ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ, ಸೆ.29 ರಂದು ‘ಕರ್ನಾಟಕ ಬಂದ್’ ಇದೆ. ಈ ಬಂದ್‌ಗೆ 100ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಆದರೆ, ಬೆಂಗಳೂರಿನಲ್ಲಿ ಸೆ. 28 ಮಧ್ಯರಾತ್ರಿಯಿಂದಲೇ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಶುಕ್ರವಾರ ದಿನವಿಡೀ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ.
“ಹಲವಾರು ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಹಿನ್ನೆಲೆ, ಬೆಂಗಳೂರಿನಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ನಾಳೆಯ ಬಂದ್‌ಗೂ ಸಹ ರ‍್ಯಾಲಿ ಮತ್ತು ಮೆರವಣಿಗೆ ನಡೆಸಲು ಅವಕಾಶ ಇಲ್ಲ. ಸೆ.28 ರ ಮಧ್ಯರಾತ್ರಿಯಿಂದ ಸೆ.29 ರ ಮಧ್ಯರಾತ್ರಿಯವರೆಗೂ ಸಾರ್ವಜನಿಕ ಸಭೆ ನಿಷೇಧಿಸಲಾಗಿದೆ” ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದರು.
“ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಬಂದ್ ಮಾಡುವಂತಿಲ್ಲ. ಸಾರ್ವಜನಿಕರ ಜೀವನಕ್ಕೆ ಸಮಸ್ಯೆ ಉಂಟು ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಬಂದ್ ಸಮಯದಲ್ಲಿ ಯಾವುದೇ ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟ ಉಂಟಾದರೆ ಅದಕ್ಕೆ ಬಂದ್ ಕರೆ ನೀಡಿದವರೇ ಹೊಣೆಯಾಗುತ್ತಾರೆ. ಸಾರ್ವಜನಿಕರಿಗೆ ಬಲವಂತವಾಗಿ ಬಂದ್ ಮಾಡಿದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ತಾವಾಗಿಯೇ ಬಂದ್ ಮಾಡಿದರೆ ಸಮಸ್ಯೆ ಇಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಕಾವೇರಿ | ಸಂಸದರ ಭಾವಚಿತ್ರಗಳಿಗೆ ಹಾರ ಹಾಕಿ, ಧಿಕ್ಕಾರ ಕೂಗಿದ ಕರವೇ ಮಹಿಳಾ ಹೋರಾಟಗಾರರು
“ಬಂದ್ ದಿನ ಕೆಎಸ್ಆರ್ಪಿ, ಹೋಮ್ ಗಾರ್ಡ್, ಆರ್ಎಎಫ್ ಹಾಗೂ ನಗರದ ಎಲ್ಲ ಪೊಲೀಸರು ಭದ್ರತೆಯಲ್ಲಿ ಇರುತ್ತಾರೆ” ಎಂದು ತಿಳಿಸಿದರು.
“ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿಸಿದರೆ, ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಹೇಳಿದರು.