ರಾಜ್ಯ ಸರ್ಕಾರದ ಪ್ರಸ್ತಾವನೆ ವಿರೋಧಿಸಿ ಮಹಿಳೆಯರು ಮಹಾತ್ಮಾಗಾಂಧಿ ಪ್ರತಿಮೆ 2 ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುವುದರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ಶರಣಗೌಡ ರಾಜ್ಯ ಅಧ್ಯಕ್ಷ ಮಾತನಾಡಿ, “ಕಳೆದ 7 ವಷಗಳಿಂದ ರಾಜ್ಯಾದ್ಯಂತ ಮದ್ಯ ನಿಷೇಧವಾಗಬೇಕೆಂದು ಮಹಿಳೆಯರ ನೇತೃತ್ವದಲ್ಲಿ ಬಹಳಷ್ಟು ವಿಭಿನ್ನ ರೀತಿಯ ಚಳವಳಿಗಳನ್ನು ನಡೆಸುತ್ತಿದ್ದೇವೆ. ಕಳೆದ 4 ವಷಗಳಿಂದ ಅಕ್ರಮ ಮದ್ಯಮಾರಾಟ ನಿಲ್ಲಿಸಲು ಸರ್ಕಾರಗಳ ಮೇಲೆ ಒತ್ತಡ ಹೇರುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ನಾವು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಲಾಗಿ ಉಚ್ಚ ನ್ಯಾಯಾಲಯವೂ ಸಹ ಅಕ್ರಮ ಮದ್ಯಮಾರಾಟವನ್ನು ಕೂಡಲೇ ನಿಲ್ಲಿಸುವಂತೆ ಸರ್ಕಾರಕ್ಕೆ ಆದೇಶ ನೀಡಿದೆ. ಆದರೂ ಸಹ ಆಡಳಿತ ಸರ್ಕಾರಗಳು ಆದಾಯದ ಮೂಲ ಹೆಚ್ಚಳ ಮುಂದಿಟ್ಟುಕೊಂಡು ಮಹಿಳೆಯರ ಆಂದೋಲನಕ್ಕೆ ಅಗೌರವ ತೋರಿಸುತ್ತಿವೆ” ಎಂದು ಆರೋಪಿಸಿದರು.
“ಈಗ ಆಡಳಿತದಲ್ಲಿರುವ ಸರ್ಕಾರವು ತನ್ನ ಆದಾಯವನ್ನು ಹೆಚ್ಚಿಸಲು ಮತ್ತು ಜನರಿಗೆ ಇದರಿಂದ ವಿವಿಧ ಯೋಜನೆಗಳನ್ನು ಜಾರಿಗೊಳಿಸುವ ನೆಪದಲ್ಲಿ ರಾಜ್ಯದಲ್ಲಿ ಮತ್ತೆ ಸಾವಿರ ಮದ್ಯದಂಗಡಿಗಳಿಗೆ ಪರವಾನಗಿ ನೀಡಲು ಆಲೋಚಿಸುತ್ತಿದ್ದು, 3000 ಜನಸಂಖ್ಯೆಯಿರುವ ಪಂಚಾಯತಿ ವ್ಯಾಪ್ತಿಯಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಿರುವುದು, 10 ವರ್ಷದ ಹಿಂದಿನ ಪರವಾನಗಿಗಳನ್ನು ನವೀಕರಿಸುವುದು ಹೀಗೆ ಕುಡುಕರ ಸಮಾಜವನ್ನೇ ನಿರ್ಮಿಸಿ ಮಹಿಳೆ ಮತ್ತು ಮಕ್ಕಳ ನೆಮ್ಮದಿ ಕೆಡಿಸಲು ಮುಂದಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಹೊಸ ಮದ್ಯದಂಗಡಿ ಪ್ರಸ್ತಾವನೆ ವಿರೋಧಿಸಿ ಮೌನ ಪ್ರತಿಭಟನೆ
“ಸರ್ಕಾರ ಕೂಡಲೇ ಈ ಪ್ರಸ್ತಾಪವನ್ನು ಹಿಂಪಡೆಯಬೇಕು. ಒಂದು ವೇಳೆ ಈ ಪ್ರಸ್ತಾಪ ಹಿಂಪಡೆಯದಿದ್ದರೆ ನಾವು ಮತ್ತೆ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಜಿಲ್ಲಾಧ್ಯಕ್ಷ ಶಿವರೆಡ್ಡಿ, ಅಹಿಂದ ಚಿಂತಕರ ವೇದಿಕೆ ಸೈಬಣ್ಣ ಜಮಾದಾರ್, ನೀಲಮ್ಮ, ನಿರ್ಮಲ, ಈರಮ್ಮ, ರೇಷ್ಮಾ, ಪ್ರಕಾಶ್, ಮಲ್ಲಿಕಾರ್ಜುನ ಜಾನೆ, ಶೃತಿ, ರತ್ನಮ್ಮ ಸೇರಿದಂತೆ ಇರರು ಇದ್ದರು.