ಹಾಗಾದರೆ ಮುಸ್ಲಿಮರು ಮಾಡಿದ್ದು ತಪ್ಪೇ ಕುಮಾರಸ್ವಾಮಿಯವರೇ?

Date:

ಮುಸ್ಲಿಂ ದ್ವೇಷವನ್ನೇ ಮುಕ್ತ ಅಜೆಂಡಾವಾಗಿ ಇಟ್ಟುಕೊಂಡಿರುವ ಬಿಜೆಪಿಗೆ ರಾಮಕೃಷ್ಣ ಹೆಗಡೆ, ಎಸ್.ಬಂಗಾರಪ್ಪ ನಂತರದಲ್ಲಿ ರಾಜ್ಯ ರಾಜಕಾರಣದಲ್ಲಿ ಬಲ ತಂದುಕೊಟ್ಟವರು ಕುಮಾರಸ್ವಾಮಿ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ನೆಲಕಚ್ಚಿದ ಬಳಿಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹತಾಷರಾಗಿದ್ದಾರೋ ಅಥವಾ ಫ್ಯೂಡಲ್‌ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದ್ದಾರೋ ಎಂದು ಯೋಚಿಸಬೇಕಾಗಿದೆ. ಜೆಡಿಎಸ್‌ಗೆ ಮತ ನೀಡದ ಮುಸ್ಲಿಮರ ಮೇಲೂ, ಕಾಂಗ್ರೆಸ್‌ ಬೆಂಬಲಿಸಿದ ದಲಿತರ ಮೇಲೂ ಅಸಹನೆ ಹೊರಹಾಕುತ್ತಾ ರಾಜಕೀಯದಲ್ಲಿ ತಾವಿನ್ನೂ ಕೂಸು ಎಂಬಂತೆ ವರ್ತಿಸತೊಡಗಿದ್ದಾರೆ. ಇದು ಅಪ್ರಜಾಸತ್ತಾತ್ಮಕ ನಡೆ ಎಂಬುದನ್ನು ಅವರು ಅರ್ಥಮಾಡಿಕೊಂಡಂತೆ ಕಾಣುತ್ತಿಲ್ಲ.

ಕುಮಾರಸ್ವಾಮಿಯವರು ಮಾಡಿರುವ ಚಾರಿತ್ರಿಕ ಪ್ರಮಾದಗಳತ್ತ ಕಣ್ಣಾಡಿಸುವ ಮುನ್ನ 2023ರ ವಿಧಾನಸಭೆ ಚುನಾವಣೆ ಬಳಿಕ ಕುಮಾರಸ್ವಾಮಿಯವರು ನೀಡಿರುವ ಕೆಲವು ಹೇಳಿಕೆಗಳನ್ನು ಅವಲೋಕಿಸೋಣ.

ಸುವರ್ಣ ನ್ಯೂಸ್ ಚಾನೆಲ್‌ನಲ್ಲಿ ನಿರೂಪಕ ಅಜಿತ್‌ ಹನುಮಕ್ಕನವರ್‌ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ಮಾತನಾಡುತ್ತಾ, “(ದೇವೇಗೌಡ) ಅವರು ಆ ಸಿದ್ಧಾಂತ (ಜಾತ್ಯತೀತ) ಇಟ್ಟುಕೊಂಡು ಹೋಗಿಯೇ ಹಾಳಾಗಿದ್ದು. 200% ನಿಜ. ಕಾಂಗ್ರೆಸ್ ಬೆಂಬಲ ವಾಪಸ್ ಪಡೆದಾಗ ದೇವೇಗೌಡರು ಪ್ರಧಾನಿ ಹುದ್ದೆಯಿಂದ ಇಳಿಯಬೇಕಾಯಿತು. ಅಂದು ಬಿಜೆಪಿಯ ನಾಯಕರು ಬೆಂಬಲ ನೀಡಲು ಮುಂದಾಗಿದ್ದರು. ಆದರೆ ದೇವೇಗೌಡರು ನಿರಾಕರಿಸಿದರು” ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಾ, “ನನಗೆ ಎರಡನೇ ಬಾರಿಗೆ ನಿರಾಸೆ ಮಾಡಿದ್ದೀರಿ. ಅಲ್ಪಸಂಖ್ಯಾತ ಬಂಧುಗಳಿರಲಿ, ದಲಿತ ಸಮಾಜವಿರಲಿ, ನಾನು ಎಂದು ಕೂಡ ಜಾತಿ ಹೆಸರಿನ ರಾಜಕಾರಣಕ್ಕೆ ಕೈ ಹಾಕಿಲ್ಲ. ನನ್ನ ಬಳಿ ಬರುವವರಿಗೆ ಯಾವ ಜಾತಿ ಎಂದು ಕೇಳಲ್ಲ. ನಿನ್ನ ಕಷ್ಟವೇನೆಂದು ಕೇಳಿ ಬಗೆಹರಿಸುವ ಪ್ರಯತ್ನ ಪಟ್ಟಿದ್ದೇನೆ. ಇಂದು ಅಲ್ಪಸಂಖ್ಯಾತ ಬಂಧುಗಳಿಗೆ ಹೇಳುತ್ತಾನೆ- ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ ಅಲ್ಪಸಂಖ್ಯಾತರಿಗೆ ಒಳ್ಳೆಯದಾಗುತ್ತದೆ ಎನ್ನುತ್ತಾ ಬಿಜೆಪಿಗೆ ಭಯ ಹುಟ್ಟಿಸಿ, ಮತ ಕೇಳಿದ್ದಾರೆ. ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದ ಯಾರು ಸರಿಪಡಿಸಿದ್ದು? ರಕ್ತದ ಓಕುಳಿಯ ಆಟ ಆಡ್ತಾ ಇದ್ದರು. ಈದ್ಗಾ ಮೈದಾನದಲ್ಲಿ ಶಾಂತಿ ನೆಲೆಸಲು ದೇವೇಗೌಡರು, ಇಬ್ರಾಹಿಂ ಕಾರಣ. ಇದನ್ನು ಮುಸಲ್ಮಾನ ಬಂಧುಗಳು ಅರ್ಥಮಾಡಿಕೊಳ್ಳಬೇಕು. ದಲಿತ, ಹಿಂದುಳಿದ ಸಣ್ಣಸಣ್ಣ ಸಮುದಾಯಗಳಿಗೆ ದನಿಯನ್ನು ಕೊಟ್ಟಿದ್ದು ದೇವೇಗೌಡರೇ ಹೊರತು, ಸಿದ್ದರಾಮಯ್ಯನವರಲ್ಲ. ಮೈಸೂರು, ಬೆಂಗಳೂರು ನಗರಗಳಲ್ಲಿ ಒಬ್ಬ ಪೌರಕಾರ್ಮಿಕ ಮೇಯರ್‌ ಆಗುವಂತಿದ್ದರೆ, ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಆಗುವಂತಿದ್ದರೆ ಅದಕ್ಕೆ ದೇವೇಗೌಡರು ಕಾರಣ ಎಂಬುದನ್ನು ಅಹಿಂದ ಸಮಾಜ ಅರ್ಥ ಮಾಡಿಕೊಳ್ಳಲಿ. ಕಾಂಗ್ರೆಸ್‌ನ ಬೂಟಾಟಿಕೆಯ ರಾಜಕಾರಣಕ್ಕೆ ಮರುಳಾಗಬೇಡಿ….” ಎನ್ನುತ್ತಾರೆ.

