'ಡಂಕಿ' ಮತ್ತು 'ಸಲಾರ್' ಎರಡೂ ದೊಡ್ಡ ಸಿನಿಮಾಗಳು, ನಿಜ. ಎರಡರ ಯಶಸ್ಸು ಆಯಾ ಚಿತ್ರರಂಗಗಳ ಪಾಲಿಗೆ ಬಹಳ ಮುಖ್ಯ ಎನ್ನುವುದೂ ನಿಜ. ಅದರಾಚೆಗೆ ಇವೆರಡರ ಗೆಲುವು ಅಥವಾ ಸೋಲಿಗೆ ಯಾವ ವಿಶೇಷ ಪ್ರಾಧಾನ್ಯತೆಯೂ ಇಲ್ಲ ಎನ್ನುವುದು ಕೂಡ ಅಷ್ಟೇ ನಿಜ. ಉತ್ತರ ದಕ್ಷಿಣ, ಹಿಂದು ಮುಸ್ಲಿಂ ಎನ್ನುವುದೆಲ್ಲ ಇಲ್ಲಿ ನಿಲ್ಲುವುದಿಲ್ಲ. ಕೊನೆಗೂ ಉಳಿಯುವುದು, ಗೆಲ್ಲುವುದು ಸಿನಿಮಾ ಮಾತ್ರ.
ಸಿನಿಮಾ ರಂಗದವರೇ ಹಾಗೆ. ಅವರು ಯಾವುದನ್ನೂ ಹೈಪ್ ಇಲ್ಲದೇ ಮಾಡುವುದೇ ಇಲ್ಲ. ಪ್ರತಿಯೊಂದು ದೊಡ್ಡ ಚಿತ್ರದ ಸುತ್ತ ಇನ್ನಿಲ್ಲದ ನಿರೀಕ್ಷೆಗಳು ಹುಟ್ಟಿಕೊಳ್ಳುತ್ತವೆ. ಪ್ರೊಡಕ್ಷನ್ ಕಂಪನಿಯ ಹಣ ಸುರಿಯುವ ಸಾಮರ್ಥ್ಯಕ್ಕೆ ತಕ್ಕಂತೆ ಮಾಧ್ಯಮಗಳು ಅವುಗಳಿಗೆ ಪ್ರಚಾರ ಕೊಡತೊಡಗುತ್ತವೆ. ಅದಕ್ಕೆ ತಕ್ಕಂತೆ ಆಯಾ ಸ್ಟಾರ್ನ ಬಾಲಬಡುಕರು ಸಾಮಾಜಿಕ ಜಾಲತಾಣಗಳಲ್ಲಿ ಅಂತೆಕಂತೆಗಳನ್ನು ಹರಡತೊಡಗುತ್ತಾರೆ. ಈಗಲೂ ಇಂಥದ್ದೇ ಒಂದು ವಿಚಾರ ಸದ್ದು ಮಾಡುತ್ತಿದೆ. ಅದು ಈ ಕ್ರಿಸ್ಮಸ್ಗೆ ಶಾರುಖ್ ಖಾನ್ನ ‘ಡಂಕಿ’ ಮತ್ತು ಪ್ರಭಾಸ್ನ ‘ಸಲಾರ್’ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದರ ಸುತ್ತ ಸೃಷ್ಟಿಯಾಗಿರುವ ಹೈಪ್.
ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ, ಡಿಸೆಂಬರ್ 22ರಂದು ಶಾರುಖ್ ನಟನೆಯ ‘ಡಂಕಿ’ ಚಿತ್ರ ಬಿಡುಗಡೆಯಾಗಲಿದೆ ಎಂದು ಹಿಂದೆಯೇ ಘೋಷಣೆಯಾಗಿತ್ತು. ನಿನ್ನೆ ಹೊಂಬಾಳೆ ಫಿಲಂಸ್ ಪ್ರಭಾಸ್ ನಟನೆಯ ‘ಸಲಾರ್’ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆ ಮಾಡಿದ್ದು, ಅದೂ ಕೂಡ ಡಿಸೆಂಬರ್ 22ರಂದೇ ಬಿಡುಗಡೆಯಾಗಲಿದೆ. ಇವೆರಡೂ ಬಾಕ್ಸಾಫೀಸ್ನಲ್ಲಿ ಪೈಪೋಟಿ ನಡೆಸಲಿವೆ. ‘ಸಲಾರ್’ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ಇವೆರಡು ಚಿತ್ರಗಳ ಸುತ್ತ ಹಿಂದು-ಮುಸ್ಲಿಂ, ಉತ್ತರ ದಕ್ಷಿಣ ಎನ್ನುವಂಥ ದಿಕ್ಕಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ, ವಾಗ್ವಾದಗಳು ಜೋರಾಗಿ ನಡೆಯುತ್ತಿವೆ.
