ಮತ್ತೊಮ್ಮೆ ಬಿಜೆಪಿಯೊಂದಿಗೆ ಜೆಡಿಎಸ್ ಹೋದರೆ ಕುಮಾರಸ್ವಾಮಿಯವರನ್ನು ತಮ್ಮ ಕುಟುಂಬದಿಂದ ಬಹಿಷ್ಕರಿಸುತ್ತೇವೆ ಅಂತ ದೇವೇಗೌಡರು ಎಂದಿದ್ದರು. ಈಗ ಬಹಿಷ್ಕರಿಸುವರೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿ, “ಈ ಹಿಂದೆ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡ ನಂತರ ಕುಮಾರಸ್ವಾಮಿಯವರು ಹಾಗೂ ದೇವೇಗೌಡರು ಪಶ್ಚಾತ್ತಾಪದ ಮಾತಾಡಿದ್ದರು. ಹಿಂದೆ ಕುಮಾರಸ್ವಾಮಿಯವರು ದೇವೇಗೌಡರ ಅಭಿಪ್ರಾಯದ ವಿರುದ್ಧ ಹೋಗಿದ್ದರು, ಈಗ ತಮ್ಮ ಶಾಸಕರ ಅಭಿಪ್ರಾಯದ ವಿರುದ್ಧ, ತಮ್ಮ ಕಾರ್ಯಕರ್ತರ ವಿರುದ್ಧ, ಮುಖಂಡರ ವಿರುದ್ಧ, ಅಲ್ಪಸಂಖ್ಯಾತರ ವಿರುದ್ಧ ಹೋಗಿದ್ದಾರೆ. ಈಗ ದೇವೇಗೌಡರು ಬಾಯ್ಕಾಟ್ ಮಾಡದಿರಬಹುದು, ಜೆಡಿಎಸ್ ಪಕ್ಷವನ್ನು ರಾಜ್ಯದ ಜನತೆ ಬಾಯ್ಕಾಟ್ ಮಾಡಲಿದ್ದಾರೆ” ಎಂದು ಕುಟುಕಿದೆ.
“ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬಯಸುತ್ತೇನೆ ಎಂದಿದ್ದರು ದೇವೇಗೌಡರು, ಕೆಲವೇ ತಿಂಗಳ ಹಿಂದೆ ಮೊಮ್ಮಗನೂ ದೇವೇಗೌಡರ ಅದೇ ಆಸೆಯನ್ನು ಬಹಿರಂಗಪಡಿಸಿದ್ದರು. ಆದರೆ ಈಗ ಅಲ್ಪಸಂಖ್ಯಾತರ ಅಭಿಪ್ರಾಯವನ್ನು ಧಿಕ್ಕರಿಸಿ ಕೂಡಿಕೆ ಮಾಡಿಕೊಂಡಿದ್ದಾರೆ” ಎಂದು ಟೀಕಿಸಿದೆ.
“ಜೆಡಿಎಸ್ ನಡೆ ಇದು ಅಲ್ಪಸಂಖ್ಯಾತರ ಬೆನ್ನಿಗೆ ಚೂರಿ ಹಾಕುವ ನಡೆ ಅಲ್ಲವೇ? ಹಿಂದೆ ಯಡಿಯೂರಪ್ಪನವರು ಜೆಡಿಎಸ್ ನವರು ವಚನ ಭ್ರಷ್ಟರು ಎಂದಿದ್ದು ನಿಜವಲ್ಲವೇ? ಕೇವಲ ವಚನಭ್ರಷ್ಟರು ಮಾತ್ರವಲ್ಲ, ಸಿದ್ಧಾಂತ ಭ್ರಷ್ಟರು ಕೂಡ” ಎಂದು ವಾಗ್ದಾಳಿ ನಡೆಸಿದೆ.