ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಂದು ಸಾವಿರ ಹೊಸ ಮದ್ಯದಂಗಡಿ ಸ್ಥಾಪಿಸುವುದನ್ನು ವಿರೋಧಿಸಿ ಅಕ್ಟೋಬರ್ 1 ರಂದು ಅಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂದು ಮದ್ಯ ನಿಷೇಧ ಅಂದೋಲನದ ಸಂಚಾಲಕಿ ಮೋಕ್ಷಮ್ಮ ಹೇಳಿದರು.
ರಾಯಚೂರಿನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ಕಳೆದ 07 ವರ್ಷಗಳಿಂದ ರಾಜ್ಯದಲ್ಲಿ ಮದ್ಯವನ್ನು ಸಂಪೂರ್ಣ ನಿಷೇಧಿಸುವಂತೆ ಒತ್ತಾಯಿಸಿ ಅನೇಕ ಹಂತದ ಹೋರಾಟಗಳನ್ನು ನಡೆಸಲಾಗಿದೆ. ಹೈಕೋರ್ಟ್ ಕೂಡ ಅಕ್ರಮ ಮದ್ಯ ಮಾರಾಟ ತಡೆಯಲು ಸೂಚನೆ ನೀಡಿದೆ. ಆದರೂ ರಾಜ್ಯ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಾರಾಟಕ್ಕೆ ಪರವಾನಗಿ ನೀಡಲು ಮುಂದಾಗಿರುವುದು ಖಂಡನಾರ್ಹವಾಗಿದೆ” ಎಂದರು.
“ಬಡ ಜನರ ಉದ್ದಾರ ಮಾಡುವದಾಗಿ ಅನೇಕ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಜನಪರ ಕಾರ್ಯನಿರ್ವಹಿಸುತ್ತಿದ್ದ ಸರ್ಕಾರ ಏಕಾಏಕಿ ಇಂತಹ ನಿರ್ಧಾರ ಕೈಗೊಂಡಿರುವುದು ಶೋಚನೀಯ. ಮದ್ಯಸೇವೆನೆಯಿಂದ ಈಗಾಗಲೆ ಬಹುತೇಕ ಕುಟುಂಬಗಳು ಬೀದಿಗೆ ಬಂದಿವೆ. ನಿತ್ಯ ನಡೆಯುವ ರಸ್ತೆ ಅಪಘಾತಗಳಿಗೂ ಮದ್ಯಸೇವೆನೆ ಕಾರಣವೆಂದು ಸಮೀಕ್ಷೆ ಹೇಳುತ್ತಿದೆ. ಆದರೆ ಸರ್ಕಾರಕ್ಕೆ ಆದಾಯ ಕಂಡುಕೊಳ್ಳಲು ಮದ್ಯವನ್ನೇ ನಂಬಿಕೊಂಡಿರುವುದು ವಿರ್ಯಾಸವೇ ಸರಿ” ಎಂದು ಬೇಸರ ವ್ಯಕ್ತಪಡಿಸಿದರು.
“ಮದ್ಯದ ಹಣದಿಂದ ಸರ್ಕಾರ ನಡೆಸಬಾರದೆಂದು ಹೇಳಿರುವ ಮಹಾತ್ಮಗಾಂಧಿ ಹೇಳಿಕೆಗೆ ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ. ಹಾಗಾಗಿ ಮಹಾತ್ಮಗಾಂಧಿ ಜಯಂತಿಯಂದು ಪುತ್ಥಳಿಗೆ ಮಾಲಾರ್ಪಣೆ ಮಾಡಲು ಬಿಡುವದಿಲ್ಲ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬರಪರಿಹಾರಕ್ಕೆ ಕೃಷಿ ಕೂಲಿಕಾರರ ಸಂಘ ಆಗ್ರಹ
ಮತ್ತೋರ್ವ ಸಂಚಾಲಕಿ ವಿದ್ಯಾಪಾಟೀಲ್ ಮಾತನಾಡಿ, “ಸರ್ಕಾರದ ಸಚಿವರು, ಶಾಸಕರುಗಳಿಗೆ ಮಹಾತ್ಮಗಾಂಧಿ ಪುತ್ಥಳಿಯನ್ನು ಮುಟ್ಟುವ ನೈತಿಕತೆಯಿಲ್ಲ. ಮಹಾತ್ಮಗಾಂಧಿ ಜಯಂತಿಯಂದು ಗಾಂಧಿ ಪ್ರತಿಮೆಗೆ ಹಾರ ಹಾಕದಂತೆ ಪ್ರತಿಭಟನೆ ನಡೆಸುತ್ತೇವೆ. ಸರ್ಕಾರವೇ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ. ಒಂದು ಗ್ಯಾರಂಟಿ ಯೋಜನೆ ಕೊಟ್ಟು ಮತ್ತೊಂದಡೆ ಕುಡಿಯಲು ಮದ್ಯದಂಗಡಿಗಳನ್ನು ಸ್ಥಾಪಿಸಲು ಹೊರಟಿರುವುದು ಖಂಡನೀಯ. ಕೂಡಲೇ ಚಿಂತನೆಯನ್ನು ಕೈಬಿಡಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಯಲಿದೆ” ಎಂದರು.
ಈ ಸಂದರ್ಭದಲ್ಲಿ ಡಾ. ಶಾರದಾ ಹುಲಿನಾಯಕ, ಸುಶೀಲಮ್ಮ ಯಾದಗಿರಿ, ಎಂ ಆರ್ ಭೇರಿ, ರೇಣುಕಾ ಇದ್ದರು.