ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬಸ್ ತಡೆದು ಅಬಕಾರಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, 9 ಲೀಟರ್ ಮದ್ಯ ಹಾಗೂ 45 ಲಕ್ಷ ರೂ. ಮೌಲ್ಯದ ವೋಲ್ವೋ ಬಸ್ಅನ್ನು ಕಲಬುರಗಿಯಲ್ಲಿ ವಶಕ್ಕೆ ಪಡೆದಿದ್ದಾರೆ.
ಖಾಸಗಿ ಬಸ್ ಗೋವಾದಿಂದ ಹೈದರಾಬಾದ್ಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಈ ವೇಳೆ ಅಬಕಾರಿ ಅಧಿಕಾರಿಗಳು ಕಲಬುರಗಿಯ ಹೊರವಲಯದಲ್ಲಿ ಬಸ್ ತಡೆದು ಪರಿಶೀಲನೆ ನಡೆಸಿದ್ದಾರೆ. ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಮುರಳೀಕೃಷ್ಣ ಸತ್ಯನಾರಾಯಣ, ಬಾನೋತ್ ದೇವುಜಾ ಮತ್ತು ವೆಂಕಟೇಶ್ ಲಾಜರ್ ಎಂದು ಗುರುತಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಶಿಕ್ಷಕರ ಸಂಘರ್ಷ; ಶಾಲೆಗೆ ಬೀಗ ಜಡಿದು ಪ್ರತಿಭಟನೆ
“ಹೈದರಾಬಾದ್ ಮತ್ತು ಗೋವಾ ನಡುವೆ ಈ ಬಸ್ ನಿಯಮಿತವಾಗಿ ಚಲಿಸುತ್ತದೆ. ಎಲ್ಲ ಮದ್ಯದ ಬಾಟಲಿಗಳನ್ನು ಟೂಲ್ ಬಾಕ್ಸ್ನಲ್ಲಿ ಇಡಲಾಗಿತ್ತು. ಈ ಬಸ್ಸಿನಲ್ಲಿ ಗೋವಾದಿಂದ ಅಕ್ರಮ ಮದ್ಯ ಸಾಗಿಸುತ್ತಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿತ್ತು, ಆದರೆ ಕಲಬುರಗಿಯಲ್ಲಿ ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್ ಇದ್ದ ಕಾರಣ ಮೂರು ದಿನಗಳಿಂದ ಕ್ರಮಕೈಗೊಳ್ಳಲಾಗಿರಲಿಲ್ಲ. ಈಗ ಬಸ್ ಅನ್ನು ವಶಕ್ಕೆ ಪಡೆದಿದ್ದೇವೆ” ಎಂದು ಕಲಬುರಗಿ ಉಪ ವಿಭಾಗದ ಅಬಕಾರಿ ನಿರೀಕ್ಷಕ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.