- ಅಕ್ಕಿಯ ಬದಲಿಗೆ ರೈತರ ಉತ್ಪನ್ನಗಳು ನೀಡಿದಲ್ಲಿ ಎರಡು ಸಾವಿರ ಕೋಟಿ ಉಳಿಕೆಯಾಗುತ್ತದೆ.
- ಪಾರಂಪರಿಕ ಜವಾರಿ ಬೀಜ ಸಂರಕ್ಷಣೆ ಮಾಡುವ ರೈತರಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು.
ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಗೆ 170 ರೂ. ಹಣ ನೀಡುವ ಬದಲಾಗಿ ರಾಗಿ, ಜೋಳ, ಕಡಲೆ, ತೊಗರಿ, ಶೇಂಗಾ ಎಣ್ಣೆ ನೀಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಕೂಡಲೇ ಸರ್ಕಾರ ಚರ್ಚೆ ನಡೆಸಿ ಅನ್ನಭಾಗ್ಯ ಯೋಜನೆಯಡಿ ಹಣದ ಬದಲಿಗೆ ರೈತರ ಉತ್ಪನ್ನಗಳ ವಿತರಣೆಗೆ ಮುಂದಾಗಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಆಗ್ರಹಿಸಿದರು.
ನರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, “ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 10 ಕೆಜಿ ಅಕ್ಕಿ ವಿತರಣೆ ಯೋಜನೆ ಜಾರಿಗೊಳಿಸಿ ಅಕ್ಕಿ ಇಲ್ಲದ ಕಾರಣ ಪ್ರತಿ ವ್ಯಕ್ತಿಗೆ 170 ರೂ. ನೀಡುತ್ತಿದೆ, ಇದರಿಂದ ಜನರಿಗೆ ಬಳಕೆ ಜೊತೆಗೆ ದುರ್ಬಳಕೆಯಾಗುತ್ತಿದ್ದು, ಅಕ್ಕಿಯ ಹಣ ಬೇರೆ ಬೇರೆ ಉಪಯೋಗಕ್ಕೆ ಬಳಕೆ ಮಾಡುತ್ತಿದ್ದಾರೆ ಎಂದರು.
“ಸರ್ಕಾರ ಅಕ್ಕಿಯ ಬದಲಿಗೆ ಹಣ ವರ್ಗಾವಣೆ ಮಾಡುವ ನಿರ್ಧಾರ ಕೈಬಿಟ್ಟು, ಅದರ ಬದಲಿಗೆ ಜೋಳ, ರಾಗಿ, ಕಡಲೆ, ತೊಗರಿ ಹಾಗೂ ಶೇಂಗಾ ಎಣ್ಣೆ ನೀಡುವುದರಿಂದ ಜನರಿಗೆ ಉಪಯೋಗವಾಗಲಿದೆ, ಈ ಬೆಳೆ ಬೆಳೆಯಲು ರೈತರಿಗೆ ಉತ್ತೇಜನ ನೀಡಿದಂತಾಗುತ್ತದೆ. ಸರ್ಕಾರ 170 ರೂ. ನೀಡುತ್ತಿದ್ದು ಇದಕ್ಕೆ 9020 ಕೋಟಿ ಅನುದಾನ ಖರ್ಚಾಗುತ್ತಿದೆ, ಅಕ್ಕಿ ನೀಡಿದರೆ ಇದಕ್ಕಿಂತ ಹೆಚ್ಚು ಹಣ ಭರಿಸಬೇಕಾಗುತ್ತದೆ, ರೈತ ಸಂಘದಿಂದ ಕೃಷಿ ತಜ್ಞರು, ಕೃಷಿ ಪರಿಣತ ತಜ್ಞರೊಂದಿಗೆ ಅಧ್ಯಯನ ನಡೆಸಿ ಪ್ರಸ್ತಾವನೆ ಸಿದ್ದಪಡಿಸಿದೆ, 5 ಕೆಜಿ ಜೋಳ, 5 ಕೆಜಿ ರಾಗಿ, 1 ಕೆಜಿ ತೊಗರಿ ಬೆಳೆ, ಕಡಲೆ ಕಾಳು, ಶೇಂಗಾ ಎಣ್ಣೆ ಪೂರೈಕೆ ಮಾಡಲು ವರದಿ ತಯಾರಿಸಿ ಪ್ರಸ್ತಾವನೆ ಸರ್ಕಾರಕ್ಕೆ ನೀಡಲಾಗಿದೆ” ಎಂದರು.