ಇದನ್ನೂ ಓದಿರಿ: ನೆಮ್ಮದಿ ಇಲ್ಲದ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

ಇತ್ತೀಚೆಗೆ ’ಡೆಕ್ಕನ್ ಹೆರಾಲ್ಡ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, “ನಾನು ಮುಸ್ಲಿಮರ ಪರ ನಿಂತೆ, ಆದರೆ ಅವರು ಜೆಡಿಎಸ್ ಪರ ನಿಲ್ಲಲಿಲ್ಲ” ಎನ್ನುತ್ತಾರೆ. ಪಕ್ಷ ಬಿಟ್ಟು ಹೋಗುವ ಮುಸ್ಲಿಂ ನಾಯಕರು ಬಿಟ್ಟು ಹೋದರೆ ಹೋಗಲಿ ಎಂದು ಮತ್ತೊಂದೆಡೆ ಘೋಷಣೆ ಮಾಡಿಕೊಂಡಿರುವುದು ವರದಿಯಾಗಿದೆ.

ಹೃದಯ ಕಲಕುವ ವಿಡಿಯೊ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಪತ್ರಿಕಾಗೋಷ್ಠಿಯೊಂದರಲ್ಲಿ ದೇವೇಗೌಡರು ಮಾತನಾಡುತ್ತಾ, “ಅಲ್ಪಸಂಖ್ಯಾತರ ರಕ್ಷಣೆಗೆ” ಎನ್ನುತ್ತಲೇ ಪಕ್ಕದಲ್ಲೇ ಕೂತಿದ್ದ ಕುಮಾರಸ್ವಾಮಿ, “ಅಲ್ಪಸಂಖ್ಯಾತರು ಅಷ್ಟೇ ಅಲ್ಲ ಅಣ್ಣ (ಅಪ್ಪ), ಇಡೀ ಕರ್ನಾಟಕ” ಎಂದು ಮಾತಿಗೆ ಅಡ್ಡಿಪಡಿಸುತ್ತಾರೆ. ರಾಜಕೀಯ ಮುತ್ಸದ್ಧಿ ದೇವೇಗೌಡರ ಮಾತಿಗೆ ಕುಮಾರಸ್ವಾಮಿ ಕಿವಿಗೊಡದೆ ವರ್ತಿಸುವುದು ದುರಂತವಾಗಿ ಕಾಣುತ್ತಿದೆ.

ಕುಮಾರಸ್ವಾಮಿಯವರು ಸಿಟ್ಟಾಗಬೇಕೋ ಅಥವಾ ಆತ್ಮಾವಲೋಕನ ಮಾಡಿಕೊಳ್ಳಬೇಕೋ? ಪಕ್ಷದ ಸ್ಥಿತಿಗೆ ಅವರು ಇಟ್ಟ ಚಾರಿತ್ರಿಕ ತಪ್ಪು ಹೆಜ್ಜೆಗಳೇ ಕಾರಣ ಎಂಬುದು ರಾಜ್ಯದ ರಾಜಕೀಯ ಇತಿಹಾಸಬಲ್ಲ ಎಂಥವರಿಗೂ ಗೊತ್ತಿರುವ ಸಂಗತಿ. ದೇವೇಗೌಡರು ಜೆಡಿಎಸ್‌ಗೆ ’ಸೆಕ್ಯುಲರಿಸಂ’ ಟ್ಯಾಗ್‌ ತಂದುಕೊಟ್ಟಿದ್ದರ ಹಿಂದಿದ್ದ ಶ್ರಮ, ರಾಜ್ಯ ರಾಜ್ಯಕಾರಣದ ಪಲ್ಲಟಗಳು ಮತ್ತು ಕೋಮುವಾದದ ಇತಿಹಾಸವನ್ನು ನೋಡದಿದ್ದರೆ ಜೆಡಿಎಸ್‌ ಕಂಡುಕೊಂಡಿರುವ ತೀವ್ರತರವಾದ ತಿರುವು ಅರ್ಥವಾಗುವುದಿಲ್ಲ.

1998ರವರೆಗೆ ಕರ್ನಾಟಕದಲ್ಲಿ ಮುಸ್ಲಿಮರಿಗೆ ಸ್ಪಷ್ಟವಾಗಿ ಎರಡು ರಾಜಕೀಯ ಪಕ್ಷಗಳಿದ್ದವು. ಒಂದು ಕಾಂಗ್ರೆಸ್ ಮತ್ತೊಂದು ಜನತಾ ದಳ. ಜನತಾದಳದಿಂದ ಉಚ್ಚಾಟಿತರಾಗಿದ್ದ ರಾಮಕೃಷ್ಣ ಹೆಗಡೆಯವರು 1998ರ ಲೋಕಸಭೆ ಚುನಾವಣೆ ವೇಳೆಗೆ ಲೋಕಶಕ್ತಿ ಪಕ್ಷವನ್ನು ಕಟ್ಟಿದ್ದರು. ತಾವು ಒಂದೇ ಪಕ್ಷಕ್ಕೆ ಸೀಮಿತವೆಂಬ ಮನೋಭಾವ ಮುಸ್ಲಿಮರಿಗೆ ಇಲ್ಲಿಯವರೆಗೂ ಇರಲಿಲ್ಲ. ನಜೀರ್ ಸಾಬ್ ಥರದ ಜನಮುಖಿ ಮುಸ್ಲಿಂ ನಾಯಕರನ್ನು ಕಂಡ ನೆಲ ಕರ್ನಾಟಕ. 1994ರ ಚುನಾವಣೆಯ ವೇಳೆಗೆ ಸಿ.ಎಂ.ಇಬ್ರಾಹಿಂ ಜನತಾದಳದ ರಾಜ್ಯಾಧ್ಯಕ್ಷರೂ ಆಗಿದ್ದರು. ಹುಬ್ಬಳ್ಳಿ ಈದ್ಗಾ ಮೈದಾನ ವಿವಾದದಲ್ಲಿ ದೇವೇಗೌಡರು, ಇಬ್ರಾಹಿಂ ಅವರು ಕೈಗೊಂಡ ನಿರ್ಧಾರಗಳು ಮಹತ್ವದ್ದಾಗಿದ್ದವು. ಅಂದು ಸಮಸ್ಯೆಯನ್ನು ಬಗೆಹರಿಸಿದ್ದು ಸತ್ಯ. ಬಿಜೆಪಿ ಕೋಮುವಾದಿ ಪಕ್ಷವೆಂದೇ ಜನತಾದಳ, ಕಾಂಗ್ರೆಸ್ ಪರಿಗಣಿಸಿದ್ದವು. ಕಾಂಗ್ರೆಸ್ ಬೆಂಬಲ ವಾಪಸ್ ಪಡೆದಿದ್ದ ಸಂದರ್ಭದಲ್ಲಿ ದೇವೇಗೌಡರು ಯಾವುದೇ ಕಾರಣಕ್ಕೂ ಬಿಜೆಪಿಯವರ ಬೆಂಬಲ ಕೋರಿ ಹೋಗಲಿಲ್ಲ. ಪ್ರಧಾನಿ ಹುದ್ದೆಯಿಂದ ಕೆಳಗಿಳಿದು ಸೆಕ್ಯುಲರಿಸಂಗೆ ಬದ್ಧರಾಗಿದ್ದು ದೇವೇಗೌಡರ ರಾಜಕಾರಣಕ್ಕೆ ಮೆಚ್ಚುಗೆ ತಂದುಕೊಟ್ಟಿತು. ಅಧಿಕಾರಕ್ಕಿಂತ ಸಿದ್ಧಾಂತಕ್ಕೆ ಅವರು ಮಣೆಹಾಕಿದ್ದರ ಹಿಂದೆ ಭವಿಷ್ಯದ ದೂರದೃಷ್ಟಿ ಇತ್ತೆಂದರೆ ತಪ್ಪಾಗಲಾರದು.