‘ಆದಿಪುರುಷ್’ ಚಿತ್ರದ ನಂತರ ಪ್ರಭಾಸ್ ಅನ್ನು ಹಿಂದೂತ್ವವಾದಿಗಳ ಪ್ರತಿನಿಧಿ ಎಂಬಂತೆ ಒಂದು ವರ್ಗ ಬಿಂಬಿಸುತ್ತಿದೆ. ಇನ್ನು ಶಾರುಖ್ ಖಾನ್ ಮುಸ್ಲಿಂ ಆಗಿರುವುದರಿಂದ ಪೈಪೋಟಿಗೆ ಕೆಲವರು ಹಿಂದು ಮುಸ್ಲಿಂ ಆಯಾಮ ಕೊಡಲು ತಿಣುಕುತ್ತಿದ್ದಾರೆ. ಇನ್ನು ಪ್ರಭಾಸ್, ಬಾಹುಬಲಿಯ ನಂತರ ಪ್ಯಾನ್ ಇಂಡಿಯನ್ ಸ್ಟಾರ್ ಆಗಿದ್ದರೆ, ಶಾರುಖ್ ಸದ್ಯ ದಕ್ಷಿಣದ ಪ್ರಬಲ ಪೈಪೋಟಿಯ ನಡುವೆ ಬಾಲಿವುಡ್ ಮಾನ ಕಾಪಾಡುವ ಏಕೈಕ ಸ್ಟಾರ್ ಆಗಿದ್ದಾರೆ. ಇತ್ತೀಚಿನ ಉತ್ತರ ಮತ್ತು ದಕ್ಷಿಣ ಚಿತ್ರಗಳ ಸ್ಪರ್ಧೆಯ ಮುಂದುವರಿಕೆ ಇದು ಎಂದು ಕೆಲವರು ವಾದಿಸುತ್ತಿದ್ದಾರೆ. ಶಾರುಖ್, ‘ಪಠಾಣ್’ ಮತ್ತು ‘ಜವಾನ್’ ನಂತರ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಪ್ರಭಾಸ್ ‘ಆದಿಪುರಷ್’ನ ದಾರುಣ ಸೋಲಿನಿಂದ ಹೊರಬರಲು ‘ಸಲಾರ್’ ಗೆಲುವಿಗಾಗಿ ಕಾತರಿಸುತ್ತಿದ್ದಾರೆ.
‘ಡಂಕಿ’ ಶಾರುಖ್ ನಟನೆಯ ಸಿನಿಮಾ ಎನ್ನುವುದರ ಜೊತೆಗೆ ಸಂವೇದನಾಶೀಲ ನಿರ್ದೇಶಕ ರಾಜ್ಕುಮಾರ್ ಹಿರಾನಿಯ ಚಿತ್ರ. ‘ಮುನ್ನಾಭಾಯ್ ಎಂಬಿಬಿಎಸ್’, ‘ಪೀಕೆ’, ‘ತ್ರೀ ಈಡಿಯೆಟ್ಸ್’, ‘ಸಂಜೂ’ ಚಿತ್ರಗಳನ್ನು ನಿರ್ದೇಶಿಸಿರುವ ಹಿರಾನಿ, ತನ್ನ ಸೂಕ್ಷ್ಮ ನೋಟಕ್ಕೆ ಹೆಸರಾದವರು. ಜ್ವಲಂತ ಸಮಸ್ಯೆಗೆ ಹಾಸ್ಯದ ಲೇಪನ ನೀಡಿ ಚಿತ್ರ ತೆಗೆಯುವ, ಒಂದು ಚಿತ್ರ ಮಾಡಲು ಹಲವು ವರ್ಷ ತಯಾರಿ ನಡೆಸುವ ಹಿರಾನಿ, ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಿರ್ದೇಶಕರಲ್ಲೊಬ್ಬರು.
