ಭಾರತದ ಮೇಲೆ ಹಿಂದುಗಳಿಗಿರುವಷ್ಟೇ ಹಕ್ಕು ಮುಸ್ಲಿಂ ಸಮುದಾಯಕ್ಕೂ ಇದೆ. ಕೋಮುವಾದಿಗಳು ಈ ಎರಡೂ ಸಮುದಾಯಗಳ ನಡುವೆ ವಿಷ ಬಿತ್ತಲು ಪ್ರಯತ್ನಿಸಿದರೂ ಕೂಡ, ಎರಡೂ ಕೋಮುಗಳು ಏಕತೆ ಕಾಪಾಡಲು ಶ್ರಮಿಸುತ್ತಿವೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಈದ್ ಮಿಲಾದ್ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ದೇಶದ ಅಭಿವೃದ್ದಿ ಮತ್ತು ಇತರ ವಲಯಗಳಿಗೆ ಮುಸ್ಲಿಂ ಸಮುದಾಯದ ಕೊಡುಗೆಯನ್ನು ಕಡೆಗಣಿಸಲಾಗದು. ಅಂಬೇಡ್ಕರ್‌ಗೆ ರಾಜಕೀಯ ಮರುಜನ್ಮ ನೀಡಿದ್ದು ಅಂದಿನ ಮುಸ್ಲಿಂ ಲೀಗ್. ಭಗತ್ ಸಿಂಗ್ ಅವರ ಪರವಾಗಿ ಅಂದು ವಕಾಲತ್ತು ವಹಿಸಿದ್ದು ಆಸೀಫ್ ಅಲಿ ಎಂಬ ಇತಿಹಾಸದ ಕಥನವನ್ನು ನೆನಪಿಟ್ಟುಕೊಳ್ಳಬೇಕು” ಎಂದರು.
”ಯಾರು ಏನೇ ಮಾಡಿದರು, ಹಿಂದು-ಮುಸ್ಲಿಂ ಸೌಹಾರ್ದತೆ ಹಾಳು ಮಾಡಲು ಸಾಧ್ಯವಿಲ್ಲ. ಎಷ್ಟೇ ಹುಳಿ ಹಿಂಡಿದರೂ ಹಿಂದೂ ಮುಸ್ಲಿಮರ ನಡುವಿನ ಸಾಮರಸ್ಯವನ್ನು ಕದಡಲು ಸಾಧ್ಯವಿಲ್ಲ. ದೇಶಕ್ಕೆ ಮುಂದೆ ಒಳ್ಳೆಯ ಕಾಲ ಬರಲಿದೆ” ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಾಸಕ ಪ್ರಸಾದ್ ಅಬ್ಬಯ್ಯ ಸೇರಿದಂತೆ ಹಲವರು ಇದ್ದರು.