1998 ಮತ್ತು 1999ರಲ್ಲಿ ಎರಡು ಬಾರಿ ಲೋಕಸಭಾ ಚುನಾವಣೆಗಳು ನಡೆದಾಗ ರಾಮಕೃಷ್ಣ ಹೆಗಡೆಯವರ ಲೋಕಶಕ್ತಿ ಪಕ್ಷವು ಬಿಜೆಪಿ ಜೊತೆಯಲ್ಲಿ ಮೈತ್ರಿ ಮಾಡಿಕೊಂಡಿತು. 1999ರಲ್ಲಿ ಜನತಾದಳ ಹೋಳಾಯಿತು. ಜನತಾದಳದ ಜೆ.ಎಚ್.ಪಟೇಲ್‌, ಲೋಕಶಕ್ತಿಯ ರಾಮಕೃಷ್ಣ ಹೆಗಡೆ, ಜಾರ್ಜ್ ಫರ್ನಾಂಡೀಸ್, ನಿತೀಶ್ ಕುಮಾರ್‌, ಶರತ್ ಯಾದವ್ ಇವರೆಲ್ಲವರೂ ಸೇರಿ ಜೆಡಿಯು (ಜನತಾದಳ ಯುನೈಟೆಡ್‌) ಕಟ್ಟಿದರು. ಅಖಿಲ ಭಾರತ ಮಟ್ಟದಲ್ಲಿ ಹುಟ್ಟಿದ ಈ ಪಕ್ಷವು ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಜೊತೆಯಲ್ಲಿ ಮೈತ್ರಿ ಮಾಡಿಕೊಂಡಿತು. ಆಗ ಹುಟ್ಟಿಕೊಂಡಿದ್ದೇ ಜನತಾದಳ ಸೆಕ್ಯುಲರ್‌ (ಜೆಡಿಎಸ್). ನಾವೆಂದೂ ಸೆಕ್ಯುಲರ್‌ ಆಗಿರುತ್ತೇವೆ ಎಂಬುದು ಪಕ್ಷದ ತಳಹದಿಯಾಗಿತ್ತು. ದೇವೇಗೌಡರು ಅದರ ರಾಷ್ಟ್ರೀಯ ಅಧ್ಯಕ್ಷರಾದರು. ಆ ವೇಳೆಗೆ ಕರ್ನಾಟದಲ್ಲಿ ಜೆಡಿಎಸ್‌, ಜೆಡಿಯು, ಬಿಜೆಪಿ, ಕಾಂಗ್ರೆಸ್- ಈ ನಾಲ್ಕು ಪಕ್ಷಗಳು ಪ್ರಮುಖವಾಗಿ ಅಸ್ತಿತ್ವದಲ್ಲಿದ್ದವು.

1990- 1992ರ ನಡುವೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ವರ್ಣರಂಜಿತ ವ್ಯಕ್ತಿತ್ವದ, ಹಿಂದುಳಿದ ಸಮುದಾಯಗಳ ನಾಯಕ ಎಸ್.ಬಂಗಾರಪ್ಪನವರಿಲ್ಲದೆ ಕರ್ನಾಟಕ ರಾಜಕಾರಣ ಅಪೂರ್ಣ. ಮುಸ್ಲಿಂ ಸಮುದಾಯದೊಂದಿಗೆ ಒಳ್ಳೆಯ ಬಾಂಧವ್ಯವನ್ನೂ ಬಂಗಾರಪ್ಪ ಹೊಂದಿದ್ದರು. ಕರ್ನಾಟಕ ವಿಕಾಸ ಪಾರ್ಟಿ (ಕೆವಿಪಿ)ಯನ್ನು ಕಟ್ಟಿದ್ದ ಅವರು ಒಂದಿಷ್ಟು ಕಾಲ ಬಿಜೆಪಿಗೆ ಹೋದರು. ಕರಾವಳಿ, ಮಲೆನಾಡು ಭಾಗದಲ್ಲಿ ಜನಸಂಘದ ಕಾಲದಿಂದಲೂ ಆರ್‌ಎಸ್‌ಎಸ್‌ ಪ್ರಭಾವವಿತ್ತು. ಜನಸಂಘದ ಹೊಸ ಮುಖವಾಗಿದ್ದ ಬಿಜೆಪಿಗೆ ಕರಾವಳಿ, ಮಲೆನಾಡು ಭಾಗದಲ್ಲಿ ಅಪಾರ ಜನಬೆಂಬಲವನ್ನು ತಂದುಕೊಟ್ಟವರು ಬಂಗಾರಪ್ಪ. ಬಿಲ್ಲವರು/ಈಡಿಗರು/ದೀವರು ಬಿಜೆಪಿಯತ್ತ ವಾಲಲು ಬಂಗಾರಪ್ಪ ಕಾರಣವಾದರು. ಮತ್ತೊಂದೆಡೆ ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಲೀಡರ್ ಆಗಿದ್ದವರು ರಾಮಕೃಷ್ಣ ಹೆಗಡೆ. ಮೂಲತಃ ಬ್ರಾಹ್ಮಣರಾದರೂ ಹೆಗಡೆಯವರನ್ನು ಲಿಂಗಾಯತರು ತಮ್ಮ ನಾಯಕರೆಂದು ಪರಿಗಣಿಸಿದ್ದರು. ಹೀಗಾಗಿ ಜೆಡಿಯು ಮೂಲಕ ಬಿಜೆಪಿಗೆ ಲಿಂಗಾಯತರ ಪ್ರವೇಶವಾಯಿತು. ರಾಮಕೃಷ್ಣ ಹೆಗಡೆಯವರ ನಿಧನದ ನಂತರ ಉತ್ತರ ಕರ್ನಾಟಕದಲ್ಲಿನ ಜೆಡಿಯು ನಾಯಕರು ಬಿಜೆಪಿಗೆ ಸೇರಿಕೊಂಡರು. ಗೋವಿಂದ ಕಾರಜೋಳ, ರಮೇಶ್ ಜಿಗಜಿಣಗಿ, ಉಮೇಶ್ ಕತ್ತಿಯಂಥವರು ಬಿಜೆಪಿಯಲ್ಲಿ ಗುರುತಿಸಿಕೊಂಡರು. ನಂತರ ಬಿ.ಎಸ್.ಯಡಿಯೂರಪ್ಪನವರು ಲಿಂಗಾಯತರ ಲೀಡರ್ ಆಗಿ ಹೊಮ್ಮತೊಡಗಿದರು. ಈ ಸಂದರ್ಭದಲ್ಲಿ 2004ರ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿತು. ಆಗಲೂ ಮುಸ್ಲಿಮರು ಜೆಡಿಎಸ್‌ನೊಂದಿಗೆ ಇದ್ದಿದ್ದರಿಂದ 58 ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯೇ ಸಹಜವಾಗಿ ಕಂಡಿತು. ದೇವೇಗೌಡರ ಆಶಯದಂತೆ ಧರಂಸಿಂಗ್ ಮುಖ್ಯಮಂತ್ರಿಯಾದರು. ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿಯಾದರು. ಮುಸ್ಲಿಂ ದ್ವೇಷವನ್ನೇ ಪ್ರಧಾನ ಅಜೆಂಡಾವಾಗಿ ಇರಿಸಿಕೊಂಡು ಬಿಜೆಪಿ ಬಲವಾಗುತ್ತಿತ್ತು. ಸೆಕ್ಯುಲರಿಸಂ, ಸಂವಿಧಾನದ ಆಶಯಗಳಲ್ಲಿ ನಂಬಿಕೆ ಇಟ್ಟವರು ಬಿಜೆಪಿಯನ್ನು ಒಪ್ಪಿಕೊಳ್ಳಲಿಲ್ಲ.

ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ದೇವೇಗೌಡರ ಕುಟುಂಬಕ್ಕೂ ಸಿದ್ದರಾಮಯ್ಯನವರಿಗೂ ತಿಕ್ಕಾಟಗಳು ಆರಂಭವಾದವು. ಸಿದ್ದರಾಮಯ್ಯನವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆಂಬುದು ಬಲವಾಯಿತು. ಅಧಿಕಾರವೇ ಮುಖ್ಯವೆಂದು ಭಾವಿಸಿದ ಎಚ್.ಡಿ.ಕುಮಾರಸ್ವಾಮಿಯವರು ಈ ವೇಳೆ ಕ್ಷಿಪ್ರಕ್ರಾಂತಿಯನ್ನು ನಡೆಸಿ ಬಿಜೆಪಿ ಜೊತೆಯಲ್ಲಿ ಸರ್ಕಾರ ರಚಿಸಿ ಮುಖ್ಯಮಂತ್ರಿಯಾದರು. ಇದಕ್ಕೆ ದೇವೇಗೌಡರ ಸಮ್ಮತಿ ಇರಲಿಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ರಾಮಕೃಷ್ಣ ಹೆಗಡೆ, ಎಸ್.ಬಂಗಾರಪ್ಪ ನಂತರದಲ್ಲಿ ರಾಜ್ಯ ರಾಜಕಾರಣದಲ್ಲಿ ಬಿಜೆಪಿಗೆ ಬಲ ತಂದುಕೊಟ್ಟವರು ಕುಮಾರಸ್ವಾಮಿ. ಈ ಎಲ್ಲ ರಾಜಕೀಯ ಪಲ್ಲಟಗಳಿಂದಾಗಿ ಮುಸ್ಲಿಮರ ಪರ ನಿಲ್ಲಬಲ್ಲ ಪಕ್ಷವಾಗಿ ಮುಸ್ಲಿಂ ಸಮುದಾಯಕ್ಕೆ ಗೋಚರಿಸಿದ್ದು ಕಾಂಗ್ರೆಸ್ ಮಾತ್ರ. ಇದು ಕಟುವಾಸ್ತವ.

ಇದನ್ನೂ ಓದಿರಿ: ಬಿಜೆಪಿ ಜೆಡಿಎಸ್‌ ಮೈತ್ರಿ | ಕುಮಾರಸ್ವಾಮಿ ನಡೆಯಿಂದ ನೋವಾಗಿದೆ: ಸಿಎಂ ಇಬ್ರಾಹಿಂ

ಬಿಜೆಪಿ ಪಕ್ಷದ ತಳಹದಿಯೇ ಮುಸ್ಲಿಂ ದ್ವೇಷ. ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನೋಡುವ ಸಿದ್ಧಾಂತ ಬಿಜೆಪಿಯದ್ದು. ಇಂತಹ ಓಪನ್ ಅಜೆಂಡಾ ಇಟ್ಟುಕೊಂಡಿರುವ ಬಿಜೆಪಿಯ ಜೊತೆಯಲ್ಲಿ ಕುಮಾರಸ್ವಾಮಿ ಮೈತ್ರಿ ಮಾಡಿಕೊಂಡಿದ್ದು ಮುಸ್ಲಿಂ ಸಮುದಾಯಕ್ಕೆ ಆಘಾತ ತಂದಿತ್ತು. 2002ರಲ್ಲಿ ಗುಜರಾತ್‌ನ ಕೋಮುದಳ್ಳುರಿಯಲ್ಲಿ ಮುಸ್ಲಿಮರ ಮಾರಣಹೋಮ ನಡೆದಿತ್ತು. ಒಂದು ಸಮುದಾಯವನ್ನು ಈ ದೇಶದವರೇ ಅಲ್ಲ ಎನ್ನುವ, ಅನುಮಾನಿಸುವ, ದೂರೀಕರಿಸುವ, ಅಪರಾಧಿಗಳೆಂದು ಬಿಂಬಿಸುವ ಜೊತೆಗೆ ಕೊಲ್ಲುವ ರಾಜಕಾರಣ ಆರಂಭವಾಗಿತ್ತು. ಇದೆಲ್ಲದರ ಹಿಂದೆ ಇದ್ದ ಸಿದ್ಧಾಂತದೊಂದಿಗೆ ಹೋಗುವುದನ್ನು ಸಹಜವಾಗಿ ಮುಸ್ಲಿಂ ಸಮುದಾಯ ಅನುಮಾನದಿಂದ ನೋಡಲಾರಂಭಿಸಿತು. ಇಂತಹ ಸಂದರ್ಭದಲ್ಲಿ 2008ರ ಚುನಾವಣೆಯಲ್ಲಿ ಜೆಡಿಎಸ್‌ಗೆ ಮುಸ್ಲಿಮರು ಮತವನ್ನು ಹಾಕಲಿಲ್ಲ ಎಂದೇನೂ ಇಲ್ಲ. ಆದರೆ ಬಿಜೆಪಿಯನ್ನು ಸೋಲಿಸುವ ಅಭ್ಯರ್ಥಿಗೆ ಮತ ಹಾಕುತ್ತಿದ್ದರು. ಹೀಗಾಗಿ ಕೆಲವು ಕಡೆ ಕಾಂಗ್ರೆಸ್‌ ಅನ್ನು ಬೆಂಬಲಿಸಿದರೆ, ಕೆಲವು ಕಡೆ ಜೆಡಿಎಸ್‌ಗೂ ಮತ ಚಲಾಯಿಸಿದ್ದರು.

