ಸಮಾನತೆಯ ಉದಾತ್ತ ಸಿದ್ಧಾಂತಗಳನ್ನು ಪ್ರವಾದಿಗಳು ಕೇವಲ ಬೋಧನೆ ಮಾಡಿದ್ದು ಮಾತ್ರವಲ್ಲದೇ, ಪ್ರಾಯೋಗಿಕವಾಗಿ ಜನರ ನಡುವೆ ನೆಲೆಯೂರುವಂತೆ ಮಾಡಿದ್ದರು. ನಾಗರಿಕತೆಯನ್ನು ಉನ್ನತ ಮಟ್ಟಕ್ಕೆ ಏರಿಸಿ, ಅಂದು ಪ್ರಾಯೋಗಿಕವಾಗಿ ತೋರಿಸಿಕೊಟ್ಟದ್ದೇ ಇಂದಿಗೂ ಜೀವಂತವಾಗಿರುವುದಕ್ಕೆ ಕಾರಣ.
ಬರೆಹ : ಎಂ. ಅಶೀರುದ್ದೀನ್ ಮಾಸ್ಟರ್, ಸಾರ್ತಬೈಲ್
ಇಂದು ಇಸ್ಲಾಮಿನ ಅಂತಿಮ ಪ್ರವಾದಿ ಮುಹಮ್ಮದ್ ಜನುಮದಿನ. ಪ್ರವಾದಿ ಮಹಮ್ಮದ್(ಸ)ರು ಜಗತ್ತಿನ ಸಾರ್ವಕಾಲಿಕ ನಾಯಕರಲ್ಲಿ ಅತ್ಯಂತ ಶ್ರೇಷ್ಠರಾಗಿರುತ್ತಾರೆ. ಏಕೆಂದರೆ ಅವರು ಸಾಮಾಜಿಕ, ರಾಜಕೀಯ, ವ್ಯವಹಾರ, ಕೌಟುಂಬಿಕ ಹಾಗೂ ಧಾರ್ಮಿಕ ವಿಚಾರದಲ್ಲಿ ಸರಿಸಮಾನವಾಗಿ ನ್ಯಾಯ ಕಲ್ಪಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ.
ಜಗತ್ತಿನ ನೂರು ಪ್ರಭಾವಿ ವ್ಯಕ್ತಿಗಳನ್ನು ಗುರುತಿಸಿ ಪ್ರವಾದಿ ಮುಹಮ್ಮದರಿಗೆ ಅಗ್ರ ಸ್ಥಾನ ನೀಡಿದ ಇಂಗ್ಲಿಷ್ ಬರಹಗಾರ ಮೈಕಲ್ ಎಚ್. ಹಾರ್ಟ್ ಹೀಗೆ ಹೇಳುತ್ತಾರೆ; “ಜಗತ್ತಿನಲ್ಲಿ ಅತೀ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿಗಳ ಪಟ್ಟಿಯಲ್ಲಿ ಒಂದನೆಯವರಾಗಿ ಮುಹಮ್ಮದ್(ಸ)ರನ್ನು ಆಯ್ಕೆ ಮಾಡಿರುವುದು ಕೆಲವರಿಗೆ ಆಶ್ಚರ್ಯವನ್ನುಂಟು ಮಾಡಿರಬಹುದು. ಕೆಲವರು ಪ್ರಶ್ನಿಸಿಯಾರು, ಆದರೆ ಇತಿಹಾಸದಲ್ಲಿ ಧಾರ್ಮಿಕ ಮತ್ತು ಧರ್ಮೇತರ ಸ್ತರಗಳಲ್ಲಿ ಅತ್ಯಂತ ಯಶಸ್ವಿಯಾದ ಏಕೈಕ ವ್ಯಕ್ತಿ ಅವರು ಮಾತ್ರ” (The Hundred: A ranking of the most Influenced persons in history, Newyork, 1978, P.33)
