2023ರ ಪಿಜಿ ಪ್ರವೇಶ ಪರೀಕ್ಷೆಯ 2ನೇ ಸುತ್ತಿನಿಂದ 3ನೇ ಸುತ್ತಿಗೆ ಮುಂದುವರೆಯಲು 2023ರ ನೀಟ್ ಆಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಲು ಒಂದು ವ್ಯವಸ್ಥೆಯ ಅವಶ್ಯಕತೆಯಿದೆ. ನಿಸ್ಪಕ್ಷಪಾತ ಧೋರಣೆಯೊಂದಿಗೆ ಎಲ್ಲರಿಗೂ ನ್ಯಾಯಬದ್ಧ ಶಿಕ್ಷಣ ಒದಗಿಸಲು ಕರ್ನಾಟಕ ಪರೀಕ್ಷಾ ಅಧಿಕಾರವು ವಿದ್ಯಾರ್ಥಿಗಳಿಗೆ ಸಮರ್ಪಕ ಅವಕಾಶಗಳನ್ನು ಕಲ್ಪಿಸಬೇಕು ಎಂದು ಎಐಡಿಎಸ್ಒ ಬೀದರ್ ಜಿಲ್ಲಾ ಸಂಚಾಲಕ ಹಣಮಂತ ಎಸ್ ಎಚ್ ಒತ್ತಾಯಿಸಿದರು.
ನೀಟ್ ಕೌನ್ಸಿಲಿಂಗ್ ವಿಷಯದ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಇವರು, “ಮೆಡಿಕಲ್ ಸೆಂಟ್ರಲ್ ಕೌನ್ಸಿಲ್‌ನ 3ನೇ ಮತ್ತು ಕರ್ನಾಟಕ ಪಿಜಿ ಪ್ರವೇಶ ಪರೀಕ್ಷೆಯ 2ನೇ ಸುತ್ತಿನ ಕೌನ್ಸಿಲಿಂಗ್ ಎರಡೂ ಕೂಡ ಒಂದೇ ಸಮಯದಲ್ಲಿ ನಡೆಯುತ್ತಿವೆ. ಮೂರನೇ ಸುತ್ತಿಗೆ ಅವಕಾಶ ನೀಡದಿದ್ದಲ್ಲಿ ಉತ್ತಮ ಮೆರಿಟ್ ಹೊಂದಿರುವ ವಿದ್ಯಾರ್ಥಿಗಳು ಎರಡನೇ ಸುತ್ತಿನ ಸೀಟುಗಳನ್ನೇ ಪಡೆಯುವ ಅನಿವಾರ್ಯತೆಗೆ ಒಳಪಡುತ್ತಾರೆ. ಮೂರನೇ ಸುತ್ತಿಗೆ ಮುಂಬಡ್ತಿ ದೊರೆತಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತಮ ಕಾಲೇಜನ್ನು ಪ್ರವೇಶಿಸುವ ಅವಕಾಶ ಪಡೆಯುತ್ತಾರೆ. ನೀಟ್ 2023ರಲ್ಲಿ ಅವರು ಪಡೆದಿರುವ ಅಂಕಗಳಿಗೆ ಇದು ನ್ಯಾಯಸಮ್ಮತವಾಗಿರುತ್ತದೆ” ಎಂದು ತಿಳಿಸಿದರು.
