ಅತ್ಯಾಚಾರಕ್ಕೊಳಗಾಗಿ ರಕ್ತಸ್ರಾವ ಸ್ಥಿತಿಯಲ್ಲಿದ್ದ 12 ವರ್ಷದ ಬಾಲಕಿಯೊಬ್ಬಳು ಅರೆಬೆತ್ತಲೆ ಸ್ಥಿತಿಯಲ್ಲಿ ಮನೆಮನೆಗೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದ ದೃಶ್ಯ ಮಧ್ಯಪ್ರದೇಶ ಉಜ್ಜಯಿನಿಯಿಂದ ಸುಮಾರು 15 ಕಿಮೀ ದೂರದಲ್ಲಿರುವ ಬದ್‌ನಗರ ರಸ್ತೆಯಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬಾಲಕಿ ಸಹಾಯಕ್ಕಾಗಿ ಮನೆ ಮುಂದೆ ಇದ್ದ ಜನರನ್ನು ಬೇಡಿದರೂ ಮಾನವೀಯತೆ ಮರೆತು ಕನಿಕರ ತೋರದ ಜನ ಸಹಾಯ ನಿರಾಕರಿಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸಹಾಯಕ್ಕೆ ಅಂಗಲಾಚಿದಾಗ ಮನೆ ಮುಂದೆ ಇದ್ದ ಒಬ್ಬ ವ್ಯಕ್ತಿಯಂತೂ ಆ ಬಾಲಕಿಯನ್ನು ಓಡಿಸುತ್ತಿರುವುದು ಕಂಡು ಬಂದಿದೆ.
ಹುಡುಗಿ, ಅರೆ ಬೆತ್ತಲೆ ಸ್ಥಿತಿಯಲ್ಲಿಯೇ ಬೀದಿಗಳಲ್ಲಿ ಅಲೆದಾಡುತ್ತಾ, ಅಂತಿಮವಾಗಿ ಆಶ್ರಮವನ್ನು ತಲುಪಿದಳು. ಅಲ್ಲಿನ ಅರ್ಚಕರೊಬ್ಬರು ಲೈಂಗಿಕ ದೌರ್ಜನ್ಯದ ಶಂಕೆ ವ್ಯಕ್ತಪಡಿಸಿ, ಟವೆಲ್‌ನಿಂದ ಹೊದಿಸಿ ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಆಕೆ ಅತ್ಯಾಚಾರಕ್ಕೆ ಒಳಗಾಗಿರುವುದು ದೃಢಪಟ್ಟಿದೆ.
ತೀವ್ರ ಗಾಯಗೊಂಡ ಬಾಲಕಿಯನ್ನು ಇಂದೋರ್ ಆಸ್ಪತ್ರೆಗೆ ಸೇರಿಸಲಾಗಿದೆ. ಆಕೆಗೆ ರಕ್ತದ ಅವಶ್ಯಕತೆ ಇದ್ದಾಗ ಪೊಲೀಸ್ ಸಿಬ್ಬಂದಿ ಸಹಾಯ ಮಾಡಿದ್ದಾರೆ. ಸದ್ಯ ಬಾಲಕಿಯ ಸ್ಥಿತಿ ಸುಧಾರಿಸಿದೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? 70 ನ್ಯಾಯಮೂರ್ತಿಗಳ ನೇಮಕ ಬಾಕಿಯುಳಿಸಿಕೊಂಡಿರುವ ಕೇಂದ್ರ: ಸುಪ್ರೀಂ ಕೋರ್ಟ್ ಆಕ್ರೋಶ
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹುಡುಗಿಯ ಹೆಸರು ಮತ್ತು ವಿಳಾಸವನ್ನು ಕೇಳಿದಾಗ, ಅವಳು ಸ್ಪಷ್ಟವಾಗಿ ಉತ್ತರಿಸಲು ಸಾಧ್ಯವಾಗಲಿಲ್ಲ.
ಅಪರಿಚಿತ ಆರೋಪಿಗಳ ವಿರುದ್ಧ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.
“ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ. ವೈದ್ಯಕೀಯ ಪರೀಕ್ಷೆಯು ಅತ್ಯಾಚಾರವನ್ನು ದೃಢಪಡಿಸಿದೆ. ನಾವು ವಿಶೇಷ ತನಿಖಾ ತಂಡವನ್ನು ರಚಿಸಿದ್ದೇವೆ. ಯಾವುದೇ ಮಾಹಿತಿ ಸಿಕ್ಕರೆ ಪೊಲೀಸರಿಗೆ ತಿಳಿಸುವಂತೆ ನಾವು ಜನರಿಗೆ ಮನವಿ ಮಾಡುತ್ತೇವೆ” ಎಂದು ಉಜ್ಜಯಿನಿ ಪೊಲೀಸ್ ಮುಖ್ಯಸ್ಥ ಸಚಿನ್ ಶರ್ಮಾ ತಿಳಿಸಿದ್ದಾರೆ.
“ಬಾಲಕಿಯು ಎಲ್ಲಿಂದ ಬಂದಳು ಎಂದು ನಮಗೆ ನಿಖರವಾಗಿ ಹೇಳಲು ಸಾಧ್ಯವಾಗಲಿಲ್ಲ. ಆದರೆ ಅವಳ ಉಚ್ಚಾರಣೆಯು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನವಳು ಎಂದು ಸೂಚಿಸುತ್ತದೆ” ಎಂದು ಸಚಿನ್ ಶರ್ಮಾ ತಿಳಿಸಿದ್ದಾರೆ.
ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ 2019 ಮತ್ತು 2021 ರ ನಡುವೆ ಅತಿ ಹೆಚ್ಚು ಮಹಿಳೆಯರು ಮತ್ತು ಬಾಲಕಿಯರ ನಾಪತ್ತೆ ಪ್ರಕರಣಗಳು ವರದಿಯಾಗಿವೆ. ಅಲ್ಲದೆ, ಮಧ್ಯಪ್ರದೇಶ ರಾಜ್ಯದಲ್ಲಿ 2021ರ ವರ್ಷದಲ್ಲಿ ದೇಶದಲ್ಲೇ ಹೆಚ್ಚಿನ ಅತ್ಯಾಚಾರದ ಘಟನೆಗಳು ವರದಿಯಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿಅಂಶಗಳ ಪ್ರಕಾರ 6,462 ವರದಿಗಳು ದಾಖಲಾಗಿದೆ. ಅವುಗಳಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಅಪ್ರಾಪ್ತರ ವಿರುದ್ಧದ ಅಪರಾಧಗಳಾಗಿವೆ. ಈ ಸಂಖ್ಯೆಯು ದಿನಕ್ಕೆ 18 ಅತ್ಯಾಚಾರಗಳೆಂದು ಸಾಬೀತುಪಡಿಸುತ್ತದೆ.