ನಮ್ ಜನ | ‘ನಾವು ಮನೆ ಒಡೆಯುವವರಲ್ಲ, ಕಟ್ಟುವವರು’ ಎಂದ ಏಜಾಜ್ ಪಾಷ

Date:

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)

"ಕಸದಲ್ಲಿ ಕಾಸು ಕಾಣುವ ಜನ ನಾವು. ಅದನ್ನು ನಂಬಿಯೇ ಬದುಕುತ್ತಿರುವವರು. ಇದರ ಹಿಂದೆ 35 ವ‍ರ್ಷಗಳ ಶ್ರಮವಿದೆ. ನಾಲ್ಕು ಜನ ಸ್ನೇಹಿತ್ರು ಸೇರಿ ಸೊನ್ನೆಯಿಂದ ಶುರು ಮಾಡಿದ ವ್ಯಾಪಾರ ಇವತ್ತು 15 ಲಕ್ಷ ರೂಪಾಯಿ ಬಂಡವಾಳದ ಉದ್ಯಮವಾಗಿದೆ. 32 ಜನ ಕೆಲಸಗಾರರಿದ್ದಾರೆ..."

“ನಾವು ಮನೆ ಮುರುಕರಲ್ಲ, ಒಡೆಯುವವರಲ್ಲ-ಕಟ್ಟುವವರು. ಜನ ಹಾಗನ್ನಬಹುದು, ಆದರೆ ನಮಗೆ ಹಾಗೆ ಅನಿಸಿಲ್ಲ. ಪ್ರಾಣವನ್ನು ಒತ್ತೆ ಇಟ್ಟು ಮಾಡುವ ಕೆಲಸ, ಕಷ್ಟದ ಕೆಲಸ, ಮನಸ್ಸಿಗೆ ಹಿಡಿಸಿದ ಕೆಲಸ… ಇಷ್ಟಪಟ್ಟು ಮಾಡುವ ಕೆಲಸ,” ಎನ್ನುತ್ತಾರೆ ಏಜಾಜ್ ಪಾಷ.

‘ರಾಯಲ್ ಬಿಲ್ಡಿಂಗ್ ಡೆಮಾಲಿಷನ್’ ಮಾಲೀಕ ಏಜಾಜ್ ಪಾಷ ಅವರಿಗೆ, “ಜನ ನಿಮ್ಮನ್ನು ಮನೆಮುರುಕರು ಅಂತಾರಲ್ಲ?” ಎಂದಿದ್ದಕ್ಕೆ ನಗುತ್ತಲೇ, “ಒಡೆಯೋದ್ಯಾಕೆ… ಕಟ್ಟೋಕಲ್ವ?” ಎಂದು ಪ್ರಶ್ನಿಸುವ ಮೂಲಕ ಕಟ್ಟುವುದರ ಕತೆ ಬಿಚ್ಚಿಟ್ಟರು.  

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಾಜಾಜಿನಗರದ ಮರಿಯಪ್ಪನ ಪಾಳ್ಯದ ಅಶ್ರಫಿಯಾ ಮಸೀದಿ ಮುಂಭಾಗದ ಮೋಟು ಗೋಡೆ ಮತ್ತು ಆ ಖಾಲಿ ನಿವೇಶನದೊಳಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಗುಜರಿ ಸಾಮಾನು – ಮುರಿದುಬಿದ್ದ ಮನೆಯ ರೂಪಕದಂತೆ ಕಾಣುತ್ತಿತ್ತು. ಯುದ್ಧಭೂಮಿಯನ್ನು ನೆನಪಿಸುತ್ತಿತ್ತು. ಅದರ ಪಕ್ಕದ ಎರಡು-ಮೂರು ಮಳಿಗೆ, ರಸ್ತೆ ಬದಿಯ ಜಾಗದಲ್ಲೆಲ್ಲ ಹಳೆ ಮನೆಯ ಜಂತಿ, ತೊಲೆ, ಬಾಗಿಲು, ಕಿಟಕಿ, ಕುರ್ಚಿ, ಮಂಚ, ಮೇಜು, ಗ್ಯಾಸ್ ಸಿಲಿಂಡರು, ಜಿಂಕ್ ಶೀಟು, ಮನೆ ಗೇಟು, ನಿಲುವುಗನ್ನಡಿಗಳು, ಹಳೇ ಕಬ್ಬಿಣದ ಸಾಮಾನುಗಳು, ಗುಜರಿ ಐಟಂಗಳು – ಎಲ್ಲೆಂದರಲ್ಲಿ ಬಿದ್ದಿದ್ದವು. ಬಳಸಲು ಯೋಗ್ಯವಾಗಿದ್ದ ಮರ ಮತ್ತು ಕಬ್ಬಿಣದಿಂದ ತಯಾರಿಸಿದ ವಸ್ತುಗಳನ್ನು ಒಂದು ಕಡೆ ಜೋಡಿಸಿಡಲಾಗಿತ್ತು.