“ಮೆಡಿಕಲ್ ಸೆಂಟ್ರಲ್ ಕೌನ್ಸಿಲಿಂಗ್‌ನ ಮೂರನೇ ಸುತ್ತಿನ ಅಕ್ಟೋಬರ್ 6 ರವರೆಗೂ ಪಿಜಿ ಪ್ರವೇಶ ಪರೀಕ್ಷೆಯ ಎರಡನೇ ಸುತ್ತನ್ನು ತಡೆ ಹಿಡಿದಲ್ಲಿ ಮೆಡಿಕಲ್ ಸೆಂಟ್ರಲ್ ಕೌನ್ಸಿಲಿಂಗ್‌ನಲ್ಲಿ ಸೀಟುಗಳನ್ನು ಪಡೆದಿರುವ ವಿದ್ಯಾರ್ಥಿಗಳು ಕರ್ನಾಟಕ ಪಿಜಿ ಪ್ರವೇಶ ಪರೀಕ್ಷೆಯ ಎರಡನೇ ಸುತ್ತಿನಿಂದ ಹೊರ ಹೋಗುತ್ತಾರೆ. ಇದರಿಂದಾಗಿ ಬಾಕಿ ಉಳಿದ ಸೀಟುಗಳು ಕರ್ನಾಟಕದ ಆಕಾಂಕ್ಷಿಗಳಿಗೆ ಲಭ್ಯವಾಗುತ್ತವೆ. ಅಭ್ಯರ್ಥಿಗಳ ಮೆರಿಟ್ ಹಾಗೂ ಪರಿಶ್ರಮಕ್ಕೆ ಇದು ನ್ಯಾಯ ಒದಗಿಸುತ್ತದೆ” ಎಂದರು.
“ಕರ್ನಾಟಕದ ಒಂದು ಸಾವಿರ ವಿದ್ಯಾರ್ಥಿಗಳು ಇದರಿಂದ ಪ್ರಯೋಜನ ಪಡೆಯುತ್ತಾರೆ. ನಿಜವಾದ ಸಾಮರ್ಥ್ಯ ಮತ್ತು ಅರ್ಹತೆಯೊಂದಿಗೆ ಪ್ರವೇಶ ಪಡೆಯುವ ಸಮಾನ ಹಕ್ಕನ್ನು ಎಲ್ಲ ಆಕಾಂಕ್ಷಿಗಳು ಹೊಂದುವಂತೆ ಮಾಡುವುದು ಅತ್ಯವಶ್ಯಕವಾಗಿದೆ. ಅಸಂಖ್ಯಾತ ಅಭ್ಯರ್ಥಿಗಳ ಕನಸು ಮತ್ತು ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರಸ್ತಾವನೆಯನ್ನು ಅತ್ಯಂತ ಸೂಕ್ತವೆಂದು ಪರಿಗಣಿಸಬೇಕು” ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | 9 ವರ್ಷಗಳಿಂದ ಅಂಗನವಾಡಿ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ
“ಮೆಡಿಕಲ್ ಸೆಂಟ್ರಲ್ ಕೌನ್ಸಿಲಿಂಗ್‌ನ ಮೂರನೇ ಸುತ್ತು ಮುಗಿಯುವವರೆಗೂ ಕರ್ನಾಟಕ ಪಿಜಿ ಪ್ರವೇಶ ಪರೀಕ್ಷೆಯ ಎರಡನೇ ಸುತ್ತನ್ನು ತಡವಾಗಿ ಪ್ರಾರಂಭಿಸಬೇಕು. ಆಲ್ ಇಂಡಿಯಾ ಕೋಟಾದ ಅಭ್ಯರ್ಥಿಗಳ ಪ್ರವೇಶಾತಿ ಮುಗಿದು ಅವರು ಪಿಜಿ ಪ್ರವೇಶ ಪರೀಕ್ಷೆಯ ಕೌನ್ಸಿಲಿಂಗ್‌ನಿಂದ ಹೊರಹೋದ ಬಳಿಕ ಎರಡನೇ ಸುತ್ತಿನ ಕೌನ್ಸಿಲಿಂಗ್ ನಡೆಸಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೌನ್ಸಿಲಿಂಗ್‌ನಲ್ಲಿ ಎರಡನೇ ಸುತ್ತಿನಿಂದ ಮೂರನೇ ಸುತ್ತಿಗೆ ಮುಂಬಡ್ತಿ ನೀಡಬೇಕು” ಎಂದು ಮನವಿ ಮಾಡಿದ್ದಾರೆ.