ಕ್ರಿಸ್ತ ಶಕ 571 ಇಸವಿಯಲ್ಲಿ ಹಿಜರಿ ಕ್ಯಾಲೆಂಡರಿನ ರಬೀವುಲ್ ಅವ್ವಲ್ ತಿಂಗಳ ಹನ್ನೆರಡನೇ ದಿನದಂದು ಅರೇಬ್ಯಾದ ಹಾಶಿಂ ಎಂಬ ಮಧ್ಯಮ ಕುಟುಂಬದಲ್ಲಿ ಮುಹಮ್ಮದ್(ಸ)ರು ಜನಿಸಿದರು. ತಾಯಿಯ ಗರ್ಭದಲ್ಲಿರುವಾಗಲೇ ತಂದೆ ಅಬ್ದುಲ್ಲಾ ತೀರಿಹೋಗಿದ್ದರು. ತಮ್ಮ ಆರನೇ ವಯಸ್ಸಿಗೆ ಅವರ ತಾಯಿ ಆಮಿನಾ ಇಹಲೋಕ ತ್ಯಜಿಸಿದರು. ಅನಾಥ ಬಾಲಕ ಮುಹಮ್ಮದ್ (ಸ)ರನ್ನು ಅಜ್ಜ ಅಬ್ದುಲ್ ಮುತ್ತಲಿಬ್ ರವರು ಬಹಳ ಪ್ರೀತಿಯಿಂದ ಬೆಳೆಸಿದರು. ಅಜ್ಜನ ಅಗಲಿಕೆಯ ನಂತರ ಅವರು ಚಿಕ್ಕಪ್ಪ ಅಬೂತಾಲಿಬರ ಆಶ್ರಯದಲ್ಲಿದ್ದರು. ಚಿಕ್ಕಪ್ಪ ಹೆಸರಾಂತ ವ್ಯಾಪಾರಿಯಾಗಿದ್ದರು. ಸರಕುಗಳೊಂದಿಗೆ ಮಿಸ್ರ್ (ಈಜಿಪ್ಟ್) ಯಮನ್, ಸಿರಿಯಾ ಕಡೆ ಯಾತ್ರೆ ಮಾಡುತ್ತಿದ್ದರು. ಮುಹಮ್ಮದ್ (ಸ) ರು ಅವರ ಜೊತೆಗಿರುತ್ತಿದ್ದರಿಂದ ಸಣ್ಣ ಪ್ರಾಯದಲ್ಲೇ ವ್ಯಾವಹಾರಿಕ ಜ್ಞಾನವನ್ನು ಕರಗತ ಮಾಡಿಕೊಂಡು ಉತ್ತಮ ವ್ಯಾಪಾರಿಯೂ ಆದರು.

ಯೌವ್ವನದಲ್ಲಿ ಅವರ ಸದ್ಗುಣ ಮತ್ತು ಪ್ರಾಮಾಣಿಕತೆಯಿಂದಾಗಿ ಅರೇಬಿಯನ್ ಜನರ ಹೃದಯದಲ್ಲಿ ನೆಲೆಗೊಂಡಿದ್ದರು. ಅವರ ನ್ಯಾಯ ನಿಷ್ಠೆಗೆ ಅಮೀನ್ (ನಂಬಿಕಸ್ಥ) ಸ್ವಾದಿಕ್ (ಸತ್ಯವಂತ) ಎಂಬ ಬಿರುದುಕೊಟ್ಟಿದ್ದರು. ಎಷ್ಟರವರೆಗೆಂದರೆ, ಜನರು ತಮ್ಮ ಅಮೂಲ್ಯ ವಸ್ತುಗಳನ್ನು, ಆಭರಣಗಳನ್ನು, ನಗದನ್ನು ಮುಹಮ್ಮದ್ ಬಳಿ ಭದ್ರವಾಗಿ ಬಿಟ್ಟು ಹೋಗುತ್ತಿದ್ದರು. ಹಾಗೆಯೇ ಮುಹಮ್ಮದ್ ಹೇಳಿದ ವಿಷಯಗಳನ್ನು ನಿಸ್ಸಂಶಯ ನಂಬುತ್ತಿದ್ದರು. ಅವರ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸುತಿದ್ದರು.