ಬಿಳಿ ಜುಬ್ಬಾ-ಪೈಜಾಮದ ಜೊತೆಗೆ ಉದ್ದದ ಬಿಳಿ ಗಡ್ಡ ಮತ್ತು ಬಿಳಿ ರೌಂಡ್ ಟೋಪಿ ಧರಿಸಿದ್ದ 57ರ ಹರೆಯದ ಏಜಾಜ್ ಪಾಷ, ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಗುಜರಿ ಐಟಂಗಳನ್ನು ದಿಟ್ಟಿಸಿ ನೋಡುತ್ತಿದ್ದರು. ಆ ನೋಟದಲ್ಲಿ ನೋಟುಗಳನ್ನು ಕಾಣುತ್ತಿದ್ದರು. ಒಂದೊಂದಕ್ಕೂ ಒಂದೊಂದು ಬೆಲೆ ಇತ್ತು. ಅದರಲ್ಲಿ ಅವರ ಬದುಕಿತ್ತು.

“ಇವುಗಳನ್ನು ಕೊಳ್ಳುವ ಜನರೂ ಇದ್ದಾರ? ವ್ಯಾಪಾರ ಆಗುತ್ತದಾ? ಎಂದೆ.

“ಏನ್ ಹಿಂಗಂತಿರ? ಬಡವರಾಗಲೀ, ಶ್ರೀಮಂತರಾಗಲೀ ಮನೆ ಇರಬೇಕಲ್ವ? ದುಡ್ಡುಕಾಸಲ್ಲಿ ಚೆನ್ನಾಗಿರೋರು ಹೊಸ ಮನೆ ಕಟ್ಟಸ್ತರೆ, ಸಣ್ಣ ಸ್ಕ್ರೂನಿಂದ ಹಿಡಿದು ಎಲ್ಲವನ್ನು ದುಬಾರಿ ಬೆಲೆಯ ಸಾಮಾನು ಖರೀದಿಸಿಸ್ತರೆ. ಇಲ್ಲದೆ ಇರೋರು? ಹಳೇ ಮನೇನ ಹಂಗೂ ಹಿಂಗೂ ರಿಪೇರಿ ಮಾಡ್ಕೊಂಡು ಇರೋರು? ಅವರಿಗಾಗಿ ನಾವಿದ್ದೀವಿ. ಅಂತೋರು ನಮ್ಮನ್ನು ಹುಡಕೊಂಡ್ ಬರ್ತರೆ. ಮನೆಯ ಮುಂದಿನ ಬಾಗಿಲಿನಿಂದ ಹಿಡಿದು ಟೆರೇಸ್ ಮೇಲಿಡುವ ಸಿಂಟೆಕ್ಸ್ ಡ್ರಮ್ ವರೆಗೆ, ಎಲ್ಲಾ ಥರದ್ದು- ಮರದ್ದು, ಕಬ್ಬಿಣದ್ದು, ಪ್ಲಾಸ್ಟಿಕ್ದು ನಮ್ಮತ್ರ ಇವೆ…”  

