- ‘ಕರ್ನಾಟಕ ಬಂದ್ ಮಾಡದಂತೆ ಸಂಘಟನೆಗಳಿಗೆ ಮನವಿ’
- ‘ಬಂದ್ ಹೆಸರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು’
ಕಾವೇರಿ ವಿಚಾರದಲ್ಲಿ ಬಂದ್ ಮಾಡುವ ಅಗತ್ಯವಿಲ್ಲ. ನ್ಯಾಯಾಲಯ ಕೂಡಾ ಬಂದ್ ಮಾಡಬಾರದು ಎಂದಿದೆ. ಪ್ರತಿಭಟನೆ ಮಾಡಬಹುದು, ಪ್ರತಿಭಟನೆ ಅವರ ಹಕ್ಕು ಎಂದು ಗೃಹಮಂತ್ರಿ ಡಾ. ಜಿ ಪರಮೇಶ್ವರ್ ತಿಳಿಸಿದರು.
ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, “ಕರ್ನಾಟಕ ಬಂದ್ ಮಾಡದಂತೆ ಸಂಘಟನೆಗಳಿಗೆ ಮನವಿ ಮಾಡಿದ್ದೇವೆ. ವಿರೋಧ ಪಕ್ಷಗಳು ರಾಜಕೀಯ ಕಾರಣಕ್ಕೆ ಕರ್ನಾಟಕ ಬಂದ್‌ಗೆ ಬೆಂಬಲ ಕೊಡುತ್ತಿದ್ದಾರೆ” ಎಂದು ಕಿಡಿಕಾರಿದರು.
“ಬಂದ್ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಇಂತಹ ಸಂದರ್ಭದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೋಗಬಾರದು. ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದರೆ ಪೊಲೀಸರು ಸೂಕ್ತವಾದ ಕ್ರಮ ಕೈಗೊಳ್ಳುತ್ತಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಂತಃಕರಣವಿರುವವರ ನಿದ್ದೆಗೆಡಿಸುವ ಮೂರು ಸುದ್ದಿಗಳು
ಬಂದ್ ನಿಂದ 2000 ಕೋಟಿ ನಷ್ಟ
“ಮಂಗಳವಾರ ನಡೆದ ಒಂದು ದಿನದ ಬಂದ್ ನಿಂದಾಗಿ 2000 ಕೋಟಿ ನಷ್ಟವಾಗಿದೆ. ಇವತ್ತು ರಜೆ ಇದೆ. ನಾಳೆಯು ಬಂದ್ ಮಾಡಿದರೆ ಮತ್ತಷ್ಟು ಸಮಸ್ಯೆ ಆಗಲಿದೆ. ಸಂಘಟನೆಗಳು ಸ್ವಯಂ ಪ್ರೇರಿತರಾಗಿ ಬಂದ್ ಮಾಡುತ್ತಿದ್ದಾರಾ ಅಥವಾ ಬೇರೆಯವರು ಅವರ ಮೇಲೆ ಒತ್ತಡ ಹೇರುತ್ತಿದ್ದಾರಾ ಗೊತ್ತಿಲ್ಲ” ಎಂದು ಪ್ರತಿಪಕ್ಷಗಳ ವಿರುದ್ಧ ಕುಟುಕಿದರು.
ಅನುಕೂಲ ಸಿಂಧು ರಾಜಕಾರಣ
“ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾದ ನಂತರ ಸಾಕಷ್ಟು ಜನ ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದಾರೆ. ಈಗ ತತ್ವ ಸಿದ್ದಾಂತ ಎಂಬುದು ಇಲ್ಲ. ಎಲ್ಲ ಅನುಕೂಲ ಸಿಂಧು ರಾಜಕಾರಣ. ಬೇರೆ ಬೇರೆ ಕಡೆಗಳಿಂದ ಪಕ್ಷ ಸೇರ್ಪಡೆಗೆ ಮುಂದಾಗಿದ್ದಾರೆ. ನಮ್ಮ ಜಿಲ್ಲೆಯಲ್ಲೂ ಕೆಲವರು ಆಸಕ್ತಿ ತೋರಿದ್ದಾರೆ. ಎಲ್ಲವನ್ನು ಪರಿಶೀಲನೆ ಮಾಡುತ್ತಿದ್ದೇವೆ” ಎಂದು ಇದೇ ವೇಳೆ ತಿಳಿಸಿದರು.