ಮುಹಮ್ಮದ್ (ಸ) ಅಂದಿನ ಸಾಂಪ್ರದಾಯಿಕ ಯುವಕರಿಗಿಂತ ವಿಭಿನ್ನವಾದ ವ್ಯಕ್ತಿತ್ವವನ್ನು ಹೊಂದಿದ್ದವರಾಗಿದ್ದರು. ಆಟ, ವಿನೋದ, ಲಹರಿ ಮತ್ತು ಮಾದಕ ವ್ಯಸನಗಳಿಂದ ದೂರವಿದ್ದರು. ತನ್ನ ಬಿಡುವಿನ ವೇಳೆ ಇತರರಂತೆ ಸಂತೆ ಮತ್ತು ಬಝಾರಿನಲ್ಲಿ ತಿರುಗದೆ ಆಲೋಚನಾ ಮಗ್ನರಾಗಿ ಹಿರಾ ಬೆಟ್ಟದ ತಪ್ಪಲಿನ ಗುಹೆಯೊಳಗೆ ಏಕಾಂತ ಧ್ಯಾನದಲ್ಲಿ ಇರುತ್ತಿದ್ದರು. ಮುಹಮ್ಮದ್ (ಸ)ರ ಪ್ರಾಮಾಣಿಕತೆ ಹಾಗೂ ವಿಶಿಷ್ಟ ಸ್ವಭಾವಕ್ಕೆ ಮನಸೋತ ಅರೇಬಿಯಾದ ಕುಲೀನ ಸ್ತ್ರೀ, ಶ್ರೀಮಂತಳಾಗಿದ್ದ ವಿಧವೆ ಖದೀಜಾ ವಿವಾಹ ಪ್ರಸ್ತಾಪವನ್ನು ಮುಂದಿಟ್ಟರು. ತನ್ನ ಇಪ್ಪತೈದನೇ ವಯಸ್ಸಿಗೆ ಖದೀಜಳೊಂದಿಗೆ ಸಾಂಸಾರಿಕ ಜೀವನ ಆರಂಭಿಸಿದರು.
ನಲವತ್ತನೇ ವಯಸ್ಸಿಗೆ ತಲುಪಿದಾಗ ಹಿರಾ ಗುಹೆಯಲ್ಲಿ ಏಕಾಂತ ಧ್ಯಾನದಲ್ಲಿದ್ದ ಮಹಮ್ಮದ್ (ಸ)ರಿಗೆ ಜಿಬ್ರೀಲ್ (ಗಿಬ್ರಾಯೀಲ್) ಎಂಬ ದೇವದೂತ ಅವತರಿಸಿ ಅವರಿಗೆ ದಿವ್ಯ ಜ್ಞಾನವನ್ನು ಹಾಗೂ ಅವರನ್ನು ಲೋಕ ಪ್ರವಾದಿಯಾಗಿ ಆಯ್ಕೆ ಮಾಡಿದ ಸುವಾರ್ತೆಯನ್ನು ನೀಡುತ್ತಾರೆ. ಅದನ್ನು ನುಬೂವತ್ (ಪ್ರವಾದಿತ್ವ) ಎನ್ನಲಾಗುತ್ತದೆ. ಆ ಮೂಲಕ ಅವರು ಜಗತ್ತಿಗೆ ಅಂತಿಮ ಪ್ರವಾದಿಯಾಗಿ ಆಯ್ಕೆಯಾದರು.
ಧರ್ಮ ಮತ್ತು ದೇವರ ಮೇಲಿನ ಅಂಧಾನುಕರಣೆಯಿಂದ ಹೆಚ್ಚಾಗಿ ಶೋಷಣೆಗೊಳಪಟ್ಟವರು ಬಡವರು, ಮಹಿಳೆಯರು ಮತ್ತು ಮಕ್ಕಳು. ಅರೇಬಿಯಾದ ಅಂದಿನ ಅವಸ್ಥೆ ಮತ್ತು ಪ್ರವಾದಿಯವರಿಗಿದ್ದ ಅತೀ ದೊಡ್ಡ ಸವಾಲು ಕೂಡಾ ಇದೇ ಆಗಿತ್ತು. ಮೂಢನಂಬಿಕೆ ಮತ್ತು ಕಟ್ಟುಪಾಡುಗಳ ಹೆಸರಲ್ಲಿ ಜನರನ್ನು ಹಿಂಸಿಸಿ ಶೋಷಣೆ ಮಾಡಲಾಗುತ್ತಿತ್ತು. ಪ್ರವಾದಿ (ಸ) ರು ಎಲ್ಲ ರೀತಿಯ ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ತಡೆದರು.
ಒಬ್ಬನೇ ದೇವರು ನಾವೆಲ್ಲರೂ ಅವನ ದಾಸರು ಸರಿ ಸಮಾನರು ಎಂದರು. ಇಲ್ಲಿ ಯಾರು ಉತ್ಕೃಷ್ಟರೂ ಅಲ್ಲ ನಿಕೃಷ್ಟರೂ ಅಲ್ಲ, ಎಲ್ಲರೂ ಪರಸ್ಪರ ಸಹೋದರರು ಮಾನವರು ಒಂದು ಕುಟುಂಬ ಎಂದು ಮಾನವೀಯ ಏಕತೆಯನ್ನು ಸಾರಿದರು.
