ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉಪನ್ಯಾಸಕರನ್ನು ಗೌರವದಿಂದ ಕಾಣುವಂತೆ ಆದೇಶ ಹೊರಡಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಕಾರ್ಯಕರ್ತರು ರಾಯಚೂರು ಜಿಲ್ಲೆಯ ಸಿಂಧನೂರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
“ತಾಲೂಕು ವ್ಯಾಪ್ತಿಯ ಕೆಲ ಸರ್ಕಾರಿ ಕಾಲೇಜುಗಳಲ್ಲಿ ಮೂಲಸೌಕರ್ಯ ತಡವಾಗಿ ಬರುವುದು, ಶಿಕ್ಷಕರು ತರಗತಿಗಳಿಗೆ ಗೈರಾಗುವುದರ ಬಗ್ಗೆ ವಿದ್ಯಾರ್ಥಿ ಪಾಲಕರು ಸೇರಿದಂತೆ ಸಂಘ-ಸಂಸ್ಥೆಗಳವರು ಈಗಾಗಲೇ ತಕರಾರು ವ್ಯಕ್ತಪಡಿಸಿದ್ದರೂ ಕೆಲವಡೆ ಅದೇ ಪರಿಸ್ಥಿತಿ ಮುಂದುವರಿದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ವಿದ್ಯಾರ್ಥಿಗಳಿಗೆ ಸಮಯ ಪರಿಪಾಲನೆಯ ಬುದ್ದಿ ಹೇಳುವ ಉಪನ್ಯಾಸಕರೇ ಸಮಯದ ಪರಿಪಾಲನೆ ಮರೆತಿರುವುದು ವಿಪರ್ಯಾಸವೇ ಸರಿ. ಹಾಗಾಗಿ ಸರ್ಕಾರಿ ಕಾಲೇಜುಗಳ ವ್ಯವಸ್ಥೆಯನ್ನು ಶಿಸ್ತುಗೊಳಿಸುವ ಮತ್ತು ಕಾಲೇಜು ಶಿಕ್ಷಣ ಇಲಾಖೆಯ ಆದೇಶಗಳನ್ವಯ ಕಟ್ಟುನಿಟ್ಟಾಗಿ ನಡೆಯುವಂತೆ ನೋಡಿಕೊಳ್ಳಲು ಜಿಲ್ಲಾಮಟ್ಟದ ಅಧಿಕಾರಿಗಳು ಕಾಲೇಜುಗಳಿಗೆ ಭೇಟಿ ನೀಡಿ ಸೂಕ್ತ ನಿರ್ದೇನ ನೀಡಬೇಕು” ಎಂದು ಒತ್ತಾಯಿಸಿದರು.
“ಖಾಸಗಿ ಕಾಲೇಜುಗಳ ಬಗ್ಗೆ ಹೇಳಬೇಕೆಂದರೆ, ಕೆಲ ಖಾಸಗಿ ಕಾಲೇಜುಗಳಲ್ಲಿ ಕೆಲಸ ಮಾಡುವ ಕೆಲ ಉಪನ್ಯಾಸಕರನ್ನು ಅಗೌರವದಿಂದ ಕಾಣುವ ಮೂಲಕ ಅವರಿಗೆ ತಾರತಮ್ಯದಿಂದ ವರ್ತಿಸಲಾಗುತ್ತಿದೆ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆರೋಪಗಳಿವೆ. ಹಾಗಾಗಿ ಖಾಸಗಿ ಕಾಲೇಜುಗಳಲ್ಲಿ ಕೆಲಸ ಮಾಡುವ ಉಪನ್ಯಾಸಕರ ಮೇಲೆ ಯಾವುದೇ ರೀತಿಯ ತಾರತಮ್ಯ ಆಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮಸ್ಕಿ ತಾಲೂಕು ಶೈಕ್ಷಣಿಕ ಅಭಿವೃದ್ಧಿಗೆ ಡಿವಿಪಿ ಒತ್ತಾಯ
“ತಾಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಉಪನ್ಯಾಸಕರು ಖಾಸಗಿ ಕಾಲೇಜುಗಳವರ ಸಮಾರಂಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗಿಯಾಗುವುದು, ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಆಯೋಜಿಸಬೇಕಾದ ಸರ್ಕಾರಿ ಕಾರ್ಯಕ್ರಮಗಳನ್ನು ಖಾಸಗಿ ಕಾಲೇಜುಗಳವರ ಸಹಭಾಗಿತ್ವದಲ್ಲಿ, ಖಾಸಗಿ ಕಾಲೇಜುಗಳಲ್ಲಿ ಆಯೋಜಿಸುವುದು ನಡೆಯುತ್ತಿದೆ. ಇದನ್ನು ನಿಲ್ಲಿಸಬೇಕು. ಇನ್ನು ತಾಲೂಕು, ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆಯವರು ಕೈಗೊಳ್ಳುವ ಕಾರ್ಯಕ್ರಮಗಳಲ್ಲಿ ಪರಿಣಿತರು, ವಿಶೇಷ ಸಾಧಕರು ಸೇರಿದಂತೆ ಸರ್ಕಾರಿ ಸಂಸ್ಥೆಗಳಲ್ಲಿ ಹೆಚ್ಚಿನ ಅನುಭವ ಹೊಂದಿರುವವರಿಗೆ ಹೆಚ್ಚಿನ ಆದ್ಯತೆ ನೀಡಬೇಕು” ಎಂದು ಒತ್ತಾಯಿಸಿದರು.
ಈ ವೇಳೆ ಕೆಆರ್‌ಎಸ್ ರಾಜ್ಯ ಘಟಕದ ಯುವ ಉಪಾಧ್ಯಕ್ಷ ನಿರುಪಾದಿ ಗೋಮರ್ಸಿ, ಅಮರೇಗೌಡ ಮಲ್ಲಾಪುರ, ದೌಲಸಾಬ್ ದೊಡ್ಡಮನಿ, ಓಬಳೇಶ್ ನಾಯಕ ಸೇರಿದಂತೆ ಇತರರು ಇದ್ದರು.