ಬಿಜೆಪಿ ಜೊತೆಗಿನ ಮೈತ್ರಿಯಿಂದ ಜೆಡಿಎಸ್‌ನ ಬಹಳಷ್ಟು ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಅವರ ಸಮಾಧಾನಕ್ಕಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ರ‍್ಯಾಜ್ಯ ಸರ್ಕಾರ ಪತನಗೊಳ್ಳಲಿದೆಯೆಂದು ಹಿಟ್ ಅಂಡ್ ರನ್ ಹೇಳಿಕೆ ನೀಡಿದ್ದಾರೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ಲೇವಡಿ ಮಾಡಿದರು.
ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹೆಚ್.ಡಿ ಕುಮಾರಸ್ವಾಮಿ ಹೇಳಿದಂತೆ ಆರು ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗುವುದಿಲ್ಲ. ಐದು ವರ್ಷ ಅಧಿಕಾರ ಪೂರ್ಣಗೊಳಿಸಲಿದೆ. ರಾಜ್ಯದಲ್ಲಿ ಈ ಹಿಂದೆ ಜೆಡಿಎಸ್, ಕಾಂಗ್ರೆಸ್ ಸ್ಮಮಿಶ್ರ ಸರ್ಕಾರವಿದ್ದಾಗ ಉಳಿಸಿಕೊಳ್ಳಲಾಗಲಿಲ್ಲ. ಕುಮಾರಸ್ವಾಮಿಗೆ ಕಾಂಗ್ರೆಸ್ ಬೆಂಬಲ ನೀಡಿತ್ತು. ಶಕ್ತಿ ಇದ್ದಿದ್ದರೆ ಅವರು ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಬಹುದಿತ್ತು. ಅದು ಸಾಧ್ಯವಾಗಲಿಲ್ಲ” ಎಂದರು.
“ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿದ್ದು, ಕಾರ್ಯಕರ್ತರಿಗೆ ಧೈರ್ಯ ಹೇಳಲು ಅರ್ಥವಿಲ್ಲದ ಮಾತುಗಳನ್ನಾಡುತ್ತಿದ್ದಾರೆ. ಪ್ರತಿಯೊಂದರಲ್ಲಿ ಹಿಟ್ ಅಂಡ್ ರನ್ ಧೋರಣೆ ಅನುಸರಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಿರಿಯ ನಾಯಕ ಶಿವಶಂಕರಪ್ಪ ನಡುವೆ ಯಾವುದೇ ಅಸಮಧಾನವಿಲ್ಲ. ಅವರ ಮಗ ಮಲ್ಲಿಕಾರ್ಜುನ ಮಂತ್ರಿಯಾಗಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಪ್ರಾಧಾನ್ಯತೆ ನೀಡಿದೆ” ಎಂದರು.
ಶಿವಶಂಕರಪ್ಪ ನಮ್ಮೆಲ್ಲರ ಹಿರಿಯ ನಾಯಕರು. ಆಗಾಗ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಪಕ್ಷನಿಷ್ಠೆಗೆ ಅವರು ಮಾದರಿಯಾಗಿದ್ದಾರೆ. ಶಿವಶಂಕರಪ್ಪ ಅವರಿಗೆ ಯಾರೋ ಅಧಿಕಾರಿಗಳು ಹೇಳಿರುತ್ತಾರೇ, ಹೀಗಾಗಿ ಸಹಜವಾಗಿ ಮಾತನಾಡಿರುತ್ತಾರೆ. ಆದರೇ ಅದನ್ನೇ ದೊಡ್ಡದು ಮಾಡಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ನಮ್ಮದು ಜಾತ್ಯತೀತ ಸರ್ಕಾರ: ಮುಖ್ಯಮಂತ್ರಿ ಸಿದ್ದರಾಮಯ್ಯ
“ಮಾಜಿ ಶಾಸಕ ರೇಣುಕಾಚಾರ್ಯ ಅವರು ಬೇರೆ ಕೆಲಸಕ್ಕಾಗಿ ನನ್ನ ಹತ್ತಿರ ಬಂದಿದ್ದರು. ಅಲ್ಲಿರುವ ಪರಿಸ್ಥಿತಿ ಸರಿಯಿಲ್ಲವೆಂದು ಅನೇಕ ನಾಯಕರು ಹೇಳುತ್ತಿದ್ದು, ಬಿಜೆಪಿ, ಜೆಡಿಎಸ್ ತೊರೆದು ಅನೇಕ ನಾಯಕರು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಸೇರಲಿದ್ದಾರೆ” ಎಂದರು.
ಸಿಟಿಜನ್ ಜರ್ನಲಿಸ್ಟ್ : ಹಫೀಜುಲ್ಲ