ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಸೇರಿರುವ ಬೆನ್ನಲ್ಲೇ ಪಕ್ಷದ ಹಲವಾರು ಮುಖಂಡರು ಜೆಡಿಎಸ್ ತೊರೆಯಲು ಮುಂದಾಗಿದ್ದಾರೆ. ಈಗಾಗಲೇ ಪಕ್ಷದ ಮುಸ್ಲಿಂ ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ನಡುವೆ, ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಮಾತನಾಡಿರುವ ಜೆಡಿಎಸ್ ಶಾಸಕಿ ಕರೆಮ್ಮ ಜಿ ನಾಯಕ, ‘ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕೊತೆಗೆ ಮೈತ್ರಿ ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
ರಾಯಚೂರು ಜಿಲ್ಲೆಯ ದೇವದುರ್ಗ ವಿಧಾನಸಭಾ ಕ್ಷೇತ್ರವು ಬಿಜೆಪಿ ಮತ್ತು ಜೆಡಿಎಸ್ ನಡುವಿನ ನೇರ ಪೈಪೋಟಿಯ ಕಣವಾಗಿದೆ. ಕರೆಮ್ಮ ಅವರು ಬಿಜೆಪಿ ಮಾಜಿ ಶಾಸಕ ಶಿವನಗೌಡ ಪಾಟೀಲ್ ಅವರನ್ನು ಮಣಿಸಿ ಗೆದ್ದಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಪರಸ್ಪರ ಎದುರಾಳಿಗಳಾಗಿವೆ. ಇದೀಗ, ಈ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈತ್ರಿ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಕರೆಮ್ಮ, “ಕ್ಷೇತ್ರದ ಜನರು ನನಗೆ ಜಾತ್ಯಾತೀತವಾಗಿ ಮತ ಕೊಟ್ಟು ಗೆಲ್ಲಿಸಿದ್ದಾರೆ. ಮೈತ್ರಿ ಬಗ್ಗೆ ದಿಢೀರ್ ನಿರ್ಧಾರ ಸರಿಯಾಗುವುದಿಲ್ಲ. ಈ ಬಗ್ಗೆ ಜನರ ಅಭಿಪ್ರಾಯವನ್ನು ನಾನು ನಮ್ಮ ವರಿಷ್ಠರಿಗೆ ತಿಳಿಸುತ್ತೇನೆ” ಎಂದು ಹೇಳಿದ್ದಾರೆ.
“ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕೆ ಇಳಿಸಬೇಕೆಂಬುವುದು ನಮ್ಮ ಆಗ್ರಹವಾಗಿದೆ. ನಮಗೆ ಬಿಜೆಪಿ ಜೊತೆಗೆ ಹೋಗಿ ಕೆಲಸ ಮಾಡಲು ಸಾಧ್ಯವಿಲ್ಲ. ದೇವದುರ್ಗದಲ್ಲಿ ಬಿಜೆಪಿ ಕಾರ್ಯಕರ್ತರು ನಮಗೆ ತೊಂದರೆ ಕೊಟ್ಟಿದ್ದಾರೆ. ಬಿಜೆಪಿ ಕಾರ್ಯಕರ್ತರು ನನ್ನ ಮೇಲೆ ದಾಳಿ ಮಾಡಿದ್ದಾರೆ. ಜೆಡಿಎಸ್ ಕಾರ್ಯಕರ್ತರಿಗೆ ಚಪ್ಪಲಿಯಿಂದ ಹೊಡೆಯುವುದಾಗಿ ಬಿಜೆಪಿಯವರು ಹೇಳಿಕೆ ಕೊಟ್ಟಿದ್ದಾರೆ. ದೇವದುರ್ಗದಲ್ಲಿ ಮೈತ್ರಿಗೆ ಕ್ಷೇತ್ರದ ಜನರು ಒಪ್ಪಲ್ಲ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಚಿತ್ರದುರ್ಗ | ದಲಿತರ ಬೀದಿಯಲ್ಲಿ ಮೂಲ ಸೌಕರ್ಯ ಮರೀಚಿಕೆ; ಜನಪ್ರತಿನಿಧಿಗಳ ನಿರ್ಲಕ್ಷ್ಯ
“ದೇವದುರ್ಗದಲ್ಲಿ ಪಂಚರತ್ನ ಯಾತ್ರೆ ನಡೆಯುವಾಗ ನಮ್ಮ ವಾಹನದ ಮೇಲೆ ಬಿಜೆಪಿಯವರು ಕಲ್ಲು ತೂರಾಟ ಮಾಡಿದ್ದಾರೆ. ಪಕ್ಷದ ಬ್ಯಾನರ್ ಹರಿದು ಹಾಕಿದ್ದಾರೆ. ನನ್ನ ಪಕ್ಷ ನನಗೆ ಮುಖ್ಯ, ನಮ್ಮ ವರಿಷ್ಠರ ಬಗ್ಗೆ ನಾನು ಮಾತನಾಡಲ್ಲ. ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ಜೊತೆಗೆ ಯಾವುದೇ ಹೊಂದಾಣಿಕೆ ಮಾಡಲ್ಲ” ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.