“…ಇದೆಲ್ಲ ನಿಮಗೆ ಗುಜರಿ ಐಟಂ ಥರ ಕಾಣಬಹುದು. ಎಲ್ಲೆಂದರಲ್ಲಿ ಬಿಸಾಡಿರೋದು ನೋಡಿ, ಬೆಲೆ ಇಲ್ಲ ಅಂತ ತಿಳ್ಕಬಹುದು. ಕಸದಲ್ಲಿ ಕಾಸು ಕಾಣುವ ಜನ ನಾವು. ಅದನ್ನು ನಂಬಿಯೇ ಬದುಕುತ್ತಿರುವವರು. ಇದರ ಹಿಂದೆ 35 ವ‍ರ್ಷಗಳ ಶ್ರಮವಿದೆ. ನಾಲ್ಕು ಜನ ಸ್ನೇಹಿತ್ರು ಸೇರಿ ಸೊನ್ನೆಯಿಂದ ಶುರು ಮಾಡಿದ ವ್ಯಾಪಾರ ಇವತ್ತು 15 ಲಕ್ಷ ರೂಪಾಯಿ ಬಂಡವಾಳದ ಉದ್ಯಮವಾಗಿದೆ. 32 ಜನ ಕೆಲಸಗಾರರಿದ್ದಾರೆ. ಮೂವರು ಕಾರ್ಪೆಂಟರ್, ಒಬ್ಬ ಪೈಂಟರ್ ಇದಾರೆ. ಅವರಿಗೆ ಪ್ರತಿದಿನ ಕೆಲಸ ಕೊಡಬೇಕು, ಬಟವಾಡೆ ಮಾಡಬೇಕು. ಜನ ಎಲ್ಲೆಲ್ಲಿಂದನೋ ಹುಡಕ್ಕೊಂಡ್ ಬರ್ತರೆ. ಎಲ್ಲೂ ಸಿಗದೇ ಇರೋ ಸಾಮಾನು, ಅವರಿಗೆ ಬೇಕಾದ್ದು ನಮ್ಮತ್ರ ಸಿಗುತ್ತೆ. ಕೆಲವು ಸಲ ಒಂದು ವಾರ ಆದ್ರೂ ವ್ಯಾಪಾರ ಆಗಲ್ಲ. ಆಗ ದಿನಕ್ಕೆ ಐದ್ ಸಲ ನಮಾಜ್ ಮಾಡ್ಕೊಂಡು, ಟೀ ಕುಡ್ಕೊಂಡ್ ಕೂತಿರತಿವಿ. ಯಾವತ್ತೋ ವ್ಯಾಪಾರ ಆಗತ್ತೆ, ಕಾಯಬೇಕು, ಸಮಾಧಾನ, ತಾಳ್ಮೆ ಭಾಳ ಮುಖ್ಯ ಈ ವ್ಯಾಪಾರದಲ್ಲಿ…”

ಸಮಾಧಾನದ ಸಾಹೇಬ್ರು ಜೊತೆ ಮಾತನಾಡುತ್ತ, “ಈ ಮನೆ ಒಡೆಯುವ ಕೆಲಸವನ್ನೇ ಏಕೆ ಆಯ್ದುಕೊಂಡ್ರಿ?” ಎಂದೆ.

