ಒಂದೊಂದು ಅತ್ಯಾಚಾರ ಕೊಲೆಯ ಸುದ್ದಿಗಳು ಬಂದಾಗಲೂ ಅವುಗಳ ಹಿಂದಿನ ಭೀಕರ ಭೀಭತ್ಸಗಳು ಒಂದನ್ನು ಮತ್ತೊಂದು ಮೀರಿಸಿ ಬೆಚ್ಚಿ ಬೀಳಿಸುತ್ತಿವೆ. ಆರೋಪ ಅಪ್ಪಿ ತಪ್ಪಿ ಸಾಬೀತಾಗಿ ಶಿಕ್ಷೆ ಪಡೆದರೂ ʼಸನ್ನಡತೆʼ ನೆಪದಲ್ಲಿ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ. ಇಂತಹ ಹೀನ ನಿದರ್ಶನಗಳು ಕಾಮಾಂಧರಿಗೆ, ದ್ವೇಷ ಕಾರುವವರಿಗೆ ಯಾವ ಸಂದೇಶ ನೀಡುತ್ತಿವೆ?
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ದಲಿತ ಮಹಿಳೆಯೊಬ್ಬರು, ತನಗೆ ಕೆಲವು ಪುರುಷರು ಕಿರುಕುಳ ನೀಡುತ್ತಿದ್ದಾರೆ ಮತ್ತು ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ನೀಡಲು ಸ್ಥಳೀಯ ಝಂಘೈ ಪೊಲೀಸ್ ಠಾಣೆಗೆ ಹೋಗಿದ್ದರು. ಆಗ ಆರೋಪಿಗಳನ್ನು ಬಂಧಿಸಲು ಹೋಗುವ ಎಂದು ನೆಪ ಹೇಳಿ ಮಹಿಳೆಯನ್ನು ತನ್ನ ಜೊತೆ ಕರೆದೊಯ್ದ ಠಾಣಾ ಉಸ್ತುವಾರಿ ಸುಧೀರ್ ಕುಮಾರ್ ಪಾಂಡೆ ಅಮಲು ಬರಿಸುವ ಪಾನೀಯ ನೀಡಿ ಕಾರಿನಲ್ಲಿಯೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ದೂರು ಕೊಡಲು ಬಂದ ಮಹಿಳೆಗೆ ಅಭಯ ನೀಡಬೇಕಾದ ಪೊಲೀಸರೇ ಆಕೆಯನ್ನು ಹರಿದು ಮುಕ್ಕಿದರೆ ಮಹಿಳೆಗೆ ರಕ್ಷಣೆ ಎಲ್ಲಿದೆ?
ಮಧ್ಯಪ್ರದೇಶದ ಬದ್ನಗರ್ ಸಿಸಿ ಟಿವಿ ಕ್ಯಾಮೆರಾವೊಂದರಲ್ಲಿ ಸೆರೆಯಾದ ದೃಶ್ಯ ನೋಡಿದ ನಾವೆಲ್ಲ ಈ ಸಮಾಜದ ಭಾಗವಾಗಿದ್ದೇವಲ್ಲ ಎಂದು ನಾಚಿಕೆಯಿಂದ ತಲೆ ತಗ್ಗಿಸಬೇಕಿದೆ. ಹನ್ನೆರಡರ ಬಾಲೆ ಅತ್ಯಾಚಾರಕ್ಕೆ ಈಡಾಗಿ ರಕ್ತಸಿಕ್ತ ಅರೆಬೆತ್ತಲೆ ಸ್ಥಿತಿಯಲ್ಲಿ ಬೀದಿ ಬೀದಿಗಳಲ್ಲಿ ಸಹಾಯಕ್ಕೆ ಅಂಗಲಾಚುತ್ತಾಳೆ. ಮಾನವೀಯತೆಯನ್ನು ಕಳೆದುಕೊಂಡಿರುವ ಜನ ಆಕೆಗೆ ನೆರವಾಗುವ ಬದಲು ಅಟ್ಟಿ ಓಡಿಸಿದ್ದಾರೆ. ಎಂಟು ಕಿಲೋಮೀಟರ್ ದೂರ, ಸುಮಾರು ಎರಡು ಗಂಟೆ ಸಹಾಯಕ್ಕಾಗಿ ಅಲೆದಾಡಿದ ಆ ಪುಟ್ಟ ಬಾಲಕಿ ಆಶ್ರಮವೊಂದರ ಬಳಿ ಬಂದಾಗ ಅಲ್ಲಿನ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ನಮ್ಮ ಸಮಾಜ ಅದೆಷ್ಟು ಕ್ರೂರಿಯೂ ನಿರ್ದಯಿಯೂ ಆಗಿದೆ ಎಂಬುದಕ್ಕೆ ಅತ್ಯಾಚಾರಕ್ಕೆ ಬಲಿಯಾದ ಹೆಣ್ಣು ಮಗು ಎಂಟು ಕಿಲೋಮೀಟರ್ ದೂರದವರೆಗೆ ಸಹಾಯಕ್ಕಾಗಿ ಅಂಗಲಾಚುತ್ತಾ ಸಾಗಿರುವುದೇ ಸಾಕ್ಷಿ. ಮಹಾನ್ ರಾಷ್ಟ್ರೀಯ ಲಜ್ಜೆ.
ಮೂರನೆಯ ಘಟನೆ, ದೆಹಲಿಯ ದೇವಸ್ಥಾನವೊಂದರ ಸನಿಹದ್ದು. ಅಂಗವಿಕಲ ಯುವಕನೊಬ್ಬ ದೇವರ ಪ್ರಸಾದ ಸ್ವೀಕರಿಸಿದ್ದಾನೆ. ಆತ ಮುಸ್ಲಿಂ ಎಂದು ಗೊತ್ತಾದ ಜನ ಆತನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಆ ಯುವಕ ಅಲ್ಲೇ ಪ್ರಾಣ ಬಿಟ್ಟಿದ್ದಾನೆ. ದೇವರ ಬಗ್ಗೆ ನಿಜವಾದ ಭಕ್ತಿ ಶ್ರದ್ದೆ ಇರುವ ಜನ ಇಷ್ಟು ಹೀನವಾಗಿ, ಪರಮ ಕ್ರೌರ್ಯದಿಂದ ನಡೆದುಕೊಳ್ಳಲು ಸಾಧ್ಯವೇ?
ಅಪರಾಧವನ್ನು ತಡೆಯುವ ಬದಲು ವಿಡಿಯೊ ಚಿತ್ರೀಕರಣವೇ ಮುಖ್ಯವೆಂದು ಭಾವಿಸಿ ಅದರಲ್ಲಿ ತೊಡಗುವಷ್ಟು ವಿಕೃತಗೊಂಡಿವೆ ನಮ್ಮ ಮನಸ್ಸುಗಳು. ಈ ಕಡು ಮುಸ್ಲಿಂ ದ್ವೇಷ ಯಾರ ಕೊಡುಗೆ? ದೇಶದ ಆಡಳಿತಸೂತ್ರ ಹಿಡಿದವರು ದಿನ ಬೆಳಗಾದರೆ ಆಡುವ ನಂಜಿನ ನುಡಿಮುತ್ತುಗಳು, ಸಂತರ ವೇಷತೊಟ್ಟವರು ಧರ್ಮಸಂಸತ್ತಿನಲ್ಲಿ ಕೊಟ್ಟ ದ್ವೇಷ ಸಂದೇಶದ ಫಲ ಅಲ್ಲವೇ?