ಬಡವ ಶ್ರೀಮಂತ ಎಂಬ ವ್ಯತ್ಯಾಸವಿಲ್ಲದೆ ಇಥಿಯೋಪಿಯಾದ ಕರಿಯ ವರ್ಗದವನೂ ಪರ್ಶಿಯಾ ಬಿಳಿಯ ವರ್ಗದವನೂ ಭುಜಕ್ಕೆ ಭುಜ ತಾಗಿಸಿ ಪ್ರಾರ್ಥಿಸುವಂತಾದರು. ಒಂದೇ ತಟ್ಟೆಯಲ್ಲಿ ಉನ್ನಲಾರಂಭಿಸಿದರು. ಒಂದೇ ಕೇರಿಯಲ್ಲಿ ವಾಸ ಮಾಡಿದರು. ಕುಲ ಭೇದವಿಲ್ಲದೆ ಪರಸ್ಪರ ಸಂಬಂಧ ಬೆಳೆಸಿದರು. ಈ ಕ್ರಮಗಳು ಅರೇಬಿಯಾದ ಶೋಷಿತ ವರ್ಗವನ್ನು ಆಕರ್ಷಿಸುವಂತೆ ಮಾಡಿತು. ಪ್ರವಾದಿಯವರಲ್ಲಿ ಅಚಲ ವಿಶ್ವಾಸ ತಾಳಿದರು.
ಸಮಾಜದ ಸಮಾನತೆಗಾಗಿ ಶ್ರಮಿಸುತ್ತಿರುವ ಪ್ರವಾದಿ ಮಹಮ್ಮದ್ (ಸ) ಕಾರ್ಯಕ್ರಮಗಳು ಅರೇಬಿಯನ್ ಮೇಲ್ವರ್ಗದವರಿಗೆ ಸಹಿಸಲು ಅಸಾಧ್ಯವಾಯಿತು. ಅವರು ಪ್ರವಾದಿಯವರ ಮೇಲೆ ವೈಯಕ್ತಿಕವಾಗಿ ಹಲ್ಲೆ ಮಾಡಿದರು, ಬೈದರು, ಅಶ್ಲೀಲ ಪದಗಳಿಂದ ನಿಂದಿಸಿದರು. ಅನ್ನ ನೀರು ತಡೆ ಹಿಡಿದರು.
ಪ್ರವಾದಿ ಮುಹಮ್ಮದರು ತಮ್ಮ ಧರ್ಮಬೋಧನೆಗಳನ್ನು ನಿಲ್ಲಿಸಲು ಉನ್ನತ ಹುದ್ದೆಯನ್ನು, ಸಂಪತ್ತಿನ ರಾಶಿಯನ್ನು ಹಾಗೂ ಅತ್ಯಂತ ಸುಂದರಿಯರಾದ ಉನ್ನತ ಕುಲದ ಸ್ತ್ರೀಯರನ್ನು ಮದುವೆ ಮಾಡಿ ಕೊಡುವ ಭರವಸೆಯನ್ನು ನೀಡಿದರು. ಪ್ರವಾದಿ ಮುಹಮ್ಮದರು ಎಲ್ಲ ಆಕರ್ಷಕ ಪ್ರಸ್ತಾಪನೆಗಳನ್ನು ತಿರಸ್ಕರಿಸಿದರು. ಅದಕ್ಕಾಗಿ ವಿರೋಧಿಗಳಿಂದ ಅನ್ಯಾಯ ಮತ್ತು ಬಹಿಷ್ಕಾರವನ್ನು ನಿರಂತರವಾಗಿ ಸಹಿಸಿದರು. ಕೊನೆಗೆ ಕೊಲೆ ಮಾಡುವ ಸಂಚು ರೂಪಿಸಿದರು.
ಶತ್ರುಗಳ ಹಿಂಸೆ ಮಿತಿಮೀರಿದಾಗ ಊರು ತೊರೆದರು. ಯಸ್ರಿಬ್ ಅಂದರೆ ಈಗಿನ ಮದೀನಾ ಕಡೆ ತೆರಳಿದರು. ಹುಟ್ಟಿ ಬೆಳೆದ ಊರನ್ನು ತೊರೆಯುವುದು ಪ್ರವಾದಿ ಮತ್ತು ಸಂಗಡಿಗರಿಗೆ ಅಷ್ಟು ಸುಲಭದ ಕಾರ್ಯವಾಗಿರಲಿಲ್ಲ. ಅದರೆ ಅದು ಅನಿವಾರ್ಯವಾಗಿತ್ತು.

