- 5,48,000 ವಿದ್ಯಾರ್ಥಿಗಳಿಗೆ ಕಿಟ್ ಒದಗಿಸಲು ಟೆಂಡರ್ ಕರೆಯಲು ಒಪ್ಪಿಗೆ
- ಮೊರಾರ್ಜಿ ಶಾಲೆಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲು ಸೂಚನೆ
ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ವಸತಿ ನಿಲಯಗಳ 5,48,000 ವಿದ್ಯಾರ್ಥಿಗಳಿಗೆ ಟೂತ್ ಪೇಸ್ಟ್ , ಬ್ರಶ್, ಕೊಬ್ಬರಿ ಎಣ್ಣೆ, ಮೈ ಸೋಪು, ಬಟ್ಟೆ ಸೋಪು ಒಳಗೊಂಡ 93 ರೂ.ಗಳ ಕಿಟ್ ಗಂಡುಮಕ್ಕಳಿಗೆ ಹಾಗೂ ಹೆಣ್ಣುಮಕ್ಕಳಿಗೆ 135 ರೂ.ಗಳ ವೆಚ್ಚದಲ್ಲಿ ‘ಶುಚಿ ಸಂಭ್ರಮ ಕಿಟ್’ ನೀಡಲು ಟೆಂಡರ್ ಕರೆಯಲು ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ವೇಳೆ ಟೆಂಡರ್ ಕರೆಯಲು ಸಿಎಂ ಸೂಚಿಸಿದರು.
“ಕಿಟ್ ಗಳ ವಿತರಣೆಗೆ ವರ್ಷಕ್ಕೆ 90 ಕೋಟಿ ರೂ. ವೆಚ್ಚವಾಗಲಿದೆ. ಕಿಟ್ ನಲ್ಲಿನ ವಸ್ತುಗಳ ಗುಣಮಟ್ಟ ಹೆಚ್ಚಿಸಬೇಕು. 75 ಗ್ರಾಂಗಳ ಬದಲಿಗೆ 125 ಗ್ರಾಂ ಗಳ ಸೋಪು ಒದಗಿಸುವಂತೆ ಹಾಗೂ ಇದರಲ್ಲಿ ಕೇವಲ ಶೇ 5 ರಷ್ಟು ಮಾತ್ರ ಲಾಭ ಇಟ್ಟುಕೊಳ್ಳಬೇಕು” ಎಂದು ಮೈಸೂರು ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮುಖ್ಯಮಂತ್ರಿಗಳು ಸೂಚಿಸಿದರು.
ಟೂತ್ ಪೇಸ್ಟ್ ಪ್ರಮಾಣವನ್ನು ಹೆಚ್ಚಿಸುವಂತೆ ಹಾಗೂ ಹಲ್ಲುಜ್ಜುವ ಬ್ರಶ್ ಗಳ ಗುಣಮಟ್ಟ ಸೇರಿದಂತೆ ಇತರೆ ಗುಣಮಟ್ಟದ ವಸ್ತುಗಳನ್ನು ಮಕ್ಕಳಿಗೆ ಒದಗಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು
ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್
ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಪಿ.ಜಿ, ಪಿಹೆಚ್ ಡಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಖರೀದಿಸಲು ತೀರ್ಮಾನಿಸಲಾಯಿತು.
ಗುಣಮಟ್ಟದ ಆಹಾರ ಧಾನ್ಯ ವಿತರಿಸಿ
ಪ್ರಸ್ತುತ ತಲಾ 1650ರೂ. ಪ್ರೀ ಮೆಟ್ರಿಕ್, 1750 ರೂ.ಗಳನ್ನು ಪೋಸ್ಟ್ ಮೆಟ್ರಿಕ್ ಮಕ್ಕಳಿಗೆ ಆಹಾರ ಧಾನ್ಯಗಳಿಗಾಗಿ ನಿಗದಿಪಡಿಸಿದೆ. ರಾಗಿ, ಧಾನ್ಯ, ಎಣ್ಣೆಯನ್ನು ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ತಾಲ್ಲೂಕುವಾರು ಪ್ಯಾಕೇಜ್ ಗಳ ಟೆಂಡರ್ ಕರೆದು ಪಡೆಯಲಾಗುತ್ತಿದೆ. ಈ ವ್ಯವಸ್ಥೆಯನ್ನು ಸರಿಪಡಿಸಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ಒದಗಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ಗುಣಮಟ್ಟದ ಶಿಕ್ಷಣ ಕಡ್ಡಾಯ
ಮೊರಾರ್ಜಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಂತೆ ಸೂಚಿಸಿದ್ದು, ಶಿಕ್ಷಕರ ಗುಣಮಟ್ಟವೂ ಮುಖ್ಯ. ಶಿಕ್ಷಕರಿಗೆ ತರಬೇತಿ (ಓರಿಯೆಂಟೇಷನ್) ಕಾರ್ಯಕ್ರಮ ನೀಡಿ ಗುಣಮಟ್ಟದ ಶಿಕ್ಷಣ ನೀಡುವ ಮಟ್ಟಕ್ಕೆ ತರಬೇಕು ಎಂದು ಸೂಚಿಸಿದರು. ಐಸೆಕ್ ಮತ್ತು ಐ ಐ ಎಸ್ ಸಿ ಸಂಸ್ಥೆಗಳ ಮೂಲಜ ಕ್ರೈಸ್ ಶಾಲೆಗಳ ಶಿಕ್ಷಕರ ಮೌಲ್ಯಮಾಪನ ಮಾಡಿಸುವಂತೆ ಸೂಚಿಸಿದರು.
ಶಾಲೆಗೆ ಪ್ರವೇಶ ನೀಡುವ ಸಂದರ್ಭದಲ್ಲಿ ಶೇ 80 ರಷ್ಟು ಅರ್ಹತೆಯಾಧಾರದ ಮೇಲೆ ಹಾಗೂ ಶೇ 20 ರಷ್ಟು ಸ್ಥಳೀಯರಿಗೆ ಮೀಸಲಿಡಬೇಕು. ಈ ನಿಟ್ಟಿನಲ್ಲಿ ಸಾಧಕ ಬಾಧಕಗಳನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎನ್ನುವುದು ಪ್ರಥಮ ಆಧ್ಯತೆಯಾಗಿರಲಿ ಎಂದು ಸಿಎಂ ಸೂಚಿಸಿದರು.