ಪ್ರಧಾನಿ ಮೋದಿಜಿಯವರು ʼಜಿ 20ʼ ಸಮ್ಮೇಳನ ಮಾಡಿದ ಖುಷಿಯಲ್ಲಿ ತಮ್ಮ ವರ್ಚಸ್ಸು ವೃದ್ಧಿಗೆ ಗರಿಷ್ಠ ಪ್ರಚಾರ ಗಿಟ್ಟಿಸಿ ಕೊಂಡಿದ್ದಾರೆ. ಸಾಲದೆಂಬಂತೆ ದಿಢೀರ್ ಸಂಸತ್ತಿನ ವಿಶೇಷ ಅಧಿವೇಶನ ಕರೆದು ಮಹಿಳಾ ಮೀಸಲಾತಿ ಮಸೂದೆ ಮಂಡಿಸಿ ಮಹಿಳಾ ಸಬಲೀಕರಣದಲ್ಲಿ ಭಾರತದ ಮೈಲಿಗಲ್ಲು ಎಂದು ಜಗಜ್ಜಾಹೀರಾತು ನೀಡಿಯಾಗಿದೆ. ಮಹಿಳಾ ಸಂಸದರು ಹಾರ ಹಾಕಿ, ಮೀಸಲಾತಿ ಇನ್ನೇನು ಜಾರಿ ಆಗಿಯೇ ಹೋಯ್ತು ಎಂದು ಜೈಕಾರ ಹಾಕಿದರು. ಅತ್ತ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವಕಾಶ ಸಿಕ್ಕಾಗೆಲ್ಲ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವುದು ಸಾಬೀತಾಗಿದೆ ಎಂಬುದು ದೆಹಲಿ ಪೊಲೀಸರ ವರದಿ. ಕನಿಷ್ಠ ಪಕ್ಷ ಬ್ರಿಜ್‌ಭೂಷಣನ ರಾಜೀನಾಮೆ ಪಡೆಯುವ ಅಥವಾ ಅವನನ್ನು ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸುವ ಹೆಂಗರಳನ್ನು ಮೋದಿ ಈವರೆಗೆ ಯಾಕೆ ತೋರಿಲ್ಲ? ಅವರ ಮಹಿಳಾ ಕಳಕಳಿ ಕೇವಲ ಅವಕಾಶವಾದಿಯೇ ಆಷಾಢಭೂತಿತನವೇ? ಸಂಸತ್ತಿನಲ್ಲಿರುವ ಮಹಿಳಾಮಣಿಗಳು ಸ್ವಾಭಾವಿಕವಾಗಿಯೇ ಮೋದಿಯ ಎರಡೆಳೆ ನಾಲಗೆ ವಿರುದ್ಧ ಚಕಾರ ಎತ್ತುತ್ತಿಲ್ಲ.
ಉತ್ತರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿಯಲ್ಲಿ ಹೆಣ್ಣುಮಕ್ಕಳ ಮೇಲೆ ಕಂಡು ಕೇಳರಿಯದಷ್ಟು ದೌರ್ಜನ್ಯಗಳು ನಡೆಯುತ್ತಿವೆ. ಪ್ರಧಾನಿ ಮೋದಿಯಾಗಲಿ, ಕೇಂದ್ರ ಸರ್ಕಾರದ ಒಬ್ಬ ಸಚಿವರಾಗಲಿ ತುಟಿ ಬಿಚ್ಚಿದ ಉದಾಹರಣೆ ಇಲ್ಲ. ದೇಶದಲ್ಲಿ ಇಷ್ಟೆಲ್ಲ ಅನಾಚಾರಗಳು ನಡೆಯುತ್ತಿದ್ದರೂ ಅಮೆರಿಕದ ʼಮಾರ್ನಿಂಗ್ ಕನ್ಸಲ್ಟ್ʼ ಎಂಬ ಸಂಸ್ಥೆ ಮಾತ್ರ ʼಮೋದಿಜಿಯೇ ವಿಶ್ವದ ನಂಬರ್ ವನ್ ನಾಯಕʼ ಎಂಬ ವರದಿಯನ್ನು ಎರಡೆರಡು ತಿಂಗಳಿಗೂ ತಪ್ಪದೇ ನೀಡುತ್ತಿರುವ ಗುಟ್ಟೇನು? ಇದೆಲ್ಲದರ ನಡುವೆ ಅತ್ಯಾಚಾರಕ್ಕೆ ಬಲಿಯಾದ ಅದೆಷ್ಟೋ ಅಸಹಾಯಕ ಹೆಣ್ಣುಮಕ್ಕಳ ಆರ್ತನಾದ ಅರಣ್ಯರೋದನ ಆಗಿರುವುದೇಕೆ ಎಂಬುದು ಅರ್ಥವಾಗುತ್ತಿದೆಯೇ?
ಒಂದೊಂದು ಅತ್ಯಾಚಾರ ಕೊಲೆಯ ಸುದ್ದಿಗಳು ಬಂದಾಗಲೂ ಅವುಗಳ ಹಿಂದಿನ ಭೀಕರ ಭೀಭತ್ಸಗಳು ಒಂದನ್ನು ಮತ್ತೊಂದು ಮೀರಿಸಿ ಬೆಚ್ಚಿ ಬೀಳಿಸುತ್ತಿವೆ. ಆರೋಪ ಅಪ್ಪಿ ತಪ್ಪಿ ಸಾಬೀತಾಗಿ ಶಿಕ್ಷೆ ಪಡೆದರೂ ʼಸನ್ನಡತೆʼ ನೆಪದಲ್ಲಿ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ. ಇಂತಹ ಹೀನ ನಿದರ್ಶನಗಳು ಕಾಮಾಂಧರಿಗೆ, ದ್ವೇಷ ಕಾರುವವರಿಗೆ ಯಾವ ಸಂದೇಶ ನೀಡುತ್ತಿವೆ? ಮಧ್ಯಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರಗಳಿಂದ ಅತ್ಯಂತ ಹೆಚ್ಚು ಅತ್ಯಾಚಾರದ ಪ್ರಕರಣಗಳು ವರದಿಯಾಗುತ್ತಿವೆ. ನಮ್ಮ ನೆಲದಲ್ಲಿ ಯಾಕೆ ಹೀಗೆ ಎಂಬ ಪ್ರಶ್ನೆ ಅಲ್ಲಿನ ಸರ್ಕಾರ, ಪ್ರತಿನಿಧಿಗಳ ಮನಸ್ಸಿನಲ್ಲಿ ಮೂಡಬೇಕಲ್ಲವೇ?
ಹೆಣ್ಣನ್ನು ದೇವತೆಯೆಂದು ವೈಭವೀಕರಿಸಿ ಪೂಜಿಸಿದರೆ ಸಾಲದು, ನಿಜ ಬದುಕಿನಲ್ಲಿ ಆಕೆಯನ್ನು ಘನತೆಯಿಂದ ಸಮಾನತೆಯಿಂದ ನಡೆಸಿಕೊಳ್ಳಬೇಕು. ಪೀಡಕರಿಂದ ರಕ್ಷಣೆ ನೀಡಬೇಕು.

ಗಂಭೀರವಾದ ವಿದ್ಯಮಾನಗಳನ್ನು ಕ್ಷುಲ್ಲಕವಾಗಿ ಪರಿಗಣಿಸದೆ , ಗಂಭೀರವಾಗಿಯೆ ಪರಿಗಣಿಸಿ ಪ್ರಕಟಿಸಿದ್ದೀರಿ.
ಎಂದೂ ಕಾಣದ ಎದೆ ನಡುಗಿಸುವಂತಹ ಭಯಾನಕ ದುಷ್ಕೃತ್ಯಗಳು ಭಾರತವನ್ನು ಆವರಿಸಿದ್ದು , ಖಂಡಿಸಬೇಕಾದವರು ಖಂಡಿಸದೆ ಮೌನಕ್ಕೆ ಜಾರಿರುವುದು ಖಂಡನೀಯ.
ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಹಿಂಸಾಚಾರವನ್ನು ಹತ್ತಿಕ್ಕುವುದರಲ್ಲಿ ಅಲ್ಲಿಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಮಧ್ಯಪ್ರವೇಶಿಸಬೇಕಾದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿದ್ದು “ಮಧ್ಯಪ್ರದೇಶ” ದತ್ತ ತನ್ನ ದೃಷ್ಟಿಯನ್ನು ಹಾಯಿಸುತ್ತಿದೆ.
ಮೋದಿ ಅವರಿಗೆ ಚುನಾವಣೆಯಲ್ಲಿ ಗೆಲ್ಲುವ ತವಕ. ಬೇರೆಲ್ಲವೂ ಬಳಿಕ.
Unless our govts, judicial rules, encouraging entertainments, people’s silence do not change, we stick to live under wrath of criminals crimes that can explode at its peak.