ರಸ್ತೆ ಬದಿ ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ 32 ಮಂದಿ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಗ್ರಾಮದ ಬಳಿ ನಡೆದಿದೆ. ಗಾಯಗೊಂಡವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಕೆಎಸ್‌ಆರ್‌ಟಿಸಿ ಬಸ್ ಸಿಂಧನೂರಿನಿಂದ ಅಂಕಲಿಮಠದ ಕಡೆಗೆ ತೆರಳುತ್ತಿದ್ದ ವೇಳೆ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಬಸ್ ನಿರ್ವಾಹಕ ಸೇರಿದಂತೆ ಐವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಕೂಡಲೇ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣ ಪುಟ್ಟ ಗಾಯಗಳಾದವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪತ್ನಿ ಹತ್ಯೆಗೈದು ಪತಿ ಆತ್ಮಹತ್ಯೆ
ರಸ್ತೆ ಬದಿ ನಿಲ್ಲಿಸಿದ ಲಾರಿಗೆ ಚಾಲಕನು ಇಂಡಿಕೇಟರ್ ಹಾಕದಿರುವುದೇ ಅಪಘಾತಕ್ಕೆ ಕಾರಣವೆಂದು ತಿಳಿದುಬಂದಿದೆ. ಲಾರಿ ಚಾಲಕನು ಇಂಡಿಕೇಟರ್ ಹಾಕದೆ ಲಾರಿಯನ್ನು ನಿಲ್ಲಿಸಿದ್ದಾನೆ. ಬಸ್ ಎದುರಿಗೆ ಮತ್ತೊಂದು ಲಾರಿ ಬಂದಿದ್ದು, ಸೈಡ್ ಕೊಡಲು ಹೋದಾಗ ರಸ್ತೆ ಬದಿ ನಿಂತಿದ್ದ ಲಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬಸ್ ನಜ್ಜುಗುಜ್ಜಾಗಿದೆ. ಸಿಂಧನೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.