- ಚುನಾವಣೆ ಘೋಷಣೆಯಾದಾಗಿನಿಂದ ಒಂದಿಲ್ಲೊಂದು ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಗಂಭೀರ ಆರೋಪ
- ಡಿಸಿಸಿ ಬ್ಯಾಂಕ್ ಚುನಾವಣೆಯು ಧರ್ಮ ಮತ್ತು ಅಧರ್ಮದ ನಡುವಿನ ಚುನಾವಣೆಯಾಗಿದೆ.
ಸಹಕಾರಿ ಕ್ಷೇತ್ರದ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ಸರಕಾರ ಹಸ್ತಕ್ಷೇಪ ಮಾಡುತ್ತಿದ್ದು, ಅಧಿಕಾರ ದುರ್ಬಳಕೆ ಮಾಡಿಕೊಂಡು ಕೆಲವರು ಬ್ಯಾಂಕ್ ಕೈವಶಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಆಡಳಿತ ಮಂಡಳಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಉಮಾಕಾಂತ ನಾಗಮಾರಪಳ್ಳಿ ಗಂಭೀರವಾಗಿ ಆರೋಪಿಸಿದರು.
ಚುನಾವಣೆ ಘೋಷಣೆಯಾದಾಗಿನಿಂದ ಒಂದಿಲ್ಲೊಂದು ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿದೆ. ಮೊದಲು ಸಿಇಒ ಹುದ್ದೆಗೆ ಪ್ರಭಾರಿ ಅಧಿಕಾರಿಯನ್ನು ನೇಮಕ ಮಾಡಲಾಗಿತ್ತು. ಬೇರೆ ಬೇರೆ ಕಲಂಗಳ ಅಡಿಯಲ್ಲಿ ತನಿಖೆ ಮಾಡಿಸುವುದಾಗಿ ಹೇಳಿ ಒತ್ತಡ ಹೇರುವ ಯತ್ನವೂ ನಡೆದಿದೆ ಎಂದು ಜಿಲ್ಲಾ ವಾರ್ತಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ
ಹೇಳಿದರು.
“ಇದು ಧರ್ಮ ಮತ್ತು ಅಧರ್ಮದ ನಡುವಿನ, ಸತ್ಯ- ಅಸತ್ಯದ ನಡುವಿನ ಚುನಾವಣೆಯಾಗಿದೆ. ಮತದಾರರು ಸತ್ಯದ, ಧರ್ಮದ ಪರವಾಗಿರುವ ನಮ್ಮ ಪೆನಾಲ್ ಅಭ್ಯರ್ಥಿಗಳನ್ನು ಗೆಲ್ಲಿಸುವ ವಿಶ್ವಾಸವಿದೆ. ದಿ. ಗುರುಪಾದಪ್ಪ ನಾಗಮಾರಪಳ್ಳಿ
ಅವರು ಬ್ಯಾಂಕನ್ನು ಇಡೀ ದೇಶದ ಗಮನ ಸೆಳೆಯುವ ರೀತಿಯಲ್ಲಿ ಬೆಳೆಸಿದ್ದರು. ಕಳೆದ 8 ವರ್ಷಗಳ ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ಬ್ಯಾಂಕ್ ತನ್ನ ಸೇವಾ ಚಟುವಟಿಕೆಗಳನ್ನು, ವ್ಯವಹಾರವನ್ನು ಇನ್ನಷ್ಟು ವಿಸ್ತರಿಸಿದೆ” ಎಂದು ನಾಗಮಾರಪಳ್ಳಿ ಹೇಳಿದರು.
“ಹಿಂದೆ ಮಾಜಿಸ ಸಚಿವ ದಿ. ಡಾ. ಗುರುಪಾದಪ್ಪ ನಾಗಮಾರಪಳ್ಳಿ ಅವರು ದೀರ್ಘ ಕಾಲ ಅಧ್ಯಕ್ಷರಾಗಿ ಬ್ಯಾಂಕ್ ಮುನ್ನಡೆಸಿದ್ದರು. ನಾನು 8 ವರ್ಷ ಅಧ್ಯಕ್ಷನಾಗಿ ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಎದುರಾಳಿ ಪೆನಾಲ್‌ನವರ ಪರಿಚಯವೂ ಮತದಾರರಿಗೆ ಇದೆ. ಮತದಾರರು ಸತ್ಯ, ಧರ್ಮದ ಪರ ನಿಂತು ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ” ಎಂದು ಉಮಾಕಾಂತ ನಾಗಮಾರಪಳ್ಳಿ ಭವಿಷ್ಯ ನುಡಿದರು.
