ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಬೆಂಗಳೂರು ಹಾಗೂ ಕನ್ನಡಿಗರ ಬಗ್ಗೆ ಅವಹೇಳನಕಾರಿ ಬರಹ ಪ್ರಕಟಿಸಿದ್ದ ಯುವಕನನ್ನು ನಗರದ ಕೊಡಿಗೇಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ನಿಲೋಯ್ ಮಂಡಲ್ ಬಂಧಿತ ಆರೋಪಿಯಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತ “ನೇಟಿವ್ ಬೆಂಗಳೂರಿಯನ್ಸ್” ಎಂಬ ಪೇಜ್ ಒಂದರಲ್ಲಿ “ಕರ್ನಾಟಕದ ಕುರಿತು ಕೆಟ್ಟದಾಗಿ ಅವಹೇಳನ ಮಾಡಿದ್ದಲ್ಲದೇ, ಉತ್ತರ ಭಾರತದವರು ಬೆಂಗಳೂರಿನಿಂದ ಹೊರಟು ಹೋದರೆ ಬೆಂಗಳೂರಿಗರು ಕಾಡು ಜನರಿಗೆ ಸಮವಾಗುತ್ತಾರೆ” ಎಂದು ಅತಿರೇಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದ.
ಕನ್ನಡ ಅತ್ಯಂತ ಕೆಟ್ಟ ಭಾಷೆ ಎಂದು ಅವಹೇಳನ ಮಾಡಿದ್ದ. ಈ ಬಗ್ಗೆ ಅನೇಕ ಕನ್ನಡಪರ ಸಂಘಟನೆಗಳು, ಕಾರ್ಯಕರ್ತರು ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ, ಆತ ಕೆಲಸ ಮಾಡುತ್ತಿದ್ದ ಕಂಪನಿ ಹಾಗೂ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯ ಕೀಳು ಅಭಿಪ್ರಾಯದ ವಿರುದ್ಧ ವಿಷಾದ ವ್ಯಕ್ತಪಡಿಸಿದ್ದ ಕಂಪನಿ ಆತನ ವಿರುದ್ಧ ಸೂಕ್ತ ಕ್ರಮದ ಭರವಸೆ ನೀಡಿತ್ತು. ಮತ್ತೊಂದೆಡೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಕೊಡಿಗೆಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗಾಂಜಾ ಮಾರಾಟ ಆರೋಪ; ಮಾಜಿ ಸಚಿವ ಮುನಿರತ್ನ ವಿರುದ್ಧ ದೂರು
ಆತನ ಕಂಪನಿ ಪ್ರತಿಕ್ರಿಯೆ ನೀಡಿದ್ದು, “ನಮಸ್ಕಾರ, ನಮ್ಮ ಉದ್ಯೋಗಿಗಳಲ್ಲಿ ಒಬ್ಬರಾದ ನಿಲೋಯ್ ಮಂಡಲ್ ಬಗ್ಗೆ ನೀವು ನೀಡಿರುವ ದೂರಿನ ಕುರಿತು ನಾವು ತಿಳಿಸಲು ಬಯಸುತ್ತೇವೆ. ನಾವು ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಜತೆಗೆ ನೋವುಂಟು ಮಾಡಿರುವ ಟೀಕೆಗಳಿಗೆ ಅಥವಾ ಭಾವನೆಗಳಿಗೆ ನಾವು ತೀವ್ರವಾಗಿ ವಿಷಾದಿಸುತ್ತೇವೆ. ನಿಲೋಯ್ ಮಂಡಲ್ ಹೇಳಿಕೆ ಬಗ್ಗೆ ಆಂತರಿಕ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಹೆಚ್ಚಿನ ತನಿಖೆಗಾಗಿ ನಾವು ಈ ವಿಷಯವನ್ನು ಸೂಕ್ತ ಸೈಬರ್ ಕ್ರೈಮ್ ಅಧಿಕಾರಿಗಳಿಗೆ ವರದಿ ಮಾಡುತ್ತಿದ್ದೇವೆ. ನಮ್ಮ ಆಂತರಿಕ ತನಿಖೆಯ ಫಲಿತಾಂಶ ಏನೇ ಇರಲಿ, ಈ ಘಟನೆಯಿಂದ ಯಾವುದೇ ಭಾವನೆಗಳಿಗೆ ಧಕ್ಕೆಯುಂಟಾಗಿದ್ದರೆ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಸೈಬರ್ ಕ್ರೈಮ್ ವಿಭಾಗದ ಸಲಹೆಯಂತೆ ನಾವು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಈ ಪ್ರಕರಣದಲ್ಲಿ ಯಾವುದೇ ಬೆಳವಣಿಗೆಗಳು ಮತ್ತು ತನಿಖೆಯ ಫಲಿತಾಂಶಗಳ ಕುರಿತು ನಾವು ನಿಮಗೆ ತಿಳಿಸುತ್ತೇವೆ” ಎಂದು ಹೇಳಿದ್ದಾರೆ.
“ಬಂಧಿತ ವ್ಯಕ್ತಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಈ ಮೂಲಕವಾದರೂ ಪರಭಾಷಿಕರು ನಮ್ಮ ನಾಡು, ನುಡಿ, ಜನತೆಯ ವಿಚಾರಕ್ಕೆ ಬರುವುದನ್ನು ನಿಲ್ಲಿಸಬಹುದು ಎಂದು ಕನ್ನಡ ಪರ ಸಂಘಟನೆಗಳು, ಕಾರ್ಯಕರ್ತರ ಆಗ್ರಹವಾಗಿದೆ.