ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಲವಾರು ಸಂಘಟನೆಗಳು ಬಂದ್ ನಡೆಸಿ, ಪ್ರತಿಭಟನೆ ನಡೆಸುತ್ತಿವೆ. ಅಹಿತಕರ ಘಟನೆಗಳು ನಡೆಯದಂತೆ ನೋಡಿಕ್ಕೊಳ್ಳಲು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಈ ಸಂದರ್ಭದಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಗೆ ನೀಡಲಾಗಿದ್ದ ತಿಂಡಿಯಲ್ಲಿ ಇಲಿ ಪತ್ತೆಯಾಗಿದೆ.
ಯಶವಂತಪುರ ಸಂಚಾರ ಠಾಣಾ ಸಿಬ್ಬಂದಿಯೊಬ್ಬರಿಗೆ ತಂದಿದ್ದ ರೈಸ್ಬಾತ್ನಲ್ಲಿ ಇಲಿ ಪತ್ತೆಯಾಗಿದೆ. ಇದನ್ನು ಕಂಡ ಪೊಲೀಸ್ ಸಿಬ್ಬಂದಿ ಶಾಕ್ ಆಗಿದ್ದಾರೆ.
ತಕ್ಷಣ ಎಚ್ಚೆತ್ತ ಸಿಬ್ಬಂದಿ ಪೊಲೀಸ್ ಸಿಬ್ಬಂದಿ ಗ್ರೂಪ್ನಲ್ಲಿ ವಿಷಯ ತಿಳಿಸಿದ್ದು, ಯಾರೂ ಸಹ ಆ ಆಹಾರ ಸೇವಿಸದಂತೆ ಸೂಚನೆ ನೀಡಿದ್ದಾರೆ. ಇಂತಹ ಊಟ ತಿಂದು ಆರೋಗ್ಯ ಹದಗೆಟ್ಟರೆ, ಅದಕ್ಕೆ ಯಾರು ಹೊಣೆ ಎಂದು ಪೊಲೀಸ್ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಶಂತಪುರದ ಅಶೋಕ್ ಟಿಫಿನ್ ಸೆಂಟರ್ನಿಂದ ಪೊಲೀಸ್ ಸಿಬ್ಬಂದಿಗೆ ಒಟ್ಟು 180 ಉಪಾಹಾರ ಸರಬರಾಜು ಮಾಡಲಾಗಿದೆ. ಕಳಪೆ ಗುಣಮಟ್ಟದ ಊಟ ಪೂರೈಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
”ಮಂಗಳವಾರ ಬೆಳಗ್ಗೆ 7:30ರ ಸುಮಾರಿಗೆ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಸಂಚಾರಿ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಸುಮಾರು 180 ಜನ ಸಿಬ್ಬಂದಿಗಾಗಿ ಯಶವಂತಪುರದ ಹೋಟೆಲ್ವೊಂದರಿಂದ ತಿಂಡಿ ತರಿಸಲಾಗಿತ್ತು. ಸಂಚಾರಿ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ನೀಡಿದ ಉಪಾಹಾರದಲ್ಲಿ ಇಲಿ ಪತ್ತೆಯಾಗಿದೆ. ಹಾಗಾಗಿ, ಕೂಡಲೇ ಉಳಿದ ಸಿಬ್ಬಂದಿಗೆ ಊಟ ತಿನ್ನದಿರಲು ಸೂಚನೆ ನೀಡಲಾಗಿದೆ” ಎಂದು ನಗರ ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರತಿಭಟನೆ ಹೆಸರಿನಲ್ಲಿ ಹೋಟೆಲ್ಗೆ ನುಗ್ಗಿ ದಾಂಧಲೆ ನಡೆಸಿದ ಕೀಡಿಗೇಡಿಗಳು
“ಒಂದು ದಿನದ ಊಟಕ್ಕೆ ಸರ್ಕಾರ ₹200 ನೀಡುತ್ತದ. ಆದರೂ, ಗುಣಮಟ್ಟದ ಉಪಾಹಾರ ತರಿಸಿಲ್ಲ. ಈ ಬಗ್ಗೆ ಯಶವಂತಪುರ ಸಂಚಾರ ಮತ್ತು ಟ್ರಾಫಿಕ್ ಇನ್ಸ್ಪೆಕ್ಟರ್ಗಳಿಗೆ ನೋಟಿಸ್ ನೀಡಲಾಗಿದೆ. ತಿಂಡಿ ಸರಬರಾಜು ಮಾಡಿದ್ದ ಹೋಟೆಲ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಿದ್ದೇವೆ” ಎಂದು ತಿಳಿಸಿದರು.