ಪ್ರವಾದಿ ಮುಹಮ್ಮದರನ್ನು ಅತ್ಯಂತ ಪ್ರೀತಿಯಿಂದ ಮದೀನಾದ ಜನರು ಸ್ವೀಕರಿಸಿದರು. ಹತ್ತು ವರ್ಷಗಳ ಕಾಲ ಮದೀನಾದಲ್ಲಿ ಬದುಕಿದ್ದ ಪ್ರವಾದಿ (ಸ) ಅಲ್ಲಿ ಒಂದು ಕಲ್ಯಾಣ ರಾಷ್ಟ್ರ ನಿರ್ಮಾಣ ಮಾಡಿ ಜಗತ್ತಿಗೆ ಮಾದರಿಯಾದರು. ಅರವತ್ತಮೂರು ವರ್ಷದ ಜೀವನದಲ್ಲಿ ಮಕ್ಕಾದ ಐವತ್ತಮೂರು ವರ್ಷದ ಬದುಕು ಮತ್ತು ಹೋರಾಟ ಹಾಗೂ ಮದೀನಾದ ಹತ್ತು ವರ್ಷದ ವರ್ಷಗಳ ಸುಸಜ್ಜಿತ ಆಡಳಿತ ಮುಸ್ಲಿಂ ಇತಿಹಾಸದಲ್ಲಿ ಮುಖ್ಯ ಘಟಕವಾಗಿ ಗುರುತಿಸಲ್ಪಡುತ್ತದೆ.
ಪ್ರವಾದಿ ಮಹಮದ್ (ಸ) ರು ಅತ್ಯಂತ ಸರಳತೆಯಿಂದ ಕೂಡಿದ ಗುಣಗಳಿಂದ ಸಾಮಾನ್ಯ ಜನರಂತೆ ಬದುಕಿದವರಾಗಿದ್ದಾರೆ. ಸಂಗಡಿಗರು ಹಸಿದಾಗ ಅವರು ಕೂಡಾ ಹಸಿವಿನಿಂದಿದ್ದರು, ಹಿಂಸೆ ಅನುಭವಿಸಿದ್ದರು. ಅವರು ಅಧಿಕಾರದ ದರ್ಪ ಎಳ್ಳಷ್ಟೂ ತೋರಿಸಲಿಲ್ಲ ಎಲ್ಲ ವರ್ಗದ, ಜಾತಿಯ ಜನರೊಂದಿಗೆ ಯಾವುದೇ ಮೈಲಿಗೆ ಇಲ್ಲದೆ ಬೆರೆತಿದ್ಧರು. ಬಿಳಿಯನಾಗಿದ್ದ ಸಲ್ಮಾನ್ ಫಾರಿಸ್ ರವರು ಕರಿಯನಾಗಿದ್ದ ಬಿಲಾಲ್ ರವರನ್ನು ಜರೆದಾಗ ಪ್ರವಾದಿ(ಸ)ರು ಕೋಪಗೊಂಡಿದ್ದರು.
“ಮನುಷ್ಯರೆಲ್ಲರೂ ಮೂಲತಃ ಒಂದೇ ಸಮುದಾಯವಾಗಿದ್ದಾರೆ”(ಹದೀಸ್) ಎಂದರು. ಮನುಷ್ಯರ ನಡುವೆ ಬೆಳೆದಿರುವ ಎಲ್ಲ ರೀತಿಯ ತಾರತಮ್ಯ ಜಾತಿ ಭೇದ, ವರ್ಣಭೇದವನ್ನು ತಡೆದರು. ಗುಲಾಮ ಪದ್ದತಿಯನ್ನು ವಿರೋಧಿಸಿದರು. ಭೂಮಿಯವರ (ಮಾನವರ) ಮೇಲೆ ನೀವು ಕರುಣೆ ತೋರಿರಿ. ಆಕಾಶದವನು (ದೇವನು) ನಿಮ್ಮ ಮೇಲೆ ಕರುಣೆ ತೋರುವನು. (ಹದೀಸ್) ಧರ್ಮ, ದೇಶ, ವರ್ಣ, ಭಾಷೆಗಳ ವ್ಯತ್ಯಾಸವಿಲ್ಲದೆ ಜಗತ್ತಿನ ಎಲ್ಲ ಮಾನವರೂ ಒಂದು ಕುಟುಂಬದವರಂತೆ ಪರಸ್ಪರ ಬಂಧುಗಳಾಗಿದ್ದಾರೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿದರು.
