- ಚಾಮರಾಜನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಿದ್ದರಾಮಯ್ಯ
- ನರೇಗಾ ಯೋಜನೆಯಲ್ಲಿ 150 ದಿನ ಕೆಲಸ ಕೊಡಬೇಕು: ಸಿಎಂ ಸೂಚನೆ
ಬರಗಾಲದ ಕಾರಣದಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ವಿದ್ಯುತ್ ಉತ್ಪಾದನೆ ಮತ್ತು ಸರಬರಾಜಿನಲ್ಲಿ ಕೊರತೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಚಾಮರಾಜನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತಾಡಿದ ಅವರು, “ಜೂನ್‌ನಿಂದ ಆಗಸ್ಟ್‌ವರೆಗೂ ಅಗತ್ಯವಾದಷ್ಟು ಮಳೆ ಆಗದ ಕಾರಣದಿಂದ ಬರ ಮತ್ತು ಸಂಕಷ್ಟದ ಪರಿಸ್ಥಿತಿ ಇದೆ. 161 ತೀವ್ರ ಬರಗಾಲ, 34 ತಾಲ್ಲೂಕುಗಳಲ್ಲಿ ಸಾಧಾರಣ ಬರಗಾಲದ ಸ್ಥಿತಿ ಇದೆ. ಇದಕ್ಕೆ ಇನ್ನಷ್ಟು ತಾಲ್ಲೂಕುಗಳು ಸೇರಬಹುದು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
“ಕೆಲಸ ಹುಡುಕಿಕೊಂಡು ವಲಸೆ ಹೋಗುವ, ಗುಳೆ ತೆರಳುವ ಸ್ಥಿತಿ ಬಾರದಂತೆ, ನರೇಗಾ ಯೋಜನೆಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. 150 ದಿನ ಕೆಲಸ ಕೊಡಬೇಕು. ಉದ್ಯೋಗ ಸೃಷ್ಟಿಯ ಇತರೆ ಸಾಧ್ಯತೆಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕು” ಎಂದರು.
“ಮುಂದಿನ ದಿನಗಳಲ್ಲಿ ಜಾನವಾರುಗಳಿಗೆ ನೀರು, ಮೇವು ಕೊರತೆ ಆಗಬಾರದು. ಹೀಗಾಗಿ ಈಗಿನಿಂದಲೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಹೊರ ರಾಜ್ಯಗಳಿಗೆ ಮೇವು ಹೋಗದಂತೆ ತಡೆಯಬೇಕು. ರಾಸುಗಳಿಗೆ ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಅಗತ್ಯ ಎಲ್ಲ ಲಸಿಕೆ ಮತ್ತು ಔಷಧಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು” ಎಂದು ಸೂಚಿಸಿದರು.
“ಕೃಷಿ ಇಲಾಖೆ ರೈತರಿಗೆ ಮತ್ತೆ ಮತ್ತೆ ಬೀಗ, ಗೊಬ್ಬರ, ಔಷಧಿ ಸರಬರಾಜು ಮಾಡಬೇಕು. ಒಮ್ಮೆ ಕೊಟ್ಟ ಬಳಿಕ ಕೈಕಟ್ಟಿ ಕೂರಬಾರದು. ಯಾವುದೇ ಕಾರಣಕ್ಕೆ ಬೆಳೆಹಾನಿ ಸಂಭವಿಸಿದರೆ ಮತ್ತೆ ಹೊಸದಾಗಿ ರೈತರಿಗೆ ಇವೆಲ್ಲವನ್ನೂ ವಿತರಿಸಬೇಕು. ಪರ್ಯಾಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು” ಎಂದು ಸಲಹೆ ನೀಡಿದರು.