ಟ್ವೆಂಟಿ- ಟ್ವಿಂಟಿ ಸರ್ಕಾರದ ವೇಳೆಯಲ್ಲಿ ಕುಮಾರಸ್ವಾಮಿ, “ಸೆಕ್ಯುಲರಿಸಂ ಅಂದರೆ ಏನ್ರೀ?” ಎಂದಿದ್ದರು. ಅಧಿಕಾರ ಬಿಟ್ಟುಕೊಡದ ಸಂದರ್ಭದಲ್ಲಿ “ಕೋಮುವಾದಿಗಳಿಗೆ ಅಧಿಕಾರ ನೀಡಬಾರದೆಂದು ನಿರ್ಧರಿಸಿದೆ” ಎಂದೂ ಹೇಳಿದ್ದರು. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರ ನಡುವೆ ವಾಗ್ಯುದ್ಧಗಳು ನಡೆಯುತ್ತಲೇ ಇದ್ದವು. ಕಾಂಗ್ರೆಸ್‌ನಲ್ಲಿ ಸ್ಪಷ್ಟವಾಗಿ ಮತ್ತು ಹೃದಯಾಂತರಾಳದಿಂದ ಸೆಕ್ಯುಲರ್‌ ಭಾಷೆಯನ್ನು ಸಿದ್ದರಾಮಯ್ಯ ಬಳಸಿದರು. ಮುಸ್ಲಿಮರು ಒಪ್ಪಿಕೊಳ್ಳುವಂತಹ ಲೀಡರ್‌ ಆಗಿ ಸಿದ್ದರಾಮಯ್ಯ ಬೆಳೆದರು. ಒಕ್ಕಲಿಗರು ಸಿದ್ದರಾಮಯ್ಯನವರ ವಿರುದ್ಧ ನಿಂತರು. ಮತ್ತೊಂದೆಡೆ ಕುರುಬ ಸಮುದಾಯವಷ್ಟೇ ಅಲ್ಲದೇ ಇತರೆ ಹಿಂದುಳಿದ ವರ್ಗಗಳ, ದಲಿತರ, ಅಲ್ಪಸಂಖ್ಯಾತರ ಹಿತಾಸಕ್ತಿಯನ್ನು ಕಾಪಾಡಬಲ್ಲ ನಾಯಕರಾಗಿ ಸಿದ್ದರಾಮಯ್ಯ ಹೊಮ್ಮಿದರು. 2013ರ ವಿಧಾನಸಭೆಯಲ್ಲಿ ಬಿಜೆಪಿ ಒಡೆದು ಹೋಗಿತ್ತು. ಬಂಡೆದ್ದ ಯಡಿಯೂರಪ್ಪನವರು ಕೆಜೆಪಿ ಕಟ್ಟಿದ್ದರಿಂದ ಬಿಜೆಪಿ ಕುಸಿತ ಕಂಡಿತು. 2013ರ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್‌ ಅಧಿಕಾರ ಹಿಡಿಯಿತು. ಸಿದ್ದರಾಮಯ್ಯ ಮುಖ್ಯಮಂತ್ರಿಯೂ ಆದರು. 2018ರ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು, “ಜೆಡಿಎಸ್‌ ಪಕ್ಷವು ಬಿಜೆಪಿಯ ಬಿ ಟೀಮ್” ಎಂದು ಹೇಳಿಕೆ ನೀಡಿದ್ದು ಚುನಾವಣೆಯ ಮೇಲೆ ಪ್ರಭಾವ ಬೀರಿತ್ತು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶಾದ್ಯಾಂತ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಅನೇಕ ಘಟನೆಗಳು ನಡೆಯಲಾರಂಭಿಸಿದವು. ಮಾಬ್ ಲಿಂಚಿಂಗ್, ಗೋವಿನ ಹೆಸರಲ್ಲಿ ದಾಂಧಲೆ ಮಿತಿಮೀರಿತು. ಇಂತಹ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಪರ ಯಾವುದೇ ಅನುಮಾನವಿಲ್ಲದೆ ಸಿದ್ದರಾಮಯ್ಯ ನಿಂತರು. ಆತಂಕದ ದಿನಗಳಲ್ಲಿ ಕೈ ಹಿಡಿದ ಸಿದ್ದರಾಮಯ್ಯನವರನ್ನು ತಮ್ಮ ನಾಯಕನನ್ನಾಗಿ ಮುಸ್ಲಿಮರು ಸಂಪೂರ್ಣವಾಗಿ ಸ್ವೀಕರಿಸಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರ ಗಮನ ಸೆಳೆಯಿತು. ಬಿಜೆಪಿ ಮತ್ತು ಜೆಡಿಎಸ್ ನಡುವೆ ಕತ್ತುಕತ್ತಿನ ಕಾಳಗ ಏರ್ಪಟ್ಟಿತ್ತು. ಆದರೆ ಮುಸ್ಲಿಮರು ಜೆಡಿಎಸ್ ಬೆಂಬಲಿಸದೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರಿಂದ ಬಿಜೆಪಿ ಗೆದ್ದಿತು. ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು, ಅದು ಉರುಳಿ ಬಿದ್ದದ್ದು, ಅದಕ್ಕೆ ಯಾರು ಕಾರಣ ಎಂಬುದೆಲ್ಲ ಬೇರೆಯ ಅಧ್ಯಾಯ. ಇದೆಲ್ಲಕ್ಕಿಂತ ಮುಸ್ಲಿಂ ಸಮುದಾಯಕ್ಕೆ ತನ್ನ ರಕ್ಷಣೆಯಷ್ಟೇ ಮುಖ್ಯವಾಗಿತ್ತು.