“ನಾನು ಹುಟ್ಟಿ ಬೆಳೆದದ್ದೆಲ್ಲ ಇದೇ ಮರಿಯಪ್ಪನ ಪಾಳ್ಯದಲ್ಲಿ. ಒಂಬತ್ತನೇ ಕ್ಲಾಸ್‌ವರೆಗೆ ಓದಿದೆ. ಮುಂದೆ ಓದಲಿಕ್ಕೆ ಮನಸ್ಸಿರಲಿಲ್ಲ, ಓದು ಅಂತ ಮನೆಯೋರೂ ಹೇಳ್ಲಿಲ್ಲ. ಬರ್ಮಾ ಬಜಾರನಲ್ಲಿ ಕೆಲಸಕ್ಕೆ ಸೇರಿದೆ. ಕೈಗೆ ಕಾಸು ಸಿಕ್ಕಿದ್ಮೇಲೆ ಓದೋದೆಲ್ಲಿ? ಆಮೇಲೆ ನನ್ನ ಸ್ನೇಹಿತರು ಈ ಗುಜರಿ ಕೆಲಸ ಮಾಡ್ತಿದ್ರು, ಅವರ ಜೊತೆ ಸೇರಿಕೊಂಡೆ. ಸುಮಾರು ಹದಿನೆಂಟು ವರ್ಷಗಳ ಕಾಲ ನಮಗೆ ಅಂಗಡಿ ಅನ್ನೋದೇ ಇರಲಿಲ್ಲ. ಹಾರೆ, ಸುತ್ತಿಗೆ, ಗುದ್ದಲಿ, ಬಾಂಡ್ಲಿನೆಲ್ಲ ಒಂದು ಆಟೋದಲ್ಲಿ ಹಾಕ್ಕೊಂಡು ಊರೆಲ್ಲ ಸುತ್ತೋದು, ಎಲ್ಲಾದ್ರು ಮನೆ ಒಡೆಯೋ ಕೆಲಸ ಇದ್ರೆ ಮಾಡೋದು, ಅಲ್ಲೇ ಸಾಮಾನೆಲ್ಲ ಗುಜರಿಯೋರಿಗೆ ಮಾರದು ಮಾಡ್ತಿದ್ದೋ. ಆಮೇಲೆ, ನಿಧಾನವಾಗಿ ನಾವೇ ಯಾಕೊಂದ್ ಅಂಗಡಿ ಮಳಿಗೆ ಮಾಡಬಾರದು ಅಂತೇಳಿ ಮಾಡ್ದೋ; ಅದಕ್ಕೆ ‘ರಾಯಲ್ ಬಿಲ್ಡಿಂಗ್ ಡೆಮಾಲಿಷನ್’ ಅಂತ ಹೆಸರಿಟ್ಟೋ. ಇವತ್ತು ಮೂರು ಮಳಿಗೆಗಳಿಗೆ ತಿಂಗಳಿಗೆ 65 ಸಾವಿರ ಬಾಡಿಗೆ ಕಟ್ತಿದೀವಿ. ವ್ಯವಹಾರ ದೊಡ್ಡದಾಗಿ ಬೆಳೆದಿದೆ. ನಲವತ್ತು ಫ್ಯಾಮಿಲಿ ಅನ್ನ ಉಣ್ತಿದಾರೆ. ಇದಕ್ಕಿಂತ ಇನ್ನೇನು ಬೇಕೇಳಿ…”

ಗುಜರಿಯಿಂದ ಗುತ್ತಿಗೆದಾರರಾಗುವ ಹಂತಕ್ಕೆ ಬೆಳೆದು ನಿಂತ ಏಜಾಜರಿಗೆ, “ಈ ಮನೆ ಒಡೆಯುವವರು ನಿಮ್ಮನ್ನು ಹೇಗೆ ಸಂಪರ್ಕಿಸುತ್ತಾರೆ?” ಎಂದೆ.

“ನಾವು ಮೊದಲಿನಿಂದಲೂ ಇದೇ ಲೈನ್‌ನಲ್ಲಿರೋದ್ರಿಂದ, ಕೆಲವು ಇಂಜಿನಿಯರ್‌ಗಳ ಪರಿಚಯ ಇದೆ. ಅವರು ನಮಗೆ ಹೇಳ್ತರೆ, ಜನರನ್ನು ಕಳಸ್ತರೆ. ಅದು ಬಿಟ್ಟರೆ ಈಗಾಗಲೇ ಮನೆ ಕಾಂಟ್ರಾಕ್ಟ್ ಕೊಟ್ಟೋರು, ಇನ್ನೊಬ್ಬರಿಗೆ ಹೇಳ್ತರೆ. ಹಿಂಗೇ ಬಾಯಿಂದ ಬಾಯಿಗೆ, ಜನಾನೇ ಪ್ರಚಾರ ಮಾಡ್ತರೆ, ಹುಡಕ್ಕೊಂಡೂ ಬರ್ತರೆ…”

“ಮನೆ ಒಡೆಯಲಿಕ್ಕೆ ಏನಾದ್ರು ಪರ್ಮಿಷನ್ ತಗೋಬೇಕಾ, ರೂಲ್ಸು ರೆಗ್ಯೂಲೇಷನ್ ಏನಾದ್ರು ಇದೆಯಾ?” ಎಂದೆ.

“ಸಾಮಾನ್ಯವಾಗಿ ಹಳೇ ಮನೆಗಳು ಹಂಗೇ ಬಿದ್ದುಹೋಗ್ತವೆ. ಕೆಲವು ಮಳೆ-ಗಾಳಿಗೆ ಬೀಳ್ತವೆ. ಇನ್ ಕೆಲವ್ರು ಹಳೆ ಮನೆಗಳನ್ನು ಕೆಡವಿ ಹೊಸ ಮನೆ, ಕಾಂಪ್ಲೆಕ್ಸ್ ಕಟ್ಟೋರು, ಯಾವುದೋ ಒಂದ್ ಪೋರ್ಷನ್ ಮಾತ್ರ ಕೆಡವಿ ಕಟ್ಟೋರು – ಹೀಗೆ ಎಲ್ಲರೂ ನಮ್ ಹತ್ರ ಬರ್ತರೆ. ಮೊದಲಿಗೆ ಮನೆ ಮಾಲೀಕರು ಬಿಬಿಎಂಪಿಯಿಂದ ಡೆಮಾಲಿಷನ್ ಮಾಡಲಿಕ್ಕೆ ಪರ್ಮಿಷನ್ ತಗೋಬೇಕು. ನಾವು ಆ ಪರ್ಮಿಷನ್ ಕಾಪಿ ನೋಡಿದ ಮೇಲೆ, ಮನೆಯ ಅಳತೆ, ಅದಕ್ಕೆ ಬೇಕಾಗೋ ಕೆಲಸಗಾರರು, ಎಷ್ಟು ದಿನ ಹಿಡಿಯುತ್ತೆ ಎನ್ನುವುದರ ಮೇಲೆ ಅಂದಾಜು ಮಾಡ್ತಿವಿ. ಡೈಮೆನ್ಷನ್, ಫ್ಲೋರ್ ಮೇಲೆ ರೇಟ್ ಫಿಕ್ಸ್ ಮಾಡ್ತಿವಿ. ಆಮೇಲೆ ಅಕ್ಕ-ಪಕ್ಕ ಮನೆಗಳ ತಂಟೆ-ತಗಾದೆನೆಲ್ಲ ಸರಿ ಮಾಡಿಕೋತೀವಿ. ಕೆಡವುವ ಕೆಲಸ ಕಷ್ಟದ್ದು. ಇದ್ದಕ್ಕಿದ್ದಂಗೆ ಗೋಡೆ ಬಿದ್ದು ಕೆಲವು ಸಲ ಸತ್ತಿರದು ಇದೆ, ಆದರೆ ನಮ್ಮಲ್ಲಿ ಏನೂ ಆಗಿಲ್ಲ. ಜೊತೆಗೆ ಗಲಾಟೆ, ಹೊಡೆದಾಟಗಳು ಇರ್ತವೆ, ಅವೆಲ್ಲವನ್ನು ನಿಭಾಯಿಸ್ಕೊಂಡು ಹೋಗಬೇಕು. ಪೊಲೀಸ್ನೋರು, ಬಿಬಿಎಂಪಿ ಅಧಿಕಾರಿಗಳು ಬರ್ತರೆ, ನೋಡ್ಕಬೇಕು. ಪಬ್ಲಿಕ್ಕಿಗೆ ತೊಂದರೆಯಾಗದಂತೆ ಕೆಲಸ ಮಾಡಬೇಕು. ಹೊಸ ಬಿಲ್ಡಿಂಗ್ ಆಗಿದ್ರೆ, ಒಳ್ಳೆ ಮೆಟಿರಿಯಲ್ ಸಿಗುತ್ತೇ ಅನ್ನಿಸದ್ರೆ, ನಾವೇ ಅವರಿಗೆ ದುಡ್ಡು ಕೊಡ್ತಿವಿ. 50 ಸಾವಿರದಿಂದ 3 ಲಕ್ಷದವರೆಗೂ ಕೊಟ್ಟಿದ್ದೂ ಇದೆ. ಈ ಕೆಲಸದಿಂದ ತಿನ್ನಕ್ಕೆ ಉಣ್ಣಕ್ಕೆ ಏನೂ ತೊಂದರೆಯಾಗಿಲ್ಲ. ಇಬ್ಬರು ಮಕ್ಕಳಿದಾರೆ, ಮಗ ಚಪ್ಪಲಿ ಅಂಗಡಿ ಇಟ್ಟಿದ್ದ, ಅದ್ನ ಬಿಟ್ಟು ಈಗ ನಂಜೊತೆನೆ ಇದಾನೆ. ಮಗಳಿಗೆ ಮದುವೆಯಾಗಿದೆ…”

