ಹೈದರಾಬಾದ್‌ನ ಕಾಚಿಗುಡ ನಿಲ್ದಾಣದಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ಭಾನುವಾರ ರಾತ್ರಿ 10.53ಕ್ಕೆ ಬೆಂಗಳೂರಿನ ಯಶವಂತಪುರ ನಿಲ್ದಾಣದ ಪ್ಲಾಟ್ ಫಾರ್ಮ್ ನಂ 6ಕ್ಕೆ ಬಂದಿತು. ರೈಲಿನ ಉದ್ಘಾಟನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವೀಡಿಯೊ ಲಿಂಕ್ ಮೂಲಕ ಉದ್ಘಾಟನೆ ಮಾಡಿದರು.
ಯಶವಂತಪುರ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ 6 ರಲ್ಲಿ ವಂದೇ ಭಾರತ್ ರೈಲು ಬಂದ ಕೂಡಲೇ ‘ಭಾರತ್ ಮಾತಾ ಕಿ ಜೈ’ ಘೋಷಣೆಗಳು ಕೇಳಿಬಂದವು.
ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಅವರು ಯಲಹಂಕದಲ್ಲಿ ರೈಲನ್ನು ಸ್ವಾಗತಿಸಿ ಯಲಹಂಕದಿಂದ ಯಶವಂತಪುರಕ್ಕೆ ರೈಲಿನಲ್ಲಿ ಪ್ರಯಾಣಿಸಿದರು.
ಕಾಚಿಗುಡದಿಂದ ಆರಂಭವಾದ ಉದ್ಘಾಟನಾ ವಿಶೇಷ ಕಾರ್ಯಕ್ರಮವು ಶಹಬಾದ್‌ನಗರ, ಮಹಬೂಬ್‌ನಗರ, ಗದ್ವಾಲ್, ಕರ್ನೂಲ್ ಸಿಟಿ, ಧೋಣೆ, ಅನಂತಪುರ, ಧರ್ಮಾವರಂ, ಹಿಂದೂಪುರ ಮತ್ತು ಯಲಹಂಕ ಮೂಲಕ ಯಶವಂತಪುರದವರೆಗೆ ನಡೆಯಿತು.
ಈ ರೈಲು ಮಧ್ಯಾಹ್ನ 1.24ಕ್ಕೆ ಕಾಚಿಗುಡದಿಂದ ಹೊರಟಿದೆ. ಒಟ್ಟು 610 ಕಿ.ಮೀ ಪ್ರಯಾಣಿಸಿದೆ. ಕ್ರಮಿಸಲು ಸುಮಾರು 8.30 ಗಂಟೆ ತೆಗೆದುಕೊಂಡಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿಲ್ದಾಣವನ್ನು ಪ್ರವೇಶಿಸಿದಾಗ, ರಾಜ್ಯಸಭಾ ಸಂಸದ ಲೆಹರ್ ಸಿಂಗ್, ಎಂಎಲ್‌ಸಿ ದೇವೇಗೌಡ, ಡಿಆರ್‌ಎಂ ಯೋಗೇಶ್ ಮೋಹನ್ ಮತ್ತು ಇತರ ಬೆಂಗಳೂರು ವಿಭಾಗದ ಉನ್ನತ ಅಧಿಕಾರಿಗಳು ರೈಲನ್ನು ಬರಮಾಡಿಕೊಂಡರು.
ಯಶವಂತಪುರ-ಕಾಚಿಗುಡ (ರೈಲು ಸಂಖ್ಯೆ 20704) ವಂದೇ ಭಾರತ್ ಎಕ್ಸ್‌ಪ್ರೆಸ್ ಸೆ.25 ರಿಂದ ಯಶವಂತಪುರದಿಂದ ನಿಯಮಿತ ಸೇವೆಯನ್ನು ಪ್ರಾರಂಭಿಸುತ್ತದೆ. ಕಾಚಿಗುಡ-ಯಶವಂತಪುರ-ಕಾಚಿಗುಡ(ರೈಲು ಸಂಖ್ಯೆ 20703/20704) ವಂದೇ ಭಾರತ್ ಎಕ್ಸ್‌ಪ್ರೆಸ್‌ನ ನಿಯಮಿತ ಸೇವೆಯ ಪರಿಚಯ, ಸಮಯ ಮತ್ತು ನಿಲುಗಡೆಗಳ ವಿವರಗಳು ಈ ಕೆಳಕಂಡಂತಿವೆ.