ಇನ್ನು ‘ಸಲಾರ್’, ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ. ‘ಕೆಜಿಎಫ್’ ಭಾಗ ಒಂದು ಮತ್ತು ಎರಡರ ಮೂಲಕ ಪ್ಯಾನ್ ಇಂಡಿಯಾ ಡೈರೆಕ್ಟರ್ ಎನ್ನಿಸಿಕೊಂಡವರು ಪ್ರಶಾಂತ್. ಅವರದ್ದು ಹಿರಾನಿಗೆ ವಿರುದ್ಧವಾದ ಶೈಲಿ. ಅವರೂ ಕೂಡ ಒಂದು ಚಿತ್ರ ಮಾಡಲು ಹಲವು ವರ್ಷಗಳ ಸಮಯ ತೆಗೆದುಕೊಳ್ಳುತ್ತಾರೆ. ಗಳಿಕೆಯಲ್ಲಿ ದಾಖಲೆ ಮಾಡಿದ ಕೆಜಿಎಫ್ 2 ನಂತರ ಬರುತ್ತಿರುವ ಅವರ ಸಿನಿಮಾ ‘ಸಲಾರ್’. ವಿಪರೀತವಾದ ಹೀರೋ ಬಿಲ್ಡಪ್ಗಳು, ತಮ್ಮದೇ ವಿಶಿಷ್ಟ ಶೈಲಿಯ ಆಕ್ಷನ್ ಸೀನ್ಗಳಿಂದಾಗಿ ಹೆಸರಾದವರು ಪ್ರಶಾಂತ್.
ಹಿರಾನಿಗೆ ಹೋಲಿಸಿಕೊಂಡರೆ ಪ್ರಶಾಂತ್, ನಿರ್ದೇಶಕರಾಗಿ ಅಷ್ಟು ಸೂಕ್ಷ್ಮತೆ ಇರುವವರಲ್ಲ ಎನ್ನಲು ಸಾಕಷ್ಟು ಕಾರಣಗಳಿವೆ. ಹಾಗೆಂದು ಸೂಕ್ಷ್ಮಜ್ಞ ನಟ ನಿರ್ದೇಶಕರ ಚಿತ್ರಗಳು ಎಲ್ಲ ಕಾಲಕ್ಕೂ ಇತರೆ ಚಿತ್ರಗಳ ಪೈಪೋಟಿ ನಡುವೆ ಗೆಲ್ಲುತ್ತವೆ ಎಂದೇನೂ ಇಲ್ಲ. ಜೊತೆಗೆ ತನ್ನ ಆಕ್ಷನ್ ಸೀನ್ಗಳಿಂದ, ನಸುಗತ್ತಲೆಯ ದೃಶ್ಯ ಸಂಯೋಜನೆಯ ಶೈಲಿಯಿಂದ ಚಿತ್ರಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಗೆಲ್ಲಿಸಿರುವವರು ಪ್ರಶಾಂತ್. ಜೊತೆಗೆ ಇವರಿಬ್ಬರೂ ಇದುವರೆಗೆ ಸೋಲೇ ಕಾಣದ ನಿರ್ದೇಶಕರು ಎನ್ನುವುದು ಮತ್ತೊಂದು ಮುಖ್ಯ ಅಂಶ. ಹಾಗಾಗಿ ಇವೆರಡು ಚಿತ್ರಗಳ ನಡುವೆ ಯಾವ ಚಿತ್ರ ಗೆಲ್ಲಲಿದೆ, ಯಾರ ಚಿತ್ರ ಹೆಚ್ಚು ಗಳಿಸಲಿದೆ ಎನ್ನುವುದು ಕುತೂಹಲ ಕೆರಳಿಸಿರುವುದಂತೂ ನಿಜ.