2023ರ ವಿಧಾನಸಭಾ ಚುನಾವಣೆಯ ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದರು. ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್. ಇಡೀ ದೇಶದಲ್ಲಿ ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯ ತೀರಾ ಕಡಿಮೆ. ಗಣನೀಯವಾಗಿ ಮುಸ್ಲಿಂ ಮತಗಳು ಇರುವಲ್ಲಿ ತಮ್ಮವನೊಬ್ಬನನ್ನು ಆಯ್ಕೆ ಮಾಡಿಕೊಳ್ಳಲು ಸಮುದಾಯ ಬಯಸುವುದು ತಪ್ಪೇ? ಮುಸ್ಲಿಮರು ಮತ್ತು ದಲಿತರ ಮತಗಳು ಒಗ್ಗೂಡಿದರೆ ಹಿನ್ನಡೆಯಾಗುತ್ತದೆ ಎಂಬುದನ್ನು ಲೆಕ್ಕಿಸದೆ, ಸೆಕ್ಯುಲರ್‌ ಪಾರ್ಟಿಯ ಕುಮಾರಸ್ವಾಮಿಯವರು ತಮ್ಮ ಮಗನನ್ನು ಅಲ್ಪಸಂಖ್ಯಾತ ಅಭ್ಯರ್ಥಿ ಎದುರು ಕಣಕ್ಕಿಳಿಸಿದರು. ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ನಿಖಿಲ್ ಎರಡನೇ ಬಾರಿಗೆ ಸೋಲಿನ ರುಚಿ ಕಂಡರು. ಮಗನ ಸೋಲಿನಿಂದ ಕುಮಾರಸ್ವಾಮಿ ಕಂಗಾಲಾದರು. ಜೆಡಿಎಸ್‌ಗೆ ಕಡಿಮೆ ಸೀಟ್ ಬರಲು ಮುಸ್ಲಿಮರು ವೋಟ್‌ ಹಾಕದಿರುವುದೇ ಕಾರಣವೆಂದು ಕುಮಾರಸ್ವಾಮಿ ಸಿಟ್ಟಾದರು.

ಇದಕ್ಕೂ ಮೊದಲು ನಡೆದ ಸಿಂಧಗಿ ಮತ್ತು ಹಾನಗಲ್ ವಿಧಾನಸಭೆಯ ಉಪಚುನಾವಣೆಯನ್ನು ಗಮನಿಸಬೇಕು. ಜೆಡಿಎಸ್ ಪಕ್ಷವು ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. “ಗೆಲ್ಲುವ ಕ್ಷೇತ್ರಗಳಲ್ಲಿ ಟಿಕೆಟ್ ಕೊಡದೆ, ಸೋಲುವಲ್ಲಿ ಮಾತ್ರ ಅಲ್ಪಸಂಖ್ಯಾತರಿಗೆ ಜೆಡಿಎಸ್‌ ಟಿಕೆಟ್ ನೀಡುತ್ತಿದೆ. ರಾಷ್ಟ್ರಮಟ್ಟದಲ್ಲಿ ಅಸಾದುದ್ದೀನ್ ಓವೈಸಿ ನಿರ್ವಹಿಸುತ್ತಿರುವ ಪಾತ್ರವನ್ನು ಕರ್ನಾಟಕದಲ್ಲಿ ಕುಮಾರಸ್ವಾಮಿ ಮಾಡುತ್ತಿದ್ದಾರೆ, ಸಮುದಾಯದ ಮತಗಳನ್ನು ವಿಭಾಗಿಸಿ ಬಿಜೆಪಿಗೆ ಅನುಕೂಲ ಮಾಡಿಕೊಡುವುದೇ ಜೆಡಿಎಸ್‌ನ ಉದ್ದೇಶವಾಗಿದೆ” ಎಂದು ಸಮುದಾಯ ಭಾವಿಸಿತು. ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಗಣನೀಯ ಮತ ಬಾರದಿರುವುದು ಏತಕ್ಕೆ ಎಂಬುದನ್ನು ಕುಮಾರಸ್ವಾಮಿ ಅರ್ಥ ಮಾಡಿಕೊಂಡಂತೆ ಕಾಣಲಿಲ್ಲ.

ಇದೆಲ್ಲದರ ನಡುವೆ ಕುಮಾರಸ್ವಾಮಿಯವರು ಆರ್‌ಎಸ್‌ಎಸ್‌ ವಿರುದ್ಧ ಮಾತನಾಡಿದ್ದು ಉಂಟು. ಆದರೆ ಮುಸ್ಲಿಂ ಸಮುದಾಯಕ್ಕೆ ನಂಬಿಕೆ ಬರಲಿಲ್ಲ. ಒಂದು ಸೈದ್ಧಾಂತಿಕ ಸ್ಥಿರತೆ ಜೆಡಿಎಸ್‌ನಲ್ಲಿ ಕಾಣದಾಯಿತು. ಕರ್ನಾಟಕ ರಾಜಕಾರಣದಲ್ಲಿ ಕೋಮುವಾದಿ ಸಿದ್ಧಾಂತಕ್ಕೆ ತಾವೆಷ್ಟು ಬಲ ನೀಡಿದ್ದೇವೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ, “ಮುಸ್ಲಿಮರು ಜೆಡಿಎಸ್‌ಗೆ ಮತ ಹಾಕಿಲ್ಲ” ಎಂದು ಬೈಯುವುದು ಯಾವುದೇ ಕಾರಣಕ್ಕೂ ಶ್ರೇಯಸ್ಕರವಲ್ಲ. ಕುಮಾರಸ್ವಾಮಿಯವರ ಆಕ್ರೋಶದ ನುಡಿಗಳು ಧ್ವನಿಸುತ್ತಿರುವುದು ಏನನ್ನು? ಮುಸ್ಲಿಮರು ಮೊದಲಿನಿಂದಲೂ ಕುಮಾರಸ್ವಾಮಿ ವಿರುದ್ಧ ಇಟ್ಟುಕೊಂಡಿದ್ದ ಅನುಮಾನ ಸರಿ ಎಂಬುದಕ್ಕೆ ಅಧಿಕೃತ ಮುದ್ರೆಯೊತ್ತಿದಂತೆ ಅಲ್ಲವೇ?