- ಕಾಚಿಗುಡ-ಯಶವಂತಪುರ(ರೈಲು ಸಂಖ್ಯೆ. 20703) ವಂದೇ ಭಾರತ್ ಎಕ್ಸ್‌ಪ್ರೆಸ್ ಕಾಚಿಗುಡದಿಂದ ಬೆಳಗ್ಗೆ 5:30 ಕ್ಕೆ ಹೊರಟು ಅದೇ ದಿನ ಮಧ್ಯಾಹ್ನ 2ಕ್ಕೆ ಯಶವಂತಪುರ ತಲುಪಲಿದೆ. ಈ ಮಾರ್ಗದಲ್ಲಿ ರೈಲು ಮಹಬೂಬ್‌ನಗರದಲ್ಲಿ ಬೆಳಗ್ಗೆ 6:49/06:50, ಕರ್ನೂಲ್ ನಗರದಲ್ಲಿ ಬೆಳಿಗ್ಗೆ 8:24/08:25, ಅನಂತಪುರದಲ್ಲಿ ಬೆಳಗ್ಗೆ 10:44/10:45 ಹಾಗೂ ಧರ್ಮಾವರಂ ಬೆಳಿಗ್ಗೆ 11:14/11: 15ಕ್ಕೆ ತಲುಪಲಿದೆ.
- ಯಶವಂತಪುರ-ಕಾಚಿಗುಡ (ರೈಲು ಸಂಖ್ಯೆ 20704) ವಂದೇ ಭಾರತ್ ಎಕ್ಸ್‌ಪ್ರೆಸ್ ಯಶವಂತಪುರದಿಂದ ಮಧ್ಯಾಹ್ನ 2:45ಕ್ಕೆ ಹೊರಟು, ಅದೇ ದಿನ ರಾತ್ರಿ 11:15ಕ್ಕೆ ಕಾಚಿಗುಡ ತಲುಪುತ್ತದೆ. ಈ ರೈಲು ಧರ್ಮಾವರಂನಲ್ಲಿ ಸಂಜೆ 4:59/5 ಕ್ಕೆ, ಅನಂತಪುರದಲ್ಲಿ ಸಂಜೆ 5:29/5:30 ಕ್ಕೆ, ಕರ್ನೂಲ್ ಸಿಟಿ 7:50/07:51ಕ್ಕೆ ಹಾಗೂ ಮಹಬೂಬ್‌ನಗರದಲ್ಲಿ 9:34/09ಕ್ಕೆ ಮಾರ್ಗ ನಿಲ್ದಾಣಗಳಲ್ಲಿ ನಿಲ್ಲುತ್ತದೆ.
- ಕಾಚಿಗುಡದಿಂದ ಯಶವಂತಪುರ ದರ ಸಿಸಿ ವರ್ಗ ₹1,600, ಇಸಿ ವರ್ಗ ₹2,915, ಸಿಸಿ ವರ್ಗ ₹1,540, ಇಸಿ ವರ್ಗ ₹2,865 ಇದೆ.
- ವಂದೇ ಭಾರತ್ ಎಕ್ಸ್‌ಪ್ರೆಸ್ 2 ಡಿಟಿಸಿ (ಡ್ರೈವಿಂಗ್ ಟ್ರೈಲರ್ ಕೋಚ್‌ಗಳು), 4 ಎಂಸಿ (ಮೋಟಾರ್ ಕೋಚ್‌ಗಳು), ಮತ್ತು 2 ಟಿಸಿ (ಟ್ರೇಲರ್ ಕೋಚ್‌ಗಳು) ಸೇರಿದಂತೆ ಒಟ್ಟು 8 ಕೋಚ್‌ಗಳನ್ನು ಒಳಗೊಂಡಿರುತ್ತದೆ. ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಈ ಸೇವೆ ಲಭ್ಯವಿರುತ್ತದೆ.
ಯಶವಂತಪುರ-ಕಾಚಿಗುಡ (ರೈಲು ಸಂಖ್ಯೆ 20704) ವಂದೇ ಭಾರತ್ ಎಕ್ಸ್‌ಪ್ರೆಸ್ ಸೆ.25 ರಂದು ಯಶವಂತಪುರದಿಂದ ನಿಯಮಿತ ಸೇವೆಯನ್ನು ಪ್ರಾರಂಭಿಸುತ್ತದೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ ವಾರ್ಡ್ ಮರು ವಿಂಗಡಣೆಯ ಅಂತಿಮ ಪಟ್ಟಿ ಪ್ರಕಟ
ಇದು ನೈಋತ್ಯ ರೈಲ್ವೆ ವಲಯದ ಮೂಲಕ ಸಾಗುವ ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಇದಾಗಿದೆ. ದಕ್ಷಿಣ ಭಾರತದ ಎರಡು ಟೆಕ್ ಸಿಟಿಗಳನ್ನು ಸಂಪರ್ಕಿಸುವ ಮೊದಲನೆ ರೈಲಾಗಿದೆ.