ಇಲ್ಲದವರನ್ನು ಸುಧಾರಣೆ ಮಾಡುವುದು ಇದ್ದವರ ಜವಾಬ್ದಾರಿಯಾಗಿದೆ ಆಗ ಮಾತ್ರ ಸಮಾಜದಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ ಎಂದು ಕಲಿಸಿಕೊಟ್ಟರು. “ದಾನವು ನಿಮ್ಮ ಸಂಪತ್ತನ್ನು ವೃದ್ಧಿಸುತ್ತದೆ” ಎಂದು ದಾನ ನೀಡುವುದಕ್ಕೆ ಪ್ರೋತ್ಸಾಹ ನೀಡಿದರು.

“ಹಸಿದವನಿಗೆ ಉಣಿಸಿರಿ, ರೋಗಿಯನ್ನು ಸಂದರ್ಶಿಸಿರಿ ಮತ್ತು ಬಂಧಿತನನ್ನು ಬಂಧಮುಕ್ತಗೊಳಿಸಿರಿ. ನೆರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬಾ ತಿನ್ನುವವನು ನಮ್ಮವನಲ್ಲ” ಎಂದು ಬೋಧನೆ ಮಾಡುವ ಮೂಲಕ ಮಾನವೀಯ ಪಾಠಗಳನ್ನು ಜಗತ್ತಿಗೆ ತಿಳಿಸಿದರು.
“ಮಹಿಳೆಯರೊಂದಿಗೆ ಅತ್ಯುತ್ತಮವಾಗಿ ವರ್ತಿಸುವವನೇ ನಿಮ್ಮಲ್ಲಿ ಅತ್ಯುತ್ತಮನು” ಎನ್ನುವ ಮೂಲಕ ಮಹಿಳೆಯರ ಬಗ್ಗೆ ಹೆಚ್ಚು ಗೌರವವನ್ನು ಹೊಂದುವಂತೆ ಪ್ರವಾದಿಗಳು ಜನರಿಗೆ ತಿಳಿಸಿದರು.
ಓರ್ವರು ಪ್ರವಾದಿ(ಸ)ಯವರೊಡನೆ ಕೇಳಿದರು: ‘ಪ್ರವಾದಿಗಳೇ, ನನ್ನ ಅತ್ಯಧಿಕ ಸದ್ವರ್ತನೆಗೆ ಅರ್ಹರು ಯಾರು? ಪ್ರವಾದಿ(ಸ) ಹೇಳಿದರು: ನಿನ್ನ ತಾಯಿ, ಆ ವ್ಯಕ್ತಿ ಪುನಃ ಕೇಳಿದರು- ನಂತರ ಯಾರು? ಪ್ರವಾದಿಯವರು ಹೇಳಿದರು: ನಿನ್ನ ತಾಯಿ. ಆತ ಪುನಃ ಪ್ರಶ್ನಿಸಿದರು: ‘ಆ ಬಳಿಕ ಯಾರು? ಪ್ರವಾದಿಯವರು ಹೇಳಿದರು: ನಿನ್ನ ತಾಯಿಯೇ. ಆತ ‘ನಂತರ ಯಾರು?’ ಎಂದು ಕೇಳಿದಾಗ ಪ್ರವಾದಿಯವರು ಹೇಳಿದರು: ನಿನ್ನ ತಂದೆ’ ಎಂದು ತಾಯಿಗೆ ಹೆಚ್ಚು ಮಹತ್ವದ ಸ್ಥಾನ ನೀಡಿದ್ದನ್ನು ಇಸ್ಲಾಮಿನ ಧಾರ್ಮಿಕ ಪಂಡಿತರು ಉಲ್ಲೇಖಿಸಿದ್ದಾರೆ.

ಮದ್ಯಪಾನ, ಜೂಜು ಸೇರಿದಂತೆ ಎಲ್ಲ ವಿಧದ ಕೆಡುಕುಗಳಿಂದ, ಅನೈತಿಕ ವರ್ತನೆಗಳಿಂದ ಜನರು ದೂರ ಉಳಿಯುವಂತೆ ಮಾಡುವಲ್ಲಿ ಬಹಳ ಪ್ರಮುಖ ಪಾತ್ರವನ್ನು ಪ್ರವಾದಿಗಳು ಅಂದಿನ ಸಂದರ್ಭದಲ್ಲೇ ಪ್ರಾಮುಖ್ಯತೆ ನೀಡಿ, ಒಳ್ಳೆಯ ಕೆಲಸಗಳಿಗೆ ಪ್ರೋತ್ಸಾಹ ನೀಡಿದರು.
ಎಲ್ಲ ಒಳಿತು ಕಾರ್ಯಗಳಿಗೂ ಪ್ರತಿಫಲವಿದೆ ಎಂದು ಬೋಧಿಸಿದ ಅವರು, ಗಿಡ ನೆಡುವುದು, ಪ್ರಾಣಿ ಪಕ್ಷಗಳಿಗೆ ಆಹಾರ ನೀಡುವುದು, ದಾರಿಹೋಕರಿಗೆ ನೀರು ಪೂರೈಸುವುದು, ಸ್ವಚ್ಛತೆ ಕಾಪಾಡುವುದು, ಒಳ್ಳೆಯದನ್ನು ಮಾತನಾಡುವುದು, ಸಭ್ಯತೆಯಿಂದ ವರ್ತಿಸುವುದು, ನ್ಯಾಯ ಪಾಲಿಸುವುದು, ಮಿತವಾಗಿ ತಿನ್ನುವುದು, ಕುಡಿಯುವುದು, ಮುಗುಳ್ನಗೆ ಬೀರುವುದು ಇತ್ಯಾದಿ ಸದ್ವರ್ತನೆಯ ಗುಣಗಳನ್ನು ಬೆಳೆಸಿಕೊಳ್ಳುವುದರಿಂದ ದೊಡ್ಡ ದುರಂತಗಳಿಂದ ಮುಕ್ತವಾಗಿ ಎಂದರು ಪ್ರವಾದಿ ಮುಹಮ್ಮದ್.

ಸದಾಚಾರದ ಮೌಲ್ಯಗಳನ್ನು ಪ್ರತಿಪಾದಿಸಿದ ಪ್ರವಾದಿ ಮಹಮದ್ (ಸ) ತಮ್ಮ 63ನೇ ವಯಸ್ಸಿನಲ್ಲಿ ಮದೀನಾದಲ್ಲಿ ನಿಧನಾರದರು. ಸಮಾನತೆಯ ಸಮಾಜದ ಶಿಲ್ಪಿಯಾಗಿದ್ದ ಪ್ರವಾದಿ ಮುಹಮ್ಮದ್ (ಸ) ಅಗಲಿಕೆಯ ಸಾವಿರದ ನಾಲ್ಕುನೂರು ವರ್ಷಗಳ ಬಳಿಕವೂ ಕೋಟ್ಯಾತರ ಹೃದಯಗಳಲ್ಲಿ ನಿತ್ಯ ಸ್ಮರಣೆಯಲ್ಲಿದ್ದಾರೆ. ಮಹಾತ್ಮಾ ಗಾಂಧೀಜಿ ಹೇಳಿದಂತೆ “ಇಂದು ಕೋಟ್ಯಾಂತರ ಮನುಷ್ಯರ ಹೃದಯಗಳ ಮೇಲೆ ನಿರ್ವಿವಾದವಾಗಿ ಹಿಡಿತ ಸಾಧಿಸಿರುವ ವ್ಯಕ್ತಿ ಮುಹಮ್ಮದ್ (ಸ) ಮಾತ್ರವಾಗಿದ್ದಾರೆ”.
