ಸರ್ಕಾರದ ಮೀಸಲಾತಿ ಸೌಲಭ್ಯ ಪಡೆಯಲು ಫಲಾನುಭವಿಗಳ ಧರ್ಮ ಮುಖ್ಯವಲ್ಲ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜನಾಂಗದವರು ಯಾವುದೇ ಧರ್ಮದವರಾದರೂ ಮೀಸಲಾತಿಗೆ ಅರ್ಹತೆ ಪಡೆದುಕೊಳ್ಳುತ್ತಾರೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಕೊಡವ ಮುಸ್ಲಿಂ ಅಸೋಸಿಯೇಷನ್(ಕೆಎಂಎ) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ವಿರಾಜಪೇಟೆಯ ಸೇಂಟ್ ಆನ್ಸ್ ಪ್ಯಾರಿಸ್ ಸಭಾಂಗಣದಲ್ಲಿ ನಡೆದ ಕೆಎಂಎ ಪ್ರತಿಭಾ ಪುರಸ್ಕಾರ-2023 ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಮಾತನಾಡಿದರು.
“ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಗಾಗಿ ಕೇವಲ ಮೀಸಲಾತಿಯನ್ನೇ ಸಂಪೂರ್ಣವಾಗಿ ಅವಲಂಬಿಸಬಾರದು. ಆಸಕ್ತಿಯಿಂದ ಓದಿ ಹೆಚ್ಚು ಅಂಕ ಪಡೆಯುವುದರ ಮೂಲಕ ಮೆರಿಟ್‌ನಲ್ಲಿ ಸಾಧನೆ ಮಾಡುವಂತಾಗಬೇಕು” ಎಂದು ತಿಳಿಸಿದರು.
“ಮೀಸಲಾತಿ ಪಟ್ಟಿಯಲ್ಲಿ ಅರ್ಹತೆ ಹೊಂದಿರುವ ಸಮುದಾಯಗಳ ವಿದ್ಯಾರ್ಥಿಗಳಾದರೂ ಓದಿನಲ್ಲಿ ಮೆರಿಟ್ ಮೂಲಕ ಮುಂದೆ ಬಂದರೆ ಅವರ ಹಿಂದೆ ಇರುವವರು ಮೀಸಲಾತಿ ಸೌಲಭ್ಯದ ಮೂಲಕ ಮುಂದೆ ಬರಲು ಅವಕಾಶವಿದೆ. ಈ ನಿಸ್ವಾರ್ಥ ತತ್ವವನ್ನು ರೂಢಿಸಿಕೊಂಡರೆ ಪ್ರತಿಯೊಬ್ಬರೂ ಶಿಕ್ಷಣದಲ್ಲಿ ಮುಂದೆ ಬಂದಂತಾಗುತ್ತದೆ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
“ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಗುರಿಗಳಿರಬೇಕು. ನಿರ್ದಿಷ್ಟ ಗುರಿಯಿಡೆಗೆ ಸಾಗುವ ಮಾರ್ಗ ಕೆಲವು ಕಾರಣಗಳಿಂದ ಬದಲಾದರೂ ಗುರಿಯನ್ನು ಮಾತ್ರ ಬದಲಿಸಬಾರದು. ವಿದ್ಯಾರ್ಥಿಗಳು ಭೂತಕಾಲದ ಇತಿಹಾಸವನ್ನು ಅರ್ಥೈಸಿಕೊಂಡು ವರ್ತಮಾನದಲ್ಲಿ ದೃಢ ನಿರ್ಧಾರಗಳನ್ನು ತೆಗೆದುಕೊಂಡರೆ ಮಾತ್ರ ಭವಿಷ್ಯವನ್ನು ಮತ್ತಷ್ಟು ಸುಭದ್ರಗೊಳಿಸಬಹುದು. ಸಾಧನೆ ಮಾಡಿದವರನ್ನು ಮಾತ್ರ ಸಮಾಜ ಗುರುತಿಸುತ್ತದೆ. ಆದ್ದರಿಂದ ಅತ್ಯಮೂಲ್ಯವಾದ ಬದುಕನ್ನು ವ್ಯರ್ಥಗೊಳಿಸಬಾರದು” ಎಂದು ಕರೆ ನೀಡಿದರು.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಪ್ರೊ. ತಂಬಂಡ ವಿಜಯ್ ಪೂಣಚ್ಚ ದಿಕ್ಸೂಚಿ ಭಾಷಣ ಮಾಡಿ, “1893ರ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಬಲಾಢ್ಯರಾಗಿದ್ದ ಜಮ್ಮಾ ಮಾಪಿಳ್ಳೆಗಳು 20ನೇ ಶತಮಾನದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ಬಂತು. 18ನೇ ಶತಮಾನದಲ್ಲಿ ಕೊಡಗು ಜಿಲ್ಲೆಯ ಒಟ್ಟು 191 ಪೊಲೀಸ್ ಸಿಬ್ಬಂದಿಗಳ ಪೈಕಿ 63 ಮಂದಿ ಸಿಬ್ಬಂದಿಗಳು ಕೊಡವ ಮುಸ್ಲಿಮರಾಗಿದ್ದರು. ನಂತರ ಬದಲಾದ ಪರಿಸ್ಥಿತಿಯಲ್ಲಿ ಅತಂತ್ರ ಸ್ಥಿತಿ ಎದುರಾಗಿ ನಲುಗಿ ಹೋಗುವಂತಾಯಿತು. ಈಗ ಕೊಡವ ಮುಸಲ್ಮಾನರ ಬಗ್ಗೆ ವಿಶೇಷವಾದ ಅಧ್ಯಯನ ನಡೆಸುವ ಅಗತ್ಯವಿದೆ. ಈ ಮೂಲಕ ಸಂವಿಧಾನಾತ್ಮಕ ರಕ್ಷಣೆ ಪಡೆಯಲು ಈ ಜನಾಂಗ ಅರ್ಹವಾಗಿದೆ” ಎಂದು ಹೇಳಿದರು.