ಈ ದೇಶದಲ್ಲಿ ಬ್ರಾಹ್ಮಣ್ಯವನ್ನು ಮರುಸ್ಥಾಪಿಸುವ ರಾಜಕಾರಣ ನಡೆಯುತ್ತಿದೆ. ನರಮೇಧವನ್ನೇ ನಡೆಸುವ ಮಾತುಗಳನ್ನು ಸಾಧು ಸಂತರ ವೇಷಧಾರಿಗಳು ಆಡುತ್ತಿದ್ದಾರೆ. ರಾಜಕೀಯ ಕಾರಣಕ್ಕೆ ಆರ್‌ಎಸ್‌ಎಸ್‌ ಕೂಟವು ಮುಸ್ಲಿಮರನ್ನು ವೈರಗಳಂತೆ ಚಿತ್ರಿಸಿದರೂ ಅವರ ಟಾರ್ಗೆಟ್ ದಲಿತರೆಂಬುದು ನಿಧಾನಕ್ಕೆ ಪರಿಶಿಷ್ಟ ಸಮುದಾಯಗಳಿಗೂ ಅರ್ಥವಾಗತೊಡಗಿದೆ. ಮುಸ್ಲಿಮರ ಹೆಗಲ ಮೇಲೆ ಬಂದೂಕು ಇಟ್ಟು ದಲಿತರಿಗೆ ಹೊಡೆಯುತ್ತಿರುವುದು ಸ್ಪಷ್ಟವಾಗಿದೆ. ಎನ್‌ಇಪಿ, ಇಡಬ್ಲ್ಯುಎಸ್‌- ಇವೆಲ್ಲವೂ ಸಾಮಾಜಿಕ ನ್ಯಾಯವನ್ನು ಬುಡಮೇಲು ಮಾಡುವ ಒಂದೊಂದೇ ಹೆಜ್ಜೆಗಳು ಎಂಬುದನ್ನು ದಲಿತರು ಕಂಡುಕೊಂಡಿದ್ದಾರೆ. ಹೀಗಾಗಿ ಬಿಜೆಪಿಯನ್ನು ಸೋಲಿಸುವುದಕ್ಕಾಗಿ ದಲಿತರು ಕಾಂಗ್ರೆಸ್ ಪರ ನಿಂತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕಾಂಗ್ರೆಸ್ ಪಕ್ಷವು ದಲಿತರು ಮತ್ತು ಮುಸ್ಲಿಮರ ಹಿತವನ್ನು ಕಾಯುತ್ತದೆಯೋ ಇಲ್ಲವೋ ಬೇರೆಯ ಚರ್ಚೆ. ಆದರೆ ಒಂದಿಷ್ಟು ಉಸಿರಾಡುವುದಕ್ಕಾದರೂ ಕಾಂಗ್ರೆಸ್‌ ಅಧಿಕಾರದಲ್ಲಿರಲಿ ಎಂದು ಈ ಸಮುದಾಯಗಳು ನಿರ್ಧರಿಸಿರುವುದು 2023ರ ಚುನಾವಣೆಯ ಫಲಿತಾಂಶದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಕಾಂಗ್ರೆಸ್‌ನ ತಳಹದಿ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ). ಜೆಡಿಎಸ್‌ನ ತಳಹದಿ ಯಾವುದು? ಶೋಷಿತ ಸಮುದಾಯಗಳ ಪರ ಗಟ್ಟಿಯಾಗಿ ನಿಲ್ಲುತ್ತೇವೆ ಎಂಬ ಯಾವ ಖಾತ್ರಿಯನ್ನು ಕುಮಾರಸ್ವಾಮಿ ನೀಡಿದ್ದಾರೆ? ಕೇವಲ ಒಕ್ಕಲಿಗ ಸಮುದಾಯದ ಮತಗಳನ್ನು ನಂಬಿಕೊಂಡು ರಾಜಕಾರಣ ಮಾಡಲು ಸಾಧ್ಯವೇ? 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್ ಸೋತಿದ್ದೇಕೆ? ಸುಮಲತಾ ಅಂಬರೀಶ್‌ ಗೆದ್ದದ್ದು ಹೇಗೆ? ಮಂಡ್ಯದಲ್ಲಿ ಏಳು ಜನ ಜೆಡಿಎಸ್ ಶಾಸಕರಿದ್ದರೂ ನಿಖಿಲ್ ಸೋಲು ಉಂಟಾಗಿದ್ದನ್ನು ಕುಮಾರಸ್ವಾಮಿ ಹೇಗೆ ನೋಡುತ್ತಾರೆ? ರಾಜಕಾರಣದ ಅ, ಆ, ಇ, ಈ ಗೊತ್ತಿರುವ ಯಾವುದೇ ರಾಜಕಾರಣಿ ಅಹಿಂದ ಸಮುದಾಯದ ಮತಗಳನ್ನು ಬಿಟ್ಟುಕೊಡುವುದಿಲ್ಲ. ಕಾಂಗ್ರೆಸ್‌ಗೆ ಅಂತಹ ಓಟ್ ಬ್ಯಾಂಕ್‌ ಇದೆ. ಡಿ.ಕೆ.ಶಿವಕುಮಾರ್‌ ಥರದವರನ್ನು ಅಧ್ಯಕ್ಷರನ್ನಾಗಿ ನೇಮಿಸಿ, ಅಗತ್ಯಕ್ಕೆ ಬೇಕಾದಷ್ಟು ಒಕ್ಕಲಿಗರ ಮತಗಳನ್ನೂ ಕಾಂಗ್ರೆಸ್ ಸೆಳೆಯುತ್ತದೆ. ಇಂತಹ ರಾಜಕೀಯ ತಂತ್ರಗಾರಿಕೆಯನ್ನು ಕಂಡುಕೊಳ್ಳುವಲ್ಲಿ ಜೆಡಿಎಸ್‌ ಮತ್ತು ಕುಮಾರಸ್ವಾಮಿ ಎಡವಿದ್ದೆಲ್ಲಿ? ಜೆಡಿಎಸ್‌ ರೈತರ ಪಕ್ಷ ಎನ್ನುತ್ತೀರಾ? ರೈತರಲ್ಲಿ ಅತಿಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಒಕ್ಕಲಿಗ ಜಾತಿಯವರೇ ಹೆಚ್ಚಿದ್ದಾರೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿದಾಗಲೂ ಜೆಡಿಎಸ್ ಬೆಂಬಲ ನೀಡಿತು. ಅಂದರೆ ಜೆಡಿಎಸ್‌ನ ವ್ಯಕ್ತಿತ್ವ ಯಾವುದು? ದೇವೇಗೌಡರು ಈ ಪಕ್ಷಕ್ಕೆ ಒಂದು ವ್ಯಕ್ತಿತ್ವವನ್ನು, ಅಂದರೆ ಸೆಕ್ಯುಲರ್‌ ಐಡೆಂಟಿಟಿಯನ್ನು ತಂದುಕೊಟ್ಟಿದ್ದರು. ಕುಮಾರಸ್ವಾಮಿಯವರು ಅದನ್ನು ಹಾಳುಗೆಡವಲು ಶುರು ಮಾಡಿದರು. ಇದನ್ನು ಅರ್ಥಮಾಡಿಕೊಳ್ಳದೆ ಬಾಯಿಗೆ ಬಂದಂತೆ ಮಾತನಾಡುವುದು ರಾಜಕಾರಣಕ್ಕೆ ಒಗ್ಗುವುದಿಲ್ಲ.

