ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರದಿಂದ ‘ಲಿಪ್‌ಸ್ಟಿಕ್ ಮತ್ತು ಬಾಬ್-ಕಟ್ ಹೇರ್ ಸ್ಟೈಲ್’ ಹೊಂದಿರುವ ಮಹಿಳೆಯರು ಮುಂದೆ ಬರುತ್ತಾರೆ ಎಂದು ಮಹಿಳೆಯರ ಬಗ್ಗೆ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಹಿರಿಯ ನಾಯಕ ಅಬ್ದುಲ್ ಬರಿ ಸಿದ್ದಿಕಿ ಲಿಂಗ ಅಸೂಕ್ಷ್ಮತೆಯ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಸಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಿಡಿಕಾರಿದ್ದಾರೆ.
ಬಿಹಾರದ ಮುಜಾಫರ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿದ್ದಿಕಿ, “’ಲಿಪ್‌ಸ್ಟಿಕ್ ಮತ್ತು ಬಾಬ್-ಕಟ್ ಹೇರ್ ಸ್ಟೈಲ್’ ಹೊಂದಿರುವ ಮಹಿಳೆಯರು ಮುಂದೆ ಬರುತ್ತಾರೆ ಎಂದು ಹೇಳಿದ್ದಾರೆ. ಕೂಡಲೇ ಎಚ್ಚತ್ತ ಸಿದ್ದಿಕಿ, ತಮ್ಮ ಪಕ್ಷವು ‘ಮೊದಲಿನಿಂದಲೂ’ ಮಸೂದೆಯನ್ನು ಬೆಂಬಲಿಸುತ್ತಿದೆ ಎಂದು ಹೇಳುವ ಮೂಲಕ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಲು ಯತ್ನಿಸಿದ್ದಾರೆ. ವಾಸ್ತವವಾಗಿ, ಪ್ರಸ್ತುತ ಇರುವ ಮಸೂದೆಯನ್ನು ಆರ್‌ಜೆಡಿ ವಿಮರ್ಷಿಸುತ್ತಿದ್ದು, ಮಿಹಿಳಾ ಮೀಸಲಾತಿಯಲ್ಲಿ ಒಬಿಸಿ ಕೋಟಾ ಸೇರಿಸಬೇಕೆಂದು ಒತ್ತಾಯಿಸುತ್ತಿದೆ.
“ತಮ್ಮ ಕಾರ್ಯಕ್ರಮದಲ್ಲಿ ಹಲವಾರು ಮಂದಿ ಗ್ರಾಮೀಣ ಭಾಗದ ಮಹಿಳೆಯರಿದ್ದರು. ಅವರಿಗೆ ಹೊಸ ಕಾನೂನಿನ ಪ್ರಯೋಜನಗಳನ್ನು ಅರ್ಥಮಾಡಿಸಲು ‘ವಿಶಿಷ್ಟ ಗ್ರಾಮ ಭಾಷೆ’ಯಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದೆ. ಆ ಕಾರಣದಿಂದಾಗಿ ಅಂತಹ ಹೇಳಿಕೆ ನೀಡಿದೆ” ಎಂದು ಸಿದ್ದಿಕಿ ಹೇಳಿಕೊಂಡಿದ್ದಾರೆ.
ಈ ಹೇಳಿಕೆಯನ್ನು ಖಂಡಿಸಿರುವ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಕೌಶಲ್ ಕಿಶೋರ್, “ಇದು ಆರ್‌ಜೆಡಿ ನಾಯಕನ ‘ಸಣ್ಣ ಮನಸ್ಥಿತಿ’ಯ ಸಂಕೇತ” ಎಂದು ಟೀಕಿಸಿದ್ದಾರೆ.
“ಇದು ಅವರ ಸಣ್ಣ ಮನಸ್ಥಿತಿಯ ಸಂಕೇತ. ಚುನಾಯಿತರಾಗಿ ಸಂಸತ್ತಿಗೆ ಬರುವ ಮಹಿಳೆಯರು ಸಂವಿಧಾನ ಮತ್ತು ಕಾನೂನುಗಳನ್ನು ಓದಿ ಸಾರ್ವಜನಿಕ ಹಿತಾಸಕ್ತಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಕಾರಿಗೆ ಹೇಗೆ ಎರಡು ಚಕ್ರಗಳಿವೆಯೋ ಅದೇ ರೀತಿ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮಹಿಳೆಯರು ಮತ್ತು ಪುರುಷರು ಒಟ್ಟಾಗಿ ಸಾರ್ವಜನಿಕ ಹಿತಾಸಕ್ತಿಯ ಕಾನೂನುಗಳನ್ನು ರಚಿಸುವ ಮೂಲಕ ಈ ದೇಶವನ್ನು ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ಮಾಡಲು ಸಹಾಯ ಮಾಡುತ್ತಾರೆ, ” ಎಂದು ಕೌಶಲ್ ಹೇಳಿದ್ದಾರೆ.
“ಸಿದ್ದಿಕಿ ಅವರ ಹೇಳಿಕೆಯು ಮಹಿಳೆಯರಿಗೆ ನೋವುಂಟು ಮಾಡುತ್ತವೆ” ಎಂದು ವಿಪಕ್ಷಗಳ ಒಕ್ಕೂಟದ (ಇಂಡಿಯಾ) ಮಿತ್ರ ಪಕ್ಷ ಜೆಎಂಎಂನ ರಾಜ್ಯಸಭಾ ಸಂಸದೆ ಮಹುವಾ ಮಜಿ ಎಚ್ಚರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಹಸುಗಳನ್ನು ಇಸ್ಕಾನ್ ಮಾರಿದಷ್ಟು ಬೇರಾರು ಮಾರಿಲ್ಲ; ಬಿಜೆಪಿ ಸಂಸದೆ ಆರೋಪಕ್ಕೆ ಇಸ್ಕಾನ್ ಪ್ರತಿಕ್ರಿಯೆ
“ನಾವು ಇಂದು 21 ನೇ ಶತಮಾನದಲ್ಲಿದ್ದೇವೆ. ಮಹಿಳೆಯರಿಗೆ ನೋವುಂಟು ಮಾಡುವ ಇಂತಹ ಹೇಳಿಕೆಗಳನ್ನು ತಪ್ಪಿಸಬೇಕು. ಹಿಂದುಳಿದ ವರ್ಗಗಳ ಮಹಿಳೆಯರು ಮುಂದೆ ಬರಬೇಕೆಂದು ನಾವು ಬಯಸುತ್ತೇವೆ. ಮೀಸಲಾತಿ ಮಸೂದೆಯಲ್ಲಿ ನಾವು ಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ಮಹಿಳೆಯರ ಮೀಸಲಾತಿ ಬಗ್ಗೆಯೂ ಮಾತನಾಡುತ್ತಿದ್ದೇವೆ,” ಎಂದು ಅವರು ಹೇಳಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಬಿಸಿ ಮಹಿಳಾ ಕೋಟಾ ನೀಡಬೇಕೆಂದು ಆರ್‌ಜೆಡಿ, ಸಮಾಜವಾದಿ ಪಕ್ಷ, ಜೆಡಿಯು ಸೇರಿದಂತೆ ಹಲವಾರು ಪಕ್ಷಗಳು ಒತ್ತಾಯಿಸುತ್ತಿವೆ.