇ ದೇಶದ ಪೌರಕಾರ್ಮಿಕರ ಜೀವಿತಾವಧಿ 40 ವರ್ಷ. ಆರೋಗ್ಯ ಸೌಲಭ್ಯಗಳ ಅಲಭ್ಯತೆ, ಸುರಕ್ಷತೆ ವಿಷಯದಲ್ಲಿನ ನಿರ್ಲಕ್ಷ್ಯ, ವೇತನ ಸಮಸ್ಯೆ, ನೌಕರಿಯ ಅನಿಶ್ಚಿತತೆ, ಎಲ್ಲಕ್ಕೂ ಮಿಗಿಲಾಗಿ  ನೈರ್ಮಲ್ಯದಂಥ ಕೆಲಸ ಮಾಡಿದರೂ ಸಿಗದ ಕನಿಷ್ಠ ಗೌರವ, ಘನತೆಯ ಬದುಕು ಕಟ್ಟಿಕೊಳ್ಳಲಾಗದ ಅಸಹಾಯಕತೆ… ಈ ಎಲ್ಲವೂ ಸೇರಿ ಪೌರಕಾರ್ಮಿಕರ ಜೀವ ಹಿಂಡುತ್ತಿವೆ. ಇನ್ನು ಮೇಲಾದರೂ, ದಿನಾಚರಣೆ, ಘೋರ ಭಾಷಣಗಳ ಆಡಂಬರ ಬಿಟ್ಟು, ಪೌರಕಾರ್ಮಿಕರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಪರಿಹರಿಸುವತ್ತ ಸರ್ಕಾರಗಳು, ಸ್ಥಳೀಯಾಡಳಿತ ಸಂಸ್ಥೆಗಳು ಗಮನ ಹರಿಸಬೇಕು. ಇದು ಸಾಧ್ಯವಾಗುವಂತೆ ಜನಸಾಮಾನ್ಯರು ಸರ್ಕಾರಗಳು, ಸ್ಥಳೀಯಾಡಳಿತ ಸಂಸ್ಥೆಗಳ ಮೇಲೆ ಒತ್ತಡ ಹೇರಬೇಕು.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ: ನುಡಿ ಹಲವು | ಅಂಕಣ | ವೈವಿಧ್ಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X