ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ದಂಪತಿಯನ್ನು ಗ್ರಾಮದಿಂದ ಬಹಿಷ್ಕಾರ ಹಾಕಿರುವ ಜಾತಿಗ್ರಸ್ತ ಅಮಾನವೀಯ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಎನ್ ದೇವರಹಳ್ಳಿ ಗ್ರಾಮದ ಸಾವಿತ್ರಮ್ಮ ಮತ್ತು ಆಂಧ್ರ ಪ್ರದೇಶದ ಮಣಿಕಂಠ ಪರಸ್ಪರ ಪ್ರೀತಿಸಿ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮಣಿಕಂಡ ರೆಡ್ಡಿ ಸಮುದಾಯ ಮತ್ತು ಸಾವಿತ್ರಮ್ಮ ಜೋಗಿ ಸಮುದಾಯಕ್ಕೆ ಸೇರಿದ್ದವರಾಗಿದ್ದು, ಇಬ್ಬರೂ ಬೆಂಗಳೂರಿನಲ್ಲಿ ನೆಲೆಸಿದ್ದರು. ದಂಪತಿಗೆ ಇತ್ತೀಚೆಗೆ ಮಗು ಜನಿಸಿತ್ತು. ಹೀಗಾಗಿ, ಸಾವಿತ್ರಮ್ಮ ಅವರ ತವರು ಮನೆಗೆ ದಂಪತಿಗಳು ತೆರಳಿದ್ದಾರೆ. ಈ ವೇಳೆ, ಸಾವಿತ್ರಮ್ಮ ಬಾಣಂತಿ ಎಂಬುದನ್ನೂ ಲೆಕ್ಕಿಸದೇ ಗ್ರಾಮಸ್ಥರು ಅವರಿಗೆ ಊರಿನಿಂದ ಬಹಿಷ್ಕಾರ ಹಾಕಿದ್ದಾರೆ.
ದಂಪತಿಗಳಿಬ್ಬರಿಗೂ ಹುಟ್ಟಿನಿಂದಲೇ ಶ್ರವಣ ಮತ್ತು ವಾಕ್ ದೋಷವಿದೆ ಎಂದು ಹೇಳಲಾಗಿದೆ. ಈ ಹಿಂದೆ, ಮದುವೆಯಾದ ಸಮಯದಲ್ಲಿಯೂ ದಂಪತಿಗಳು ಊರಿಗೆ ತೆರಳಿದ್ದರು. ಆ ವೇಳೆಯೂ ಇಬ್ಬರನ್ನು ಊರಿನಿಂದ ಹೊರಗಟ್ಟಿದ್ದ ಗ್ರಾಮಸ್ಥರು, ಯುವತಿಯ ಪಾಲಕರಿಗೆ 30,000 ರೂ. ದಂಡ ಹಾಕಿದ್ದಾರೆ ಎಂದು ವರದಿಯಾಗಿದೆ.
ಇದೀಗ, ಸಾವಿತ್ರಮ್ಮ ಬಾಣಂತಿಯಾದ್ದರಿಂದ ಮತ್ತೆ ತವರಿಗೆ ತೆರಳಿದ್ದರು. ವಿಷಯ ತಿಳಿದ ಜೋಗಿ ಜನಾಂಗದ ಮುಖಂಡರು ಮತ್ತೆ ಆಕೆಯ ಪಾಲಕರನ್ನು ಕರೆಸಿ ಗಲಾಟೆ ಮಾಡಿದ್ದಾರೆ. ಸಾವಿತ್ರಮ್ಮ ದಂಪತಿಗಳನ್ನು ಊರಿನಿಂದ ಹೊರ ಕಳಿಸದಿದ್ದರೆ,ಪಾಲಕರಿಗೂ ಬಹಿಷ್ಕಾರ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.
ಜಾತಿಗ್ರಸ್ತ ಗ್ರಾಮಸ್ಥರ ದಬ್ಬಾಳಿಕೆಯಿಂದ ನೊಂದ ಸಾವಿತ್ರಮ್ಮ ಮತ್ತು ಮಣಿಕಂಠ ಚಳ್ಳಕೆರೆ ಮೂಗ ಮತ್ತು ಕಿವುಡರ ಶಾಲೆ ತೆರಳಿ ಅಲ್ಲಿನ ಸಿಬ್ಬಂದಿಗೆ ಘಟನೆ ಬಗ್ಗೆ ತಿಳಿಸಿದ್ದಾರೆ. ಅಲ್ಲಿನ ಶಿಕ್ಷಕರು ಅವರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದಯ್ದಿದ್ದಾರೆ. ಬಳಿಕ, ಸ್ಥಳಕ್ಕೆ ತೆರಳಿದ ತಹಶೀಲ್ದಾರ್ ರಹಾನ್ ಪಾಷ ಅವರು ದಂಪತಿಗೆ ಧೈರ್ಯ ಹೇಳಿದ್ದಾರೆ. ಜಾತಿಗ್ರಸ್ತರ ಗ್ರಾಮದ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.