“ಬಿಲ್ಡಿಂಗ್ ಒಡೆಯೋದರ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎಂದೆ.

“ನನ್ನ ಪ್ರಕಾರ ಇದು ಕುದುರೆ ಜೂಜಿದ್ದಂಗೆ. ದಪ್ಪ ಗೋಡೆ, ಮಣ್ಣು-ಕಲ್ಲು ಸಿಕ್ತು ಅಂದ್ರೆ ನಸೀಬು ಕೆಡ್ತು ಅಂತ. ಖರ್ಚು ಜಾಸ್ತಿ, ಟೈಮು ಹಿಡಿತದೆ, ಲಾಸೂ ಆಗ್ತದೆ. ಕೆಲವು ಬಿಲ್ಡಿಂಗ್‌ಗಳಿಂದ ಜಾಕ್‌ಪಾಟ್ ಹೊಡಿತದೆ… ಎರಡೂ ಇರ್ತದೆ. ಕೆಲಸಗಾರರಿಗೆ ಅಡ್ವಾನ್ಸ್ ಕೊಟ್ಟುಕೊಂಡು ಇಟ್ಕೊಂಡಿರಬೇಕು. ಮನೆ ಒಡೆಯುವುದಕ್ಕೆ ಬೇಕಾದ ಹಾರೆ, ಪಿಕಾಸಿ, ಗುದ್ದಲಿ, ಬಾಂಡ್ಲಿಯ ಜೊತೆಗೆ ಡ್ರಿಲ್ಲಿಂಗ್ ಮೆಷಿನ್, ಕಟಿಂಗ್ ಮೆಷಿನ್, ತ್ಯಾಜ್ಯ ಸಾಗಿಸಲು ಟಿಪ್ಪರ್‌ಗಳನ್ನು ರೆಡಿ ಇಟ್ಕೊಂಡಿರಬೇಕು. ದೊಡ್ಡ ಬಿಲ್ಡಿಂಗ್ ಸಿಕ್ಕಿದಾಗ ಜೆಸಿಬಿ, ಕ್ರೇನ್ ಬೇಕಾಗುತ್ತೆ – ಬಾಡಿಗೆಗೆ ತರಬೇಕು. ಮನೆ ಡೆಮಾಲಿಷನ್ ಮಾಡಿದ ಮೇಲೆ, ಜಾಗನೆಲ್ಲ ಕ್ಲೀನ್ ಮಾಡಿಕೊಟ್ಟು, ಸಿಗೋ ಸಾಮಾನು ತಂದು ಇಲ್ಲಿ ಗುಡ್ಡೆ ಹಾಕಬೇಕು. ಚೆನ್ನಾಗಿರೋದು, ಉಪಯೋಗಕ್ಕೆ ಬರೋದು ಎಲ್ಲ ತೆಗೆದು ರಿಪೇರಿ ಮಾಡ್ಕಬೇಕು. ಬಳಸಕ್ಕೆ ಯೋಗ್ಯವಾಗಿರುವಂತೆ, ಹೊಸದರಂತೆ ಮಾಡಬೇಕು. ಅದನ್ನು ತಗಂಡೋರಿಗೆ ಸಮಾಧಾನ ಆಗಬೇಕು, ಅದು ಬಾಳಿಕೆ ಬರಬೇಕು. ಬಳಸದೋರು ಚೆನ್ನಾಗಿದೆ ಅನ್ನಬೇಕು, ಹುಡಕ್ಕೊಂಡು ಬರಬೇಕು. ಅವರಿಂದ ನಾವು, ನಮ್ಮಿಂದ ಅವರು- ಬದುಕಬೇಕು…”