ಇದನ್ನೂ ಓದಿರಿ: ಆರು ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರ ಪತನ; ರಾಜಕೀಯ ಸಮರ ಸೃಷ್ಟಿಸಿದ ಎಚ್‌ಡಿಕೆ ಹೇಳಿಕೆ

ಕುಮಾರಸ್ವಾಮಿಯವರೇ ನಿಮ್ಮ ಮಾತಿನಲ್ಲಿ ನಿಮ್ಮೊಳಗಿನ ಫ್ಯೂಡಲ್ ವ್ಯಕ್ತಿತ್ವ ಪ್ರದರ್ಶನವಾಗುತ್ತಿರುವುದು ನಿಮಗೆ ಕಾಣದೆ ಇರಬಹುದು, ಈ ನಾಡಿನ ಪ್ರಜ್ಞಾವಂತರಿಗೆ ಗೋಚರಿಸುತ್ತಿದೆ. ಜೀತಗಾರನೊಬ್ಬ ಬಂಡಾಯವೆದ್ದು ಯಜಮಾನನ್ನು ಪ್ರಶ್ನಿಸಿದಾಗ, ಯಜಮಾನ ತೋರುವ ದರ್ಪ ನಿಮ್ಮ ವರ್ತನೆಯಲ್ಲಿ ಇಣುಕತೊಡಗಿದೆ. ಮುಸ್ಲಿಮರು ಮತ ಹಾಕಿಲ್ಲವೆಂದು ಅವರಿಗೆ ಪಾಠ ಕಲಿಸಲು, ಸೇಡು ತೀರಿಸಿಕೊಳ್ಳಲು ನೀವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೀರಾ? ನಿಮ್ಮ ಮಾತುಗಳ ಇಂಗಿತ ಹೀಗೆಯೇ ಇರುವಂತಿದೆ. ಮತ ಹಾಕದವರ ಮೇಲೆ ಸಿಡಿಮಿಡಿಗೊಳ್ಳುವ ಮುನ್ನ ನೀವು ರಾಜಕಾರಣದಲ್ಲಿ ಇಟ್ಟ ಕೆಟ್ಟ ಹೆಜ್ಜೆಗಳನ್ನು ಒಮ್ಮೆ ತಿರುಗಿ ನೋಡಿ. ಸೆಕ್ಯುಲರಿಸಂ ಈ ಸಂವಿಧಾನದ ಹೃದಯ. ಅದನ್ನು ಧಿಕ್ಕರಿಸುವ ಮಾತುಗಳನ್ನಾಡುವ ನಿಮ್ಮನ್ನು ಯಾವುದೇ ಕಾರಣಕ್ಕೂ ಈ ನಾಡಿನ ಜನರು ಕ್ಷಮಿಸುವುದಿಲ್ಲ.

“ನಾನು ಯಾವುದೇ ಜಾತಿ ರಾಜಕಾರಣ ಮಾಡಿಲ್ಲ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಕೆಲಸವನ್ನು ಮಾಡಿಕೊಟ್ಟಿದ್ದೇವೆ” ಎಂಬ ನಿಮ್ಮ ಮಾತುಗಳಲ್ಲಿ ದೊಡ್ಡಸ್ತಿಕೆ ಕಾಣುತ್ತಿದೆ. ಅಂಗಲಾಚಿ ನಿಂತವವರಿಗೆ ಭಿಕ್ಷೆ ನೀಡಿದೆವು ಎಂಬ ಧೋರಣೆ ನಿಮ್ಮ ಮಾತುಗಳಲ್ಲಿವೆ. ಇದು ಪ್ರಜಾಪ್ರಭುತ್ವ. ನಾಯಕರು ಬರುತ್ತಾರೆ, ಹೋಗುತ್ತಾರೆ- ಸಿದ್ಧಾಂತ, ಮಾನವೀಯತೆ ಶಾಶ್ವತವಾಗಿರಬೇಕು. ಜನರ ತೀರ್ಮಾನವನ್ನು ಒಪ್ಪಿಕೊಳ್ಳುವ ದೊಡ್ಡತನ ಬೆಳೆಸಿಕೊಳ್ಳರಿ. ಫ್ಯೂಡಲ್ ರೀತಿಯಲ್ಲಿ ವರ್ತಿಸಿ, ಜನರಿಂದ ಮತ್ತಷ್ಟು ದೂರವಾಗದಿರಿ.

ಯತಿರಾಜ್‌ ಬ್ಯಾಲಹಳ್ಳಿ

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ಪತ್ರಕರ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕನ್ನಡೇತರರಿಗೆ ಕನ್ನಡ ಕಲಿಸುವುದು ಸುಲಭವಲ್ಲ, ಹಾಗೆಂದು ಕಷ್ಟವೂ ಅಲ್ಲ; ಬನ್ನಿ, ಎಲ್ಲರಿಗೂ ಕನ್ನಡ ಕಲಿಸೋಣ

ಡಾ.ಪುರುಷೋತ್ತಮ ಬಿಳಿಮಲೆಯವರ ಅಧ್ಯಕ್ಷತೆಯಲ್ಲಿನ ಈ ಭಾರಿಯ ಪ್ರಾಧಿಕಾರವು ಕನ್ನಡೇತರರಿಗೆ ಕನ್ನಡ ಕಲಿಸುವ...

ಅಯೋಧ್ಯೆ ಸೋಲಿನ ಸೇಡು ತೀರಿಸಿಕೊಳ್ಳಲು ಬಿಜೆಪಿ ತಹತಹ; ಕೇಸರಿ ಪಕ್ಷದ ಬತ್ತಳಿಕೆಯಲ್ಲಿರುವ ಆ ಅಸ್ತ್ರ ಯಾವುದು?

ಮೋದಿ ಮತ್ತು ಶಾ ಅವರ ಮೂಗುದಾರವನ್ನು ಹರಿದೊಗೆದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿರುವ...

ಮೋಹನದಾಸ ಪೈ : ರಾಮ ಆದ್ರೆ ರಾಮ; ರಾವಣ ಆದ್ರೆ ರಾವಣ!

ನಮ್ಮ ಸರ್ಕಾರಗಳು- ಯಡಿಯೂರಪ್ಪ/ಬೊಮ್ಮಾಯಿ/ಸಿದ್ಧರಾಮಯ್ಯ.. ಎಲ್ಲರೂ ಕೈಗಾರಿಕಾ ನೀತಿ ರೂಪಿಸಿ, ಬರುವವರಿಗೆ ಸಬ್ಸಿಡಿ...

ಈ ದಿನ ವಿಶೇಷ | ಮುಸ್ಲಿಮರಿಲ್ಲದ ‘ಮೊಹರಂ’ ಹಿಂದೆ ಏನೇನೆಲ್ಲ ಇದೆ ಗೊತ್ತಾ?

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೈಕನವಾಡಿಯಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ...