ಬೀದರ್ ತಾಲೂಕಿನ ರೇಕುಳಗಿ ಗ್ರಾಮ ಪಂಚಾಯತಿಯಲ್ಲಿ ನಕಲಿ ಅಧ್ಯಕ್ಷ, ಉಪಾಧ್ಯಕ್ಷ, ಹಾಗೂ ಸದಸ್ಯರ ಹಾವಳಿ ಹೆಚ್ಚಾಗಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಮೂಲ ಸದಸ್ಯರ ಸದಸ್ಯತ್ವ ರದ್ದುಪಡಿಸಬೇಕೆಂದು ಅದೇ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕೆಲ ಸದಸ್ಯರು ಒತ್ತಾಯಿಸಿದರು.
ಈ ಕುರಿತು ಬೀದರ್ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದ ಅವರು, “ರೇಕುಳಗಿ ಗ್ರಾಮ ಪಂಚಾಯತಿಯಲ್ಲಿ ಚುನಾಯಿತ ಸದಸ್ಯರ ಬದಲಾಗಿ ಅವರ ಕುಟುಂಬಸ್ಥರೇ ಪಂಚಾಯತಿ ಸಭೆಗಳಲ್ಲಿ ಹಾಜರಾಗಿ ಅಧಿಕಾರ ಚಲಾಯಿಸುತ್ತಿದ್ದಾರೆ. ಕೂಡಲೇ ಗ್ರಾ.ಪಂ.ನಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಿ ತಪ್ಪಿಸ್ಥರ ಮೇಲೆ ಕಠಿಣ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.
“ರೇಕುಳಗಿ ಗ್ರಾಮ ಪಂಚಾಯತಿನಲ್ಲಿ ಒಟ್ಟು 20 ಸದಸ್ಯರಿದ್ದಾರೆ. ಅದರಲ್ಲಿ 10 ಜನ ಮಹಿಳಾ ಸದಸ್ಯರು ಹಾಗೂ 10 ಜನ ಪುರುಷ ಸದಸ್ಯರಿದ್ದಾರೆ. ಆದರೆ ಮಹಿಳಾ ಸದಸ್ಯರನ್ನು ಸಭೆಗೆ ಕರೆ ತರಲಾಗದೆ, ಮಹಿಳಾ ಸದಸ್ಯರ ಬದಲಾಗಿ ಅವರ ಮಗ, ಅಳಿಯ ಮತ್ತು ಪತಿ ಅವರು ಸಭೆಗೆ ಹಾಜರಾಗಿ ಪಂಚಾಯತನಲ್ಲಿ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ಗ್ರಾಮ ಪಂಚಾಯತ್ ನಲ್ಲಿ ಅಧಿಕಾರ ದುರ್ಬಳಕೆ ನಡೆಯುತ್ತಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಹಿರಿಯ ನಾಗರಿಕರನ್ನು ಗೌರವದಿಂದ ನೋಡಿಕೊಳ್ಳಿ- ಎಸ್‌ಪಿ ಚನ್ನಬಸವಣ್ಣ
ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ. ಅಧ್ಯಕ್ಷ ಎಂ.ಡಿ.ಫಸಿ ಪಟೇಲ್, ಉಪಾಧ್ಯಕ್ಷ ಶಾಂತಮ್ಮ ಟಿ, ಸದಸ್ಯರಾದ ಕ್ರಿಸ್ಟೋಫರ್, ಪ್ರಕಾಶ ಭಾಲೆ, ಶಮೀಮ್ ಬೇಗಂ, ಶಾಂತಮ್ಮ ಜಿ. ಶಕ್ಕುಬಾಯಿ ಇದ್ದರು.