ಸಮಾನತೆಯ ಉದಾತ್ತ ಸಿದ್ಧಾಂತಗಳನ್ನು ಪ್ರವಾದಿಗಳು ಕೇವಲ ಬೋಧನೆ ಮಾಡಿದ್ದು ಮಾತ್ರವಲ್ಲದೇ, ಪ್ರಾಯೋಗಿಕವಾಗಿ ಜನರ ನಡುವೆ ನೆಲೆಯೂರುವಂತೆ ಮಾಡಿದ್ದರು. ನಾಗರಿಕತೆಯನ್ನು ಉನ್ನತ ಮಟ್ಟಕ್ಕೆ ಏರಿಸಿ, ಅಂದು ಪ್ರಾಯೋಗಿಕವಾಗಿ ತೋರಿಸಿಕೊಟ್ಟದ್ದೇ ಇಂದಿಗೂ ಜೀವಂತವಾಗಿರುವುದಕ್ಕೆ ಕಾರಣ. ಪೈಗಂಬರರು ಇಡೀ ವಿಶ್ವಕ್ಕೆ ಬೋಧಿಸಿದ ಶಾಂತಿ, ಸಹಬಾಳ್ವೆ, ಭಕ್ತಿ, ಭ್ರಾತೃತ್ವ, ಸಮಾನತೆಯಂತಹ ಮಾನವೀಯ ಮೌಲ್ಯದ ಚಿಂತನೆಗಳು ಸರ್ವಕಾಲಕ್ಕೂ ಅನುಕರಣೀಯ. ಅದನ್ನು ಬಾಳಿನಲ್ಲಿ ಅನುಸರಿಸಿ ಬದುಕುವುದೇ ನಾವು ಅವರಿಗೆ ನೀಡುವ ಅತ್ಯಂತ ದೊಡ್ಡ ಗೌರವ.
(ಪ್ರವಾದಿ ಮುಹಮ್ಮದ್ ಅವರ ಹೆಸರು ಬರೆಯುವಾಗ (ಸ) ಎಂದು ಬರೆಯಲಾಗುತ್ತದೆ. ಅಂದರೆ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಈ ರೀತಿಯಲ್ಲಿ ಪ್ರವಾದಿಯವರಿಗೆ ಗೌರವ ಸೂಚಿಸುವುದು ಮುಸ್ಲಿಮರ ಒಂದು ಕ್ರಮ)

ಬರೆಹ: ಎಂ. ಅಶೀರುದ್ದೀನ್ ಮಾಸ್ಟರ್, ಸಾರ್ತಬೈಲ್
(ಅಧ್ಯಾಪಕರು, ಸ್ನೇಹ ಪಬ್ಲಿಕ್ ಸ್ಕೂಲ್, ಮಂಗಳೂರು)
ಸಮಾನತೆಯ ಉದಾತ್ತ ಸಿದ್ಧಾಂತಗಳನ್ನು ಪ್ರವಾದಿಗಳು ಕೇವಲ ಬೋಧನೆ ಮಾಡಿದ್ದು ಮಾತ್ರವಲ್ಲದೇ, ಪ್ರಾಯೋಗಿಕವಾಗಿ ಜನರ ನಡುವೆ ನೆಲೆಯೂರುವಂತೆ ಮಾಡಿದ್ದರು. ನಾಗರಿಕತೆಯನ್ನು ಉನ್ನತ ಮಟ್ಟಕ್ಕೆ ಏರಿಸಿ, ಅಂದು ಪ್ರಾಯೋಗಿಕವಾಗಿ ತೋರಿಸಿಕೊಟ್ಟದ್ದೇ ಇಂದಿಗೂ ಜೀವಂತವಾಗಿರುವುದಕ್ಕೆ ಕಾರಣ. ಪೈಗಂಬರರು ಇಡೀ ವಿಶ್ವಕ್ಕೆ ಬೋಧಿಸಿದ ಶಾಂತಿ, ಸಹಬಾಳ್ವೆ, ಭಕ್ತಿ, ಭ್ರಾತೃತ್ವ, ಸಮಾನತೆಯಂತಹ ಮಾನವೀಯ ಮೌಲ್ಯದ ಚಿಂತನೆಗಳು ಸರ್ವಕಾಲಕ್ಕೂ ಅನುಕರಣೀಯ. ಅದನ್ನು ಬಾಳಿನಲ್ಲಿ ಅನುಸರಿಸಿ ಬದುಕುವುದೇ ನಾವು ಅವರಿಗೆ ನೀಡುವ ಅತ್ಯಂತ ದೊಡ್ಡ ಗೌರವ
ಅಲ್ಲಾಹೋ ಅಕ್ಬರ್ ಏಂದು ಮಕ್ಕಳನ್ನು ಹೆಂಗಸರನ್ನು ಕೊಲ್ಲುವ ಮುಸ್ಲಿಂ ಎಂದು ಕರೆಸಿ ಕೊಳ್ಳುವ ಕೆಲವರು , ಇವರು ಪ್ರವಾದಿ ಮೊಹಮ್ಮದ್ ಗೆ ಮಾಡುವ ಅವಮಾನ ಇಂಥವರನು ಶಿಕ್ಷಿಸುವುದು ನಮ್ಮೆಲ್ಲರ ಧರ್ಮ ಆಗಿದೆ .