ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕನ್ನು ಬರಗಾಲವೆಂದು ಘೋಷಣೆ ಮಾಡುವುದರ ಜೊತೆಗೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.
“ಸಿಂಧನೂರು ತಾಲೂಕು ನೀರಾವರಿ ಎಂದು ಭಾವಿಸಿ ಬರಗಾಲ ಘೋಷಣೆ ಮಾಡಿಲ್ಲ. ಸಮಗ್ರ ನೀರಾವರಿಗೆ ಸಿಂಧನೂರು ತಾಲೂಕು ಒಳಪಟ್ಟಿಲ್ಲ. 1.60 ಲಕ್ಷ ಎಕರೆ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದ್ದು, 80 ಸಾವಿರ ಎಕರೆ ಪ್ರದೇಶ ಮಾತ್ರ ನೀರಾವರಿಗೆ ಒಳಪಟ್ಟಿದೆ. 40 ಸಾವಿರ ಎಕರೆ ಟೆಲೆಂಡ್ ಆಗಿದೆ. ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ” ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
“ಸಿಂಧನೂರು ತಾಲೂಕನ್ನು ಬರಗಾಲವೆಂದು ಘೋಷಣೆ ಮಾಡಬೇಕು. ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ಸಾಲ ಕಟ್ಟದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಪರಿಹಾರ ನೀಡಬೇಕು. ರೈತರ ಸಾಲವನ್ನು ಮನ್ನಾ ಮಾಡಬೇಕು. ಬರಗಾಲ ಘೋಷಣೆಯಲ್ಲಿ ಭತ್ತ ಬೆಳೆಯನ್ನು ಪರಿಗಣಿಸಿಲ್ಲ. ಭತ್ತವೂ ನಷ್ಟವಾಗಿರುವುದರಿಂದ ಪರಿಗಣಿಸಬೇಕು” ಎಂದು ಒತ್ತಾಯಿಸಿದರು.
“ಮಹಿಳೆಯರ ಗುಂಪಿನ ಸಾಲ ಮನ್ನಾ ಮಾಡಬೇಕು, ಬೆಳೆಗಳ ತಾರತಮ್ಯ ಮಾಡದೇ ಸಂಪೂರ್ಣ ಎಲ್ಲ ಬೆಳೆಗಳನ್ನು ಪರಿಗಣಿಸಬೇಕು, ಮನರೇಗಾದಡಿ 200 ದಿನಗಳ ಮಾನವ ಕೆಲಸ ನೀಡಬೇಕು, ಕೃಷಿ ಪಂಪ್ ಸೆಟ್‌ಗಳಿಗೆ 18 ಗಂಟೆ ವಿದ್ಯುತ್ ಸರಬರಾಜು ಮಾಡಬೇಕು, ರೈತರ ಐಪಿ ಸೆಟ್‌ಗಳ ಆರ್‌ಆರ್ ನಂಬರ್‌ಗಳಿಗೆ ಆಧಾರ ನಂಬರ್ ಜೋಡಣೆ ರದ್ದುಪಡಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಭದ್ರಾ ಬಲದಂಡೆ ನಾಲೆಗೆ ನೀರು ಹರಿಸಲು ಆಗ್ರಹ
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮಿನ್ ಪಾಷಾ ದಿದ್ದಗಿ, ರೈತ ಮುಖಂಡ ಲಕ್ಷ್ಮಣ ಗೌಡ ಕಡಗಂದೊಡ್ಡಿ, ಸಿ ಎಚ್ ರವಿಕುಮಾರ್, ವೆಂಕಟೇಶ ರಾಜಲಬಂಡಾ, ಬಸವರಾಜ ಹಂಚಿನಾಳ, ಬಡೆಸಾಬ್, ರಮೇಶ, ಶಂಕರ, ಹುಲಿಗಪ್ಪ ಜಾಲಿಬೆಂಚಿ, ಬಸವರಾಜ ಸೇರಿದಂತೆ ಇತರರು ಇದ್ದರು.
ಸಿಟಿಜನ್ ಜರ್ನಲಿಸ್ಟ್ : ಹಫೀಜುಲ್ಲ ರಾಯಚೂರು.