“2.90 ಲಕ್ಷ ಪಡಿತರ ಚೀಟಿಗಳಿದ್ದೂ ಇನ್ನೂ 1.24 ಲಕ್ಷ ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿಯ ಹಣ ಇನ್ನೂ ತಲುಪಿಲ್ಲ ಏಕೆ ? ಲೋಪಗಳನ್ನು ಸರಿಪಡಿಸಲು 3 ತಿಂಗಳಾದರೂ ಏಕೆ ಆಗಿಲ್ಲ ಎಂದು ಮುಖ್ಯಮಂತ್ರಿಗಳು ಆಹಾರ ಇಲಾಖೆಯ ಅಧಿಕಾರಿಯನ್ನು ಖಾರವಾಗಿ ಪ್ರಶ್ನಿಸಿ, ಸರ್ಕಾರದ ಸವಲತ್ತು ಪ್ರತಿಯೊಬ್ಬರಿಗೂ ತಲುಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ತಕ್ಷಣ ಏನೇ ಲೋಪಗಳಿದ್ದರೂ ಬಗೆಹರಿಸಿ ಜನರಿಗೆ ಸವಲತ್ತು ತಲುಪಿಸಿ, ಇಲ್ಲದಿದ್ದರೆ ಕ್ರಮ ಎದುರಿಸಲು ಸಿದ್ದರಾಗಿ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಮಧ್ಯಪ್ರವೇಶಿಸಲಿ- ಕಾವೇರಿ ಬಿಕ್ಕಟ್ಟು ಬಗೆಹರಿಸಲಿ
“ಚಾಮರಾಜನಗರ ಜಿಲ್ಲೆಯಲ್ಲಿ ಬೆಟ್ಟ ಗುಡ್ಡಗಳು ಮತ್ತು ಅರಣ್ಯ ಪ್ರದೇಶಗಳು ಇರುವುದರಿಂದ ಹಗಲು ಹೊತ್ತಿನಲ್ಲೇ 3 ಫೇಸ್ ವಿದ್ಯುತ್ ನಿರಂತರ 7 ಗಂಟೆ ಇರುವಂತೆ ಮಾಡಿ ಎನ್ನುವ ಬೇಡಿಕೆ ರೈತರಿಂದ ಇದೆ. ಆದ್ದರಿಂದ ಈ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಿ” ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
“ಎಸಿ, ಡಿಸಿ ಕೋರ್ಟ್‌ಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸಬೇಕು ಎನ್ನುವ ಸೂಚನೆಯನ್ನು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದ್ದೆ. ಆ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ” ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
“ಆರೋಗ್ಯ ಸೂಚ್ಯಂಕದಲ್ಲಿ ಚಾಮರಾಜನಗರ ಜಿಲ್ಲೆ ಎಷ್ಟನೇ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿಗಳ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಆರೋಗ್ಯಾಧಿಕಾರಿಗಳು, ಸದ್ಯ 21ನೇ ಸ್ಥಾನದಲ್ಲಿದೆ. ಮುಂದಿನ ಒಂದು ವರ್ಷದಲ್ಲಿ 10ನೇ ಸ್ಥಾನಕ್ಕೆ ತರುವ ಉದ್ದೇಶ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಸಾರ್ವಜನಿಕರಲ್ಲಿ ಜಾಗ್ರತೆ ಮೂಡಿಸುವುದರಿಂದ ಹಿಡಿದು ಪ್ರತೀ ತಾಲ್ಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪದೇ ಪದೇ ಭೇಟಿ ನೀಡುವುದೂ ಸೇರಿದಂತೆ ಹಲವು ಹಂತದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಇವೆಲ್ಲದರಿಂದ ಒಂದು ವರ್ಷದ ಅಂತರದಲ್ಲಿ ಜಿಲ್ಲೆಯನ್ನು 10ನೇ ಸ್ಥಾನಕ್ಕೆ ಏರಿಸಬಹುದು ಎನ್ನುವ ಆತ್ಮವಿಶ್ವಾಸವಿದೆ” ಎಂದು ತಿಳಿಸಿದರು.