- ದೇಶದಲ್ಲಿ ದೊಡ್ಡ ಕೈಗಾರಿಕೆಗಳಿಗೆ ಒತ್ತು ನೀಡಿದಂತೆ ಸಣ್ಣ ಕೈಗಾರಿಕೆಗಳಿಗೂ ಪ್ರೋತ್ಸಾಹಿಸಬೇಕು.
- ಜಿಲ್ಲೆಯ ಕಂಪನಿಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ನಿಯಮ ಜಾರಿಯಾಗಬೇಕು.
ಬೀದರ ಜಿಲ್ಲೆಯಲ್ಲಿ ನಮ್ಮ ಇತಿಹಾಸ, ಸಂಸ್ಕೃತಿ ತಿಳಿಸುವ ಐತಿಹಾಸಿಕ ಕುರುಹುಗಳಿವೆ. ಕಲ್ಯಾಣ ಕರ್ನಾಟಕ ಭಾಗಗಳ ಜಿಲ್ಲೆಗಳ ಪ್ರಗತಿಗಾಗಿ ನಾವು ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಪ್ರವಾಸೋದ್ಯಮಕ್ಕೂ ಪ್ರೋತ್ಸಾಹ ನೀಡಬೇಕು ಎಂದು ಸಣ್ಣ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಬೀದರ ನಗರದ ಜನವಾಡ ರಸ್ತೆ ಬಳಿಯ ವೈಬ್ ಹೋಟೆಲ್‌ನಲ್ಲಿ ಸಿಡ್ಬಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕಾಸಿಯಾ ಇವರ ಸಂಯುಕ್ರಾಶ್ರಯದಲ್ಲಿ ಶನಿವಾರ ನಡೆದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು ಹಾಗೂ ಹಣಕಾಸಿನ ನೆರವು ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಕಲ್ಯಾಣ ಕರ್ನಾಟಕ ಭಾಗದ ಸಾಕಷ್ಟು ಜನರು ಉದ್ಯೋಗವನ್ನು ಅರಸಿ ದೊಡ್ಡ ದೊಡ್ಡ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹೊಸ ಕಂಪನಿಗಳು ಆರಂಭವಾಗಬೇಕು. ಇದರಿಂದ ಈ ಭಾಗದ ಜನರು ಉತ್ತಮ ಬದುಕು ರೂಪಿಸಿಕೊಳ್ಳುವದರ ಜೊತೆಗೆ ಆರ್ಥಿಕ ಪ್ರಗತಿ ಸಾಧಿಸಬಹುದು. ದೇಶದಲ್ಲಿ ದೊಡ್ಡ ಕೈಗಾರಿಕೆಗಳಿಗೆ ಒತ್ತು ನೀಡಿದಂತೆ ಸಣ್ಣ ಕೈಗಾರಿಕೆಗಳಿಗೂ ಪ್ರೋತ್ಸಾಹ ನೀಡಬೇಕು. ಸಣ್ಣ ಕೈಗಾರಿಕೆಗಳು ಉದ್ಯೋಗ ಸೃಷ್ಠಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆದರೆ ಪ್ರಸ್ತುತ ದಿನಗಳಲ್ಲಿ ಸಣ್ಣ ಕೈಗಾರಿಕೆಗಳು ಹೆಚ್ಚು ತೊಂದರೆಗಳನ್ನು ಅನುಭವಿಸುತ್ತಿವೆ” ಎಂದರು.
“ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇವುಗಳಿಗೆ ಪ್ರೋತ್ಸಾಹ ನೀಡುವದರ ಜೊತೆಗೆ ಹೊಸ ಉದ್ದಿಮೆಯನ್ನು ಸೃಷ್ಠಿಸಲು ಮುಂದೆ ಬರುವ ಯುವ ಪೀಳಿಗೆಗೆ ಸಹಾಯ-ಸಹಕಾರ ನೀಡಬೇಕು. ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಇರುವ ತೊಡಕುಗಳ ನಿವಾರಣೆಗೆ ಕ್ರಮ ಕೈಗೊಂಡು ಅವುಗಳನ್ನು ಸರಳೀಕರಿಸಲಾಗಿದೆ. ರಾಜ್ಯದ ಇತರೆ ಜಿಲ್ಲೆಯಲ್ಲಿ ಸ್ಥಾಪಿಸಲಾದ ಕೈಗಾರಿಕೆ ಕ್ಲಸ್ಟರ್‌ಗಳಂತೆ ಬೀದರ ಜಿಲ್ಲೆಯಲ್ಲೂ ಕೈಗಾರಿಕಾ ಕ್ಲಸ್ಟರ್ ಸ್ಥಾಪಿಸುವ ಗುರಿ ಇದೆ. ಮುಂದಿನ ದಿನಗಳಲ್ಲಿ ಈ ಕುರಿತು ಕ್ರಮ ವಹಿಸಲಾಗುವುದು” ಎಂದು ತಿಳಿಸಿದರು.
ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯಖಾತೆ ಸಚಿವ ಭಗವಂತ ಖೂಬಾ ಮಾತನಾಡಿ, “ದೇಶದ ಜಿಡಿಪಿಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ವದಾಗಿದ್ದು. ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಕೈಗಾರಿಕೆಗಳ ವಾತಾವರಣ ನಿರ್ಮಾಣವಾಗುವದರ ಜೊತೆಗೆ ಮೂಲಭೂತ ಸೌಕರ್ಯಗಳು ಸರಳವಾಗಿ ಆಯಾ ಇಲಾಖೆಯಿಂದ ಸಣ್ಣ ಕೈಗಾರಿಕೋದ್ಯಮಿಗಳಿಗೆ ಸಿಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇನ್ನು ಹೆಚ್ಚಿನ ಸಹಕಾರ ನೀಡಬೇಕು. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗಾರಿಕೋದ್ಯಮಗಳ ಸ್ಥಾಪನೆಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಇದರ ಫಲವಾಗಿ ಹಿಂದೆ ಉತ್ಪಾದನೆಯಲ್ಲಿ 10ನೇ ಸ್ಥಾನದಲ್ಲಿದ್ದ ಭಾರತವು ಇಂದು 5ನೇ ಸ್ಥಾನದಲ್ಲಿದೆ” ಎಂದು ನುಡಿದರು.
“ಬೀದರ ಜಿಲ್ಲೆ ಹಿಂದಿನಗಿಂತಲ್ಲೂ ಇಂದು ಬದಲಾಗಿದ್ದು ಕೈಗಾರಿಕೆಗಳಿಗೆ ಬೇಕಾಗುವ ಬಹುಮುಖ್ಯವಾದ ಸಂಪರ್ಕ ವ್ಯವಸ್ಥೆಯನ್ನು ಬೀದರ ಹೊಂದಿದೆ. ಜಿಲ್ಲೆಯ ಪ್ರತಿ ತಾಲ್ಲೂಕುಗಳು ಒಂದು ರಾಷ್ಟ್ರೀಯ ಹೆದ್ದಾರಿಯೊಂದಿಗೆ ಸಂಪರ್ಕಿಸುತ್ತವೆ. ಬೇರೆ ರಾಜ್ಯಗಳಿಗೆ ಸಂಪರ್ಕ ಕಲ್ಪಿಸಲು ರೈಲು ವ್ಯವಸ್ಥೆ ಮಾಡಲಾಗಿದೆ. ವಿಮಾನಯಾನ ವ್ಯವಸ್ಥೆ ಕಲ್ಪಿಸಲಾಗಿದೆ. ಕೈಗಾರಿಕೆಗಳಿಗೆ ಬೇಕಾಗುವ ನೀರಿನ ವ್ಯವಸ್ಥೆಯನ್ನು ಕಾರಂಜಾ ಜಲಾಶಯದಿಂದ ಒದಗಿಸಲಾಗಿದೆ. ಆದ್ದರಿಂದ ಹೊಸ ಉದ್ದಿಮೆಗಳು ಬೀದರ ಜಿಲ್ಲೆಯಲ್ಲಿ ಸ್ಥಾಪಿಸಲು ಜನರು ಮುಂದೆ ಬರಬೇಕು” ಎಂದರು.
ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ಮಾತನಾಡಿ, “ಬೀದರ ಜಿಲ್ಲೆಗೆ ಹೊಸ ಕೈಗಾರಿಕೆಗಳು ಬಂದರೆ ಈ ಜಿಲ್ಲೆಯ ಆರ್ಥಿಕ ಪ್ರಗತಿಯಾಗುತ್ತದೆ. ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬರುವವರಿಗೆ ಬ್ಯಾಂಕ್‌ನವರು ಹಾಗೂ ಸರ್ಕಾರದ ಸಂಬಂಧಪಟ್ಟ ಇಲಾಖೆಯವರು ಸಹಕಾರ ನೀಡಬೇಕು. ಬೀದರ ಜಿಲ್ಲೆ ಮೊದಲಿನಂತಿಲ್ಲ, ಇಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಿದ್ದು ಕಂಪನಿ ಸ್ಥಾಪಿಸಲು ಮುಂದೆ ಬರುವ ಕಂಪನಿಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು” ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, “ಜಿಲ್ಲೆಯಲ್ಲಿ ಸ್ಥಾಪಿಸುವ ಕಂಪನಿಯವರು ಸ್ಥಳೀಯ ಯುವಕರಿಗೆ ಉದ್ಯೋಗ ನೀಡಬೇಕು. ಪ್ರಸ್ತುತ ಸ್ಥಾಪಿಸಿರುವ ಕಂಪನಿಯವರು ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಹೀಗೆ ಮುಂದುವರೆದರೆ ಎಷ್ಟೇ ಕಂಪನಿಗಳು ಸ್ಥಾಪನೆಯಾದರೂ ಈ ಭಾಗ ಹಿಂದೆ ಉಳಿಯಲಿದೆ. ಆದರಿಂದ ಇಲ್ಲಿ ಸ್ಥಾಪಿಸಲಾದ ಕಂಪನಿಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ನಿಯಮ ಜಾರಿಯಾಗಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಸತಿ ರಹಿತ ಅಲೆಮಾರಿ ಸಮುದಾಯಕ್ಕೆ ನಿವೇಶನ ಕಲ್ಪಿಸುವಂತೆ ಒತ್ತಾಯ
ಈ ಸಂಧರ್ಭದಲ್ಲಿ ಬೀದರ ನಗರಸಭೆ ಅಧ್ಯಕ್ಷ ಮೊಹ್ಮದ್ ಗೌಸೋದ್ದಿನ್, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ., ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಸುರೇಖಾ, ಕೈಗಾರಿಕೆ ಮತ್ತು ವಾಣಿಜ್ಯ (ಎಂ.ಎಸ್.ಪಿ.ಸಿ.ಮತ್ತು ಪಿಪಿ) ಇಲಾಖೆಯ ಹೆಚ್.ಎಂ ಶ್ರೀನಿವಾಸ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ತು ಬೆಂಗಳೂರಿನ ವ್ಯವಸ್ಥಾಪಿಕ ನಿರ್ದೇಶಕ ಮಹೇಶ.ಜಿ., ಕಾಸಿಯಾ ಅಧ್ಯಕ್ಷ ಸಿಎ ಶಶಿಧರ ಶೆಟ್ಟಿ, ಸಿಡ್ಬಿ ಮೈಸೂರು ಶಾಖೆಯ ವ್ಯವಸ್ಥಾಪಕ ವಿಶ್ವನಾಥ ನಾಗರಾಳ, ಚೆಂಬರ್ ಆಫ್ ಕಾಮರ್ಸ್ ಬೀದರನ ಅಧ್ಯಕ್ಷ ಬಿ.ಜಿ. ಶೆಟಕಾರ, ಬೀದರ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶಿವರಾಜ ಹಾಲಶೆಟ್ಟಿ, ಪ.ಜಾ.,ಪ.ಪಂ ಕೈಗಾರಿಕೆ ಸಂಘ ಬೀದರನ ಪಿ.ವಿಜಯಕುಮಾರ, ಬೀದರ ಜಿಲ್ಲೆಯ ಸಣ್ಣ ಕೈಗಾರಿಕೊದ್ಯಮಿಗಳು, ಸೇರಿದಂತೆ ಇತರರು ಉಪಸ್ಥಿತರಿದ್ದರು.