ಆದರೆ, ಉದ್ಯಮ ಪಂಡಿತರ ಆತಂಕವೇ ಬೇರೆ. ಎರಡು ದೊಡ್ಡ ಚಿತ್ರಗಳನ್ನು ಒಂದೇ ದಿನ ಬಿಡುಗಡೆ ಮಾಡುತ್ತಿರುವುದು ಒಳ್ಳೆಯ ನಿರ್ಧಾರವಲ್ಲ ಎನ್ನುವುದು ಅವರ ಅಭಿಪ್ರಾಯ. ಕೊರೊನಾ ನಂತರ ಚಿತ್ರರಂಗ ಭಾರಿ ಪೆಟ್ಟು ತಿಂದಿತ್ತು. ಜೊತೆಗೆ ಸಾಲು ಸಾಲು ಸೋಲುಗಳು ಚಿತ್ರರಂಗವನ್ನು ಜರ್ಜರಿತಗೊಳಿಸಿವೆ. ಹೀಗಿರುವಾಗ ಇಂಥ ರಿಸ್ಕ್ ಬೇಕಿರಲಿಲ್ಲ ಎನ್ನುವುದು ಉದ್ಯಮ ಪಂಡಿತ ತರಣ್ ಆದರ್ಶ್ ಅನಿಸಿಕೆ.
ಒಟ್ಟಿಗೆ ಬಿಡುಗಡೆಯಾಗುತ್ತಿರುವುದರಿಂದ ಎರಡೂ ಚಿತ್ರಗಳ ಹಣ ಗಳಿಕೆಯಲ್ಲಿ ಕನಿಷ್ಠ ತಲಾ ನೂರು ಕೋಟಿ ರೂಪಾಯಿಯಾದರೂ ಕಡಿಮೆಯಾಗುತ್ತದೆ ಎನ್ನುವುದು ಕೆಲವರ ಲೆಕ್ಕಾಚಾರ. ದಕ್ಷಿಣದಲ್ಲಿ ‘ಸಲಾರ್’ ಹೆಚ್ಚು ಓಡಬಹುದು, ಉತ್ತರದಲ್ಲಿ ಶಾರುಖ್ ಜಯದ ನಡಿಗೆ ಮುಂದುವರೆಸಬಹುದು ಎನ್ನುವ ಅಭಿಪ್ರಾಯಗಳೂ ವ್ಯಕ್ತವಾಗುತ್ತಿವೆ.
ಈ ಸುದ್ದಿ ಓದಿದ್ದೀರಾ: ಕಾವೇರಿ ವಿವಾದ | ತಮಿಳು ನಟ ಸಿದ್ಧಾರ್ಥ್ ಕ್ಷಮೆ ಕೇಳಿದ ನಟ ಶಿವರಾಜ್ಕುಮಾರ್
ಎರಡೂ ದೊಡ್ಡ ಸಿನಿಮಾಗಳು, ನಿಜ. ಎರಡರ ಯಶಸ್ಸು ಆಯಾ ಚಿತ್ರರಂಗಗಳ ಪಾಲಿಗೆ ಬಹಳ ಮುಖ್ಯ ಎನ್ನುವುದೂ ನಿಜ. ಅದರಾಚೆಗೆ ಇವೆರಡರ ಗೆಲುವು ಅಥವಾ ಸೋಲಿಗೆ ಯಾವ ವಿಶೇಷ ಪ್ರಾಧಾನ್ಯತೆಯೂ ಇಲ್ಲ ಎನ್ನುವುದು ಕೂಡ ಅಷ್ಟೇ ನಿಜ. ಉತ್ತರ ದಕ್ಷಿಣ, ಹಿಂದು ಮುಸ್ಲಿಂ ಎನ್ನುವುದೆಲ್ಲ ಇಲ್ಲಿ ನಿಲ್ಲುವುದಿಲ್ಲ. ಕೊನೆಗೂ ಉಳಿಯುವುದು, ಗೆಲ್ಲುವುದು ಸಿನಿಮಾ ಮಾತ್ರ. ಸಮಯ ಕಳೆಯಲು ಸಾಮಾಜಿಕ ಜಾಲತಾಣಗಳಲ್ಲಿ ಹುಸಿ ನೆರೇಟಿವ್ಗಳನ್ನು ಸೃಷ್ಟಿಸುತ್ತಾ, ಅವುಗಳನ್ನು ದೇಶದ ದೊಡ್ಡ ಸಮಸ್ಯೆ ಎಂಬಂತೆ ಬಿಂಬಿಸುವವರು ಇದನ್ನು ಅರಿಯಬೇಕಾಗಿದೆ.