ಎಜಾಜ್ ಪಾಷ ಅವರೊಂದಿಗೆ ಲೇಖಕರು

ಬದುಕಿನ ಫಿಲಾಸಫಿಯತ್ತ ಹೊರಳಿದ ಏಜಾಜ್ ಪಾಷರಿಗೆ, “ಇತ್ತೀಚೆಗೆ ಈ ‘ವಾಸ್ತು’ ಜಾಸ್ತಿಯಾಗಿದೆ. ಅದರಿಂದ ನಿಮ್ಮ ಬದುಕಿನಲ್ಲಿ ಏನಾದರೂ ಬದಲಾವಣೆ ಆಗಿದೆಯಾ?” ಅಂದೆ.

“ನಿಜ ಹೇಳ್ಬೇಕಂದ್ರೆ, ಈ ವಾಸ್ತುಯಿಂದ ನಮ್ಮ ವ್ಯಾಪಾರ ಜಾಸ್ತಿಯಾಗಿದೆ. ಸರಿಯಾಗಿರೋ ಮನೇನೂ ವಾಸ್ತು ಸರಿ ಇಲ್ಲ ಅಂತ ಒಡೆಸ್ತರೆ, ಮೂಲೆ ಕೀಳಸ್ತರೆ, ಬಚ್ಚಲುಮನೆ ಬದಲು ಮಾಡ್ತರೆ, ಕುಬೇರ ಮೂಲೆ, ದೇವ ಮೂಲೆ, ಅಗ್ನಿ ಮೂಲೆ ಅಂತರೆ, ಬಾಗಿಲು ಈ ದಿಕ್ಕಿಗಿರಬೇಕು ಅಂತರೆ – ಇದೆಲ್ಲವೂ ನಮಗೆ ಅನುಕೂಲ ಆಗಿದೆ. ಆ ವಾಸ್ತು ಪಂಡಿತರಿಗೆ ನಾವು ಸಲಾಮ್ ಹೇಳಬೇಕು…”