“ಸಿಇಒ ಹುದ್ದೆಗೆ ಪ್ರಭಾರಿ ಅಧಿಕಾರಿಯನ್ನು ನೇಮಕ ಮಾಡುವಾಗ ಸರಕಾರ ಹೇಗೆ ನಡೆದುಕೊಂಡಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಈ ವಿಷಯದಲ್ಲಿ ನ್ಯಾಯಾಲಯವೇ ನ್ಯಾಯ ನೀಡಿದೆ. ನಾರಂಜಾ ಸಹಕಾರಿ ಸಕ್ಕರೆ ಕಾರಖಾನೆಯ ಸಕ್ಕರೆ ಒತ್ತೆ ಸಾಲದ ವಿಷಯವನ್ನು ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆ. ಒತ್ತೆ ಸಾಲದಲ್ಲಿ ಯಾವುದೇ ನಿಯಮದ ಉಲ್ಲಂಘನೆ ಆಗಿಲ್ಲ. ಹೈಕೋರ್ಟ್ ಆದೇಶದಂತೆ ಕಾರಖಾನೆಯವರು ಸಕ್ಕರೆ ಮಾರಾಟ ಮಾಡಿ, ರೈತರಿಗೆ ಕಬ್ಬಿನ ಹಣ ಪಾವತಿ ಮಾಡಿದ್ದಾರೆ. ಈ ವಿಷಯದಲ್ಲಿ ಡಿಸಿಸಿ ಬ್ಯಾಂಕಿನ ಹಿತಕ್ಕೆ ಧಕ್ಕೆಯಾಗದಂತೆ ಅಗತ್ಯ ಎಚ್ಚರಿಕೆ ವಹಿಸಲಾಗಿದೆ”
ಎಂದು ಮಾಹಿತಿ ನೀಡಿದರು.
“ನಾವು ಯಾವತ್ತೂ ಬ್ಯಾಂಕಿನ ಹಿತಕ್ಕೆ ಧಕ್ಕೆಯಾಗುವಂತೆ ನಡೆದುಕೊಂಡಿಲ್ಲ. ಆದರೆ, ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಎದುರಾಳಿ ಪೆನಾಲ್ ಅಭ್ಯರ್ಥಿಯು ಬ್ಯಾಂಕ್ ಜೊತೆ ಹೇಗೆ ನಡೆದುಕೊಂಡಿದ್ದಾರೆ ಎನ್ನುವುದು ರೈತರಿಗೆ
ತಿಳಿದಿದೆ. ಪಡೆದ ಸಾಲಕ್ಕೆ ಬಡ್ಡಿ ಪಾವತಿ ಸಹ ಪಾವತಿಸಿಲ್ಲ” ಎಂದು ಆರೋಪಿಸಿದರು.
ಬ್ಯಾಂಕ್ ಸಾಧನೆ ಅನನ್ಯ:
ಬೀದರ್ ಡಿಸಿಸಿ ಬ್ಯಾಂಕಿನ ಸಾಧನೆ ಅನನ್ಯವಾಗಿದೆ. ಕೃಷಿ ಸಾಲ, ರಸಗೊಬ್ಬರ ಪೂರೈಕೆ, ಎಸ್‌ಎಚ್‌ಜಿ ಸದಸ್ಯರಿಗೆ ಸಾಲ,ವಿಮೆ ಸೌಲಭ್ಯ, ನಿರುದ್ಯೋಗಿ ಯುವಕರಿಗೆ ಕೌಶಲ ತರಬೇತಿ ಹೀಗೆ ಹತ್ತಾರು ಕೆಲಸಗಳನ್ನು ಸಾಮಾಜಿಕ ಕಾಳಜಿಯಿಂದ, ಬದ್ಧತೆಯಿಂದ ಮಾಡುತ್ತಿದೆ. ಎರಡು ತರಬೇತಿ ಸಂಸ್ಥೆಗಳನ್ನು ಹೊಂದಿದ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆ ಇದೆ. ಸ್ವಸಹಾಯ ಗುಂಪುಗಳ ಕ್ಷೇತ್ರದಲ್ಲಿನ ಸಾಧನೆ ಇಡೀ ದೇಶದ ಗಮನ ಸೆಳೆದಿದೆ. ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಿ, ಸ್ವಾವಲಂಬಿಯಾಗಿ ಮಾಡುತ್ತಿದೆ” ಎಂದು ಹೇಳಿದರು.
“ಕೃಷಿ ಕ್ಷೇತ್ರಕ್ಕೆ ಅತ್ಯಧಿಕ ಸಾಲ ನೀಡುವ ರಾಜ್ಯದ ನಾಲ್ಕು ಡಿಸಿಸಿ ಬ್ಯಾಂಕ್ ಗಳಲ್ಲಿ ಬೀದರ್ ಡಿಸಿಸಿ ಬ್ಯಾಂಕ್ ಒಂದಾಗಿದೆ. 4 ಸಾವಿರ ಕೋಟಿಗಿಂತ ಹೆಚ್ಚು ದುಡಿಯುವ ಬಂಡವಾಳ ಹೊಂದಿರುವ ಐದು ಬ್ಯಾಂಕ್ ಗಳಲ್ಲಿ ಬೀದರ್ ಬ್ಯಾಂಕ್ ಸಹ ಒಂದಾಗಿದೆ. 200 ಕೋಟಿಗೂ ಹೆಚ್ಚು ಸ್ವಂತ ಬಂಡವಾಳ ಹೊಂದಿರುವ 5 ಬ್ಯಾಂಕ್ ಗಳಲ್ಲಿ ಬೀದರ್ ಡಿಸಿಸಿ ಬ್ಯಾಂಕ್ ಸೇರಿದೆ” ಎಂದು ತಿಳಿಸಿದರು.
“ಡಿಸಿಸಿ ಬ್ಯಾಂಕ್ ನ ಚುನಾವಣೆಯು ಧರ್ಮ ಮತ್ತು ಅಧರ್ಮದ ನಡುವಿನ ಚುನಾವಣೆಯಾಗಿದ್ದು, ಕೇಂದ್ರ ಸಚಿವ ಭಗವಂತ ಖೂಬಾ ಅವರು ಧರ್ಮದ ಪರವಾಗಿರುವ ನಮ್ಮ ಜೊತೆಯಲ್ಲಿದ್ದಾರೆ ಎಂದು ಉಮಾಕಾಂತ ನಾಗಮಾರಪಳ್ಳಿ ಹೇಳಿದರು. ಕೇಂದ್ರ ಸಚಿವರು ಸತ್ಯ, ಧರ್ಮವನ್ನು ಬೆಂಬಲಿಸುತ್ತಿದ್ದಾರೆ” ಎಂದು ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಮೂವರು ಅವಿರೋಧ ಆಯ್ಕೆ:
“ಡಿ ಮತಕ್ಷೇತ್ರದಿಂದ ಪರಮೇಶ್ವರ ಮುಗಟೆ, ಬಿ ಮತಕ್ಷೇತ್ರದಿಂದ ಬಸವರಾಜ ಹೆಬ್ಬಾಳೆ, ಸಂಜಯಸಿಂಗ್
ಹಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 12 ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ” ಎಂದು
ಉಮಾಕಾಂತ ನಾಗಮಾರಪಳ್ಳಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸೀತಾಫಲ ಹಣ್ಣಿಗೆ ಭಾರೀ ಬೇಡಿಕೆ; ಬೇಕಿದೆ ಮಾರುಕಟ್ಟೆ ಸೌಲಭ್ಯ
ಸುದ್ದಿಗೋಷ್ಠಿಯಲ್ಲಿ ಉಮಾಕಾಂತ್ ನಾಗಮಾರಪಳ್ಳಿ ಪೆನಾಲ್‌ನಿಂದ ಸ್ಪರ್ಧಿಸಿರುವ ಕಿಶನರಾವ್ ತುಕಾರಾಮ, ರಾಚಪ್ಪ ಪಾಟೀಲ್, ನಾಗನಾಥ ಬಗದೂರೆ, ರಾಜರೆಡ್ಡಿ ನಾಗರೆಡ್ಡಿ, ವೈಜನಾಥ ಶರಣಪ್ಪ, ಸಂಗಪ್ಪ ಮಾಲಿಪಾಟೀಲ್, ಹಣಮಂತರಾವ್ ಪಾಟೀಲ್, ವೀರಶೆಟ್ಟಿ ಗೌರೆ, ಮಹ್ಮದ್ ಸಲೀಮೋದ್ದಿನ್, ಸಿದ್ರಾಮ ವೀರಶೆಟ್ಟಿ ಉಪಸ್ಥಿತರಿದ್ದರು.