“ಕೊಡಗಿನ ಜಮ್ಮಾ ಎಂಬ ಗೌರವದ ಸಂಕೇತ ಇಲ್ಲಿನ ಮೂಲ ನಿವಾಸಿಗಳ ಅಂತಃಶಕ್ತಿಯಾಗಿದೆ. 1805ರಲ್ಲಿ ಅಂದಿನ ಕೊಡಗು ರಾಜರಿಂದ ಜನಾಂಗವಾರು ದೊರೆತ ಜಮ್ಮಾ ಕೊಡಗಿನ ಪ್ರಮುಖ 8 ಜನಾಂಗಗಳಿಗೆ ಮಾತ್ರ ಸೀಮಿತವಾಗಿದೆ. ಈ 8 ಜನಾಂಗಗಳ ಪೈಕಿ ಕೊಡವ ಮುಸ್ಲಿಮರೂ (ಜಮ್ಮಾ ಮಾಪಿಳ್ಳೆ) ಒಂದಾಗಿದ್ದು, ಐಬೋಕ್ಲು ಎಂಬ ಜನಾಂಗ ಸಂಪೂರ್ಣವಾಗಿ ನಶಿಸಿ ಹೋದ ಕಾರಣ ಇದೀಗ ಕೊಡವರು ಸೇರಿದಂತೆ ಜನಾಂಗವಾರು ಜಮ್ಮಾ ಪಡೆದ 7 ಅಧಿಕೃತ ಸಮುದಾಯಗಳು ಮಾತ್ರ ಕೊಡಗಿನಲ್ಲಿ ಅಸ್ತಿತ್ವದಲ್ಲಿವೆ” ಎಂದು ಪ್ರೊ. ವಿಜಯ್ ಪೂಣಚ್ಚ ಚರಿತ್ರೆಯನ್ನು ಉಲ್ಲೇಖಿಸಿ ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಶೈಕ್ಷಣಿಕ ಸಹಾಯಧನ ಬಿಡುಗಡೆಗೆ ಒತ್ತಾಯಿಸಿ, ಕಟ್ಟಡ ಕಾರ್ಮಿಕರ ಪ್ರತಿಭಟನೆ
ಮುಖ್ಯ ಅತಿಥಿ ವಿರಾಜಪೇಟೆ ಶಾಸಕರು ಮತ್ತು ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ ಮಾತನಾಡಿ, “ಕೊಡವ ಮುಸಲ್ಮಾನರಿಗೂ ಕೊಡಗಿನ ಮಣ್ಣಿಗೂ ಅವಿನಾಭಾವ ಸಂಬಂಧವಿದೆ. ಕೊಡಗಿನ ಪ್ರಗತಿಗೆ ಇವರ ಕೊಡುಗೆಯು ಅಪಾರ ಮಟ್ಟದಲ್ಲಿದೆ. ಕೊಡಗಿನಲ್ಲಿ ಹುಟ್ಟಿ ಬೆಳೆದವರು ಕೊಡವ ಮುಸ್ಲಿಮರ ಆತ್ಮೀಯ ಸಂಬಂಧವನ್ನು ಹೊರತುಪಡಿಸಲು ಸಾಧ್ಯವೇ ಇಲ್ಲ. ಜಿಲ್ಲೆಯ ಕೋಮು ಸಾಮರಸ್ಯ ಕಾಪಾಡುವಲ್ಲಿಯೂ ಕೊಡವ ಮುಸ್ಲಿಮರ ಪಾತ್ರ ದೊಡ್ಡದಿದೆ. ಮುಂದೆಯೂ ಕೊಡಗಿನ ಸರ್ವ ಧರ್ಮಿಯರ ನಡುವಿನ ಅನ್ಯೋನ್ಯತೆ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಕೊಡವ ಮುಸಲ್ಮಾನರು ಎದುರುಸುತ್ತಿರುವ ಸಾಮಾಜಿಕ ಸಮಸ್ಯೆ ಬಗ್ಗೆ ತನಗೆ ಅರಿವಿದ್ದು, ಎಲ್ಲ ನ್ಯಾಯೋಚಿತ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಈಡೇರಿಸಲು ಜನಪ್ರತಿನಿಧಿಯಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ” ಎಂದು ಭರವಸೆ ನೀಡಿದರು.
ಮಂಡೆಂಡ ಎಂ ಮುಶ್ರಫ್ ಕಿರಾಅತ್, ಸಂಸ್ಥೆಯ ಉಪಾಧ್ಯಕ್ಷ ಡಾ. ಜೋಯಿಪೆರ ಎ. ಕುಂಜ್ಹಬ್ದುಲ್ಲಾ, ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಮುಸ್ಕಾನ್ ಸೂಫಿ, ಶರ್ಫುದ್ದೀನ್ ಸೇರಿದಂತೆ ಇತರರು ಇದ್ದರು.