“…ಈ ವಾಸ್ತು ಬರೋದಕ್ಕೆ ಮುಂಚೆ ಬರೀ ಹಳೇ ಬಿಲ್ಡಿಂಗ್ ಗಳನ್ನು ನೋಡ್ತಿದ್ದೋ. ಈಗ ಹೊಸ ಬಿಲ್ಡಿಂಗ್‌ಗಳೇ ಬರ್ತಿವೆ. ಹೊಸ ಬಿಲ್ಡಿಂಗ್‌ನಲ್ಲಿ ಮೆಟಿರಿಯಲ್ ಸಿಗುತ್ತೆ. ಲಾಭ ಆಗುತ್ತೆ. ಮನೆ ಕಟ್ಟುವಾಗಲೇ ಕೆಲಸದವರು ಸಜೆಸನ್ ಕೊಟ್ಟರೆ, ಮನೆ ಮಾಲೀಕರು ಕೇಳೋದಿಲ್ಲ. ಆದರೆ, ವಾಸ್ತು ಪಂಡಿತರು ಹೇಳಿದ್ರೆ, ಅವರಿಗೆ ದಕ್ಷಿಣೆ ಕೊಟ್ಟು ಕೇಳ್ತರೆ. ಅವರು ಹೇಳಿದಂಗ್ ಮಾಡ್ತರೆ. ಇದೆಲ್ಲ ಇದ್ದೋರ ಆಟ, ನಡೀಲಿ ಬಿಡಿ…”

“ಆಗಲೇ ನೀವು ಮನೆ ಮುರುಕರಲ್ಲ, ಕಟ್ಟೋರು ಅಂದ್ರಿ… ಹೇಗೆ? ಎಂದೆ.

“ನಾವು ಒಡೆಯೋ ಮನೆ ಒಂದೇ, ಅದರಿಂದ ಸಿಗೋ ಸಾಮಾನು ಸಾವ್ರ. ಆ ಸಾವ್ರ ಸಾಮಾನು, ಸಾವ್ರ ಮನೆಗೆ ಹೋಗ್ತದೆ. ಒಂದು ಮನೆಯಿಂದ ಸಾವ್ರ ಮನೆ ಸರಿಯಾಗ್ತದೆ. ಅದು ಕಟ್ಟೋ ಕೆಲಸ ಅಲ್ವಾ? ನಮ್ ದೇಶದಲ್ಲಿ ಎಲ್ರೂ ಶ್ರೀಮಂತರಲ್ಲ. ಏನಾದ್ರು ತಗಬೇಕು ಅಂದಾಗ, ಜೇಬಲ್ಲಿ ದುಡ್ಡು ಎಷ್ಟಿದೆ ಅಂತ ನೋಡ್ತಿವಿ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಅಂತೀವಿ. ಫಾರಿನ್ ಥರ ಯೂಸ್ ಅಂಡ್ ಥ್ರೋ ನಮ್ಮಲ್ಲಿಲ್ಲ. ನಾವು ಸಣ್ಣ ಹಲ್ಲುಜ್ಜೋ ಬ್ರೆಷ್ನೂ ಬಿಸಾಕಲ್ಲ. ಹಾಕಿದ ಟ್ಯೂಬಿಗೆ ಮತ್ತೆ-ಮತ್ತೆ ಪಂಕ್ಚರ್ ಹಾಕಸ್ತಿವಿ. ಚಪ್ಪಲಿ ಹರದ್ರೆ ಹೊಲಿಸ್ಕೋತಿವಿ. ಹಂಗೇ ಮನೇನೂ… ಗೋಡೆ ಬಿದ್ದೋದ್ರೆ, ಏನಾದ್ರು ಮುರದೋದ್ರೆ ಮನೆ ಬಿಟ್ಟೋಗಲ್ಲ, ರಿಪೇರಿ ಮಾಡಸ್ಕೋತೀವಿ. ರಿಪೇರಿ ಅಂದ್ರೆ ಏನು, ಮುರಿದಿರದನ್ನು ಸರಿ ಮಾಡದು, ಒಂದು ಮಾಡೋದು. ಈ ರಿಪೇರಿ ಅನ್ನೋದು ಎಲ್ಲಿಯವರೆಗೂ ಇರುತ್ತೋ ಅಲ್ಲಿಯವರೆಗೆ ನಾವೂ ಇರ್ತಿವಿ. ಇದೇ ಇಂಡಿಯಾ…” ಎಂದರು.

ಹೆಚ್ಚಿನ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...