ಕಾವೇರಿ ನೀರು ನಿಯಂತ್ರಣ ಸಮಿತಿಯು 3000 ಕ್ಯೂಸೆಕ್ ನೀರನ್ನು ಹರಿಸಲು ಆದೇಶಿಸಿದೆ. ಈ ಬಗ್ಗೆ ಕಾನೂನು ತಂಡದೊಂದಿಗೆ ಚರ್ಚಿಸಿದ್ದು ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಕಾನೂನು ತಂಡ ಸಲಹೆ ನೀಡಿದೆ. ನೀರು ಬಿಡಲು ನಮ್ಮ ಬಳಿ ನೀರಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬುಧವಾರ ಚಾಮರಾಜನಗರದ ಮಲೈ ಮಹದೇಶ್ವರ ಬೆಟ್ಟದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, “ಮಳೆ ಕೈಕೊಟ್ಟು 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಮಹದೇಶ್ವರನಲ್ಲಿ ಮಳೆಗಾಗಿ, ರಾಜ್ಯದ ಜನರಿಗೆ, ರೈತರಿಗೆ ಸೌಖ್ಯವಾಗಲಿ ಎಂದು ಪ್ರಾರ್ಥಿಸಿದ್ದೇನೆ” ಎಂದು ತಿಳಿಸಿದರು.
ಬಂದ್ : ಯಾರಿಗೂ ತೊಂದರೆಯಾಗಬಾರದು
ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಬಗ್ಗೆ ಮಾತನಾಡಿ, “ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶವಿದೆ. ಆದರೆ ಇತರರಿಗೆ ತೊಂದರೆಯಾಗಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ನಾವು ಈ ಆದೇಶ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತೇವೆ” ಎಂದರು.