ಬೈಯಪ್ಪನಹಳ್ಳಿ-ಕೆ.ಆರ್ ಪುರ ಮೆಟ್ರೋ ನಿಲ್ದಾಣ ನಡುವೆ ಬಾಕಿ ಉಳಿದಿದ್ದ 2 ಕಿಮೀ ಮಾರ್ಗದ ಕಾಮಗಾರಿ ಪೂರ್ಣಗೊಂಡಿರುವುದರಿಂದ ಅಕ್ಟೋಬರ್ 2ರಂದು ಗಾಂಧಿ ಜಯಂತಿ ದಿನ ಮೆಟ್ರೋ ರೈಲು ವಾಣಿಜ್ಯ ಸೇವೆಗೆ ಚಾಲನೆ ನೀಡಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಮಿಟೆಡ್(ಬಿಎಂಆರ್‌ಸಿಎಲ್) ನೇರಳೆ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಸೂಚನೆ ನೀಡಿದೆ.
ಸೆಪ್ಟೆಂಬರ್ 21ಕ್ಕೆ ದೆಹಲಿಯ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಬೈಯಪ್ಪನಹಳ್ಳಿ-ಕೆ ಆರ್ ಪುರ ಮೆಟ್ರೋ ಮಾರ್ಗದ ಸುರಕ್ಷತಾ ಪರಿಶೀಲನೆ ನಡೆಸಿದ್ದರು. ಇದೀಗ ವಾಣಿಜ್ಯ ಸೇವೆ ಆರಂಭಿಸಲು ಹಸಿರು ನಿಶಾನೆ ನೀಡಿರುವುದರಿಂದ ಕೆಂಗೇರಿಯಿಂದ ವೈಟ್‌ಫೀಲ್ಡ್‌ವರೆಗೆ ತಡೆರಹಿತ ಸಂಚಾರಕ್ಕೆ ಅನುಕೂಲವಾಗಲಿದೆ.
ಕೆಂಗೇರಿಯಿಂದ ಹಾಗೂ ವೈಟ್‌ಫೀಲ್ಡ್ ಮೆಟ್ರೋ ಮಾರ್ಗದಿಂದ ಸಾವಿರಾರು ಐಟಿ ಉದ್ಯೋಗಿಗಳಿಗೆ ಇದರ ಪ್ರಯೋಜನ ಸಿಗಲಿದೆ. ಈ ಮಾರ್ಗ ನಿರ್ಮಾಣ ಅಪೂರ್ಣವಾಗಿದ್ದರಿಂದ ಐಟಿ ಉದ್ಯೋಗಿಗಳು ಕಷ್ಟಪಡುತ್ತಿದ್ದರು. ಬೆಳಿಗ್ಗೆ ಹಾಗೂ ಸಂಜೆ ಅವಧಿಯಲ್ಲಿ ಈ ಮಾರ್ಗದಲ್ಲಿ ಗಂಟೆಗಟ್ಟಲೆ ಸಂಚಾರ ದಟ್ಟಣೆಯಿಂದಾಗಿ ವಾಹನ ಸವಾರರು ಪರದಾಡುತ್ತದ್ದಾರೆ. ಈ ಮಾರ್ಗದ ಮೆಟ್ರೋ ಆರಂಭವಾದರೆ ಹೆಚ್ಚಿನ ಮಂದಿ ಮೆಟ್ರೋ ಅವಲಂಭಿಸಲಿದ್ದು, ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಮೋಡ ಬಿತ್ತನೆ ಕಾರ್ಯಾಚರಣೆ ಆರಂಭ; ಯಶಸ್ವಿಯಾದರೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಯತ್ನ
ಕೆಂಗೇರಿಯಿಂದ ವೈಟ್ ಫೀಲ್ಡ್ ಕಡೆಗೆ ಸಾಗುತ್ತಿದ್ದ ಪ್ರಯಾಣಿಕರು ಬೈಯಪ್ಪನಹಳ್ಳಿಯಲ್ಲಿ ಇಳಿದು 2 ಕಿಮೀ ಬಸ್‌ನಲ್ಲಿ ತೆರಳಿ ಮತ್ತೆ ಕೆ.ಆರ್.ಪುರದಲ್ಲಿ ಮೆಟ್ರೋ ಹತ್ತಿ ಮುಂದೆ ಸಾಗಬೇಕಿತ್ತು. ಇದರಿಂದ ಮೆಟ್ರೊ ಪ್ರಯಾಣಿಕರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿತ್ತು. ಈ ಮಾರ್ಗದಲ್ಲಿ ಇದೀಗ ಮೆಟ್ರೋ ಆರಂಭವಾಗುವುದರಿಂದ ಪ್ರಯಾಣಿಕರ ಸ್ಥಿತಿ ಸುಧಾರಿಸಬಹುದು ಎನ್ನಲಾಗಿದೆ.