- ʼಈದಿನ.ಕಾಮ್ʼ ವರದಿಗೆ ಸ್ಪಂದಿಸಿದ ಪರಾಜಿತ ಅಭ್ಯರ್ಥಿ ಭೀಮಸೇನರಾವ್ ಶಿಂಧೆ ಹಾಗೂ ಅಧಿಕಾರಿಗಳು
- ಸರಕಾರಕ್ಕೆ ಪತ್ರ ಬರೆದು ಕೆಕೆಆರ್‌ಡಿಬಿಯಿಂದ ತಾಂಡಕ್ಕೆ ರಸ್ತೆ ನಿರ್ಮಾಣ ಮಾಡಿಸುವ ಭರವಸೆ ನೀಡಿದ ಶಿಂಧೆ
ಔರಾದ್ ತಾಲೂಕಿನ ವಡಗಾಂವ (ದೇ) ಗ್ರಾ.ಪಂ. ವ್ಯಾಪ್ತಿಯ ವಾಡೆನ್ ಬಾಗ್ ತಾಂಡಾ (ವಡಗಾಂವ ದೇ ತಾಂಡ)ಕ್ಕೆ ಸೋಮವಾರ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಾ. ಭೀಮಸೇನರಾವ ಶಿಂಧೆ ಭೇಟಿ ನೀಡಿ ತಾಂಡ ಜನರ ಸಮಸ್ಯೆ ಆಲಿಸಿದರು. ತಾಂಡದಲ್ಲಿನ ಶಾಲೆ, ಅಂಗನವಾಡಿ, ರಸ್ತೆ ಹಾಗೂ ವಿದ್ಯುತ್ ಸೌಕರ್ಯಗಳ ಕುರಿತು ತಾಂಡದ ನಿವಾಸಿಗಳಿಂದ ಮಾಹಿತಿ ಪಡೆದರು.
ಈ ಕುರಿತು ʼಈದಿನ.ಕಾಮ್ʼ ನಲ್ಲಿ ಸೆ.9ರಂದು “ಸ್ವಾತಂತ್ರ್ಯ ಸಿಕ್ಕಿ ವರ್ಷಗಳೇ ಉರುಳಿದರೂ ರಸ್ತೆ ಕಾಣದ ತಾಂಡಾ” ಎಂಬ ಶೀರ್ಷಿಕೆಯಡಿ ವಿಶೇಷ ಬರಹ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ಡಾ. ಭೀಮಸೇನರಾವ ಶಿಂಧೆ ಅ.2 ರಂದು ವಾಡೆನ್ ಬಾಗ್ ತಾಂಡಾಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ತಾಂಡಾ ನಿವಾಸಿ ಬಾಬುರಾವ ಮಾತನಾಡಿ, “ನಮ್ಮ ತಾಂಡಾಕ್ಕೆ ರಸ್ತೆಯಿಲ್ಲದ ಕಾರಣ ಮಕ್ಕಳು ದಿನನಿತ್ಯ ಶಾಲೆಗೆ ತೆರಳಲು ತೊಂದರೆ ಅನುಭವಿಸುತ್ತಿದ್ದಾರೆ” ಎಂದು ಅಳಲು ತೋಡಿಕೊಂಡರು.
ಇದಕ್ಕೆ ಸ್ಪಂದಿಸಿದ ಡಾ. ಶಿಂಧೆ “ತಾಂಡಕ್ಕೆ ಹೋಗಲು ರಸ್ತೆಯಿಲ್ಲ ಎಂಬ ಬಗ್ಗೆ ಮಾಹಿತಿ ಬಂದಿದ್ದ ಕಾರಣಕ್ಕೆ ತಾಂಡಕ್ಕೆ ಭೇಟಿ ನೀಡಿದ್ದೇನೆ, ತಾಂಡಾದ ರಸ್ತೆ ಸೇರಿದಂತೆ ಎಲ್ಲ ಸಮಸ್ಯೆಗಳು ವಿಚಾರಿಸಲಾಗುತ್ತಿದೆ. ಈ ಬಗ್ಗೆ ಸರಕಾರಕ್ಕೆ ಪತ್ರ ಬರೆದು ರಸ್ತೆ ನಿರ್ಮಾಣಕ್ಕೆ ಪ್ರಯತ್ನಿಸುವೆ ” ಎಂದು ಭರವಸೆ ನೀಡಿದರು.
“ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಯೊಂದಿಗೆ ಸಾರ್ವಜನಿಕ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಸಾಕಷ್ಟು ಅನುದಾನವನ್ನು ನೀಡುತ್ತಿದೆ. ಈಗಾಗಲೇ ಸರಕಾರ ಕೆಕೆಆರ್‌ಡಿ ಗೆ ನಿರೀಕ್ಷೆಗೂ ಮೀರಿ ಹಣ ನೀಡಲಿದೆ. ಈ ಹಣ ತಾಲೂಕಿನ ಅಗತ್ಯವಿರುವ ಕಡೆ ವಿವಿಧ ಕಾಮಗಾರಿ ಮಾಡಬೇಕಿದೆ. ತಾಲೂಕಿನಲ್ಲಿ ಕುಡಿಯುವ ನೀರು, ರಸ್ತೆಗಾಗಿ ಅನುದಾನ ಹರಿದು ಬರುತ್ತಿದೆ. ವಾಡೇನ್ ಬಾಗ್ ತಾಂಡದ ಸಂಪರ್ಕಕ್ಕೆ ರಸ್ತೆ ಸಮಸ್ಯೆ ಕೂಡ ಗಂಭೀರವಾಗಿ ಪರಿಗಣಿಸಲಾಗಿದೆ” ಎಂದರು.
ತಾಂಡಾ ರಸ್ತೆ ನಿರ್ಮಾಣಕ್ಕೆ ನಾವು ಭೂಮಿ ನೀಡಿದ್ದೇವೆ. ರಸ್ತೆ ನಿರ್ಮಾಣದ ಜೊತೆಗೆ ಭೂಮಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ರೈತರಾದ ಗಣಪತಿ, ರಾಮ ಸೋರಳ್ಳಿ, ಶಿವರಾಜ ಶಂಕರ, ರಮೇಶ ಪಾಟೀಲ್ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವ ಸರ್ಕಾರದ ನಡೆಗೆ ಖಂಡನೆ
ಈ ಸಂದರ್ಭದಲ್ಲಿ ಪಂಚಾಯತ್ ರಾಜ ಇಲಾಖೆಯ, ಎಇಇ ವೆಂಕಟ ಶಿಂಧೆ, ಜೆಇ ಶಿವಕುಮಾರ ಪುರಾಣಿಕ ಸೇರಿದಂತೆ ತಾಂಡದ ನಿವಾಸಿಗಳು ಇದ್ದರು.