“ರಾಗಿ, ಜೋಳ, ಕಡಲೆ, ತೊಗರಿ, ಶೇಂಗಾ ಎಣ್ಣೆ ನೀಡುವುದರಿಂದ ರೈತರಿಗೆ ಅನುಕೂಲವಾಗಲಿದೆ, ಜೊತೆಗೆ ಪೌಷ್ಟಿಕಾಂಶವುಳ್ಳ ಈ ಧಾನ್ಯಗಳು ಅಪೌಷ್ಟಿಕತೆ ನಿವಾರಣೆಗೆ ಸಹಕಾರಿಯಾಗಲಿದೆ, ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ, ಕೃಷಿ ಚಟುವಟಿಕೆಗಳನ್ನು ನಡೆಸಲು ರೈತರಿಗೆ ಪ್ರೋತ್ಸಾಹ ದೊರೆಯುತ್ತದೆ” ಎಂದು ತಿಳಿಸಿದರು.
“ಈ ಪ್ರಸ್ತಾವನೆ ಚರ್ಚೆ ಮಾಡಲು ವಿರೋಧ ಪಕ್ಷದವರು ಹಾಗೂ ಸಂಘ ಸಂಸ್ಥೆಗಳ ಅಭಿಪ್ರಾಯ ಪಡೆದು ಜಾರಿಗೆ ತರಬೇಕು, ಇದಕ್ಕೆ ಯಾರೂ ವಿರೋಧ ಮಾಡುವುದಿಲ್ಲ, ಅಕ್ಕಿಯ ಬದಲಿಗೆ ರೈತರ ಉತ್ಪನ್ನಗಳು ನೀಡಿದಲ್ಲಿ ಎರಡು ಸಾವಿರ ಕೋಟಿ ಉಳಿಕೆಯಾಗುತ್ತದೆ, ಟೊಮ್ಯಾಟೊ, ಈರುಳ್ಳಿ ಬೆಲೆ ಏರಿಕೆ ವೇಳೆ ಈ ಹಣ ಬಳಕೆ ಮಾಡಿ ಸರಿದೂಗಿಸಬಹುದು” ಎಂದು ತಿಳಿಸಿದರು.
ರೈತರು ಉತ್ಪನ್ನಗಳಿಗೆ ಸರ್ಕಾರ ಪ್ರೋತ್ಸಾಹಿಸಬೇಕು:
“ರಾಜ್ಯದಲ್ಲಿ 11 ಲಕ್ಷ ಟನ್ ರಾಗಿ ಉತ್ಪಾದನೆಯಾಗುತ್ತಿದೆ, 5.5 ಲಕ್ಷ ರಾಗಿ ಜನರು ಉಪಯೋಗಿಸುತ್ತಿದ್ದಾರೆ, 3 ಲಕ್ಷ ಟನ್ ಹೆಚ್ಚುವರಿಯನ್ನು ಸರ್ಕಾರದ ಖರೀದಿಸಿ ನೀಡಬೇಕು, 7 ಲಕ್ಷ ಟನ್ ಜೋಳ ಉತ್ಪಾದನೆ ಮಾಡುತ್ತಿದ್ದು, 3.5 ಲಕ್ಷ ಟನ್ ಜೋಳ ಉಳಿಸಿಕೊಂಡು ಬಳಕೆ ಮಾಡುತ್ತಿದ್ದಾರೆ, ಉಳಿದದ್ದು ಮಾರಾಟ ಮಾಡುತ್ತಿದ್ದಾರೆ, 3.5 ಲಕ್ಷ ಟನ್ ಸರ್ಕಾರ ಖರೀದಿ ಮಾಡಬೇಕು, ರಾಜ್ಯದಲ್ಲಿ 11 ಲಕ್ಷ ಟನ್ ತೊಗರಿ ಉತ್ಪಾದನೆಯಾಗುತ್ತಿದೆ, ಶೇ. 20 ರಷ್ಟು ಜನರು ಉಳಿಸಿಕೊಂಡು ಬಳಕೆ ಮಾಡುತ್ತಿದ್ದಾರೆ, ಸಾಕಷ್ಟು ರೈತರು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ, ಇದನ್ನು ಸರ್ಕಾರವೇ ಖರೀದಿ ಮಾಡಬೇಕು, ಕಡಲೆ ಮತ್ತು ಶೇಂಗಾ ಸಹ ಹೆಚ್ಚಿನ ಪ್ರಮಾಣದಲ್ಲಿ ರೈತರು ಬೆಳೆಯಲು ಪ್ರೋತ್ಸಾಹ ನೀಡಬೇಕು” ಎಂದರು.
“ಕೇಂದ್ರ ಸರ್ಕಾರ ಸಿರಿಧಾನ್ಯಗಳ ಉತ್ತೇಜನ ನೀಡಿದ್ದು, 10 ಸಾವಿರ ಕೋಟಿ ಮೀಸಲಿಟ್ಟಿದೆ, ಸಿರಿಧಾನ್ಯ ಬೆಳೆಯಲು ಹೆಚ್ಚು ಖರ್ಚು ಆಗುವುದಿಲ್ಲ, ಗೊಬ್ಬರ ಕ್ರಿಮಿನಾಶಕ ಬಳಕೆಯೂ ತೀರಾ ಕಡಿಮೆ ಮಾಡುತ್ತಿದ್ದಾರೆ. ಸಾಕಷ್ಟು ರೈತರು ಹೈಬ್ರೀಡ್ ಜೀಜಕ್ಕೆ ಮಾರು ಹೋಗಿದ್ದು, ಜವಾರಿ ಬೀಜ ಕಣ್ಮರೆಯಾಗಿವೆ, ಕೆಲ ರೈತರು ಪಾರಂಪರಿಕ ಬೀಜ ಸಂರಕ್ಷಣೆ ಮಾಡಿಕೊಂಡು ಉಳಿಸಿಕೊಂಡು ಬರುತ್ತಿದ್ದಾರೆ ಮತ್ತು ಬೀಜಗಳನ್ನು ಶೇಖರಣೆ ಮಾಡಿದ್ದಾರೆ. ಸರ್ಕಾರವು ಇದಕ್ಕೆ ಪ್ರೋತ್ಸಾಹ ನೀಡಬೇಕು, ಇದಕ್ಕಾಗಿ 25 ಕೋಟಿ ಮೀಸಲಿಡಬೇಕು. ಈ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿದ್ದು, ಕೃಷಿ ಸಚಿವರು ಮುಖ್ಯಮಂತ್ರಿಗಳೊಂದಿಗೆ ಸಭೆ ನಿಗದಿ ಪಡಿಸಿ ರೈತರನ್ನು ಕರೆದು ಚರ್ಚಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರ ಸಹಿತ ಹಲವರ ಮನೆ ಮೇಲೆ ದೆಹಲಿ ಪೊಲೀಸ್ ದಾಳಿ
ಈ ಸಂದರ್ಭದಲ್ಲಿ ರೈತ ಮುಖಂಡರಾದ ಗೋವಿಂದ ನಾಯಕ, ದೇವರಾಜ ನಾಯಕ, ಬೂದೆಯ್ಯಸ್ವಾಮಿ ಗಬ್ಬೂರು, ಬ್ರಹ್ಮಯ್ಯ ನಾಯಕ ಇದ್ದರು.
- ವರದಿ ಮಾಹಿತಿ: ಹಫೀಜುಲ್ಲ, ಸಿಟಿಜನ್ ಜರ್ನಲಿಸ್ಟ್